ಇಂದಿನ ಕಾಲದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಹೆಚ್ಚಾಗಿದೆ. ಆನ್‌ಲೈನ್ ಶಾಪಿಂಗ್‌ನಿಂದ ಹಿಡಿದು ಬಿಲ್ ಪಾವತಿ, ಟಿಕೆಟ್ ಬುಕ್ಕಿಂಗ್, ತುರ್ತು ವೆಚ್ಚಗಳವರೆಗೂ ಬಹುತೇಕ ಜನರು ಕ್ರೆಡಿಟ್ ಕಾರ್ಡ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ಬಿಲ್ ಜನರೇಟ್ ಆದಾಗ ಪೂರ್ಣ ಮೊತ್ತ ಪಾವತಿಸಲು ಸಾಧ್ಯವಾಗದಿರುವುದು ಸಾಮಾನ್ಯ ಸಂಗತಿ. ಇಂತಹ ಸಂದರ್ಭದಲ್ಲಿ ಅನೇಕರು "ಮಿನಿಮಮ್ ಡ್ಯೂ" ಅಥವಾ ಕನಿಷ್ಠ ಬಾಕಿ ಮೊತ್ತ ಪಾವತಿಸುವುದನ್ನು ಆಯ್ಕೆಮಾಡುತ್ತಾರೆ. ಇದು ತಾತ್ಕಾಲಿಕವಾಗಿ ಉಪಯುಕ್ತವಾಗಿದ್ದರೂ, ದೀರ್ಘಾವಧಿಯಲ್ಲಿ ಆರ್ಥಿಕ ಹೊರೆ ಹೆಚ್ಚಿಸಬಹುದಾದ ಕಾರಣವನ್ನು ತಿಳಿದುಕೊಳ್ಳುವುದು ಮುಖ್ಯ.

ಮಿನಿಮಮ್ ಡ್ಯೂ ಪಾವತಿ ಎಂದರೇನು?
ಪ್ರತಿ ತಿಂಗಳು ಬಿಲ್ ಬಂದಾಗ ಅದರಲ್ಲಿ ತೋರಿಸುವ ಮಿನಿಮಮ್ ಡ್ಯೂ ಎಂದರೆ ಒಟ್ಟು ಬಾಕಿ ಮೊತ್ತದ ಶೇ. 5ರಷ್ಟಿರುತ್ತದೆ. ಉದಾಹರಣೆಗೆ, ನಿಮ್ಮ ಬಿಲ್ ಮೊತ್ತ ₹50,000 ಇದ್ದರೆ, ಮಿನಿಮಮ್ ಡ್ಯೂ ಕೇವಲ ₹2,500 ಇರಬಹುದು. ಈ ಮೊತ್ತವನ್ನು ಪಾವತಿಸಿದರೆ ಬಿಲ್ ವಿಳಂಬ ದಂಡ ಬರುವುದಿಲ್ಲ, ಕಾರ್ಡ್ ಸಕ್ರಿಯವಾಗಿರುತ್ತದೆ ಮತ್ತು ಕ್ರೆಡಿಟ್ ಸ್ಕೋರ್‌ಗೂ ಹಾನಿಯಾಗುವುದಿಲ್ಲ. ಅಂದರೆ ತುರ್ತು ಸಂದರ್ಭಗಳಲ್ಲಿ ಇದು ತಾತ್ಕಾಲಿಕ ಪರಿಹಾರವಾಗಿದೆ.
ಮಿನಿಮಮ್ ಡ್ಯೂ ಪಾವತಿಯ ಒಳಿತುಗಳು:
ಹಣದ ಕೊರತೆ ಎದುರಾದಾಗ ಕನಿಷ್ಠ ಬಾಕಿ ಮೊತ್ತ ಪಾವತಿಸುವುದು ಕೆಲವು ಸದುಪಯೋಗಗಳನ್ನು ನೀಡುತ್ತದೆ.
- ಮೊದಲು, ಪಾವತಿ ವಿಳಂಬ ದಂಡವನ್ನು ತಪ್ಪಿಸಬಹುದು.
- ಎರಡನೆಯದಾಗಿ, ನಿಮ್ಮ ಕ್ರೆಡಿಟ್ ಕಾರ್ಡ್ ಬ್ಲಾಕ್ ಆಗದೆ ಸಕ್ರಿಯವಾಗಿರುತ್ತದೆ.
