ಉದ್ಯೋಗಿಗಳ ನಿವೃತ್ತಿ (Retirement) ಬದುಕಿಗೆ, ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುವ ಹಲವು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ವೃತ್ತಿಜೀವನದಲ್ಲಿ ಉದ್ಯೋಗಿಯೊಬ್ಬರು ಒಂದಕ್ಕಿಂತ ಹೆಚ್ಚು ಯೂನಿವರ್ಸಲ್ ಅಕೌಂಟ್ ನಂಬರ್‌ಗಳು (UAN) ಮತ್ತು ಪ್ರಾವಿಡೆಂಟ್ ಫಂಡ್ (PF) ಖಾತೆಗಳನ್ನು ಹೊಂದುವುದು ಸಾಮಾನ್ಯ. ಆದರೆ ಇನ್ನೂ ಕೆಲವರು ಸಂಬಳ ಪಡೆಯುತ್ತಾರೆ, ಆದ್ರೆ ಪಿಎಫ್ ಅಕೌಂಟ್‌ಗಳನ್ನು ಹೊಂದಿರುವುದಿಲ್ಲ. ಅಂತಹವರಿಗಾಗಿ ಈ ಮಾಹಿತಿ ಬಹಳ ಪ್ರಯೋಜನವಾಗಲಿದೆ.

ಭಾರತದಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ (EPF) ಖಾತೆಗಳನ್ನು ನಿರ್ವಹಿಸುವುದು ಬಹಳ ಮುಖ್ಯ. ನೀವು ಎರಡು ಅಥವಾ ಹೆಚ್ಚು ಪಿಎಫ್ ಖಾತೆಗಳನ್ನು ಹೊಂದಿದ್ದರೆ, ಅವುಗಳನ್ನು ವಿಲೀನಗೊಳಿಸಿ ಒಂದೇ ಖಾತೆಯನ್ನಾಗಿ ಮಾಡಬಹುದು. ಇದರಿಂದ ಪಿಎಫ್ ಬ್ಯಾಲೆನ್ಸ್ ಒಂದೇ ಸ್ಥಳದಲ್ಲಿ ಇರುತ್ತದೆ. ಅಲ್ಲದೇ ಬಡ್ಡಿ, ಸೇವಿಂಗ್ಸ್ ಕೂಡಾ ಸರಿಯಾಗಿರುತ್ತದೆ. ಇನ್ನು ಪಿಎಫ್ ಖಾತೆಯ ಹಣಕ್ಕೆ ಸಂಬಂಧಿಸಿ, ತೆರಿಗೆಗೆ ಒಳಪಡುತ್ತಾ? ಇಲ್ವಾ? ಎಂಬುದನ್ನು ಸೇವಾ ಅವಧಿ, ನಿಯಮಗಳ ಆಧಾರದಲ್ಲಿ ಲೆಕ್ಕಹಾಕಲಾಗುತ್ತದೆ.
ಪಿಎಫ್ ಖಾತೆಗಳನ್ನು ವಿಲೀನಗೊಳಿಸುವುದು ಹೇಗೆ?
ಪಿಎಫ್ ಖಾತೆಗಳನ್ನು ವಿಲೀನಗೊಳಿಸುವುದು ಸುಲಭ ಮತ್ತು ಆನ್‌ಲೈನ್ ಮೂಲಕವೇ ಮಾಡಿ ಮುಗಿಸಬಹುದು. ನಿಮ್ಮ ಎಲ್ಲಾ ಪಿಎಫ್ ಖಾತೆಗಳು ನಿಮ್ಮ ಯುಎಎನ್‌ಗೆ ಲಿಂಕ್ ಆಗಿರಬೇಕು.
ಹಂತ 1: ಯುಎಎನ್ ಮತ್ತು ಆಧಾರ್ ಲಿಂಕ್ ಮಾಡಿ:
- ನಿಮ್ಮ ಯುಎಎನ್ ಪೋರ್ಟಲ್‌ಗೆ ಮೊಬೈಲ್ ನಂಬರ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಬೇಕು. ಇಪಿಎಫ್‌ಒ ಪೋರ್ಟಲ್ ಅಥವಾ ಉಮಾಂಗ್ ಆಪ್ ಬಳಸಿ.
