ಬೆಂಗಳೂರು, ಜೂನ್ 7: ನಿವೃತ್ತಿ ನಂತರವೋ ಅಥವಾ ಯಾವುದಾದರೂ ಒಂದು ಪ್ರಾಪರ್ಟಿ ಮಾರಿದಾಗಲೋ ದೊಡ್ಡ ಮೊತ್ತದ ಹಣ ಕೈಸೇರುವ ಸಾಧ್ಯತೆ ಇರುತ್ತದೆ. ಅದರಲ್ಲೂ ಹಿರಿಯ ನಾಗರಿಕರಿಗೆ ಒಂದೇ ಬಾರಿಗೆ ಹಣ ಸಿಕ್ಕಾಗ ಅವರು ಖಾತೆ ಹೊಂದಿರುವ ಬ್ಯಾಂಕೆ ಅವರಿಗೆ ತಪ್ಪು ಮಾಹಿತಿ ನೀಡಿ, ಮಿಸ್ ಲೀಡ್ ಮಾಡಿ ಬೇಡದ ಇನ್ಶೂರೆನ್ಸ್ ಪಾಲಿಸಿಯನ್ನು ಮಾರಾಟ ಮಾಡುವ ಹಲವಾರು ಉದಾಹರಣೆಗಳು ಕಾಣಸಿಗುತ್ತಿವೆ.
ಖರೀದಿ ಮಾಡಿದ ನಂತರ ನಮಗೆ ಬೇಕಾದ ಲಾಭಗಳು ಈ ಪಾಲಿಸಿಯಲ್ಲಿ ಇಲ್ಲ ಎನ್ನುವುದು ಗೊತ್ತಾಗುತ್ತದೆ. ಆಗ ಏನು ಮಾಡಲಾಗದ ಸ್ಥಿತಿಗೆ ಬಂದು ತಲುಪಿರುತ್ತೇವೆ. ಈಗಾಗಲೇ ಪ್ರೀಮಿಯಂ ಪಾವತಿ ಮಾಡಿರುತ್ತೇವೆ. ಇದನ್ನು ಒಂದು ರೀತಿಯಲ್ಲಿ ವಂಚನೆ ಎಂದೇ ಕರೆಯಬಹುದು.

ವಿಮಾ ಏಜೆಂಟರು ತಪ್ಪು ಮಾಹಿತಿ ನೀಡಿ ಪಾಲಿಸಿ ಮಾರಾಟ ಮಾಡುವ ದೂರುಗಳು ಮೇಲಿಂದ ಮೇಲೆ ಬರುತ್ತಿವೆ. ಬ್ಯಾಂಕ್ ಗಳು ಸಹ ಇದನ್ನೇ ಮುಂದುವರಿಸುತ್ತಿವೆ. ಮಿಸ್ ಸೆಲ್ಲಿಂಗ್ ಅಥವಾ ವಿಮೆಯ ತಪ್ಪು ಮಾರಾಟವನ್ನು ತಡೆಯಲು, ವಿಮಾ ನಿಯಂತ್ರಕ ಸಂಸ್ಥೆ IRDA ಈಗ 55 ವರ್ಷಕ್ಕಿಂತ ಮೇಲ್ಪಟ್ಟ ಜನರಿಗಾಗಿ ವಿನ್ಯಾಸಗೊಳಿಸಲಾದ ವಿಮಾ ಪಾಲಿಸಿಗಳ ಪರಿಶೀಲನೆ ಹೆಚ್ಚಿಸಲು ಮುಂದಾಗಿದೆ.
ಇನ್ಶೂರೆನ್ಸ್ ಗಳ ಮಿಸ್ ಸೆಲ್ಲಿಂಗ್ ಅನ್ನು ಸರ್ಕಾರ ಸಹ ಗಂಭೀರವಾಗಿ ತೆಗೆದುಕೊಂಡಿದೆ. ವಿಮಾ ಮಾರಾಟದ ಸಮಯದಲ್ಲಿ ನಡೆಯುವ ಮಾತುಕತೆಗಳ ವಿಡಿಯೋ ಮತ್ತು ಆಡಿಯೋ ರೆಕಾರ್ಡಿಂಗ್ ಮಾಡಿಕೊಳ್ಳಬಹುದಾ? ಎನ್ನುವ ಚರ್ಚೆ ಸಹ ನಡೆದಿದೆ. ಗ್ರಾಹಕರಿಗೆ ವಿಮಾ ಪಾಲಿಸಿಯನ್ನು ಮಾರಾಟ ಮಾಡುವಾಗ ಅವರಿಗೆ ನೀಡಿದ ಎಲ್ಲಾ ಭರವಸೆಗಳನ್ನು ಅಧಿಕೃತವಾಗಿ ದಾಖಲು ಮಾಡುವ ಉದ್ದೇಶ ಇದರ ಹಿಂದೆ ಇದೆ.
