ವಿಶ್ವದ ಪ್ರತಿಷ್ಟಿತ ಟೆಕ್ ಸಂಬಂಧಿತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT)ಯ ವಿದ್ಯಾಬ್ಯಾಸ ಮಾಡಿದ ಹೆಚ್ಚಿನ ಮಂದಿ ಇಂದು ಜಾಗತಿಕ ಮಟ್ಟದಲ್ಲಿ ಮಿಂಚುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಬಹುತೇಕ ಮಂದಿ ಅಮೆರಿಕಾದಲ್ಲಿ ಟೆಕ್ ಸಂಬಂಧಿತ ಕಂಪೆನಿಗಳಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದ್ದರೆ ಇನ್ನೂ ಕೆಲವರು ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ತಮ್ಮದೇ ಆದ ಸ್ಟಾರ್ಟಪ್ ಆರಂಭಿಸಿ, ಅನೇಕರಿಗೆ ಉದ್ಯೋಗ ನೀಡಿದ್ದಾರೆ. ಇದರಲ್ಲಿ ದಿಲ್ಶಾರ್ ಮಾಲ್ಹಿ ಕೂಡ ಪ್ರಮುಖರಾದವರು. ದಿಲ್ಶರ್ ಅವರು ಕಾನ್ಪುರದ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯಲ್ಲಿ ಕಲಿತು, ಸದ್ಯ ಗೇಮಿಂಗ್ ಪ್ಲಾಟ್‌ಫಾರ್ಮ್ ಝುಪಿಯನ್ನು ಆರಂಭಿಸಿ ಇದೀಗ ಸುಮಾರು ಕೇವಲ 5 ವರ್ಷಗಳಲ್ಲಿ 5,000 ಕೋಟಿ ರೂ ($600 ಮಿಲಿಯನ್‌ಗಿಂತಲೂ ಹೆಚ್ಚು) ಮೌಲ್ಯದ ಕಂಪೆನಿಯನ್ನಾಗಿ ಮಾಡಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲೇ ದಿಲ್ಶರ್ ಅವರು ಸಾಧನೆಯ ಮೆಟ್ಟಿಲು ಹತ್ತುತ್ತಿದ್ದು, ಇಂದು ಪ್ರಸಿದ್ದ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ವಿದ್ಯಾಭ್ಯಾಸದ ಕುರಿತು...
ರಾಜಸ್ಥಾನದ ಬಿಕಾನೇರ್ ಮೂಲದವರಾಗಿರುವ ದಿಲ್ಶರ್ ಅವರು ಐಐಟಿಯಲ್ಲಿ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ಅಲ್ಲದೆ ಇವರು ಐಐಟಿ ಕಾನ್ಪುರದಲ್ಲಿ ಸಿಮ್ಯುಟೆಕ್ ಕ್ಲಬ್‌ನ ಮುಖ್ಯಸ್ಥರಾಗಿದ್ದರು. ಸಿಮುಟೆಕ್ ವಿದ್ಯಾರ್ಥಿಗಳು