21ನೇ ಶತಮಾನವು ಏಶ್ಯಾದ ಶತಮಾನವೆಂದೇ ಕರೆಯಲಾಗುತ್ತದೆ. ಅದರಲ್ಲೂ 21ನೇ ಶತಮಾನದ ಆದಿಯಲ್ಲಿ ಚೀನಾ ಅತೀ ವೇಗದಲ್ಲಿ ಸಾಧಿಸಿದ ಆರ್ಥಿಕ ಬೆಳವಣಿಗೆ ಬಗ್ಗೆ ನಮಗೆ ಈಗಾಗಲೇ ತಿಳಿದಿದೆ. ಸದ್ಯ ಅಮೆರಿಕಾವು ಚೀನಾದ ಉತ್ಪನ್ನಗಳ ಮೇಲೆ ಭಾರೀ ಪ್ರಮಾಣದಲ್ಲಿ ತೆರಿಗೆ ವಿಧಿಸಿದ್ದು, ಸದ್ಯ ಚೀನಾದಲ್ಲಿದ್ದ ಹಲವು ಕಂಪೆನಿಗಳು ಭಾರತ, ವಿಯೆಟ್ನಾಂ ಸೇರಿದಂತೆ ಇತರೆ ದೇಶಗಳಲ್ಲಿ ಹೂಡಿಕೆ ಮಾಡಲು ಆರಂಭಿಸಿದೆ. ಅದರಲ್ಲೂ ಮುಖ್ಯವಾಗಿ ವಿಶ್ವದಲ್ಲೇ ಅತೀ ವೇಗವಾಗಿ ಬೆಳೆಯುತ್ತಿರುವ ದೇಶವಾದ ಭಾರತದಲ್ಲಿ ಹೂಡಿಕೆ ಮಾಡಲು ಹಲವು ದೇಶಗಳು ಮುಂದಾಗುತ್ತಿದ್ದು, ಇಲ್ಲಿ ಲಾಭದಾಯಕ ಮಾರುಕಟ್ಟೆ ಬಗ್ಗೆ ಕೂಡ ಸರಿಯಾಗಿ ತಿಳಿದುಕೊಂಡಿದ್ದಾರೆ.
ಅದರಂತೆ ಕೇವಲ ವಿದೇಶಿ ಕಂಪೆನಿಗಳೇ ಅಲ್ಲದೆ ಖಾಸಗಿ ವ್ಯಕ್ತಿಗಳು ಕೂಡ ಭಾರತದಲ್ಲಿ ಹೂಡಿಕೆ ಮಾಡಿ, ಲಾಭ ಗಳಿಸುತ್ತಿದ್ದಾರೆ. ಅಂಥವರ ಹಲವು ಉದಾಹರಣೆಗಳನ್ನು ನಾವು ನೋಡಿದ್ದೇವೆ. ಇಂದು ಇದೇ ರೀತಿಯ ಫ್ರಾನ್ಸ್ ಮೂಲದ ನಿಕೋಲಾಸ್ ಗ್ರಾಸ್ಸೆಮಿ ಎಂಬ ವ್ಯಕ್ತಿಯೊಬ್ಬರು ʻಪ್ಯಾರಿಸ್ ಪಾನಿನಿʼ ಹೆಸರಿನಿಂದ ಸ್ಯಾಂಡ್‌ವಿಚ್ ತಯಾರಿಕಾ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಆರಂಭಿಸಿ, ಸದ್ಯ ಭಾರೀ ಖ್ಯಾತಿ ಪಡೆದುಕೊಂಡಿದ್ದಾರೆ.