ಸದ್ಯ ದೇಶದಲ್ಲಿ ಒಂಭತ್ತು ಬ್ಯಾಂಕ್‌ಗಳು ಕಾರ್ಪೊರೇಟ್ ಏಜೆಂಟ್‌ಗಳ ರೀತಿ ತೊಡಗಿಸಿಕೊಂಡಿದ್ದು ವಿಮೆ ಮಾರಾಟ ಮಾಡಬಹುದು. ವಿಮೆಯನ್ನು ಮಾರಾಟ ಮಾಡುವ ಬ್ಯಾಂಕ್‌ಗಳಲ್ಲಿನ ವಿಭಾಗವನ್ನು ಬ್ಯಾಂಕ್ ಶ್ಯೂರೆನ್ಸ್ ಎಂದು ಕರೆಯಲಾಗುತ್ತದೆ. ಈ ಡಿಪಾರ್ಟ್ ಮೆಂಟ್ ಗೆ ಸಂಬಂಧಿಸಿದ ಉದ್ಯೋಗಿಗಳಿಗೆ ಸೇಲ್ಸ್ ಟಾರ್ಗೆಟ್ ನೀಡಲಾಗಿರುತ್ತದೆ. ಹಾಗಾಗಿ ಈ ಟಾರ್ಗೆಟ್ ರೀಚ್ ಮಾಡಲು ಉದ್ಯೋಗಿಗಳು ಕೆಲವೊಂದು ಸಲ ಅಡ್ಡ ಮಾರ್ಗ ಹಿಡಿಯುತ್ತಾರೆ.
ಯಾವ ಗ್ರಾಹಕರು ತಮ್ಮ ಖಾತೆಗಳಲ್ಲಿ ಹೆಚ್ಚಿ ಮೊತ್ತ ಹೊಂದಿದ್ದಾರೆ ಅನ್ನೋದು ಬ್ಯಾಂಕ್ ಉದ್ಯೋಗಿಗಳಿಗೆ ಚೆನ್ನಾಗಿ ಗೊತ್ತಿರುತ್ತದೆ. ಅಂಥವರನ್ನೇ ಟಾರ್ಗೆಟ್ ಮಾಡಿ ಅವರಿಗೆ ತಪ್ಪು ಮಾಹಿತಿ ನೀಡಿ ವಿಮೆ ಮಿಸ್ ಸೆಲ್ಲಿಂಗ್ ಮಾಡುತ್ತಾರೆ. ಈ ರೀತಿ ಮಿಸ್ ಸೆಲ್ಲಿಂಗ್ ಮಾಡಿದ್ದರೂ ಸಹ ಬ್ಯಾಂಕ್ ಉದ್ಯೋಗಿಗಳು ಇನ್ಸೆಂಟೀವ್ ಪಡೆಯುತ್ತಾರೆ. ಇದೇ ಕಾರಣಕ್ಕೆ ಇನ್ಶೂರೆನ್ಸ್ ಮಿಸ್ ಸೆಲ್ಲಿಂಗ್ ಪ್ರಕರಣಗಳು ಹೆಚ್ಚುತ್ತಿವೆ.
ಯಾವುದೆ ವಿಮೆ ಮಾಡಿಸುವ ಮುನ್ನ ಒಂದು ವಿಚಾರವನ್ನು ಸ್ಪಷ್ಟವಾಗಿ ತಿಳಿದುಕೊಂಡಿರಬೇಕು. ಹೂಡಿಕೆಯೇ ಬೇರೆ, ವಿಮೆಯೇ ಬೇರೆ. ಲಾಭದ ಕಾರಣಕ್ಕೆ, ರಿಟರ್ನ್ಸ್ ಸಿಗುತ್ತದೆ ಎನ್ನುವ ಕಾರಣಕ್ಕೆ, ಆಸೆಗೆ ಬಿದ್ದು ವಿಮಾ ಪಾಲಿಸಿ ಮಾಡಿಸಿಕೊಳ್ಳುವ ಕೆಲಸ ಎಂದಿಗೂ ಮಾಡಿಕೊಳ್ಳಬೇಡಿ.


Click it and Unblock the Notifications