ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನದ ಮೇಲೆ ಪರಿಣಾಮ ಬೀರಲು ಸಮರ್ಥನಾಗಿದ್ದರೂ, ಕೆಲವರು ಮಾತ್ರ ಇತರರ ಭವಿಷ್ಯವನ್ನು ಪರಿವರ್ತಿಸುವ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳು ನಾಯಕರು, ಶಿಕ್ಷಕರು, ವಿಜ್ಞಾನಿಗಳು, ಕಲಾವಿದರು ಅಥವಾ ಸಮಾಜ ಸುಧಾರಕರಾಗಿರಬಹುದು. ಅವರ ನಾಯಕತ್ವ, ಜ್ಞಾನ, ಆವಿಷ್ಕಾರಗಳು ಅಥವಾ ಕಲೆಗಳು ಲಕ್ಷಾಂತರ ಜನರ ಜೀವನವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿರುತ್ತವೆ. ಅಂತಹ ವ್ಯಕ್ತಿಗಳಲ್ಲಿ ಒಬ್ಬರು ರಾಜೀವ್ ರಂಜನ್
ರಾಜೀವ್ ರಂಜನ್ ಯಾರು?
ರಾಜೀವ್ ರಂಜನ್ ಅವರು ಮೂಲತಃ ಬಿಹಾರ ರಾಜ್ಯದ ದರ್ಭಂಗಾ ಜಿಲ್ಲೆಯ ಒಂದು ಸಣ್ಣ ಹಳ್ಳಿಯಿಂದ ಬಂದವರು. ಕಂಪ್ಯೂಟರ್ ಎಂಜಿನಿಯರ್ ಆಗಿರುವ ರಂಜನ್ ಲಕ್ಷಾಂತರ ವೇತನ ಪಡೆಯುವ ಪ್ಯಾಕೇಜ್‌ಗಳೊಂದಿಗೆ ಅಮೇರಿಕನ್ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ವಿಶೇಷ ಅಂದರೆ ಇಂದು ಅವರು 853 ರೈತರನ್ನು ಹೊಂದಿರುವ FPC (Farmer Producer Company) ಯನ್ನು ಮುನ್ನಡೆಸುತ್ತಿದ್ದಾರೆ. ಈ ಸಂಸ್ಥೆ ಇಂದು ಕೋಟಿಗಟ್ಟಲೆ ವಹಿವಾಟು ನಡೆಸುತ್ತಿದೆ. ಅವರ ಉದ್ಯಮ ಪಯಣ ಸ್ಪೂರ್ತಿದಾಯಕ ಮತ್ತು ಪ್ರೇರಣದಾಯಕವಾಗಿದೆ.

ಸ್ವಂತ ಸಂಸ್ಥೆ ಸ್ಥಾಪಿಸಲು ರಾಜೀವ್ ರಂಜನ್ ರೈತರನ್ನು ಒಗ್ಗೂಡಿಸಿದ್ದು ಹೇಗೆ?
ರಾಜೀವ್ ರಂಜನ್ ಅವರು 2013 ರಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ನಂತರ ಹಲವಾರು ದೊಡ್ಡ- ದೊಡ್ಡಾ ಕಂಪನಿಗಳಲ್ಲಿ ಕೆಲಸ ಮಾಡಿದರು. ಆದರೆ, 2021 ರಲ್ಲಿ ಜಾಗತಿಕವಾಗಿ ವ್ಯಾಪಿಸಿಕೊಂಡ ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ, ಅನೇಕರಂತೆ ಅವರು ಕೂಡಾ ತಮ್ಮ ಹಳ್ಳಿಗೆ ಮರಳಿದರು. ಹಳ್ಳಿಗೆ ಬಂದ ನಂತರ, ಅವರು ಮಖಾನಾ (ಫಾಕ್ಸ್ ನಟ್) ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದರು ಮತ್ತು ಮಖಾನಾ ಕೃಷಿಯ ಕಡೆಗೆ ಇರುವಂತಹ ಸಾಧ್ಯತೆಗಳನ್ನು ಅನ್ವೇಷಿಸಿದರು.
ರಾಜೀವ್ ಅವರು ಬಿಹಾರದ ಆರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಮಖಾನಾ ಉತ್ಪಾದನೆಗೆ ಸಂಬಂಧಿಸಿದ ಸವಾಲುಗಳನ್ನು ಅರ್ಥಮಾಡಿಕೊಂಡರು. ರೈತರ ಸಮಸ್ಯೆಗಳನ್ನು ಪರಿಹರಿಸಲು, ಅವರು ತಮ್ಮ ಸ್ವಂತ 40 ಎಕರೆ ಭೂಮಿಯಲ್ಲಿ ಮಖಾನಾ ಕೃಷಿಯನ್ನು ಪ್ರಾರಂಭಿಸಿದರು ಮತ್ತು ಹೆಚ್ಚುವರಿಯಾಗಿ 80 ಎಕರೆ ಭೂಮಿಯನ್ನು ಗುತ್ತಿಗೆಗೆ ಪಡೆದು ಉತ್ಪಾದನೆಯನ್ನು ಹೆಚ್ಚಿಸಿದರು.
