ನವದೆಹಲಿ, ಆಗಸ್ಟ್ 15: '2047ರ ವೇಳೆಗೆ ವಿಕಸಿತ ಭಾರತ' ನಮ್ಮ ಗುರಿಯಾಗಿದ್ದು, ನಮ್ಮ ದೃಢ ನಿರ್ಧಾರದಿಂದ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ನಾವು ಸಮರ್ಥರಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತದ ಬೆಳವಣಿಗೆಯನ್ನು ರೂಪಿಸುವ, ನಾವೀನ್ಯತೆಗಳನ್ನು ಚಾಲನೆ ಮಾಡುವ ಮತ್ತು ವಿವಿಧ ಕ್ಷೇತ್ರಗಳಲ್ಲಿ ದೇಶವನ್ನು ಜಾಗತಿಕ ನಾಯಕನಾಗಿ ಇರಿಸುವ ಗುರಿಯನ್ನು ಹೊಂದಿರುವ ಭವಿಷ್ಯದ ಗುರಿಗಳ ಸರಣಿ ವಿಚಾರಗಳನ್ನು ಘೋಷಿಸಿದ್ದಾರೆ.

ಕೃಷಿ ಕ್ಷೇತ್ರದಲ್ಲಿ ಪ್ರಮುಖ ಸುಧಾರಣೆಗಳನ್ನು ಪ್ರಧಾನಿಯವರು ಒತ್ತಿ ಹೇಳಿದ್ದು, ದೇಶದ ರೈತರ ಜೀವನವನ್ನು ಉತ್ತಮಗೊಳಿಸುವ ಪ್ರಯತ್ನಗಳಿಗೆ ಬಗ್ಗೆ ಮಾತನಾಡಿ ಸಾವಯವ ಕೃಷಿಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ರೈತರನ್ನು ಪ್ರಧಾನಿ ಶ್ಲಾಘಿಸಿದ ಅವರು ವಿಕಸಿತ್ ಭಾರತ್ ಗುರಿಯತ್ತ ಸಾಗುತ್ತಿರುವಾಗ ದೇಶದ ರೈತರು ಭಾರತವನ್ನು ವಿಶ್ವದ ಸಾವಯವ ಆಹಾರ ಬುಟ್ಟಿಯನ್ನಾಗಿ ಮಾಡಬಹುದು ಎಂದು ಹೇಳಿದ್ದು, ಹಸಿರು ಕ್ರಾಂತಿಯನ್ನು ಉತ್ತೇಜಿಸುವಂತಹ ಹಸಿರು ಉದ್ಯೋಗಗಳ ಪ್ರಾಮುಖ್ಯತೆಯನ್ನು ಅಗತ್ಯವನ್ನು ವಿವರಿಸಿದ್ದಾರೆ.
ತಮ್ಮ ಭಾಷಣದಲ್ಲಿ, "2047 ರ ವೇಳೆಗೆ ಮಧ್ಯಮ ವರ್ಗದವರಿಗೆ ಜೀವನ ಸುಲಭವಾಗುವುದು ನಮಗೆ ಆದ್ಯತೆಯಾಗಿದೆ" ಎಂದು ಹೇಳಿದ ಅವರು, ಕಾನೂನಿನಲ್ಲಿರುವ ಅಸಂಬದ್ಧ ನಿಬಂಧನೆಗಳನ್ನು ತೆಗೆದುಹಾಕುತ್ತಿದ್ದೇವೆ.ಮಧ್ಯಮ ವರ್ಗ ಮತ್ತು ಬಡವರ ಜೀವನವನ್ನು ಬದಲಾಯಿಸುವ ಉದ್ದೇಶದಿಂದ ದೊಡ್ಡ ಸುಧಾರಣೆಗಳನ್ನು ಹೊರತರುವ ಮೂಲಕ ಯಥಾಸ್ಥಿತಿಯೊಂದಿಗೆ ಬದುಕುವ ಮನಸ್ಥಿತಿಯಿಂದ ಹೊರಬರಲು ತಮ್ಮ ಸರ್ಕಾರ ಕೆಲಸ ಮಾಡಿದೆ ಎಂದು ಹೇಳಿದ್ದಾರೆ.
