ಬೆಂಗಳೂರು, ಜುಲೈ 6: ಈ ಜಂಜಾಟದ ಬದುಕಿನಲ್ಲಿ ವಿಮೆ ಅತ್ಯಗತ್ಯ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತು. ಕುಟುಂಬದ ದುಡಿಯುವ ವ್ಯಕ್ತಿ ಅಪಘಾತ ವಿಮೆಯನ್ನು ಮಾಡಿಸಿಕೊಳ್ಳುವುದು ಒಳಿತು. ದುಡಿಯುವ ವ್ಯಕ್ತಿಗೆ ಏನಾದರೂ ಅವಘಡವಾದರೆ ಇಡೀ ಕುಟುಂಬವೇ ಸಂಕಷ್ಟಕ್ಕೆ ಸಿಲುಕಬೇಕಾದ ಸಂದರ್ಭ ಇರುತ್ತದೆ.
ಭಾರತದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಲೆ ಇದೆ ಎಂದು ಅಂಕಿ ಅಂಶಗಳು ತೆರೆದಿಟ್ಟಿವೆ. ರಸ್ತೆ ಸಾರಿಗೆ ಸಚಿವಾಲಯ ನೀಡಿರುವ ಅಂಕಿ ಅಂಶಗಳ ಪ್ರಕಾರ, ಭಾರತದಲ್ಲಿ 2022 ರಲ್ಲಿ 4 ಲಕ್ಷ 61 ಸಾವಿರ ಅಪಘಾತಗಳು ಸಂಭವಿಸಿದೆ. ಇವುಗಳಲ್ಲಿ 1 ಲಕ್ಷ 68 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದು 4 ಲಕ್ಷ 45 ಜನರು ಗಂಭೀರವಾಗಿ ಗಾಯಗೊಂಡಿದ್ದರು. ವರ್ಷದಿಂದ ವರ್ಷಕ್ಕೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

ಅಪಘಾತಕ್ಕೀಡಾಗುವಾಗ ನೀವೇ ವಾಹನ ಚಾಲನೆ ಮಾಡುತ್ತಿರಬೇಕು ಎಂದೇನೂ ಇಲ್ಲ. ನೀವು ನಡೆದುಕೊಂಡು ಹೋಗುವಾಗಲೂ ಅಪಘಾತ ಆಗಬಹುದು. ಇಂತಹ ರಿಸ್ಕ್ ಗಳನ್ನ ಕವರ್ ಮಾಡಲು ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಉತ್ತಮ ಆಯ್ಕೆ. ಇದು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಅಗತ್ಯದ ಸಂದರ್ಭಗಳಲ್ಲಿ ನೆರವಿಗೆ ಬರಬಹುದು.
ವೈಯಕ್ತಿಕ ಅಪಘಾತ ವಿಮಾ ಪಾಲಿಸಿಯು ಮರಣ, ತಾತ್ಕಾಲಿಕ ಅಥವಾ ಶಾಶ್ವತ ಅಂಗವೈಕಲ್ಯತೆ ಅಥವಾ ಭಾಗಶಃ ವೈಕಲ್ಯತೆ ಕವರ್ ಮಾಡುತ್ತದೆ. ಪಾಲಿಸಿದಾರರ ಮರಣಾನಂತರ ಸಮ್ ಇನ್ಷೂರ್ಡ್ ನಷ್ಟು ಮೊತ್ತ ನಾಮಿನಿದಾರರಿಗೆ ಪಾವತಿಸಲಾಗುತ್ತದೆ. ಅಂಗವೈಕಲ್ಯತೆ ಉಂಟಾದಲ್ಲಿ, ಡಿಸೆಬಿಲಿಟಿಯ ಪರ್ಸಂಟೇಜ್ ಆಧಾರದಲ್ಲಿ ವಿಮೆ ಪೇಔಟ್ ಮಾಡಲಾಗತ್ತೆ. ಒಂದು ವೇಳೆ ಶಾಶ್ವತ ಅಂಗವೈಕಲ್ಯತೆ ಉಂಟಾದರೆ 10 ರಿಂದ 20 ವರ್ಷಗಳವರೆಗೆ ನಿಯಮಿತ ಮಾಸಿಕ ಆದಾಯ ಕೊಡೋ ಆಫರ್ ಗಳನ್ನ ಅನೇಕ ಕಂಪೆನಿಗಳು ಕೊಡುತ್ತಿವೆ. ಅಲ್ಲದೆ ಕೆಲವು ಕಂಪೆನಿಗಳು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಮಕ್ಕಳ ಶಿಕ್ಷಣ ಮತ್ತು ಅಪರಾಧಿಯ ವಿರುದ್ಧದ ಕಾನೂನು ಪ್ರಕ್ರಿಯೆಗಳಿಗೆ ಫೈನ್ಯಾನ್ಷಿಯಲ್ ಕವರೇಜ್ ಕೊಡುವುದಾಗಿಯೂ ಹೇಳಿವೆ.
