ಬೆಂಗಳೂರು, ಆಗಸ್ಟ್ 22: ಯಾವುದೋ ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳು ಕೇಳಿದವು ಎನ್ನುವ ಕಾರಣಕ್ಕೆ ನಿಮ್ಮ ಕೆವೈಸಿ ಡೇಟಾ ನೀಡಿದರೆ ಮುಂದೆ ದೊಡ್ಡ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಅಪ್ಲಿಕೇಶನ್ ಕೇಳಿತು ಎನ್ನುವ ಮಾತ್ರಕ್ಕೆ ಸಾಫ್ಟ್ ಕಾಪಿಗಳನ್ನು ಕಳುಹಿಸಬಾರದು.
ನಿಮ್ಮ ದಾಖಲೆಗಳನ್ನೇ ಬಳಸಿಕೊಂಡು ಬೇರೆಯವರು ಬೇನಾಮಿ ಹೆಸರಿನಲ್ಲಿ ಸಾಲ ಪಡೆಯುವ ಆತಂಕವೂ ಇರುತ್ತದೆ. ಇದರ ಪರಿಣಾಮ ನಿಮ್ಮ ಕ್ರೆಡಿಟ್ ಸ್ಕೋರ್ ಕಳಪೆಯಾಗಿ ಮುಂದೆ ನಿಮಗೆ ಎಲ್ಲಿಯೂ ಸಾಲ ಹುಟ್ಟದಂತಹ ಸ್ಥಿತಿ ನಿರ್ಮಾಣವಾಗುತ್ತದೆ.

ನಿಮ್ಮ ವೈಯಕ್ತಿಕ ದಾಖಲೆಗಳನ್ನು ಕೂಡ ಮಿಸ್ ಯೂಸ್ ಮಾಡಿಕೊಂಡಿರುವ ಸಾಧ್ಯತೆ ಇದೆಯಾ? ಬ್ಯಾಂಕ್ ಗಳಲ್ಲಿ ಕೆವೈಸಿ ಮಾಡಬೇಕಿರೋದು ಕಡ್ಡಾಯಾನಾ? ಪಾವತಿ, ಹೂಡಿಕೆ ಅಥವಾ ಯಾವುದೇ ಫಿನ್ ಟೆಕ್ ಅಪ್ಲಿಕೇಶನ್ ಬಳಸೋವಾಗ, ಕೆವೈಸಿ ಕಡ್ಡಾಯವಾಗಿದೆಯಾ? ಎನ್ನುವುದನ್ನು ನಾವು ಮೊದಲು ತಿಳಿದುಕೊಳ್ಳಬೇಕು.
ಕೆವೈಸಿ ಅಂದರೆ ನೌ ಯುವರ್ ಕಸ್ಟಮರ್ ಅಥವಾ ನಿಮ್ಮ ಗ್ರಾಹಕರನ್ನು ತಿಳಿಯಿರಿ ಎಂದು ಹೇಳಬಹುದು. ಅಂದರೆ ಸುಲಲಿತ ವ್ಯವಹಾರಕ್ಕಾಗಿ ಬ್ಯಾಂಕ್ ಗಳು ಸಂಬಂಧಿಸಿದ ಗ್ರಾಹಕನ ಎಲ್ಲ ಮಾಹಿತಿ ಸಂಗ್ರಹಿಸಿ ಇಟ್ಟುಕೊಂಡಿರುತ್ತವೆ. ಆ್ಯಪ್ ಗಳು ಅಥವಾ ಯಾವುದೇ ಇತರ ಹಣಕಾಸು ಸಂಸ್ಥೆ ನೀವು ವಿಶ್ವಾಸಾರ್ಹರು ಮತ್ತು ನಂಬಲು ಅರ್ಹರು ಅಂತಾ ತಿಳಿದುಕೊಳ್ಳಲು ಬಳಸುವ ಪ್ರಕ್ರಿಯೆ ಎಂದು ಹೇಳಬಹುದು.