- ಮೂರನೆಯದಾಗಿ, ನಿಮ್ಮ ಕ್ರೆಡಿಟ್ ಸ್ಕೋರ್ ಕೆಟ್ಟದಾಗುವುದಿಲ್ಲ.
- ಅಂದರೆ, ತುರ್ತು ಪರಿಸ್ಥಿತಿಯಲ್ಲಿ ಮಿನಿಮಮ್ ಡ್ಯೂ ಪಾವತಿಸುವುದು ಕೆಲವು ಮಟ್ಟಿಗೆ ಸಹಾಯಕ. ಆದರೆ ಇದಕ್ಕೆ ಒಂದು ದೊಡ್ಡ ಕೆಡುಕು ಕೂಡ ಇದೆ.
ಮಿನಿಮಮ್ ಡ್ಯೂ ಪಾವತಿಯ ದೊಡ್ಡ ಕೆಡುಕು:
ನೀವು ಪೂರ್ಣ ಬಾಕಿ ಮೊತ್ತವನ್ನು ಪಾವತಿಸದೇ, ಕೇವಲ ಮಿನಿಮಮ್ ಡ್ಯೂ ಪಾವತಿಸಿದರೆ ಉಳಿದ ಮೊತ್ತದ ಮೇಲೆ ಬಡ್ಡಿ ವಿಧಿಸಲಾಗುತ್ತದೆ. ಇದು ದಿನಗಳ ಆಧಾರದ ಮೇಲೆ ಹೆಚ್ಚಾಗುತ್ತಾ ಹೋಗುತ್ತದೆ. ಉದಾಹರಣೆಗೆ, ನೀವು ₹1 ಲಕ್ಷಕ್ಕೆ ವಸ್ತು ಖರೀದಿಸಿ, ಕೇವಲ ಮಿನಿಮಮ್ ಡ್ಯೂ ಪಾವತಿಸಿದರೆ ಉಳಿದ ಮೊತ್ತದ ಮೇಲೆ 35 ದಿನಗಳವರೆಗೆ ಬಡ್ಡಿ ವಿಧಿಸಲಾಗುತ್ತದೆ.
ಮುಂದಿನ ಬಿಲ್ ಬಂದಾಗ ಹಳೆಯ ಬಾಕಿ ಮೊತ್ತ, ಅದರ ಮೇಲೆ ಬಡ್ಡಿ, ಜೊತೆಗೆ ಹೊಸ ಖರೀದಿಗಳು ಕೂಡ ಸೇರಿಕೊಳ್ಳುತ್ತವೆ. ಹೀಗಾಗಿ ಬಾಕಿ ಮೊತ್ತ ಕಡಿಮೆಯಾಗದೇ, ಬಡ್ಡಿ ಹೊರೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ದೀರ್ಘಾವಧಿಯಲ್ಲಿ ಇದು ನಿಮ್ಮ ಮೇಲೆ ಭಾರಿಯಾದ ಸಾಲದ ಒತ್ತಡ ತರಬಹುದು.
ಕ್ರೆಡಿಟ್ ಮಿತಿಯ ಮೇಲೆ ಪರಿಣಾಮ:
ಬಾಕಿ ಮೊತ್ತ ಹೆಚ್ಚಾಗುತ್ತಾ ಹೋದಂತೆ, ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯೂ ಕಡಿಮೆಯಾಗುತ್ತದೆ. ಮಿತಿ ಕಡಿಮೆಯಾದರೆ ಭವಿಷ್ಯದಲ್ಲಿ ದೊಡ್ಡ ಖರೀದಿಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಬ್ಯಾಂಕ್ ಹೊಸ ಖರೀದಿಗಳಿಗೆ ಅನುಮತಿ ಕೊಡದೇ ನಿರ್ಬಂಧ ಹೇರಬಹುದು. ಇದರಿಂದ ಕ್ರೆಡಿಟ್ ಕಾರ್ಡ್ ನೀಡುವ ನಿಜವಾದ ಸೌಲಭ್ಯಗಳನ್ನು ನೀವು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ.
ಬಡ್ಡಿ ದರ ತಿಳಿದುಕೊಳ್ಳುವುದು ಯಾಕೆ ಮುಖ್ಯ?
