ಬೆಂಗಳೂರು, ಜೂನ್ 28: ಸ್ವಂತ ಮನೆ ಹೊಂದುವ ಕನಸು ತಪ್ಪಲ್ಲ. ಆದರೆ ಸ್ವಂತ ಮನೆ ಖರೀದಿಗೆ ಸರಿಯಾದ ಸಮಯ ಯಾವುದು ಎನ್ನುವುದು ನಮಗೆ ಗೊತ್ತಿರಬೇಕು. ಗೃಹ ಸಾಲದ ಬಡ್ಡಿ ದರ ಕೂಡ ಜಾಸ್ತಿಯಾಗಿದೆ. ಇಂತಹ ಸನ್ನಿವೇಶದಲ್ಲಿ ಮನೆ ಖರೀದಿಯಂತಹ ದೊಡ್ಡ ದೊಡ್ಡ ಹಣಕಾಸು ನಿರ್ಧಾರ ಮಾಡುವ ಮುನ್ನ ಯೋಚಿಸಬೇಕಾಗುತ್ತದೆ. ನಾವು ಇಂಥ ಸಂದರ್ಭದಲ್ಲಿ ಒಂದಿಷ್ಟು ಅಂಶಗಳ ಮೇಲೆ ಗಮನ ನೀಡಬೇಕಾಗುತ್ತದೆ.
ಪ್ರತಿ ಮಾರುಕಟ್ಟೇಲೂ ಒಂದು ಸೈಕಲ್ ಇರತ್ತೆ.. ಒಂದು ಸಲ ಬೆಲೆ ಏರುತ್ತದೆ, ಇನ್ನೊಂದು ಸಲ ಇಳಿಕೆಯಾಗುತ್ತದೆ. ಹೀಗೆ ವೃತ್ತಾಕಾರವಾಗಿ ಸಾಗುತ್ತಿರುತ್ತದೆ. ಇದನ್ನು ಸ್ಟಾಕ್ ಮಾರ್ಕೆಟ್ ನಲ್ಲಿಯೂ ನೀವು ನೋಡಬಹುದು. ಅದೇ ರೀತಿ, ರಿಯಲ್ ಎಸ್ಟೇಟ್ ಮಾರ್ಕೆಟ್ ಗೂ ಕೂಡ ಈ ಸೈಕಲ್ ಅಪ್ಲೈ ಆಗುತ್ತದೆ. ಕೆಲವೊಂದು ಸಲ ನಿರ್ದಿಷ್ಟ ಅವಧಿಯಲ್ಲಿ ಆಸ್ತಿ ದರಗಳು ಕಡಿಮೆ ಇರುತ್ತವೆ ಅಥವಾ ಸ್ಥಿರವಾಗಿರುತ್ತವೆ. ಅಂತಹ ಅವಧಿಯಲ್ಲಿ ಕೈಗೆಟುಕುವ ದರದಲ್ಲಿ ಮನೆ ಖರೀದಿಸಬಹುದು. 2013 ರಿಂದ 2020ರವರೆಗೆ ರಿಯಲ್ ಎಸ್ಟೇಟ್ ವಲಯದಲ್ಲಿ ನಿಧಾನಗತಿ ಇತ್ತು. ಆದರೆ ಕಳೆದ ಎರಡು ವರ್ಷಗಳಲ್ಲಿ ಅಂದರೆ 2022 ಮತ್ತು 2023 ರಲ್ಲಿ ಆಸ್ತಿ ದರಗಳು ಗಣನೀಯ ಏರಿಕೆ ಕಂಡಿವೆ.

ಈ ವರ್ಷ ಸಹ ಏರಿಕೆಯ ಟ್ರೆಂಡ್ ಮುಂದುವರಿದಿದ್ದು ಶೇಕಡ 10 ರಿಂದ 12 ರಷ್ಟು ಏರಿಕೆಯಲ್ಲಿಯೇ ಸಾಗುತ್ತಿದೆ. ನಿಮ್ಮ ಬಳಿ ಹಣ ಇದ್ದರೆ, ಹಣ ಹೊಂದಿಕೆಯಾಗುತ್ತಿದ್ದರೆ ಈಗಲೇ ಮನೆ ಖರೀದಿ ಮಾಡುವುದು ಉತ್ತಮ ಎನ್ನುವುದು ಪರಿಣಿತರ ಮಾತು. ಯಾಕೆಂದರೆ ರಿಯಲ್ ಎಸ್ಟೇಟ್ ಕಡೆ ದೊಡ್ಡ ಮಟ್ಟದ ಹೂಡಿಕೆ ಹರಿದು ಬರುತ್ತಿರುವುದರಿಂದ ಇನ್ನೂ ಹೆಚ್ಚಿನ ಏರಿಕೆ ಸಾಧ್ಯತೆ ಇದೆ.
ಬಡ್ಡಿ ದರದ ಮೇಲೂ ನಾವು ಗಮನ ನೀಡಬೇಕು. ಬಹುತೇಕ ಮನೆಗಳನ್ನ ದೀರ್ಘಾವಧಿ ಸಾಲ ಮಾಡಿ ಖರೀದಿಸಲಾಗಿರುತ್ತದೆ. ರೆಪೋ ದರದಲ್ಲಿ ಈಗ ಯಥಾಸ್ಥಿತಿ ಮುಂದುವರಿದಿದ್ದರೂ ಬಜೆಟ್ ನಂತರ ಒಂದಿಷ್ಟು ಬದಲಾವಣೆ ನಿರೀಕ್ಷೆ ಮಾಡಬಹುದಾಗಿದೆ.
