ಬೆಂಗಳೂರು, ಜೂನ್ 26: ಕೆಲವೊಂದು ಸಂದರ್ಭದಲ್ಲಿ ನೀವು ನೆಚ್ಚಿಕೊಂಡಿರುವ ಬ್ಯಾಂಕೇ ನಿಮಗೆ ತಪ್ಪು ಮಾಹಿತಿ ನೀಡಬಹುದು. ಇಂಥ ಹಲವಾರು ಉದಾಹರಣೆಗಳನ್ನು ನಾವು ಕಾಣಲು ಸಾಧ್ಯವಿದೆ. ಅದರಲ್ಲೂ ಹಿರಿಯ ನಾಗರಿಕರನ್ನು ಗುರಿ ಮಾಡಿಕೊಂಡು ಕೆಲ ಬ್ಯಾಂಕ್ ಗಳು ಅವರಿಗೆ ಬೇಡದ ಲಾಭದಾಯಕವಲ್ಲದ ಪಾಲಿಸಿ ಮಾರಾಟ ಮಾಡಿದ್ದು ಇದೆ.
ವಿಮಾ ಏಜೆಂಟರು ತಪ್ಪು ಮಾಹಿತಿ ನೀಡಿ ಪಾಲಿಸಿ ಮಾರಾಟ ಮಾಡುವ ದೂರುಗಳು ಮೇಲಿಂದ ಮೇಲೆ ಬರುತ್ತಿವೆ. ಬ್ಯಾಂಕ್ ಗಳು ಇದನ್ನೇ ಮುಂದುವರಿಸುತ್ತಿವೆ. ಮಿಸ್ ಸೆಲ್ಲಿಂಗ್ ಅಥವಾ ವಿಮೆಯ ತಪ್ಪು ಮಾರಾಟವನ್ನು ತಡೆಯಲು, ವಿಮಾ ನಿಯಂತ್ರಕ ಸಂಸ್ಥೆ IRDA ಈಗ 55 ವರ್ಷಕ್ಕಿಂತ ಮೇಲ್ಪಟ್ಟ ಜನರಿಗಾಗಿ ವಿನ್ಯಾಸಗೊಳಿಸಲಾದ ವಿಮಾ ಪಾಲಿಸಿಗಳ ಪರಿಶೀಲನೆ ಹೆಚ್ಚಿಸಲು ಮುಂದಾಗಿದೆ.

ನಿವೃತ್ತಿ ನಂತರದಲ್ಲಿ ಒಂದಿಷ್ಟು ಹಣ ಕೈಸೇರಿದವರು, ಇಲ್ಲವೇ ಆಗ ತಾನೇ ಪ್ರಾಪರ್ಟಿ ಮಾರಿ ಸಾಕಷ್ಟು ಹಣ ಕೈಯಲ್ಲಿಟ್ಟುಕೊಂಡವರು ಇಂಥವರ ಮಾಹಿತಿ ಸಂಬಂಧಿಸಿದ ಬ್ಯಾಂಕ್ ನಲ್ಲಿಯೇ ಇರುತ್ತದೆ. ಆ ಬ್ಯಾಂಕ್ ಗಳು ಅಥವಾ ಅಲ್ಲಿನ ಏಜೆಂಟರು ಇಂಥವರನ್ನು ಟಾರ್ಗೆಟ್ ಮಾಡುತ್ತಾರೆ. ಅಲ್ಲಿನ ಕೆಲಸಗಾರರಿಗೂ ಸಹ ಇಂತಿಷ್ಟು ಪಾಲಿಸಿ ಮಾಡಿಸಬೇಕೆಂದು ಈ ಮೊದಲೇ ಟಾರ್ಗೆಟ್ ನೀಡಿರಲಾಗುತ್ತದೆ.
ನಿಮ್ಮ ಮನೆಯಲ್ಲಿ ಹಿರಿಯ ನಾಗರಿಕರಿದ್ದರೆ ಅಥವಾ ನಿವೃತ್ತಿ ಹೊಂದಿದ ತಂದೆ-ತಾಯಿಗಳಿದ್ದರೆ ಈ ವಿಚಾರಗಳು ಗಮನದಲ್ಲಿರಲಿ. ಅವರು ಹಣಕಾಸಿನ ವಹಿವಾಟು ನಡೆಸುತ್ತಿರುವ ಬ್ಯಾಂಕ್ ಗಳು ಹೆಚ್ಚುವರಿಯಾಗಿ ಪಾಲಿಸಿ ಮಾರಾಟ ಮಾಡುವ ಸಾಧ್ಯತೆ ಇರುತ್ತದೆ. ಹೋಂ ಲೋನ್ ಪಡೆದುಕೊಂಡಾಗಲೂ ವಿಮೆ ಕಡ್ಡಾಯ ಮಾಡಿಸಬೇಕು ಎಂದು ಹೇಳಲಾಗುತ್ತದೆ.
