ಷೇರುಪೇಟೆ ಅಥವಾ ಷೇರು ಮಾರುಕಟ್ಟೆ ಎನ್ನುವಾಗ ಹಲವರಿಗೆ ಅದು ತುಂಬಾ ಸಂಕೀರ್ಣ ಜಗತ್ತು ಅನ್ನಿಸುತ್ತದೆ. ಅಲ್ಲಿ ನಡೆಯುವ ಏರಿಳಿತಗಳು, ಲಾಭ-ನಷ್ಟ, ಕಂಪನಿಗಳ ಹೂಡಿಕೆ ಎಲ್ಲವೂ ಇವು ಗೊಂದಲವಾಗಬಹುದು. ಆದರೆ ನಿಜ ಹೇಳುವುದಾದರೆ, ಷೇರುಪೇಟೆಯ ಮೂಲಭೂತ ಅರ್ಥ ತಿಳಿದುಕೊಂಡರೆ ವಿಷಯ ಅಷ್ಟೇನೂ ಕಷ್ಟವಲ್ಲ. ಮೊದಲು "ಷೇರು" ಎಂದರೇನು ಎಂಬುದನ್ನು ಸರಳವಾಗಿ ತಿಳಿದುಕೊಳ್ಳೋಣ.

ಸರಳ ಉದಾಹರಣೆ ಮೂಲಕ ಅರ್ಥೈಸೋಣ:
ನೀವು "ಎ" ಎಂಬ ಅಂಗಡಿಯನ್ನು ತೆರೆದು ವ್ಯವಹಾರ ಆರಂಭಿಸಲು ನಿರ್ಧರಿಸಿದ್ದೀರಿ ಎಂದುಕೊಳ್ಳಿ. ಈ ಅಂಗಡಿಗೆ ಒಟ್ಟು 1 ಲಕ್ಷ ರೂ. ಹಣ ಬೇಕು. ಆದರೆ ನಿಮ್ಮ ಬಳಿ 50 ಸಾವಿರ ರೂ. ಮಾತ್ರ ಇದೆ. ಉಳಿದ ಹಣವನ್ನು ಕುಟುಂಬದವರು ಅಥವಾ ಸ್ನೇಹಿತರಿಂದ ಹೂಡಿಕೆ ರೂಪದಲ್ಲಿ ಪಡೆಯುತ್ತೀರಿ. ಹೀಗಾದರೆ ಅವರು ಆ ಅಂಗಡಿಯ ಪಾಲುದಾರರಾಗುತ್ತಾರೆ, ಅಂದರೆ ಆಂಗಡಿಯ ಷೇರುದಾರರು ಆಗುತ್ತಾರೆ.
ಷೇರು ಎಂದರೇನು?
ಅಂಗಡಿಯಲ್ಲಿ ಹೂಡಿಕೆ ಮಾಡಿದ ಪ್ರತಿಯೊಬ್ಬರಿಗೂ ಲಾಭ ಅಥವಾ ನಷ್ಟದಲ್ಲಿ ಸಮಾನ ಪಾಲು ಸಿಗಬೇಕು. ಅದಕ್ಕಾಗಿ ಷೇರು ಎನ್ನುವ ದಾಖಲೆ ನೀಡಲಾಗುತ್ತದೆ. ಒಂದು ಷೇರಿನ ಮುಖಬೆಲೆ 10 ರೂ. ಎಂದು ನಿಗದಿ ಮಾಡಿದರೆ, 1 ಲಕ್ಷ ರೂ. ಬಂಡವಾಳಕ್ಕೆ ಒಟ್ಟು 10,000 ಷೇರುಗಳು ಬೇಕಾಗುತ್ತವೆ (₹1,00,000 ÷ ₹10 = 10,000).
ನೀವು 50 ಸಾವಿರ ರೂ. ಹೂಡಿಕೆ ಮಾಡಿದರೆ, ನಿಮಗೆ 5,000 ಷೇರುಗಳು ಸಿಗುತ್ತವೆ. ಇನ್ನೊಬ್ಬರು 20 ಸಾವಿರ ರೂ. ಹೂಡಿದರೆ, ಅವರಿಗೆ 2,000 ಷೇರುಗಳು ಸಿಗುತ್ತವೆ. ಹೀಗೆ ಹೂಡಿಕೆ ಮಾಡಿದ ಪ್ರಮಾಣಕ್ಕೆ ಅನುಗುಣವಾಗಿ ಷೇರುಗಳ ಸಂಖ್ಯೆಯೂ ನಿರ್ಧಾರವಾಗುತ್ತದೆ.
ಲಾಭ-ನಷ್ಟಕ್ಕೆ ತಕ್ಕಂತೆ ಷೇರು ಮೌಲ್ಯ:
ಅಂಗಡಿಯ ಮೌಲ್ಯ ಹೆಚ್ಚಾದರೆ ಷೇರುಗಳ ಬೆಲೆಯೂ ಏರುತ್ತದೆ. ಉದಾಹರಣೆಗೆ, ಒಂದು ವರ್ಷದಲ್ಲಿ ಅಂಗಡಿಯ ಮೌಲ್ಯ 2 ಲಕ್ಷ ರೂ.ಗೆ ಏರಿದರೆ, ಮೊದಲೇ 10 ರೂ. ಇದ್ದ ಷೇರು ಮೌಲ್ಯ 20 ರೂ. ಆಗುತ್ತದೆ. ಆದರೆ ಅಂಗಡಿ ನಷ್ಟದಲ್ಲಿ ಸಿಲುಕಿಕೊಂಡು ಮೌಲ್ಯ 50 ಸಾವಿರ ರೂ.ಗೆ ಇಳಿದರೆ, ಷೇರು ಬೆಲೆ 5 ರೂ.ಗೆ ಇಳಿಯುತ್ತದೆ.
