ವಿದೇಶಕ್ಕೆ ಹೋಗಬೇಕೆಂದರೆ ಪಾಸ್‌ಪೋರ್ಟ್ (Passport) ಬೇಕೇಬೇಕು. ಆದ್ರೆ ಕೆಲವೊಮ್ಮೆ ನಾವು ಮಾಡೋ ತಪ್ಪುಗಳು ದೊಡ್ಡ ತೊಂದರೆಗೆ ಕಾರಣವಾಗಬಹುದು. ಮುಖ್ಯವಾಗಿ ಯಾವುದೇ ದಾಖಲೆಗಳಲ್ಲಿ ಸಣ್ಣ ತಪ್ಪಾದರು, ಯಾವುದೇ ಸೌಲಭ್ಯ ಸಿಗುವುದಿಲ್ಲ. ಇದೀಗ ಭಾರತೀಯ ಪಾಸ್‌ಪೋರ್ಟ್‌ನಲ್ಲಿ ವಿಳಾಸವನ್ನು ಅಪ್ಡೇಟ್ ಮಾಡುವುದು ಬಹಳ ಮಹತ್ವದ ಹಂತವಾಗಿದೆ. ನೀವು ಒಂದೇ ನಗರದಲ್ಲಿದ್ದು, ಇದೀಗ ಬೇರೆ ರಾಜ್ಯಕ್ಕೆ ಮನೆ ಬದಲಾಯಿಸಿದ್ದರೆ, ನಿಮ್ಮ ಪಾಸ್‌ಪೋರ್ಟ್‌ನಲ್ಲಿ ಹೊಸ ವಿಳಾಸವನ್ನು ಚೇಂಜ್ ಮಾಡುವುದು ಅವಶ್ಯಕ. ಇದನ್ನು ಸರಳವಾಗಿ ಅಪ್ಡೇಟ್ ಮಾಡುವ ಬದಲಿಗೆ ಪಾಸ್‌ಪೋರ್ಟ್‌ನ ರೀ ಇಸ್ಯೂಗೆ ಅರ್ಜಿ ಸಲ್ಲಿಸುವ ಮೂಲಕ ಮಾಡಲಾಗುತ್ತದೆ. ಇದರಿಂದ ನಿಮ್ಮ ಹೊಸ ವಿಳಾಸವು ಪಾಸ್‌ಪೋರ್ಟ್‌ನಲ್ಲಿ ಕಾಣಿಸುತ್ತದೆ ಮತ್ತು ಎಲ್ಲಾದರೂ ಪ್ರಯಾಣಿಸುವಾಗ ಆಗುವ ತೊಂದರೆಯನ್ನು ತಪ್ಪಿಸಬಹುದು.

ಅರ್ಜಿ ಸಲ್ಲಿಸುವುದು ಹೇಗೆ?
ಈ ಪ್ರಕ್ರಿಯೆಯನ್ನು ಆರಂಭಿಸಲು, ನೀವು ಅಧಿಕೃತ ಪಾಸ್‌ಪೋರ್ಟ್ ಸೇವಾ ಪೋರ್ಟಲ್‌ಗೆ ಭೇಟಿ ನೀಡಬೇಕು. ಅಲ್ಲಿ ಲಾಗಿನ್ ಮಾಡಿ, ಅಥವಾ ಹೊಸ ಬಳಕೆದಾರರಾಗಿದ್ದರೆ ಅಕೌಂಟ್ ಕ್ರಿಯೇಟ್ ಮಾಡಬೇಕು. ನಂತರ "Apply for Re-issue of Passport" ಆಯ್ಕೆ ಮಾಡಿ, ಅಲ್ಲಿ ನೀವು "Change in Existing Personal Particulars" ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.
ಅರ್ಜಿ ನಮೂನೆಯಲ್ಲಿ ನಿಮ್ಮ ಹೊಸ ವಿಳಾಸವನ್ನು ಕರೆಕ್ಟ್ ಆಗಿ ಬರೆಯಬೇಕು. ಅಂದರೆ ನಿಮ್ಮ ದಾಖಲೆಗಳಲ್ಲಿರುವ ವಿಳಾಸ ಆಗಿರಬೇಕು. ಇನ್ನು ಈ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಬಹುದು ಅಥವಾ PDF ಡೌನ್‌ಲೋಡ್ ಮಾಡಿ, ಕೈಯಾರೆ ಬರೆದ ನಂತರ ಅಪ್‌ಲೋಡ್ ಮಾಡಬಹುದು. ಪೂರ್ಣಗೊಂಡ ನಂತರ, ನಿಮ್ಮ ವಿಳಾಸಕ್ಕೆ ಪ್ರೂಫ್ ಅನ್ನೂ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು.
ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿದ ಬಳಿಕ, ನಿಗದಿಪಡಿಸಿದ ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ. ನಂತರ ನೀವು ನಿಮ್ಮ ಹತ್ತಿರದ ಗೊತ್ತುಪಡಿಸಿದ ಪಾಸ್‌ಪೋರ್ಟ್ ಕೇಂದ್ರದಲ್ಲಿ (ಪಾಸ್‌ಪೋರ್ಟ್ ಸೇವಾ ಕೇಂದ್ರ ಅಥವಾ ಅಂಚೆ ಕಚೇರಿ ಪಾಸ್‌ಪೋರ್ಟ್ ಕೇಂದ್ರ) ಅಪಾಯಿಂಟ್‌ಮೆಂಟ್ ಕಾಯ್ದಿರಿಸಬೇಕು.
ಅಪಾಯಿಂಟ್‌ಮೆಂಟ್ ದಿನದಂದು ಏನೆಲ್ಲಾ ಬೇಕು?
ನಿಮ್ಮ ಅಪಾಯಿಂಟ್‌ಮೆಂಟ್ ದಿನದಂದು, ಮೂಲ ಪಾಸ್‌ಪೋರ್ಟ್‌ನೊಂದಿಗೆ ಅದರ ಮೊದಲ ಮತ್ತು ಕೊನೆಯ ಪುಟಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ತೆಗೆದುಕೊಂಡು ಹೋಗಬೇಕು. ಇದರ ಜೊತೆಗೆ, ಅರ್ಜಿ ರಶೀದಿ, ವಿಳಾಸ ಪುರಾವೆ ಮತ್ತು ಅಗತ್ಯವಿದ್ದರೆ ಪಾಸ್‌ಪೋರ್ಟ್ ಗಾತ್ರದ ಫೋಟೋ ಇಟ್ಟುಕೊಂಡಿರಿ. ಕೇಂದ್ರದಲ್ಲಿ ನಿಮ್ಮ ಬಯೋಮೆಟ್ರಿಕ್ಸ್ (ಭಾವಚಿತ್ರ ಮತ್ತು ಫಿಂಗರ್‌ಪ್ರಿಂಟ್) ದಾಖಲಾಗಿ, ಸಲ್ಲಿಸಿದ ದಾಖಲೆಗಳ ಪರಿಶೀಲನೆ ನಡೆಯುತ್ತದೆ.
ಒಂದೊಮ್ಮೆ ನೀವು ಬೇರೆ ನಗರ ಅಥವಾ ರಾಜ್ಯಕ್ಕೆ ಸ್ಥಳಾಂತರಗೊಂಡಿದ್ದರೆ, ನಿಮ್ಮ ಹೊಸ ವಿಳಾಸವನ್ನು ದೃಢೀಕರಿಸಲು ಪೊಲೀಸ್ ಪರಿಶೀಲನೆಗೆ ಒಳಪಡಬೇಕಾಗುತ್ತದೆ. ಒಮ್ಮೆ ಪರಿಶೀಲನೆ ಪೂರ್ಣಗೊಂಡು ಅರ್ಜಿ ಅನುಮೋದನೆಯಾದ ನಂತರ, ಹೊಸ ವಿಳಾಸವಿರುವ ಅಪ್ಡೇಟ್ ಮಾಡಿದ ಪಾಸ್‌ಪೋರ್ಟ್ ಅನ್ನು ಮುದ್ರಿಸಲಾಗುತ್ತದೆ. ನಂತರ ಅದನ್ನು ಸಾಮಾನ್ಯವಾಗಿ ಸ್ಪೀಡ್ ಪೋಸ್ಟ್ ಮೂಲಕ ನಿಮ್ಮ ನೋಂದಾಯಿತ ವಿಳಾಸಕ್ಕೆ ರವಾನಿಸಲಾಗುತ್ತದೆ.
ಇನ್ನು ವಿಳಾಸ ಚೇಂಜ್ ಮಾಡುವಾಗ ಹಲವು ಮಾನ್ಯ ದಾಖಲೆಗಳನ್ನು ಪುರಾವೆಯಾಗಿ ಬಳಸಬಹುದು. ಅವುಗಳಲ್ಲಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಇತ್ತೀಚಿನ ಯುಟಿಲಿಟಿ ಬಿಲ್‌ಗಳು (ವಿದ್ಯುತ್, ನೀರು, ದೂರವಾಣಿ), ಬಾಡಿಗೆ ಮನೆಯ ಅಗ್ರಿಮೆಂಟ್‌ಗಳನ್ನು ತೋರಿಸಬಹುದು.


Click it and Unblock the Notifications