ರಾಸಾಯನಿಕ ಎಂಜಿನಿಯರಿಂಗ್‌ಗೆ ಸಂಬಂಧಿಸಿದ ಸೈದ್ಧಾಂತಿಕ, ಪ್ರಾಯೋಗಿಕ ಮತ್ತು ಸಿಮ್ಯುಲೇಶನ್ ಯೋಜನೆಗಳಲ್ಲಿ ತಮ್ಮ ಆಸಕ್ತಿಯನ್ನು ಮುಂದುವರಿಸಲು ವೇದಿಕೆ ಒದಗಿಸುತ್ತದೆ. ಅಲ್ಲದೆ IIT-K ನಲ್ಲಿ ಸಂಶೋಧನಾ ಸಹಾಯಕರಾಗಿ ಕೆಲಸ ನಿರ್ವಹಿಸಿದ ನಂತರ, ಅವರು ಸ್ವಿಟ್ಜರ್ಲೆಂಡ್ ಮೂಲದ EPFL ನೊಂದಿಗೆ ಸಂಶೋಧನಾ ಸಹವರ್ತಿಯಾಗಿ ಕಾರ್ಯ ಮುಂದುವರೆಸಿದ್ದರು. ಆದರೆ 2018 ರಲ್ಲಿ ದಿಲ್ಶರ್ ಜೀವನವೇ ಬದಲಾದ ವರ್ಷ ಎಂದರೆ ತಪ್ಪಾಗಲಾರದು. 2018 ರಲ್ಲಿ ದಿಲ್ಶರ್ ಅವರು ಸಿದ್ಧಾಂತ್ ಸೌರಭ್ ಜೊತೆ ಕೂಡಿಕೊಂಡು ಗೇಮಿಂಗ್ ಪ್ಲಾಟ್‌ಫಾರ್ಮ್ ಝುಪಿ ಎಂಬ ಸಂಸ್ಥೆಯನ್ನು ಆರಂಭಿಸಿದರು. ಸದ್ಯ ಕೇವಲ 27 ನೇ ವಯಸ್ಸಿನಲ್ಲಿ, ದಿಲ್ಶರ್ ಇತ್ತೀಚೆಗೆ IDFC ಫಸ್ಟ್ ಮತ್ತು ಹುರುನ್ ಇಂಡಿಯಾ ಬಿಡುಗಡೆ ಮಾಡಿದ 2023 ರ ಭಾರತದ ಟಾಪ್ 200 ಸ್ವಯಂ ನಿರ್ಮಿತ ಉದ್ಯಮಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಝುಪಿ ಸಂಸ್ಥೆಯ ಮೌಲ್ಯ 5,000 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಅಲ್ಲದೆ ಮುಖೇಶ್ ಅಂಬಾನಿ ನೇತೃತ್ವದ ಡಿಜಿಟಲ್ ದೈತ್ಯ ಜಿಯೋ ಪ್ಲಾಟ್‌ಫಾರ್ಮ್ ದಿಲ್ಶರ್ ಅವರ ಸಂಸ್ಥೆಯಲ್ಲಿ ಹೂಡಿಕೆ ಮಾಡಿದೆ. ಅಲ್ಲದೆ ಒಟ್ಟಾರೆಯಾಗಿ ಝುಪಿ ಸಂಸ್ಥೆಯು ಸುಮಾರು 122 ಮಿಲಿಯನ್ ಡಾಲರ್ ಹಣವನ್ನು ಫಂಡ್ ರೂಪದಲ್ಲಿ ಪಡೆದುಕೊಂಡಿದೆ.

ಭಾರೀ ಮೊತ್ತಕ್ಕೇರಿದ ಮೌಲ್ಯ