ಸದ್ಯ ಬೆಂಗಳೂರಿನಲ್ಲಿ ಸ್ವಾದಿಷ್ಟ ಸ್ಯಾಂಡ್‌ವಿಚ್ ಮಾರಾಟ ಮಾಡುವ ಮೂಲಕ ಬೆಂಗಳೂರಿನ ಬಹುತೇಕರ ಮನೆಮಾತಾಗಿದ್ದಾರೆ. ಭಾರತದಲ್ಲಿ ಸ್ಯಾಂಡ್‌ವಿಚ್ ಉದ್ಯಮದ ಮೂಲಕ ಈಗಾಗಲೇ ಬರೊಬ್ಬರಿ 5 ಕೋಟಿ ರೂ. ಮೌಲ್ಯದ ಕಂಪೆನಿಯನ್ನು ಮುನ್ನಡೆಸುತ್ತಿರುವ ಅವರು, ಭವಿಷ್ಯದಲ್ಲಿ ಈ ಉದ್ಯಮವನ್ನು ಮತ್ತಷ್ಟು ವಿಸ್ತರಿಸುವ ಮಹತ್ವಾಕಾಂಕ್ಷೆ ವ್ಯಕ್ತಪಡಿಸಿದ್ದಾರೆ.
ಯಾರೀತ ನಿಕೋಲಾಸ್ ಗ್ರಾಸ್ಸೆಮಿ?
ಪ್ರತಿಷ್ಟಿತ ಶಿಕ್ಷಕರ ಕುಟುಂಬದಲ್ಲಿ ಜನಿಸಿರುವ ನಿಕೋಲಸ್ ಅವರು ಚಿಕ್ಕಂದಿನಿಂದಲೇ ಅಡುಗೆಯ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು. ಚಿಕ್ಕಂದಿನಲ್ಲಿ ತಾಯಿಗೆ ಅಡುಗೆ ಮನೆಯಲ್ಲಿ ನೆರವು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಬರುಬರುತ್ತಾ ಈ ಅಭ್ಯಾಸವು ಹವ್ಯಾಸವಾಗಿ ಮಾರ್ಪಾಡಾಗಿ ಸದ್ಯ ಉದ್ಯಮ ಸ್ಥಾಪಿಸುವ ಮಟ್ಟಿಗೆ ಬೆಳೆದು ನಿಂತಿದೆ. ಅದೂ ಅಲ್ಲದೆ ನಿಕೋಲಸ್ ಅವರು ಯಶಸ್ವಿ ಉದ್ಯಮಿಯಾಗಿ ಸದ್ಯ ಬದಲಾಗಿದ್ದಾರೆ.
ಇನ್ನು ಅವರ ಅಡುಗೆ ಜೀವನದ ಬಗ್ಗೆ ಹೇಳುವುದಾದರೆ 22 ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿಗಾಗಿ ನಿಕೋಲಸ್ ಭಾರತಕ್ಕೆ ಬಂದಿದ್ದು, ಬಹುಷಃ ಅವರ ಜೀವನಕ್ಕೆ ಹೊಸ ತಿರುವು ನೀಡಿತು ಎಂದರೆ ತಪ್ಪಾಗಲಾರದು. ಬಾಲ್ಯದಿಂದಲೇ ಬ್ರೆಡ್ ಮತ್ತು ಸ್ಯಾಂಡ್‌ವಿಚ್‌ಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ನಿಕೋಲಸ್ ಅವರು ಭಾರತಕ್ಕೆ ಬಂದ ಸಮಯದಲ್ಲಿ ದೇಶದ ಆಹಾರ ಮಾರುಕಟ್ಟೆಗೆ ಈ ರುಚಿಯನ್ನು ಪರಿಚಯಿಸಲು ಬಯಸಿದ್ದರು.
ಅಂತಿಮವಾಗಿ ಇದುವೇ ಪ್ಯಾರಿಸ್ ಪಾನಿನಿ ಹೆಸರಿನಲ್ಲಿ ಯಶಸ್ವಿ ಸಂಸ್ಥೆಯ ರೂಪುಗೊಳ್ಳಲು ಕಾರಣವಾಯಿತು. ಇನ್ನು ಬೆಂಗಳೂರಿನಲ್ಲಿ ಸಂಸ್ಥೆಯ ಯಶಸ್ಸಿಗೆ ನಿಕೋಲಸ್ ಅವರು ತಮ್ಮ ಉತ್ಪನ್ನ-ಕೇಂದ್ರಿತ ಬ್ರ್ಯಾಂಡಿಂಗ್‌ಗೆ ಶ್ರೇಯ ನೀಡುತ್ತಾರೆ. ಅವರ ಪ್ರಕಾರ ʻ ನಿಮ್ಮ ಬ್ರ್ಯಾಂಡ್ ನೇಮ್ ನೀವು ಏನನ್ನು ನೀಡುತ್ತೀರೋ ಅದನ್ನು ಸ್ಪಷ್ಟವಾಗಿ ಸೂಚಿಸುವಂತಿರಬೇಕು ಎಂದು ತಿಳಿಸುತ್ತಾರೆ.