ಮೂರು ವಿಧಗಳಲ್ಲಿ ಆ್ಯಕ್ಸಿಡೆಂಟ್ ಕವರೇಜ್ ಕೊಡುತ್ತವೆ. ಮೊದಲನೆಯದಾಗಿ ಲೈಫ್ ಇನ್ಶೂರೆನ್ಸ್. ಟರ್ಮ್ ಮತ್ತು ಟ್ರೆಡಿಷಿನಲ್ ಪಾಲಿಸಿಗಳ ಜೊತೆಗೆ ರೈಡರ್ ಆಗಿ ಈ ಕವರೇಜ್ ಕೊಡುತ್ತದೆ. ಎರಡನೆಯದು, ಬಹುತೇಕ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಗ್ರೂಪ್ ಆ್ಯಕ್ಸಿಡೆಂಟಲ್ ಇನ್ಷುರೆನ್ಸ್ (ಸಮೂಹ ಅಪಘಾತ ವಿಮೆ) ಕೊಡುತ್ತವೆ. ಇನ್ನು ಮೂರನೆಯದಾಗಿ, ಬಹುತೇಕ ಎಲ್ಲಾ ಸಾಮಾನ್ಯ ವಿಮಾ ಕಂಪನಿಗಳು ಪ್ರತ್ಯೇಕವಾಗಿ ವೈಯಕ್ತಿಕ ಅಪಘಾತ ವಿಮೆಗಳ ಮಾರಾಟ ಮಾಡುತ್ತಿವೆ. ಇವು ಜನಪ್ರಿಯ ಹಾಗೇ ರಿಸ್ಕ್ ಕವರೇಜ್ ಟರ್ಮ್ಸ್ ವಿಸ್ತಾರವಾದ ಇನ್ನೊಂದು ರೂಪ.
ಪ್ರೀಮಿಯಂ ಗಳ ಬಗ್ಗೆ ಮಾತನಾಡುವುದಾದರೆ ವೈಯಕ್ತಿಕ ಅಪಘಾತ ವಿಮೆ ಇತರ ವಿಮಾ ಪಾಲಿಸಿಗಳಿಗೆ ಹೋಲಿಕೆ ಮಾಡಿದರೆ ಅಗ್ಗ. ಪಾಲಿಸಿದಾರರ ವಯಸ್ಸು, ವೃತ್ತಿ ಮತ್ತು ಆರೋಗ್ಯದ ಸ್ಥತಿಗತಿ ಆಧರಿಸಿ ಪಾಲಿಸಿಯ ಪ್ರೀಮಿಯಂ ಮೊತ್ತ ನಿರ್ಧರಿತವಾಗುತ್ತದೆ. ನೀವು ಹೈ ರಿಸ್ಕ್ ಇಂಡಸ್ಟ್ರಿ ಅಂದ್ರೆ ಕೀಟನಾಶಕ, ರಾಸಾಯನಿಕ ತಯಾರಿಕಾ ಕಂಪೆನಿಗಳಲ್ಲಿ ಕೆಲಸ ಮಾಡುತ್ತಾ ಇದ್ದರೆ ಹೆಚ್ಚಿನ ಪ್ರೀಮಿಯಂ ಮೊತ್ತ ಪಾವತಿಸಬೇಕಾಗತ್ತೆ.