ಇದನ್ನು ಹೀಗೂ ಹೇಳಬಹುದು. ಅದು ನಿಮ್ಮ ಐಡೆಂಟಿಟಿಯಾಗಿ ಅಂದರೆ ನಿಮ್ಮ ಗುರುತಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದಿರುವ ಅನೇಕ ಘಟನೆಗಳು, ಕೆವೈಸಿ ಸಂದರ್ಭದಲ್ಲಿ ನಾವು ನೀಡುವ ದಾಖಲೆಗಳು ದುರ್ಬಳಕೆಯಾಗುವ ಸಾಧ್ಯತೆಯಿದೆ ಎನ್ನುವುದಕ್ಕೆ ಸಾಕ್ಷ್ಯ ಕೊಟ್ಟಿವೆ. ಇಂತಹ ದುರ್ಬಳಕೆ ತಪ್ಪಿಸುವುದಕ್ಕೆ ಮತ್ತು ಒಟ್ಟಾರೆ ಕೆವೈಸಿ ಪ್ರಕ್ರಿಯೆಯನ್ನ ಸರಳಗೊಳಿಸಿಕೊಳ್ಳಲು ಸರ್ಕಾರ ಏಕರೂಪದ ಕೆವೈಸಿ ಅನುಷ್ಠಾನ ಮಾಡುವ ಆಲೋಚನೆಯಲ್ಲಿದೆ. ಮ್ಯೂಚುಯಲ್ ಫಂಡ್ ವಲಯ ಅಳವಡಿಸಿಕೊಂಡಿದ್ದ ವಿಧಾನದಲ್ಲಿಯೇ ಇದರ ಅನುಷ್ಠಾನ ಕೂಡ ಮಾಡಲಾಗತ್ತದೆ.
ಬ್ಯಾಂಕ್ ಮತ್ತು ವಿಮಾ ಕಂಪೆನಿಗಳಂತೆ ಮೇಲಿಂದ ಮೇಲೆ ಪರಿಶೀಲನೆ ಅಗತ್ಯ ಇಲ್ಲದೇ ಇರೋ ರೀತಿ ಮಾಡಲಾಗುತ್ತದೆ. ಫಾಸ್ಟ್ ಟ್ಯಾಗ್ ರೀಚಾರ್ಜ್ ಸೇರಿದಂತೆ ಪೇಟಿಯಂ ಪಾವತಿ ಬ್ಯಾಂಕ್ ಗಳ ಚಟುವಟಿಕೆಗಳನ್ನ ಆರ್ ಬಿ ಐ ನಿರ್ಬಂಧಿಸಿತ್ತು. ಇದಕ್ಕೆ ಮುಖ್ಯ ಕಾರಣ ಏನೆಂದರೆ ಪೇಟಿಯಂ ಬ್ಯಾಂಕ್ ತನ್ನ ಗ್ರಾಹಕರ ಕೆವೈಸಿ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸುತ್ತಿರಲಿಲ್ಲ. ಒಂದೇ ಪ್ಯಾನ್ ಗೆ ಲಿಂಕ್ ಆಗಿರುವ ನೂರಾರು ಖಾತೆಗಳು, ಅಷ್ಟೇ ಯಾಕೆ ಸಾವಿರಾರು ಖಾತೆಗಳು ಆರ್ ಬಿ ಐ ತನಿಖೆ ವೇಳೆ ಪತ್ತೆಯಾಗಿದ್ದವು.