ಪ್ರತಿ ಬ್ಯಾಂಕ್‌ಗಳು ಬೇರೆ ಬೇರೆ ಬಡ್ಡಿ ದರಗಳನ್ನು ವಿಧಿಸುತ್ತವೆ. ಕೆಲ ಬ್ಯಾಂಕ್‌ಗಳು 30% ಬಡ್ಡಿ ವಿಧಿಸಿದರೆ, ಇನ್ನು ಕೆಲ ಬ್ಯಾಂಕ್‌ಗಳು 40% ಕ್ಕೂ ಹೆಚ್ಚು ಬಡ್ಡಿ ವಿಧಿಸುತ್ತವೆ. ಹೀಗಾಗಿ, ನಿಮ್ಮ ಬ್ಯಾಂಕ್ ಮಿನಿಮಮ್ ಡ್ಯೂ ಪಾವತಿ ಸಂದರ್ಭದಲ್ಲೇನು ಬಡ್ಡಿ ವಿಧಿಸುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಈ ಮಾಹಿತಿ ಇದ್ದರೆ, ಬಿಲ್ ಪಾವತಿಯನ್ನು ಉತ್ತಮವಾಗಿ ಯೋಜಿಸಬಹುದು ಮತ್ತು ಅನಗತ್ಯ ಬಡ್ಡಿ ಹೊರೆ ತಪ್ಪಿಸಿಕೊಳ್ಳಬಹುದು.
ಡ್ಯೂ ಪಾವತಿಯನ್ನು ಸಮರ್ಥವಾಗಿ ನಿರ್ವಹಿಸುವುದು ಹೇಗೆ?
- ಸಾಧ್ಯವಾದರೆ ಯಾವಾಗಲೂ ಪೂರ್ಣ ಬಾಕಿ ಮೊತ್ತವನ್ನು ಪಾವತಿಸಲು ಪ್ರಯತ್ನಿಸಿ.
- ಹಣದ ಕೊರತೆ ಇದ್ದರೆ ಕನಿಷ್ಠ ಬಾಕಿ ಮೊತ್ತ ಪಾವತಿಸಿ, ಉಳಿದ ಮೊತ್ತವನ್ನು ಶೀಘ್ರದಲ್ಲೇ ತೆರವುಗೊಳಿಸಲು ಪ್ರಯತ್ನಿಸಿ.
- ಬಡ್ಡಿ ದರಗಳನ್ನು ಸರಿಯಾಗಿ ತಿಳಿದುಕೊಂಡು ಬಜೆಟ್ ರೂಪಿಸಿಕೊಳ್ಳಿ.
- ತುರ್ತು ಪರಿಸ್ಥಿತಿಗಳನ್ನು ಬಿಟ್ಟು ಮಿನಿಮಮ್ ಡ್ಯೂ ಪಾವತಿಯನ್ನು ಹಬ್ಬವನ್ನಾಗಿ ಮಾಡಬೇಡಿ.
ಮಿನಿಮಮ್ ಡ್ಯೂ ಪಾವತಿಸುವುದು ಕೆಲ ಸಂದರ್ಭಗಳಲ್ಲಿ ಸಹಾಯಕವಾದರೂ, ದೀರ್ಘಾವಧಿಯಲ್ಲಿ ಇದು ಹೆಚ್ಚಿನ ಬಡ್ಡಿ ಹೊರೆ ತರಬಹುದು. ನಿಮ್ಮ ಕ್ರೆಡಿಟ್ ಸ್ಕೋರ್, ಆರ್ಥಿಕ ಶಿಸ್ತು ಹಾಗೂ ಭವಿಷ್ಯದ ಹಣಕಾಸು ಸ್ಥಿರತೆಗೆ ಹಾನಿ ಉಂಟುಮಾಡಬಹುದು. ಹೀಗಾಗಿ ಕ್ರೆಡಿಟ್ ಕಾರ್ಡ್ ಬಳಸುವಾಗ ಪೂರ್ಣ ಬಾಕಿ ಮೊತ್ತವನ್ನು ಪಾವತಿಸುವುದು ಅತ್ಯುತ್ತಮ ಮಾರ್ಗ. ಇದು ನಿಮಗೆ ಆರ್ಥಿಕ ಸ್ವಾತಂತ್ರ್ಯವನ್ನು ಕಾಪಾಡುತ್ತದೆ ಮತ್ತು ಅನಗತ್ಯ ಸಾಲದ ಒತ್ತಡದಿಂದ ದೂರ ಇರಿಸುತ್ತದೆ.


Click it and Unblock the Notifications