ಲಾಭ ಹಂಚಿಕೆ ಮತ್ತು ಡಿವಿಡೆಂಡ್:
ಒಂದು ವರ್ಷದಲ್ಲಿ ಕಂಪನಿ ತೆರಿಗೆ ಕಟ್ಟಿ 50 ಸಾವಿರ ರೂ. ಲಾಭ ಗಳಿಸಿದರೆ, ಪ್ರತಿ ಷೇರಿಗೆ 5 ರೂ. ಲಾಭ ಬರುತ್ತದೆ (₹50,000 ÷ 10,000 = ₹5). ಈ ಲಾಭವನ್ನು ಹೂಡಿಕೆದಾರರಿಗೆ ಡಿವಿಡೆಂಡ್ ರೂಪದಲ್ಲಿ ಹಂಚಬಹುದು. ಇಲ್ಲವೇ, ಕಂಪನಿ ತನ್ನ ವಿಸ್ತರಣೆಗಾಗಿ ಈ ಹಣವನ್ನು ಮತ್ತೆ ಹೂಡಿಕೆ ಮಾಡಲು ಬಳಸಬಹುದು.
ಐಪಿಒ ಮತ್ತು ಸಾರ್ವಜನಿಕ ಹೂಡಿಕೆ:
ಕಂಪನಿ ದೊಡ್ಡ ಮಟ್ಟದಲ್ಲಿ ಹಣ ಸಂಗ್ರಹಿಸಲು ಬಯಸಿದರೆ, ತನ್ನ ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಅವಕಾಶ ನೀಡುತ್ತದೆ. ಈ ಪ್ರಕ್ರಿಯೆಯನ್ನು ಐಪಿಒ (Initial Public Offering) ಎಂದು ಕರೆಯಲಾಗುತ್ತದೆ.
ಐಪಿಒ ಮೂಲಕ ಜನ ಸಾಮಾನ್ಯರು ಕಂಪನಿಯ ಷೇರುಗಳನ್ನು ಖರೀದಿಸಿ ಹೂಡಿಕೆ ಮಾಡಬಹುದು. ಕಂಪನಿ ಐಪಿಒ ಮೂಲಕ ಸಾಕಷ್ಟು ಹೂಡಿಕೆದಾರರನ್ನು ಸೆಳೆಯಬಹುದು. ಐಪಿಒ ನಂತರ ಆ ಕಂಪನಿಯ ಷೇರುಗಳ ಖರೀದಿ ಮತ್ತು ಮಾರಾಟ NSE (ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್) ಅಥವಾ BSE (ಬಾಂಬೆ ಸ್ಟಾಕ್ ಎಕ್ಸ್ಚೇಂಜ್) ಎಂಬಂತಹ ಷೇರು ವಿನಿಮಯ ಕೇಂದ್ರಗಳಲ್ಲಿ ನಡೆಯುತ್ತದೆ.
ಬ್ರೋಕರ್‌ಗಳ ಪಾತ್ರ:
ಷೇರುಗಳನ್ನು ಖರೀದಿಸುವಾಗ ಅಥವಾ ಮಾರಾಟ ಮಾಡುವಾಗ ನೇರವಾಗಿ ನೀವು ಕಂಪನಿಯ ಜೊತೆ ವ್ಯವಹರಿಸುವುದಿಲ್ಲ. ಬ್ರೋಕರ್‌ಗಳು ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ಅವರು ನೀಡುವ ಸೇವೆಗಾಗಿ ಸಣ್ಣ ಪ್ರಮಾಣದ ಕಮಿಷನ್ ಮತ್ತು ಶುಲ್ಕ ಪಡೆಯುತ್ತಾರೆ.
ಹೂಡಿಕೆ ಪ್ರಾರಂಭಿಸಲು ಅಗತ್ಯವಾದದ್ದು:
ಷೇರುಪೇಟೆಯಲ್ಲಿ ಹೂಡಿಕೆ ಮಾಡಲು ಮೊದಲು ಡಿಮ್ಯಾಟ್ ಖಾತೆ ತೆರೆಯುವುದು ಅನಿವಾರ್ಯ. ಈ ಖಾತೆಯಲ್ಲಿ ನಿಮ್ಮ ಎಲ್ಲಾ ಷೇರುಗಳು ಡಿಜಿಟಲ್ ರೂಪದಲ್ಲಿ ಸಂಗ್ರಹವಾಗುತ್ತವೆ. ಡಿಮ್ಯಾಟ್ ಖಾತೆಯಿಲ್ಲದೆ ಷೇರು ಖರೀದಿ-ಮಾರಾಟ ಸಾಧ್ಯವಿಲ್ಲ.
ಷೇರುಪೇಟೆಯ ಕಾರ್ಯವಿಧಾನವನ್ನು ಸರಳವಾಗಿ ಅರ್ಥಮಾಡಿಕೊಂಡರೆ, ಹೂಡಿಕೆ ಮಾಡುವಲ್ಲಿ ಯಾವುದೇ ಗೊಂದಲ ಇರುವುದಿಲ್ಲ. ಹೂಡಿಕೆ ಮಾಡುವ ಮೊದಲು ಕಂಪನಿಯ ಆರ್ಥಿಕ ಸ್ಥಿತಿ, ಮಾರುಕಟ್ಟೆಯ ಪರಿಸ್ಥಿತಿ, ಮತ್ತು ದೀರ್ಘಾವಧಿ ಗುರಿಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ.


Click it and Unblock the Notifications