ಎಐ ತಂತ್ರಜ್ಞಾನವಂತೂ (AI Technology) ಇಡೀ ಜಗತ್ತನ್ನೇ ಬೆಚ್ಚಿಬೀಳಿಸುತ್ತಿದೆ. ಇನ್ನೇನು ಕೆಲವೇ ವರ್ಷಗಳ್ಲಿ ಇಡೀ ವಿಶ್ವವನ್ನೇ ಎಐ ಆಳುತ್ತದೆಯೋ ಎಂಬಂತಹ ಆತಂಕ ಯುವಕರಲ್ಲಿ ಮನೆ ಮಾಡಿದೆ. ಈಗಾಗಲೇ ಹಲವರು ಈ ಎಐ ಆಗಮನದಿಂದ ತನ್ನ ಉದ್ಯೋಗವನ್ನೇ (Job) ಕಳೆದುಕೊಂಡು ಬಿಟ್ಟಿದ್ದಾರೆ. ಎಐ ಕ್ಷೇತ್ರದಲ್ಲಿ ಭಾರತೀಯರೂ ಕೂಡಾ ತನ್ನ ಅಸ್ತಿತ್ವವನ್ನು ಕಾಪಾಡಬೇಕೆಂಬ ಉದ್ದೇಶದಿಂದ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ.

ಹೌದು, ಭಾರತ ಸರ್ಕಾರವು ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಆಸಕ್ತಿ ಮತ್ತು ಆದ್ಯತೆಯನ್ನು ಗಮನಿಸಿ, "ಯುವ AI ಫಾರ್ ಆಲ್" (YUVA AI For All) ಎಂಬ ಉಚಿತ AI ಕೋರ್ಸ್ ಆರಂಭಿಸಲು ಸಜ್ಜಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದಿಂದ ಆರಂಭಿಸಲಾದ ಈ ರಾಷ್ಟ್ರೀಯ ಕೋರ್ಸ್, ಪ್ರತಿಯೊಬ್ಬ ಭಾರತೀಯರಿಗೂ AI ಬಗ್ಗೆ ಮಾಹಿತಿ ನೀಡುವುದಾಗಿದೆ.
5 ಗಂಟೆ ಕೋರ್ಸ್, ಎಐ ಬಗ್ಗೆ ಮಾಹಿತಿ:
ಭಾರತ ಸರ್ಕಾರದ ಈ ಉಚಿತ ಕೋರ್ಸ್ 5 ಗಂಟೆಗಳಿಗಿಂತ ಕಡಿಮೆ ಅವಧಿಯದ್ದಾಗಿದ್ದು, ಸರಳವಾಗಿ ಮತ್ತು ಸುಲಭದಲ್ಲಿ ಎಐ ಟೆಕ್ನಾಲಜಿ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇನ್ನು ಈ ಎಐ ಕೋರ್ಸ್ ಮೂಲಕ, ಎಐ ಜಾಲವನ್ನು ಒಂದು ಕೋಟಿ (10 ಮಿಲಿಯನ್) ಭಾರತೀಯರು ಮಾಹಿತಿ ಪಡೆಯಬೇಕು ಮತ್ತು ಅವರಿಗೆ ತರಬೇತಿ ನೀಡುಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ. ಹಾಗಿದ್ರೆ ಈ ಕೋರ್ಸ್ ಎಲ್ಲಿ ಲಭ್ಯವಿದೆ ಗೊತ್ತಾ? ಇಲ್ಲಿದೆ ಓದಿ.
YUVA AI For All ಕೋರ್ಸ್ ಎಲ್ಲಿ ಸಿಗುತ್ತೆ?
ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಇಂಡಿಯಾಎಐ ಮಿಷನ್ ಅಡಿಯಲ್ಲಿ "ಯುವ AI ಫಾರ್ ಆಲ್" (YUVA AI For All) ಕೋರ್ಸ್ ಅನ್ನು ಲಾಂಚ್ ಮಾಡಿದೆ. ಈ ಕೋರ್ಸ್ ಸಂಪೂರ್ಣ ಉಚಿತವಾಗಿದ್ದು, ಯಾರು ಬೇಕಾದರೂ ಇದರ ಸೌಲಭ್ಯ ಪಡೆಯಬಹುದು. ಇದರ ಮುಖ್ಯ ಉದ್ದೇಶ, ಎಲ್ಲಾ ಭಾರತೀಯ ನಾಗರಿಕರು, ವಿಶೇಷವಾಗಿ ಯುವಕರಿಗೆ, ಕೃತಕ ಬುದ್ಧಿಮತ್ತೆ ಎಂದರೇನು? ಇದರ ಪ್ರಯೋಜನಗಳನ್ನು ಪರಿಚಯಿಸುವುದು ಮತ್ತು ಅದರ ಬಗ್ಗೆ ಅರಿವು ಮೂಡಿಸುವುದಾಗಿದೆ.
ಈ ಕೋರ್ಸ್ ಕೇವಲ 4.5 ಗಂಟೆಗಳ ಕಾಲ ಇರುತ್ತದೆ. ಅಂದರೆ, ಯಾರಾದರೂ ಹೆಚ್ಚು ಸಮಯ ವ್ಯರ್ಥ ಮಾಡದೆ, ಈ ಕೋರ್ಸ್ ಅನ್ನು ಪೂರ್ಣಗೊಳಿಸಬಹುದು. ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಇತರರಿಗೆ AI ನ ಮೂಲಭೂತ ಅಂಶಗಳನ್ನು ಈ ಕೋರ್ಸ್ ಮೂಲಕ ಕಲಿಸಲಾಗುತ್ತದೆ.
