ಅಮೆರಿಕದ ಸೆಮಿಕಂಡಕ್ಟರ್ ಚಿಪ್ ತಯಾರಕ ಕಂಪನಿ ಎನ್‌ವಿಡಿಯಾ (NVIDIA) ಬಗ್ಗೆ ಎಲ್ಲರಿಗೂ ಗೊತ್ತಿದೆ. ಇದೀಗ ಮಾರುಕಟ್ಟೆಯಲ್ಲಿ ಈ ಕಂಪನಿ ಹೊಸ ಇತಿಹಾಸ ಸೃಷ್ಟಿಸಿದ್ದು, ವಿಶ್ವದ ಮೊದಲ 5 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯವನ್ನು ತಲುಪಿದ ಕಂಪನಿಯೆಂದು ಎನ್‌ವಿಡಿಯಾ ಗುರುತಿಸಿಕೊಂಡಿದೆ. ಇದರ ಮೌಲ್ಯ ಈಗ ಭಾರತದ ಒಟ್ಟು ಆಂತರಿಕ ಉತ್ಪನ್ನ (GDP) 4.2 ಟ್ರಿಲಿಯನ್ ಡಾಲರ್‌ಗಿಂತಲೂ ಹೆಚ್ಚಾಗಿರುವುದು ಅಚ್ಛರಿಯ ಸಂಗತಿ. ಅಕ್ಟೋಬರ್ 29 ರಂದು ಬುಧವಾರ ಯುಎಸ್ ಮಾರುಕಟ್ಟೆಗಳು ತೆರೆದಾಗ, ಸೆಮಿಕಂಡಕ್ಟರ್ ದೈತ್ಯ ಎನ್‌ವಿಡಿಯಾ ಷೇರುಗಳು ಮಾರುಕಟ್ಟೆಯಲ್ಲಿ ಶೇಕಡಾ 4 ಕ್ಕಿಂತ ಹೆಚ್ಚು ಏರಿಕೆ ಕಂಡಿತ್ತು. ಈ ಮೂಲಕ ತನ್ನ ಮಾರುಕಟ್ಟೆ ಮೌಲ್ಯ 5.05 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯದೊಂದಿಗೆ ಹೊಸ ಮೈಲಿಗಲ್ಲನ್ನು ಸಾಧಿಸಿದೆ.

ಎನ್‌ವಿಡಿಯಾದ ಈ ಸಾಧನೆ ಜಾಗತಿಕವಾಗಿ ಕೃತಕ ಬುದ್ಧಿಮತ್ತೆ (AI) ಕ್ರಾಂತಿಯಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಆಪಲ್ ಮತ್ತು ಮೈಕ್ರೋಸಾಫ್ಟ್‌ನಂತಹ ಟೆಕ್ ದೈತ್ಯರನ್ನು ಮೀರಿಸಿ ಇದೀಗ ಎನ್‌ವಿಡಿಯಾ ಬೆಳದಿದ್ದು, ವಿಶ್ವದ ಅತಿದೊಡ್ಡ ಕಂಪನಿಯಾಗಿ ಗುರುತಿಸಿಕೊಂಡಿದೆ. ಕೇವಲ ಮೂರು ತಿಂಗಳ ಹಿಂದಷ್ಟೇ ಮಾರುಕಟ್ಟೆ ಮೌಲ್ಯ 4 ಟ್ರಿಲಿಯನ್ ಡಾಲರ್‌ಗಳಿತ್ತು. ಆದ್ರೆ ಈಗ 5 ಟ್ರಿಲಿಯನ್ ಡಾಲರ್‌ಗೆ ಏರಿಕೆ ಕಂಡಿರುವುದು, ಎಐ ಉದ್ಯಮದಲ್ಲಿ ಆಗುತ್ತಿರುವ ಬದಲಾವಣೆ, ಬೇಡಿಕೆ ಹೇಗಿದೆ ಎಂಬುದನ್ನು ಸೂಚಿಸುತ್ತದೆ.