ಮುಂದಿನ ಐದು ವರ್ಷಗಳಲ್ಲಿ 75 ಸಾವಿರ ವೈದ್ಯಕೀಯ ಸೀಟುಗಳನ್ನು ಸೃಷ್ಟಿಸಲಾಗುವುದು ಎಂದು ಘೋಷಿಸಿದ ಪ್ರಧಾನಿ, ಇಂದಿಗೂ ಮಧ್ಯಮ ವರ್ಗದ ಮಕ್ಕಳು ವೈದ್ಯಕೀಯ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುತ್ತಿದ್ದಾರೆ. ವಿದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ಅವರು ಲಕ್ಷಾಂತರ ರೂಪಾಯಿ ವ್ಯಯಿಸುತ್ತಿದ್ದಾರೆ ಎಂದು ಹೇಳಿದ ಅವರು ವಿದೇಶದಿಂದ ಜನರು ಭಾರತಕ್ಕೆ ಬರುವಂತೆ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಉತ್ತಮಗೊಳಿಸಲು ಸಿದ್ದ. ಹೊಸ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ ಎಂದು ಹೇಳಿದ್ದಾರೆ.
ಭಾರತದ ಬ್ಯಾಂಕ್‌ಗಳು ಇಂದು ಜಗತ್ತಿನಲ್ಲಿಯೇ ಪ್ರಬಲ ಬ್ಯಾಂಕಿಂಗ್ ವ್ಯವಸ್ಥೆಗಳಲ್ಲಿ ಒಂದಾಗಿದೆ. ನಾವು ಆಯ್ದುಕೊಂಡ ಸುಧಾರಣೆ ಹಾದಿಯು ಪ್ರಗತಿಯ ನೀಲನಕ್ಷೆಯಾಗಿದೆ. ಬಡವರು, ಮಧ್ಯಮ ವರ್ಗ, ವಂಚಿತರು ಎಲ್ಲರಿಗೂ ತಳಮಟ್ಟದ ಸುಧಾರಣೆ ತಂದಿದ್ದೇವೆ. ನಮ್ಮ ಯುವಜನರ ಅಕಾಂಕ್ಷೆಗಾಗಿ ಅವರ ಜೀವನದಲ್ಲಿ ಸುಧಾರಣೆ ತರುವ ಹಾದಿ ಅಯ್ಕೆ ಮಾಡಿದ್ದೇವೆ. ಆರ್ಥಿಕತೆಯ ಪ್ರತಿಯೊಂದು ಕ್ಷೇತ್ರವೂ ತಂತ್ರಜ್ಞಾನದಿಂದ ನಡೆಸಲ್ಪಡುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮತ್ತು ತಾಂತ್ರಿಕ ಸ್ವಾವಲಂಬನೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಜಾಗತಿಕ ನಾಯಕನಾಗುವ ಭಾರತದ ಬದ್ಧತೆಯನ್ನು ಪ್ರಧಾನಿ ಮೋದಿ ವಿವರಿಸಿದ್ದಾರೆ. 2024 ರ ಬಜೆಟ್ ಅನ್ನು ಉಲ್ಲೇಖಿಸಿ, ಭಾರತದ ಯುವಕರಿಗೆ ತರಬೇತಿ ನೀಡಲು ಮತ್ತು ವಿಶ್ವದ ಕೌಶಲ್ಯ ರಾಜಧಾನಿಯಾಗಲು ಸರ್ಕಾರವು ಘೋಷಿಸಿದ ಹೆಗ್ಗುರುತು ಉಪಕ್ರಮಗಳನ್ನು ಪ್ರಧಾನಮಂತ್ರಿ ತಮ್ಮ ಭಾಷಣದಲ್ಲಿ ಹೈಲೈಟ್ ಮಾಡಿದ್ದಾರೆ.
ವೋಕಲ್ ಫಾರ್ ಲೋಕಲ್ ಇಂದಿನ ಆರ್ಥಿಕ ವ್ಯವಸ್ಥೆಯಲ್ಲಿ ಹೊಸ ಮಂತ್ರವಾಗಿರುವುದು ನನಗೆ ಖುಷಿ ನೀಡಿದೆ. ಪ್ರತಿ ಜಿಲ್ಲೆಯೂ ತಾನು ಉತ್ಪಾದಿಸುವ ವಸ್ತುವಿನ ಬಗ್ಗೆ ಹೆಮ್ಮೆಪಟ್ಟುಕೊಳ್ಳಲು ಆರಂಭಿಸಿವೆ. 'ಒಂದು ಜಿಲ್ಲೆ ಒಂದು ಉತ್ಪನ್ನ' ಎಂಬ ವಾತಾವರಣ ನಿರ್ಮಾಣವಾಗಿದೆ. 'ವೋಕಲ್ ಫಾರ್ ಲೋಕಲ್' ಆರ್ಥಿಕತೆಯ ಹೊಸ ಮಂತ್ರ. ಯೋಜನೆಯಿಂದ ಬುಡಕಟ್ಟು ಸಮುದಾಯಕ್ಕೆ ಲಾಭ ಆಗಿದೆ ಎಂದು ಹೇಳಿದ್ದಾರೆ.


Click it and Unblock the Notifications