ಬೆಂಗಳೂರು, ಮಾರ್ಚ್ 13: ಭಾರತದಲ್ಲಿ ಅನೇಕ ಯಶಸ್ವಿ ಉದ್ಯಮಿಗಳು ತಮ್ಮ ಕೌಟುಂಬಿಕ ವ್ಯಾಪಾರ ಮತ್ತು ವಾಣಿಜ್ಯೋದ್ಯಮದಲ್ಲಿ ಪ್ರಮುಖ ಪಾತ್ರವಹಿಸುವುದು ಸಾಮಾನ್ಯ. ಫ್ಯಾಮಿಲಿ ಬಿಸಿನೆಸ್ ನ್ನು ತಮ್ಮ ಹಿಂದಿನ ಪೀಳಿಗೆಯವರಿಂದ ಪಡೆದುಕೊಂಡ ಅನೇಕ ವ್ಯಕ್ತಿಗಳು ವ್ಯವಹಾರವನ್ನು ಮತ್ತಷ್ಟು ಬೆಳೆಸಲು ಮತ್ತು ವಿಸ್ತರಿಸಲು ಕಾರಣಕರ್ತರಾಗಿದ್ದಾರೆ. ಇಂತಹ ವ್ಯಕ್ತಿಗಳಲ್ಲಿ ಕಾರ್ತಿಕ್ ಭಾರತ್ ರಾಮ್ ಕೂಡಾ ಒಬ್ಬರು. ಇವರು ಎಸ್‌ಆರ್‌ಎಫ್ ಲಿಮಿಟೆಡ್ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
ಸ್ಪೆಷಾಲಿಟಿ ಕೆಮಿಕಲ್ಸ್ ತಯಾರಕ ಸಂಸ್ಥೆಯಾಗಿರುವ SRF ಲಿಮಿಟೆಡ್ ಕಂಪನಿಯು 2024ರ ಮಾರ್ಚ್ 13 ರ ಹೊತ್ತಿಗೆ 71,729 ಕೋಟಿ ರೂಪಾಯಿಗಳ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಕಾರ್ತಿಕ್ ಅವರು ಭಾರತೀಯ ಬಿಲಿಯನೇರ್ ಮತ್ತು ಎಸ್‌ಆರ್‌ಎಫ್ ಲಿಮಿಟೆಡ್‌ನ ಅಧ್ಯಕ್ಷರಾಗಿರುವ ಅರುಣ್ ಭರತ್ ರಾಮ್ ಅವರ ಪುತ್ರರಾಗಿದ್ದಾರೆ. ಅರುಣ್ ಭರತ್ ರಾಮ್ ಅವರು ಫೋರ್ಬ್ಸ್ ಪ್ರಕಾರ ರೂ 27,310 ಕೋಟಿಗಳ ರಿಯಲ್ ತೈಮ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

ಕಾರ್ತಿಕ್ ಕ್ಯಾಲಿಫೋರ್ನಿಯಾದ ಸಾಂಟಾ ಕ್ಲಾರಾ ವಿಶ್ವವಿದ್ಯಾಲಯದಲ್ಲಿ ಪದವೀಧರರಾಗಿದ್ದು, ನ್ಯೂಯಾರ್ಕ್‌ನ ಕಾರ್ನೆಲ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿಯನ್ನೂ ಪಡೆದುಕೊಂಡಿದ್ದಾರೆ. ಮಾತ್ರವಲದೇ ಕಾರ್ತಿಕ್ ಅವರು ಗಾಲ್ಫ್ ಆಟಗಾರರಾಗಿದ್ದು, ಅನೇಕ ಅನೇಕ ಪ್ರೊ-ಆಮ್ ಗಾಲ್ಫ್ ಪಂದ್ಯಾವಳಿಗಳಲ್ಲಿ ವಿಜೇತರಾಗಿದ್ದಾರೆ. ಇವರ ಸಹೋದರ ಆಶಿಶ್ ಭರತ್ ರಾಮ್ ಅವರು ಎಸ್‌ಆರ್‌ಎಫ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ(ಎಂಡಿ)ರಾಗಿದ್ದಾರೆ.
ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ತಿಕ್ ಅವರು ಸಂಸ್ಥೆಯ ಕಾರ್ಯಕ್ಷಮತೆ ಬಲಪಡಿಸುವಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿದ್ದಾರೆ. ಇದರೊಂದಿಗೆ ಮಾನವ ಸಂಪನ್ಮೂಲಗಳು, ಒಟ್ಟು ಗುಣಮಟ್ಟ ನಿರ್ವಹಣೆ, ಇನ್ಫರ್ಮೇಷನ್ ಟೆಕ್ನಾಲಜಿಸ್ ಮತ್ತು ಕಾರ್ಪೊರೇಟ್ ಸಂವಹನ ಕಾರ್ಯಗಳನ್ನು ಸಹ ನೋಡಿಕೊಳ್ಳುತ್ತಾರೆ. ಕಾರ್ತಿಕ್ ಅವರು SRF Ltd ನಲ್ಲಿ ಬಹುಪಾಲು ಪಾಲನ್ನು ಹೊಂದಿರುವ KAMA ಹೋಲ್ಡಿಂಗ್ಸ್ ಲಿಮಿಟೆಡ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರೊಂದಿಗೆ ಶಾಲಾ ಶಿಕ್ಷಣ ಸಲಹಾ ನೀಡುವ ಸಂಸ್ಥೆಯಾದ ಶ್ರೀ ಎಜುಕೇರ್ ಲಿಮಿಟೆಡ್‌ನ ನಿರ್ದೇಶಕರೂ ಆಗಿದ್ದಾರೆ.
ಕಂಪನಿಯ ವ್ಯವಹಾರ ಬಂಡವಾಳವು ಫ್ಲೋರೋಕೆಮಿಕಲ್ಸ್ , ವಿಶೇಷ ರಾಸಾಯನಿಕಗಳು , ಪ್ಯಾಕೇಜಿಂಗ್ ಫಿಲ್ಮ್‌ಗಳು , ತಾಂತ್ರಿಕ ಜವಳಿ , ಕೋಟಿಂಗ್ ಮತ್ತು ಲ್ಯಾಮಿನೇಟೆಡ್ ಫ್ಯಾಬ್ರಿಕ್ಸ್ ಗಳನ್ನು ಒಳಗೊಂಡಿದೆ . ಆರ್ಥಿಕ ವರ್ಷ 22 ರಲ್ಲಿ 12,313 ಕೋಟಿ ವಹಿವಾಟು ಹೊಂದಿರುವ ಕಂಪನಿಯು ಭಾರತ, ಥೈಲ್ಯಾಂಡ್, ದಕ್ಷಿಣ ಆಫ್ರಿಕಾ ಮತ್ತು ಹಂಗೇರಿ ಎಂಬ ನಾಲ್ಕು ದೇಶಗಳಲ್ಲಿ ಕಾರ್ಯಾಚರಣೆಯನ್ನು ಹೊಂದಿದೆ. ಮಾತ್ರವಲ್ಲದೇ ಹನ್ನೊಂದು ಉತ್ಪಾದನಾ ಘಟಕಗಳಲ್ಲಿದ್ದು ಇದು 8,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಒಳಗೊಂಡಿದೆ. ಕಂಪನಿಯು 90 ಕ್ಕೂ ಹೆಚ್ಚು ದೇಶಗಳಿಗೆ ತನ್ನ ಉತ್ಪನ್ನ ರಫ್ತು ಮಾಡುತ್ತದೆ.


Click it and Unblock the Notifications