ಬ್ಯಾಂಕ್ ಗಳು ಆಸ್ತಿ ಮೌಲ್ಯದ ಶೇಕಡ 70 ರಿಂದ 80 ರಷ್ಟು ಮಾತ್ರ ಸಾಲ ಕೊಡುತ್ತವೆ ಎನ್ನುವ ವಿಚಾರ ನಿಮಗೆ ಗೊತ್ತಿದೆ. ಡೌನ್ ಪೇಮೆಂಟ್ ಆಗಿ ಶೇಕಡ 20 ರಿಂದ 30 ರಷ್ಟನ್ನು ನೀವೇ ಭರಿಸಬೇಕಾಗತ್ತದೆ. ನಿಮ್ಮ ಬಳಿ ಡೌನ್ ಪೇಮೆಂಟ್ ಗೆ ಸಾಕಷ್ಟು ಹಣ ಇದ್ದರೆ ಮಾತ್ರ ಆಗ ಮನೆ ಖರೀದಿ ಯೋಚನೆ ಮಾಡಿ. ನಿಮ್ಮ ಡೌನ್ ಪೇಮೆಂಟ್ ಮೊತ್ತ ಜಾಸ್ತಿ ಮಾಡಿಕೊಂಡರೆ ಸಾಲದ ಹೊರೆ ಕಡಿಮೆಯಾಗುತ್ತದೆ.
ಮನೆ ಖರೀದಿ ದೀರ್ಘಾವಧಿ ಹಣಕಾಸು ವ್ಯವಹಾರವಾಗಿದೆ. ಅಂತಹ ದೀರ್ಘಾವಧಿಗೆ ಅಂದರೆ 20, 25 ಅಥವಾ 30 ವರ್ಷಗಳವರೆಗೆ ಯಾವುದೇ ತೊಂದರೆ ಇಲ್ಲದೇ ಗೃಹ ಸಾಲ ಮರುಪಾವತಿ ಸಾಧ್ಯ ಆಗುತ್ತದೆಯಾ ಎನ್ನುವುದನ್ನು ನೋಡಿಕೊಳ್ಳಬೇಕು. ನಿಮ್ಮ ವೇತನದ ಬಹುಪಾಲು ಇಎಂಐ ಗೆ ಹೋಗುತ್ತದೆ. ಹೀಗಾಗಿ ಗೃಹ ಸಾಲದ ಇಎಂಐ ನಿಮ್ಮ ಟೇಕ್ ಹೋಂ ಸ್ಯಾಲರಿಯ ಶೇಕಡ 30 ರಿಂದ 40 ರೊಳಗಿರಲಿ. ಟೇಕ್ ಹೋಂ ಸ್ಯಾಲರಿ ಅಂದರೆ ಕಡಿತಗಳ ನಂತರ ನಿಮಗೆ ಸಿಗೋ ವೇತನ ಎಂದು ಲೆಕ್ಕ ಹಾಕಿಕೊಳ್ಳಬೇಕು.
ಮನೆ ಖರೀದಿಗೂ ಮೊದಲು, ನಿಮ್ಮ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಪರೀಕ್ಷಿಸಿ. ಉತ್ತಮ ಕ್ರೆಡಿಟ್ ಸ್ಕೋರ್ ಇದ್ದರೆ ನಿಮಗೆ ಬಡ್ಡಿ ದರ ಮೇಲೆ ಒಳ್ಳೆ ಡೀಲ್ ಸಿಗಬಹುದು. ಅಂದರೆ ಬಡ್ಡಿ ದರ ಹೆಚ್ಚು ಆಗೋದಿಲ್ಲ. ಸಿಬಿಲ್ ಸ್ಕೋರ್ ಜಾಸ್ತಿ ಇದ್ದರೆ ಬ್ಯಾಂಕ್ ನೊಂದಿಗೆ ಬಡ್ಡಿ ದರ ಇಳಿಕೆ ಸಂಬಂಧ ಚೌಕಾಶಿ ಮಾಡಬಹುದು.
ನಿಮ್ಮ ಹಣಕಾಸು ಸ್ಥಿತಿ ಸದೃಢವಾಗಿದ್ದು ಬೇರೆ ಯಾವ ಸವಾಲುಗಳು ಇಲ್ಲದೆ ಸಮರ್ಪಕವಾಗಿ ಇಎಂಐ ಪಾವತಿ ಮಾಡಲು ಸಾಧ್ಯವಿದೆ ಎನಿಸಿದರೆ ಮಾತ್ರ ಗೃಹ ಸಾಲ ಮಾಡಿ ಮನೆ ಖರೀದಿ ನಿರ್ಧಾರ ಮಾಡಿ. ಒಂದು ವೇಳೆ ಹೆಚ್ಚಿನ ಮೊತ್ತದ ಡೌನ್ ಪೇಮೆಂಟ್ ಮಾಡಲು ನಿಮ್ಮ ಬಳಿ ಸಾಧ್ಯವಿದೆ ಎಂದಾದರೆ ಮಾತ್ರ ಹೊಸ ಸಾಹಸಕ್ಕೆ ಕೈಹಾಕಿ.


Click it and Unblock the Notifications