ಕಳೆದ ವರ್ಷ ದಿಲ್ಶರ್ ಕಂಪೆನಿಯು ತನ್ನ B ಸುತ್ತಿನ ನಿಧಿಯನ್ನು 760 ಕೋಟಿ ರೂ.ನಲ್ಲಿ ಮುಕ್ತಾಯಗೊಳಿಸಿದ ನಂತರ ಹಿಂದಿನ ವರ್ಷ 30 ಕೋಟಿ ರೂ. ಹಣವನ್ನು ಒಳಗೊಂಡಂತೆ ಒಟ್ಟಾರೆಯಾಗಿ 600 ಮಿಲಿಯನ್ ಡಾಲರ್ ಮೌಲ್ಯವನ್ನು ತಲುಪಿದೆ. ಅಲ್ಲದೇ ಅದೇ ವರ್ಷ ಕೂಡ ದಿಲ್ಶರ್ ಡಬಲ್ ಅದೃಷ್ಟವನ್ನೂ ಪಡೆದುಕೊಂಡರು. ಯಾಕೆಂದರೆ ಅದೇ ಸಮಯದಲ್ಲಿ ಆಕಾಶ್ ಅಂಬಾನಿ ನೇತೃತ್ವದ ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯ ಜಿಯೋ ಪ್ಲಾಟ್‌ಫಾರ್ಮ್‌ಗಳೊಂದಿಗೆ ಝುಪಿ ಪಾಲುದಾರಿಕೆ ಕೂಡ ಮಾಡಿಕೊಂಡರು. ದಿಲ್ಶರ್ ಜಿಯೋ ಜೊತೆಗಿನ ಒಡನಾಟವನ್ನು ಕಾರ್ಯತಂತ್ರದ ಪಾಲುದಾರಿಕೆ ಎಂದು ಕರೆದರು, ಇದರಲ್ಲಿ ಆದಾಯ-ಹಂಚಿಕೆ ಒಪ್ಪಂದ ಮತ್ತು ಯಾವುದೇ ಇಕ್ವಿಟಿ ಹೂಡಿಕೆ ಇಲ್ಲ. ಭಾರತದಲ್ಲಿ ಡ್ರೀಮ್ 11 ಮತ್ತು ಮೊಬೈಲ್ ಪ್ರೀಮಿಯರ್ ಲೀಗ್‌ನಂತಹ ಬಿಲಿಯನ್-ಡಾಲರ್ ಲೇಬಲ್‌ಗಳನ್ನು ಹೊಂದಿರುವ ಉದಯೋನ್ಮುಖ ಆನ್‌ಲೈನ್ ಗೇಮಿಂಗ್ ಕಂಪೆನಿಗಳ ವಿರುದ್ದ ದಿಲ್ಶರ್ ಕಂಪನಿಯು ಸ್ಪರ್ಧೆ ನಡೆಸುತ್ತಿದೆ.
ಉಜ್ವಲ ಭವಿಷ್ಯ
ಇನ್ನು ಎಲ್ಲರಿಗೂ ತಿಳಿದಿರುವಂತೆ ಭಾರತದಲ್ಲಿ ಆನ್‌ಲೈನ್ ಗೇಮಿಂಗ್ ಕುರಿತಾದ ಕ್ರೇಜ್ ಹುಟ್ಟಿಕೊಳ್ಳುತ್ತಿದೆ. ಹಿಂದಿನ ಕಾಲದಲ್ಲಿ ಆಡುತ್ತಿದ್ದ ಸಾಂಪ್ರದಾಯಿಕ ಆಟವನ್ನು ಮುಖ್ಯ ವಿಚಾರವನ್ನಾಗಿ ಇಟ್ಟುಕೊಂಡು ಸದ್ಯ ಗೇಮ್‌ಗಳನ್ನು ಆನ್‌ಲೈನ್‌ನಲ್ಲಿ ಅಪ್‌ಡೇಟ್‌ನೊಂದಿಗೆ ಆಡಿಸಲಾಗುತ್ತಿದ್ದು, ಯುವ ಜನತೆಯ ಗಮನ ಸೆಳೆಯುತ್ತಿದೆ. ಅಲ್ಲದೆ ಆಟದಲ್ಲಿ ವಿಜೇತರಾದವರಿಗೆ ರಿವಾರ್ಡ್ ಕೂಡ ನೀಡಲಾಗುತ್ತಿದ್ದು, ಇದರಿಂದ ಹಣ ಗಳಿಸುವ ಮೂಲ ಕೂಡ ಆಗುತ್ತಿದೆ. ಇದರ ಹೊರತಾಗಿಯೂ ಇದರಲ್ಲಿ ಹಣ ಕಳೆದುಕೊಳ್ಳುವ ಅಪಾಯಗಳು ಹೆಚ್ಚು ಇರುವುದರಿಂದ ಎಚ್ಚರಿಕೆಯಿಂದ ಆಡಬೇಕಿದೆ ಎಂದು ಟೆಕ್ ತಜ್ಞರು ಎಚ್ಚರಿಕೆ ನೀಡುತ್ತಾರೆ.


Click it and Unblock the Notifications