- ನಿಮ್ಮ ಹಳೆಯ ಪಿಎಫ್ ಖಾತೆಗಳನ್ನು ಯುಎಎನ್‌ಗೆ ಲಿಂಕ್ ಮಾಡಬೇಕು. ಇದು ಲಿಂಕ್ ಮಾಡಬೇಕೆಂದರೆ ಹಳೆಯ ಕಂಪನಿಯ ಪಿಎಫ್ ಸ್ಲಿಪ್ ಅಥವಾ ಪಾಸ್‌ಬುಕ್ ಬೇಕು.
ಹಂತ 2: ವಿಲೀನಕ್ಕೆ ಅರ್ಜಿ ಸಲ್ಲಿಸಿ
- ಇಪಿಎಫ್‌ಒ ಪೋರ್ಟಲ್‌ಗೆ ಲಾಗಿನ್ ಮಾಡಿ.
- ಆನ್‌ಲೈನ್ ಸರ್ವೀಸ್ ಕ್ಲಿಕ್ ಕೊಡಿ. ಅಲ್ಲಿ ನೀವು One Member One EPF Accoun ಆಯ್ಕೆ ಮಾಡಬೇಕು.
- ನಿಮ್ಮ ಹಳೆಯ ಪಿಎಫ್ ಖಾತೆಯ ವಿವರಗಳನ್ನು ಆಡ್ ಮಾಡಬೇಕು.
- ಅರ್ಜಿಯನ್ನು ಸಲ್ಲಿಸಿ.
- ಅರ್ಜಿ ಸಲ್ಲಿಸಿದ 10 ರಿಂದ 20 ದಿನಗಳಲ್ಲಿ ಖಾತೆ ವಿಲೀನಗೊಳ್ಳುತ್ತದೆ.
ಪಿಎಫ್ ಹಣ ತೆರಿಗೆಗೆ ಒಳಪಡುತ್ತದೆಯೇ?
ಪಿಎಫ್ ಹಣ ತೆಗೆದರೆ ತೆರಿಗೆ ಕಟ್ಟಬೇಕಾ ಎಂಬ ಪ್ರಶ್ನೆ ಹಲವರಿಗಿದೆ. ಆದರೆ ಇದು ನಿಮ್ಮ ಸೇವಾ ಅವಧಿ ಮತ್ತು ಹಣ, ಕಾರಣಗಳ ಮೇಲೆ ಅವಲಂಬಿಸಿರುತ್ತದೆ.
ತೆರಿಗೆ ಮುಕ್ತ ಸಂದರ್ಭಗಳು:
ನಿರಂತರ 5 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಂತರ ಹಣ ವಿಥ್‌ಡ್ರಾ ಮಾಡಿದರೆ ಸಂಪೂರ್ಣ ಹಣ ತೆರಿಗೆ ಮುಕ್ತವಾಗಿರುತ್ತದೆ.
ಇನ್ನು ಇದಕ್ಕೆ ಕಾರಣಗಳು ನಿವೃತ್ತಿ, ಮರಣ, ವೈದ್ಯಕೀಯ ಸಮಸ್ಯೆ, ಕಂಪನಿ ಬದಲಾವಣೆಯಾದರೆ ಮಾತ್ರ.
ತೆರಿಗೆಗೊಳಪಡುವ ಸಂದರ್ಭಗಳು:
5 ವರ್ಷಗಳ ಮೊದಲು ಹಣ ವಿಥ್‌ಡ್ರಾ ಮಾಡಿದರೆ ಸಂಪೂರ್ಣ ಹಣದ ಮೇಲೆ ತೆರಿಗೆ ವಿಧಿಲಾಗುತ್ತದೆ.
ಬಡ್ಡಿ ಮೇಲೆಯೂ ತೆರಿಗೆ ಬೀಳುತ್ತದೆ. ಇನ್ನು ಟಿಡಿಎಸ್ ಕಡಿತಗೊಳ್ಳುತ್ತದೆ. ಇನ್ನು ಪಿಎಫ್ ಖಾತೆಯಲ್ಲಿರುವ ಹಣಕ್ಕೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ. ಆದರೂ ಉದ್ಯೋಗಿಯ ಕೊಡುಗೆ ಪಿಎಫ್ ಖಾತೆಗೆ 2.5 ಲಕ್ಷಕ್ಕಿಂತ ಹೆಚ್ಚಾದರೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ. ಇನ್ನು ಸರ್ಕಾರಿ ನೌಕರರಿಗೆ ಈ ಮಿತಿ 5 ಲಕ್ಷಕ್ಕೆ ಒಳಪಡುತ್ತದೆ.


Click it and Unblock the Notifications