ವೆಚ್ಚಗಳ ಬಗ್ಗೆ ಮಾಹಿತಿ ನೀಡಿದ ನಿಕೋಲಸ್
ಇನ್ನು ನಿಕೋಲಸ್ ಅವರು ತಮ್ಮ ಸಂಸ್ಥೆಯ ಖರ್ಚು ವೆಚ್ಚಗಳ ಬಗ್ಗೆ ಕೂಡ ಸರಿಯಾದ ಮಾಹಿತಿ ನೀಡಿದ್ದಾರೆ. ನಿಕೋಲಸ್ ಅವರ ಪ್ರಕಾರ ʻ ಆಹಾರದ ವೆಚ್ಚಗಳು ಸುಮಾರು 28 ಪ್ರತಿಶತವಾಗಿದ್ದರೆ ಬಾಡಿಗೆ ಸುಮಾರು 10 ಪ್ರತಿಶತವನ್ನು ಹೊಂದಿದೆ. ಉಳಿದಂತೆ ಕಾರ್ಮಿಕರ ವೆಚ್ಚವು 15 ಪ್ರತಿಶತವಾಗಿದ್ದರೆ ಆಡಳಿತಾತ್ಮಕ ವೆಚ್ಚಗಳು 10 ಪ್ರತಿಶತ ಹೊಂದಿದೆ. ಉಳಿದಂತೆ ಉದ್ಯಮದಲ್ಲಿ ಪ್ರಮುಖವೆಂದೇ ಪರಿಗಣಿಸಲ್ಪಟ್ಟಿರುವ ಮಾರ್ಕೆಟಿಂಗ್‌ಗೆ 5ರಿಂದ 10 ಪ್ರತಿಶತವನ್ನು ಅವರು ಸೇರಿಸಿದ್ದಾರೆ.
ನಿಕೋಲಸ್‌ಗೆ ಜರ್ಸಿ ಮೈಕ್ ಸ್ಪೂರ್ತಿ
ಪ್ರತಿಷ್ಟಿತ ಜರ್ಸಿ ಮೈಕ್‌ನ ಸಂಸ್ಥಾಪಕರಾಗಿರುವ ಪೀಟರ್ ಕ್ಯಾನ್ಕ್ರೋ ಅವರನ್ನು ನಿಕೋಲಸ್ ಮಾದರಿಯನ್ನಾಗಿ ತೆಗೆದುಕೊಂಡಿದ್ದಾರೆ. ಪೀಟರ್ ಅವರು 17ನೇ ವಯಸ್ಸಿನಲ್ಲಿ ಉದ್ಯಮ ಆರಂಭಿಸಿದಾಗ ಅವರು ತಮ್ಮ ಫುಟ್ ಬಾಲ್ ಕೋಚ್‌ನಿಂದ ಆರ್ಥಿಕ ನೆರವನ್ನು ಪಡೆದುಕೊಂಡಿದ್ದರು. ಸದ್ಯ ಜರ್ಸಿ ಮೈಕ್ ಬರೊಬ್ಬರಿ 3 ಶತಕೋಟಿ ಡಾಲರ್ ಮೌಲ್ಯದ ಕಂಪೆನಿಯಾಗಿ ಹೊರಹೊಮ್ಮಿದೆ. ಇದೇ ರೀತಿ ನಿಕೋಲಸ್ ಕೂಡ ತಮ್ಮ ಸಂಸ್ಥೆಯನ್ನು ನಿಧಾನವಾಗಿಯಾದರೂ ಯಶಸ್ವಿಯಾಗಿ ಮುನ್ನಡೆಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.


Click it and Unblock the Notifications