ಬೆಂಗಳೂರು, ಜೂನ್ 21: ತೆರಿಗೆ ಯಾವುದನ್ನು ಬಿಟ್ಟಿಲ್ಲ. ಮದುವೆಗೆ ಸಿದ್ಧರಾಗಿರುವವರು ಈ ತೆರಿಗೆ ಲೆಕ್ಕಾಚಾರ ಬಹಳ ಮುಖ್ಯವಾಗಿ ತಿಳಿದುಕೊಂಡಿರಬೇಕು. ಮದುವೆಯಲ್ಲಿ ಪಡೆಯುವ ಉಡುಗೊರೆಗಳಿಗೆ ಸಹ ತೆರಿಗೆ ಕಟ್ಟಬೇಕು ಎನ್ನುವ ವಿಚಾರ ಬಹಳ ಮಂದಿಗೆ ಗೊತ್ತಿಲ್ಲ.
ಮೊದಲೆಲ್ಲಾ ಜನರು ನಗದು ಹಣ ಹಾಗೂ ಒಡವೆಗಳನ್ನು ಉಡುಗೊರೆಯ ರೂಪದಲ್ಲಿ ಕೊಡುತ್ತಿದ್ದರು. ಆದರೆ ಈಗ ಷೇರಗಳು, ಎಫ್.ಡಿ.ಗಳು, ಮತ್ತು ಆಸ್ತಿಗಳನ್ನು ಉಡುಗೊರೆಯಾಗಿ ನೀಡುವ ಟ್ರೆಂಡ್ ಹೆಚ್ಚಾಗುತ್ತಿದೆ. ಹಾಗಿದ್ದರೆ ಮದುವೆ ಸಂದರ್ಭ ಪಡೆಯುವ ಉಡುಗೊರೆಗಳ ಮೇಲೆ ಯಾವ ಪ್ರಮಾಣದಲ್ಲಿ ತೆರಿಗೆ ಹಾಕಲಾಗುತ್ತದೆ ಎನ್ನುವುದನ್ನು ನಾವು ತಿಳಿದುಕೊಳ್ಳೋಣ.

ಮದುವೆಯ ಸಮಯದಲ್ಲಿ ಚರ -ಸ್ಥಿರ ಆಸ್ತಿಗಳೆರಡನ್ನೂ ಉಡುಗೊರೆಗಳ ರೂಪದಲ್ಲಿ ನೀಡಲಾಗುತ್ತದೆ. ಷೇರುಗಳು, ಫಿಕ್ಸೆಡ್ ಡೆಪಾಸಿಟ್‌ಗಳು, ಮ್ಯೂಚುಯಲ್ ಫಂಡ್‌ಗಳು, ಮತ್ತು ಒಡವೆಗಳು ಚರಾಸ್ತಿಗಳ ಅಡಿಯಲ್ಲಿ ಬಂದರೆ, ಭೂಮಿ, ಮನೆ, ಮತ್ತು ಫ್ಲಾಟ್‌ಗಳು ಸ್ಥಿರಾಸ್ತಿಗಳ ಅಡಿಯಲ್ಲಿ ಬರುತ್ತವೆ. 1961ರ ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ, ಹಣಕಾಸು ವರ್ಷವೊಂದರಲ್ಲಿ ಪಡೆದ 50 ಸಾವಿರ ರೂ. ಗೂ ಅಧಿಕ ಮೌಲ್ಯದ ಉಡುಗೊರೆಯ ಮೇಲೆ ತೆರಿಗೆ ಕಟ್ಟಬೇಕಾಗುತ್ತದೆ.
ಆದರೆ ಸಂಬಂಧಿಕರ ವ್ಯಾಖ್ಯೆಯ ಅಡಿಯಲ್ಲಿ ಬರುವಂತಹ ಜನರಿಂದ ಪಡೆಯುವ ಯಾವುದೇ ಮೌಲ್ಯದ ಉಡುಗೊರೆಯ ಮೇಲೆ ತೆರಿಗೆ ಕಟ್ಟಬೇಕಾಗಿಲ್ಲ. ಜೀವನ ಸಂಗಾತಿ, ಒಡಹುಟ್ಟಿದವರು, ಪೋಷಕರು, ಸಂಗಾತಿಯ ಪೋಷಕರು ಈ ಸಂಬಂಧಿಕರ ವ್ಯಾಖ್ಯೆಯ ಅಡಿಯಲ್ಲಿ ಬರುತ್ತಾರೆ. ಹಾಗಾಗಿ ಇವರಿಂದ ಪಡೆಯುವ ಉಡುಗೊರೆಗೆ ತೆರಿಗೆ ಇರುವುದಿಲ್ಲ.
ನಾವೀಗ ಮಿತ್ರರು ಮತ್ತು ಪರಿಚಿತರ ಬಗ್ಗೆ ಮಾತನಾಡೋಣ. ಅವರು ಸಹ ಮದುವೆಯ ಸಂದರ್ಭ ಗಿಫ್ಟ್ ನೀಡಿರುತ್ತಾರೆ. ಅವರಿಂದಲೂ ಸಹ ಮದುವೆಗಳ ಸಮಯದಲ್ಲಿ, ಉಡುಗೊರೆಗಳನ್ನು ಪಡೆಯಲಾಗುತ್ತದೆ. ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ಕೇವಲ ಮದುವೆಯ ಸಂದರ್ಭದಲ್ಲಿ ಮಾತ್ರವೇ ಯಾವುದೇ ದುಬಾರಿ ಮೌಲ್ಯದ ಚರ-ಸ್ಥಿರಾಸ್ತಿಗಳನ್ನು ಉಡುಗೊರೆಯ ರೂಪದಲ್ಲಿ ಪಡೆದರೆ, ಅವುಗಳ ಮೇಲೆ ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ.
ಮದುವೆಯ ಸಂದರ್ಭವನ್ನು ಬಿಟ್ಟು ವಾರ್ಷಿಕೋತ್ಸವಗಳು, ಹುಟ್ಟುಹಬ್ಬ ಅಥವಾ ಹಬ್ಬಗಳ ಸಂದರ್ಭಗಳಲ್ಲಿ ನೀವೇನಾದರೂ ಉಡುಗೊರೆಗಳನ್ನು ಪಡೆದರೆ, ಅವುಗಳ ಮೇಲೆ ನೀವು ತೆರಿಗೆ ಕಟ್ಟಲೇಬೇಕಾಗುತ್ತದೆ. ಕೇವಲ ಎರಡು ಸ್ಥಿತಿಗಳಲ್ಲಿ ಮಾತ್ರವೇ ತೆರಿಗೆಯನ್ನು ಹಾಕಲಾಗೋದಿಲ್ಲ. ಮೊದಲನೆಯದು, ಹಣಕಾಸು ವರ್ಷವೊಂದರಲ್ಲಿ ಪಡೆದ ಉಡುಗೊರೆಯ ಮೌಲ್ಯವು 50 ಸಾವಿರಕ್ಕಿಂತಲೂ ಕಡಿಮೆ ಇದ್ದಾಗ ಹಾಗೂ ಎರಡನೆಯದು, ಉಡುಗೊರೆಯನ್ನು ನೀಡುತ್ತಿರುವ ವ್ಯಕ್ತಿಯು ನಿಮ್ಮ ಹತ್ತಿರದ ಸಂಬಂಧಿ ಆಗಿದ್ದಾಗ ಮಾತ್ರ ತೆರಿಗೆಯಿಂದ ವಿನಾಯಿತಿ ಪಡೆದುಕೊಳ್ಳಬಹುದು.


Click it and Unblock the Notifications