ಕೋರ್ಸ್ ಕಂಪ್ಲೀಟ್ ಮಾಡಿದ್ರೆ ಸರ್ಟಿಫಿಕೇಟ್!
ಈ ಕೋರ್ಸ್ FutureSkills Prime, iGOT Karmayogi ಮತ್ತು ಇತರ ಜನಪ್ರಿಯ ಎಡ್-ಟೆಕ್ ಪೋರ್ಟಲ್‌ಗಳಂತಹ ಪ್ರಮುಖ ಲರ್ನಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಉಚಿತವಾಗಿ ಪಡೆಯಬಹುದು. ಕೋರ್ಸ್ ಪೂರ್ಣಗೊಳಿಸಿದವರಿಗೆ ಭಾರತ ಸರ್ಕಾರದ ವತಿಯಿಂದ ಪ್ರಮಾಣಪತ್ರವನ್ನೂ ಸಹ ನೀಡಲಾಗುತ್ತದೆ.
ಈ ಕೋರ್ಸ್ ಅನ್ನು ಪ್ರಸಿದ್ಧ AI ತಜ್ಞ, ಲೇಖಕ ಮತ್ತು ಇಂಡಿಯಾಎಐ ಮಿಷನ್‌ಗೆ ಹೆಸರುವಾಸಿಯಾದ ಜಸ್‌ಪ್ರೀತ್ ಬಿಂಧ್ರಾ ಅವರು ವಿನ್ಯಾಸಗೊಳಿಸಿದ್ದಾರೆ. ಜಸ್‌ಪ್ರೀತ್ ಬಿಂಧ್ರಾ ಅವರು AI & ಬಿಯಾಂಡ್ ಮತ್ತು ಟೆಕ್ ವಿಸ್ಪರರ್ ಲಿಮಿಟೆಡ್‌ನ ಸಂಸ್ಥಾಪಕರೂ ಕೂಡಾ ಆಗಿದ್ದು, ಇದೀಗ ಹೊಸ ಸಂಚಲನ ಸೃಷ್ಟಿಸಲು ರೆಡಿಯಾಗಿದ್ದಾರೆ..
ಈ ಕೋರ್ಸ್ ಆರು ಅಧ್ಯಾಯಗಳನ್ನು ಒಳಗೊಂಡಿದೆ. ಅದರಲ್ಲಿ AI ಎಂದರೇನು, ಅದು ಹೇಗೆ ಕಾರ್ಯನಿರ್ವಹಿಸುತ್ತದೆ, ಶಿಕ್ಷಣ, ಸೃಜನಶೀಲತೆ ಮತ್ತು ಒಂದು ಕೆಲಸವನ್ನು AI ಹೇಗೆ ಪರಿವರ್ತಿಸುತ್ತಿದೆ ಎಂಬುದನ್ನು ಈ ಅಧ್ಯಾಯಗಳಲ್ಲಿ ವಿವರಿಸಲಾಗುತ್ತದೆ. ಅಲ್ಲದೆ, AI ಸಾಧನಗಳನ್ನು ಸುರಕ್ಷಿತವಾಗಿ ಮತ್ತು ಜವಾಬ್ದಾರಿಯುತವಾಗಿ ಹೇಗೆ ಬಳಸುವುದು ಎಂಬುದರ ಬಗ್ಗೆಯೂ ಇಲ್ಲಿ ಮಾಹಿತಿ ನೀಡಲಾಗುತ್ತದೆ. ಎಐ ಭವಿಷ್ಯ, ಉದ್ಯೋಗವಕಾಶಗಳ ಬಗ್ಗೆಯೂ ಇಲ್ಲಿ ಮಾಹಿತಿ ನೀಡಲಾಗುತ್ತದೆ.
ಆನ್‌ಲೈನ್‌ನಲ್ಲಿ ರಿಜಿಸ್ಟರ್ ಮಾಡುವುದು ಹೇಗೆ?
- ಫ್ಯೂಚರ್‌ಸ್ಕಿಲ್ಸ್ ಪ್ರೈಮ್ ಓಪನ್ ಮಾಡಿ, ರಿಜಿಸ್ಟರ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಜಿಮೇಲ್, ಲಿಂಕ್ಡ್‌ಇನ್ ಬಳಸಿ ಸೈನ್ ಅಪ್ ಮಾಡಿಕೊಳ್ಳಿ ಅಥವಾ ಹೊಸದಾ ಅಕೌಂಟ್ ಕ್ರಿಯೇಟ್ ಮಾಡಿ.
- ಒಟಿಪಿ ಪರಿಶೀಲನೆ ಮುಗಿಸಿ ಮತ್ತು ವಿವರಗಳನ್ನು ಭರ್ತಿ ಮಾಡಿ.
- ನಂತರ ಭಾರತೀಯ ಪೌರತ್ವವನ್ನು ದೃಢೀಕರಿಸಬೇಕು.
- ನಂತರ ನಿಮ್ಮೆ ಎಐ ಕೋರ್ಸ್ ಆರಂಭವಾಗುತ್ತದೆ ಮತ್ತು ಸರ್ಟಿಫಿಕೇಟ್ ಪಡೆಯಬಹುದು.


Click it and Unblock the Notifications