ಸರಾಸರಿಯಲ್ಲಿ, ಅಪಘಾತ ವಿಮಾ ಪಾಲಿಸಿಯ ವಾರ್ಷಿಕ ಪ್ರೀಮಿಯಂ ಮೊತ್ತ ಒಂದು ಲಕ್ಷ ರೂಪಾಯಿಗಳ ಕವರೇಜ್ ಗೆ 140 ರೂಪಾಯಿಯಷ್ಟಿರಬಹುದು. ಅಂದರೆ ನೀವು ಇಪ್ಪತ್ತು ಲಕ್ಷ ರೂಪಾಯಿ ಕವರೇಜ್ ಇರೋ ಪಾಲಿಸಿ ಖರೀದಿಸಿದರೆ ನೀವು 2 ಸಾವಿರದ 800 ರೂಪಾಯಿಗಳನ್ನ ವಾರ್ಷಿಕ ಪ್ರೀಮಿಯಂ ಆಗಿ ಪಾವತಿಸಬೇಕಾಗತ್ತದೆ.
ಎಲ್ಲಾ ಸಾಮಾನ್ಯ ವಿಮಾ ಕಂಪನಿಗಳು ಅಪಘಾತ ವಿಮಾ ಪಾಲಿಸಿಗಳನ್ನ ಆನ್ ಲೈನ್ ಮತ್ತು ಆಫ್ ಲೈನ್ ಎರಡೂ ವಿಧದಲ್ಲೂ ಮಾರಾಟ ಮಾಡುತ್ತಿವೆ. ನೀವು ಪಾಲಿಸಿ ಬಜಾರ್ ನಂತಹ ಆನ್ ಲೈನ್ ಅಗ್ರಿಗೇಟರ್ ಗಳ ಮೂಲಕ ಇಂತಹ ಪಾಲಿಸಿ ಖರೀದಿಸಬಹುದು. ಈ ನಿಟ್ಟಿನಲ್ಲಿ ವಿಮಾ ಏಜೆಂಟರ ನೆರವನ್ನೂ ಪಡೆಯಬಹುದು. ಟರ್ಮ್ ಪಾಲಿಸಿಯಂತೆ ಆ್ಯಕ್ಸಿಡೆಂಟ್ ಕವರ್ ಆಯ್ಕೆ ಮಾಡಿಕೊಳ್ಳಬೇಕು. ಅಂದರೆ ನಿಮ್ಮ ಪಾಲಿಸಿಯ ಕವರೇಜ್ ನಿಮ್ಮ ವಾರ್ಷಿಕ ಆದಾಯದ ಹತ್ತು ಪಟ್ಟಿರಬೇಕು.
ಇದೆಲ್ಲ ಕವರ್ ಆಗುವುದಿಲ್ಲ:
ಒಂದು ವೇಳೆ ಅಪ್ಪಿತಪ್ಪಿ ಪಾಲಿಸಿದಾರರು ತಮ್ಮದೇ ತಪ್ಪಿನಿಂದ ಪ್ರಾಣ ಕಳೆದುಕೊಂಡರೆ ಆಗ ಕಂಪೆನಿಯು ಯಾವುದೇ ಕ್ಲೇಮುಗಳನ್ನು ಪಾವತಿಸುವುದಿಲ್ಲ. ಅದೇ ರೀತಿ, ಗಲಭೆ, ಯುದ್ಧದಿಂದಾಗಿನ ಸಾವು ಅಥವಾ ಹುಟ್ಟಿನಿಂದ ಇರುವ ಅಂಗವೈಕಲ್ಯ ದೋಷಗಳೂ ಈ ಪಾಲಿಸಿಯಡಿ ಕವರ್ ಆಗೋದಿಲ್ಲ. ಕುಡಿದು ವಾಹನ ಚಾಲನೆ ಮಾಡಿ ಸಂಭವಿಸೋ ಅಪಘಾತಗಳ ಕ್ಲೇಮುಗಳನ್ನ ಕಂಪನಿ ಪಾವತಿಸೋದಿಲ್ಲ. ಅದೇ ರೀತಿ ಸಾಹಸ ಕ್ರೀಡೆಗಳಿಂದಾದ ಗಾಯಗಳು ಕೂಡ ಪಾಲಿಸಿಯಡಿ ಕವರ್ ಆಗುವುದಿಲ್ಲ.


Click it and Unblock the Notifications