ಸಿಇಂ ಜೆನ್ಸೆನ್ ಹುವಾಂಗ್ ಪ್ರತಿಕ್ರಿಯೆ:
ಇನ್ನು ಹೊಸ ಇತಿಹಾಸ ಸೃಷ್ಟಿಸುತ್ತಿದ್ದಂತೆ ಎನ್‌ವಿಡಿಯಾ ಕಂಪನಿಯ ಸಿಇಒ ಜೆನ್ಸೆನ್ ಹುವಾಂಗ್ ಮಾತನಾಡಿದ್ದು, ಮುಂದಿನ ನಾಲ್ಕು ವರ್ಷಗಳಲ್ಲಿ 500 ಬಿಲಿಯನ್ ಡಾಲರ್ ಮೌಲ್ಯದ ಎಐ ಚಿಪ್ ಆರ್ಡರ್‌ಗಳನ್ನು ಕಂಪನಿ ಪಡೆದುಕೊಂಡಿದೆ ಎಂದು ಹೇಳಿದ್ದಾರೆ. ಇದು ಸೂಪರ್‌ಕಂಪ್ಯೂಟರ್‌ಗಳು, ಡೇಟಾ ಸೆಂಟರ್‌ಗಳು ಮತ್ತು ಆಟೋ ರನ್ನಿಂಗ್ ಕಾರುಗಳಿಗೆ ಶಕ್ತಿ ತುಂಬ ಪ್ರೊಸೆಸರ್ ಉತ್ಪಾದನೆಗೆ ಎನ್‌ವಿಡಿಯಾಗೆ ಎಷ್ಟು ಬೇಡಿಕೆಯಿದೆ ಎಂಬುದನ್ನು ತೋರಿಸಿದೆ.
ಅಲ್ಲದೇ ಉಬರ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡು ಸ್ವಾಯತ್ತ ವಾಹನ ತಂತ್ರಜ್ಞಾನದಲ್ಲೂ ಅಭಿವೃದ್ಧಿ ಕಾಣುತ್ತಿದೆ. ಅಲ್ಲದೆ, ನೋಕಿಯಾದೊಂದಿಗೆ ಮುಂದಿನ ಪೀಳಿಗೆಯ 6ಜಿ ನೆಟ್‌ವರ್ಕ್‌ಗಳನ್ನು ಸಹ-ಅಭಿವೃದ್ಧಿಪಡಿಸಲು 1 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಇದು ಟೆಲಿಕಾಂ ಮತ್ತು ಎಡ್ಜ್ ಎಐ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ಮಾಡಿಕೊಂಡಿರುವ ಹೊಸ ಯೋಜನೆ. ಎನ್‌ವಿಡಿಯಾ ಹೊಸ ದಾಖಲೆ ಮೂಲಕ ಕೇವಲ ಆರ್ಥಿಕತೆಯಲ್ಲಿ ಮಾತ್ರವಲ್ಲ, ಎಐ ಕ್ಷೇತ್ರದಲ್ಲಿ ಬೇಕಾದ ಅಗತ್ಯತೆಗಳನ್ನು ಪೂರೈಸುತ್ತಿದೆ.
ಜುಲೈ 2025 ರಲ್ಲಷ್ಟೇ ಎನ್‌ವಿಡಿಯಾ ಮಾರುಕಟ್ಟೆ ಮೌಲ್ಯ 4 ಟ್ರಿಲಿಯನ್ ಡಾಲರ್‌ಗಳಿಗೆ ತಲುಪಿತ್ತು. ಆದ್ರೆ ಈ ಸಾಧನೆಯ ಕೆಲವೇ ತಿಂಗಳಲ್ಲಿ 5 ಟ್ರಿಲಿಯನ್ ತಲುಪಿದ್ದು ಇಡೀ ವಿಶ್ವವೇ ತಿರುಗಿ ನೋಡುವಂತಾಗಿದೆ. ಇದು ಎಐ ಅಳವಡಿಕೆಯ ವೇಗ ಮತ್ತು ಉತ್ತಮ ಕಾರ್ಯನಿರ್ವಹಿಸುವ ಕಂಪ್ಯೂಟಿಂಗ್ ಹಾಗೂ ಡೇಟಾ ಮೂಲಸೌಕರ್ಯದಲ್ಲಿ ಕೆಲಸದ ಬಗ್ಗೆ ಹೂಡಿಕೆದಾರರ ವಿಶ್ವಾಸವನ್ನು ತೋರಿಸಿಕೊಟ್ಟಿದೆ. ಇದೇ ಕಾರಣದಿಂದ ಕಂಪನ ವರ್ಷ ಹೋದಂತೆ ಹೊಸ ದಾಖಲೆ ಸೃಷ್ಟಿಸಿದೆ.


Click it and Unblock the Notifications