ಅತ್ಯಧಿಕ ವೇತನ ಬರುತ್ತಿದ್ದ ಉದ್ಯೋಗವನ್ನು ತೊರೆದು ಮಖಾನಾ ಕೃಷಿಯತ್ತ ಮುಖ ಮಾಡುವುದು ರಾಜೀವ್ ರಂಜನ್ ಅವರಿಗೆ ಸುಲಭದ ಮಾತಾಗಿರಲಿಲ್ಲ. ಅವರು ತೆಗೆದುಕೊಂಡ ನಿರ್ಧಾರವನ್ನು ಹಿಂಪಡೆಯುವಂತೆ ಅವರಿಗೆ ಕುಟುಂಬ, ಸ್ನೇಹಿತರಿಂದ ಅಪಾರ ಒತ್ತಡವಿತ್ತು. ಸುಲಭ ಜೀವನವನ್ನು ಆಯ್ಕೆ ಮಾಡುವ ಬದಲು, ಅವರು ಕೆಸರು ಗದ್ದೆಗಳಲ್ಲಿ ಮಖಾನಾ ಬೆಳೆಯುವ ಸವಾಲಿನ ಮತ್ತು ಅಪಾಯಕಾರಿ ಮಾರ್ಗವನ್ನು ಆರಿಸಿಕೊಂಡರು. ಮಖಾನಾ ರೈತರನ್ನು ಒಗ್ಗೂಡಿಸಿದರು ಮತ್ತು ಅವರಿಗೆ ಹೊಸ ಮಾರುಕಟ್ಟೆ ತಂತ್ರಗಳನ್ನು ಕಲಿಸಿದರು. ಅಂದು ಅವರು ಇಟ್ಟ ದಿಟ್ಟ ಹೆಜ್ಜೆಇಂದು ಆ ಪ್ರದೇಶದ ರೈತರಿಗೆ ಸಮೃದ್ಧಿಯ ಮೂಲವಾಗಿದೆ.
2023 ರಲ್ಲಿ, ರಾಜೀವ್ ಅವರು ಮಣಿಗಾಚಿ ಮಿಡಾಸ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ (ಎಫ್‌ಪಿಸಿ) ಅನ್ನು ಸ್ಥಾಪಿಸಿದರು. ಇದು ಈ ಸಂಸ್ಥೆಯಡಿ 2,700 ಕ್ಕೂ ಹೆಚ್ಚು ರೈತರನ್ನು ಹೊಂದಿದೆ. ರಾಜೀವ್ ಅವರ ಮಾರ್ಗದರ್ಶನದಲ್ಲಿ, ರೈತರು ಸುಧಾರಿತ ಮಖಾನಾ ಕೃಷಿ ಮತ್ತು ಸಂಸ್ಕರಣಾ ತಂತ್ರಗಳನ್ನು ಅಳವಡಿಸಿಕೊಂಡರು, ಇದರಿಂದ ಉತ್ಪಾದನೆಯು ಹೆಚ್ಚಾಯಿತು. ಪರಿಣಾಮವಾಗಿ, ಈ ರೈತ ಗುಂಪು 57 ಟನ್ ಮಖಾನಾವನ್ನು ಉತ್ಪಾದಿಸಿ, ಸರಿಸುಮಾರು 9 ಕೋಟಿ ರೂಪಾಯಿಗಳ ವಹಿವಾಟನ್ನು ಸಾಧಿಸುವಲ್ಲಿ ಯಶಸ್ವಿಯಾಯಿತು.
ಮಖಾನಾದ ಬೆಲೆ ಪ್ರತಿ ಕಿಲೋಗೆ 280 ರೂಪಾಯಿಯಿಂದ 1,200 ರೂಪಾಯಿಗೆ ಏರಿತು, ಇದು ರೈತರ ಆದಾಯವನ್ನು ಗಮನಾರ್ಹವಾಗಿ ಹೆಚ್ಚಿಸಿತು.
ರಾಜೀವ್ ಅವರು ಸಾಂಪ್ರದಾಯಿಕ ಮಖಾನಾ ಕೃಷಿ ವಿಧಾನಗಳನ್ನು ಬದಲಾಯಿಸಿ, ಆಧುನಿಕ ತಂತ್ರಜ್ಞಾನ ಮತ್ತು ಸುಧಾರಿತ ಕೃಷಿ ಪದ್ಧತಿಗಳನ್ನು ಪರಿಚಯಿಸಿದರು. ಇದು ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡಿತು.ಮಣಿಗಾಚಿ ಮಿಡಾಸ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ (ಎಫ್‌ಪಿಸಿ) ಮೂಲಕ ರೈತರಿಗೆ ಸಂಘಟಿತ ಮಾರುಕಟ್ಟೆಯನ್ನು ಒದಗಿಸಿದರು. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿ ರೈತರಿಗೆ ನೇರವಾಗಿ ಲಾಭ ಸಿಗುವಂತಾಯಿತು.ರಾಜೀವ್ ರಂಜನ್ ಅವರು ಯುವಜನರಿಗೆ ಮಾದರಿಯಾಗಿದ್ದಾರೆ. ಅವರು ಲಾಭದಾಯಕ ಉದ್ಯೋಗವನ್ನು ತೊರೆದು ಕೃಷಿಯಲ್ಲಿ ತೊಡಗುವ ಮೂಲಕ ಕೃಷಿಯಲ್ಲಿಯೂ ಯಶಸ್ಸು ಸಾಧಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.


Click it and Unblock the Notifications