ಇದರಿಂದಾಗಿ ಯಾವುದೇ ಆ್ಯಪ್ ನಿಮ್ಮ ದಾಖಲೆಗಳನ್ನು ಸುಲಭವಾಗಿ ದುರ್ಬಳಕೆ ಮಾಡಬಹುದು ಎನ್ನುವ ಆತಂಕ ಮೂಡುತ್ತದೆ. ಹಾಗಾದರೆ ನಮ್ಮ ದಾಖಲೆಗಳನ್ನು ಹಾಗೂ ಕೆವೈಸಿ ಭದ್ರಗೊಳಿಸಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆ ಉದ್ಭವಿಸುತ್ತೆ. ದಾಖಲೆಗಳ ದುರ್ಬಳಕೆ ತಡೆಯುವುದಕ್ಕೆ ಯಾವಾಗಲೂ ಅದನ್ನ ಸ್ವಯಂ ದೃಢೀಕರಿಸಿಕೊಳ್ಳಬೇಕು. ಅಂದರೆ ಕೆವೈಸಿ ಅಪ್ಲೋಡ್ ಮಾಡುವುದಕ್ಕೂ ಮೊದಲು ಆ ದಾಖಲೆಗಳ ಮೇಲೆ ಸೆಲ್ಫ್ ಅಟೆಸ್ಟ್ ಮಾಡಿ.
ಆ ದಾಖಲೆಗಳ ನಕಲು ಪ್ರತಿಯ ಮೇಲೆ ಆ ದಾಖಲೆ ಸಲ್ಲಿಸಿದ ದಿನಾಂಕ ಮತ್ತು ಉದ್ದೇಶವನ್ನ ಬರೆದು ಸಹಿ ಮಾಡಿ. ನಂತರ ಅದನ್ನ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ. ಅದೇ ರೀತಿ, ನೀವು "ಬೇರೆ ಯಾವುದೇ ಉದ್ದೇಶಗಳಿಗೆ ಬಳಸುವಂತಿಲ್ಲ" ಅಂತಾ ಕೂಡ ಆ ದಾಖಲೆ ಪ್ರತಿಯ ಮೇಲೆ ಬರೆಯಬಹುದು. ಒಂದು ಸಲ ಕೆವೈಸಿ ಪ್ರಕ್ರಿಯೆ ಮುಗಿದ ಮೇಲೆ ನಿಮ್ಮ ಬಯೋಮೆಟ್ರಿಕ್ ಲಾಕ್ ಮಾಡುವ ಆಯ್ಕೆಯನ್ನ ಆಧಾರ್ ಕೊಟ್ಟಿದೆ. ಇದನ್ನ ನೀವು ಯುಐಡಿಎಐ ವೆಬ್ ಸೈಟ್ ಮೂಲಕ ಮಾಡಿಕೊಳ್ಳಬಹುದು. ನಿಮಗೆ ಲಭ್ಯವಿರುವ ಎಲ್ಲಾ ಭದ್ರತಾ ಅವಕಾಶಗಳನ್ನು ಅಂದರೆ ಸೆಕ್ಯುರಿಟಿ ಫೀಚರ್ ಗಳನ್ನ ಸಂಪೂರ್ಣವಾಗಿ ಬಳಸಿಕೊಳ್ಳಿ. ಜೊತೆಗೆ ನೀವು ಬಳಸುತ್ತಿರುವ ಫಿನ್ ಟೆಕ್ ಆ್ಯಪ್ ಎಷ್ಟು ವಿಶ್ವಾಸಾರ್ಹ ಎನ್ನುವುದನ್ನೂ ಪರಿಶೀಲಿಸಿ. ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡ ಮೇಲೆ ಕೆವೈಸಿ ಅಪ್ಡೇಟ್ ಸ್ಕ್ರೀನ್ ಶಾಟ್ ತೆಗೆದುಕೊಳ್ಳಿ. ಭವಿಷ್ಯದಲ್ಲಿ ಏನಾದರೂ ಸಮಸ್ಯೆ ಉದ್ಭವಿಸಿದರೆ, ಇದನ್ನು ಸಾಕ್ಷ್ಯಾಧಾರವಾಗಿ ತೋರಿಸಲು ಸಾಧ್ಯವಾಗುತ್ತದೆ.


Click it and Unblock the Notifications