ಸದ್ಯ ದೇಶದಲ್ಲಿ ಒಂಭತ್ತು ಬ್ಯಾಂಕ್‌ಗಳು ಕಾರ್ಪೊರೇಟ್ ಏಜೆಂಟ್‌ಗಳ ರೀತಿ ತೊಡಗಿಸಿಕೊಂಡಿದ್ದು ವಿಮೆ ಮಾರಾಟ ಮಾಡಬಹುದು. 2022-23 ರ ಆರ್ಥಿಕ ವರ್ಷದಲ್ಲಿ ಈ ರೀತಿ ಬ್ಯಾಂಕ್‌ಗಳು ಜೀವ ವಿಮಾ ಕಂಪನಿಗಳ ಹೊಸ ವ್ಯವಹಾರ ಪ್ರೀಮಿಯಂಗಳಿಗೆ ಶೇ. 17.44 ಮತ್ತು ಜೀವೇತರ ವಿಮೆಗೆ ಶೇ. 5.93 ಕೊಡುಗೆ ನೀಡಿವೆ. ವಿಮೆಯನ್ನು ಮಾರಾಟ ಮಾಡುವ ಬ್ಯಾಂಕ್‌ಗಳಲ್ಲಿನ ವಿಭಾಗವನ್ನು ಬ್ಯಾಂಕ್ ಶ್ಯೂರೆನ್ಸ್ ಎಂದು ಕರೆಯಲಾಗುತ್ತದೆ. ಈ ಡಿಪಾರ್ಟ್ ಮೆಂಟ್ ಗೆ ಸಂಬಂಧಿಸಿದ ಉದ್ಯೋಗಿಗಳಿಗೆ ಸೇಲ್ಸ್ ಟಾರ್ಗೆಟ್ ನೀಡಲಾಗಿರುತ್ತದೆ. ಹಾಗಾಗಿ ಈ ಟಾರ್ಗೆಟ್ ರೀಚ್ ಮಾಡಲು ಉದ್ಯೋಗಿಗಳು ಕೆಲವೊಂದು ಸಲ ಬೇರೆಯ ಮಾರ್ಗ ಹಿಡಿಯುತ್ತಾರೆ.
ಹಣದುಬ್ಬರದ ಶೇಕಡಾವಾರು ಪ್ರಮಾಣಕ್ಕೆ ಹೋಲಿಸಿದರೆ ಈ ರಿಟರ್ನ್ಸ್ ಪ್ರಮಾಣ ಕಡಿಮೆಯೇ ಆಗುತ್ತದೆ. ಬ್ಯಾಂಕ್ ಉದ್ಯೋಗಿ ಅಥವಾ ಏಜೆಂಟ್ ಹೂಡಿಕೆ ಲಾಭದ ಹೆಸರಿನಲ್ಲಿ ವಿಮೆ ಖರೀದಿಸಲು ಕೇಳಿದಾಗಲೆಲ್ಲಾ ಅವರನ್ನು ಸಂಪೂರ್ಣವಾಗಿ ನಂಬಲು ಹೋಗಬೇಡಿ. ಇತರ ತಜ್ಞರಿಂದ ಎರಡನೇ ಅಭಿಪ್ರಾಯವನ್ನು ಪಡೆದು ಮುಂದೆ ಹೆಜ್ಜೆ ಇಡಿ. ನೀವು ಖರೀದಿಸುತ್ತಿರುವ ಯಾವುದೇ ಪಾಲಿಸಿಯ ವೈಶಿಷ್ಟ್ಯಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಿ. ಪಾಲಿಸಿಯ ಕಂಡಿಶನ್ ಗಳನ್ನೆಲ್ಲ ಸರಿಯಾಗಿ ಓದಿದ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಿ.
ನೀವು 55 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ವಿಮಾ ಪಾಲಿಸಿ ಖರೀದಿ ಮಾಡುವುದು ಬುದ್ಧಿವಂತಿಕೆ ಅಲ್ಲ. ವಯಸ್ಸು ಹೆಚ್ಚಾದಂತೆ ವಿಮೆ ಪ್ರೀಮಿಯಂ ಮೊತ್ತ ಹೆಚ್ಚಾಗುತ್ತ ಹೋಗುತ್ತದೆ ಎನ್ನುವುದು ನಿಮಗೆ ಗೊತ್ತಿರಬೇಕು. ಅಲ್ಲದೇ ಅಂತಿಮವಾಗಿ ಸಿಗುವ ರಿಟರ್ನ್ಸ್ ಮೊತ್ತ ಸಹ ಕಡಿಮೆಯಾಗುತ್ತದೆ.


Click it and Unblock the Notifications