ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಇದರಿಂದ ಭಾರತೀಯ ಷೇರು ಮಾರುಕಟ್ಟೆಗೂ ಬಿಸಿ ತಟ್ಟಿದೆ. ಆರಂಭದಿಂದಲೇ ಬರಸಿಡಿಲು ನೋಡಿದ ಭಾರತೀಯ ಷೇರು ಮಾರುಕಟ್ಟೆ ಇಂದು ಭಾರಿ ಕುಸಿತ ನೋಡಿದೆ. ಇಂದು (ಮಾರ್ಚ್ 2) ಆರಂಭಿಕ ವಾಹಿವಾಟಿನಲ್ಲೇ ನಿಫ್ಟಿ 50 ಸೂಚ್ಯಂಕ, 24,900 ಮಟ್ಟಕ್ಕಿಂತ ಕೆಳಗೆ ಕುಸಿದಿದೆ. ಅಂದರೆ ನಿಫ್ಟಿಯಲ್ಲಿ 300 ಅಂಕ ಕುಸಿದಿದೆ ಎನ್ನಲಾಗ್ತಿದೆ. ಇನ್ನು ಬಿಎಸ್ಇ ಸೆನ್ಸೆಕ್ಸ್ ಕೂಡ 1,000 ಕ್ಕೂ ಹೆಚ್ಚು ಪಾಯಿಂಟ್ಗಳ ಕುಸಿತ ಕಂಡಿದ್ದು, ಹೂಡಿಕೆದಾರರನ್ನು ಕಂಗಾಲಾಗಿಸಿದೆ.

ಇರಾನ್ ಈಗ ರಣಭೂಮಿಯಾಗಿದೆ. ಇಸ್ರೇಲ್-ಅಮೆರಿಕ ಕೂಡ ಕದನ ಭೂಮಿಯಾಗಿದೆ. ಜಿದ್ದಾಜಿದ್ದಿನಲ್ಲಿ ಮುನ್ನುಗ್ಗುತ್ತಿರುವ ಈ ರಾಷ್ಟ್ರಗಳಿಂದ, ಜಾಗತಿಕ ವ್ಯಾಪಾರ ವಲಯದಲ್ಲಿ ಅಸ್ಥಿರತೆ ಶುರುವಾಗಿದೆ. ಮೊದಲನೆಯದಾಗಿ ಮಾರುಕಟ್ಟೆಯ ಪ್ರಮುಖ ಚಿಂತೆ ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ. ತೈಲ ಮಾರುಕಟ್ಟೆಯಲ್ಲಿ ಸೃಷ್ಟಿಯಾದ ಅನಿಶ್ಚಿತತೆಯಿಂದ ಬ್ರೆಂಟ್ ಕಚ್ಚಾ ತೈಲದ ಬೆಲೆಗಳು ಕೂಡ ಜಿಗಿತ ನೋಡಿವೆ.
ಇದರ ನಡುವೆ ಮಧ್ಯಪ್ರಾಚ್ಯದ ಪರಿಸ್ಥಿತಿಯಿಂದ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಭಯ ಹೂಡಿಕೆದಾರರನ್ನು ಆತಂಕಕ್ಕೆ ಒಳಪಡಿಸಿದೆ. ಹಾರ್ಮುಜ್ ಜಲಸಂಧಿಯ ಮೂಲಕ ವಿಶ್ವದ ದೊಡ್ಡ ಪ್ರಮಾಣದ ತೈಲ ಸಾಗಣೆ ನಡೆಯುವುದರಿಂದ, ಅಲ್ಲಿ ಯಾವುದೇ ಅಡಚಣೆ ಉಂಟಾದರೆ ಬೆಲೆಗಳಲ್ಲಿ ತೀವ್ರ ಏರಿಕೆ ಸಂಭವಿಸಬಹುದು ಎಂಬ ಅಂದಾಜುಗಳಿವೆ.
ಇನ್ನು ತೈಲ ಬೆಲೆ ಏರಿಕೆಯ ಪರಿಣಾಮವಾಗಿ ತೈಲ ಮಾರುಕಟ್ಟೆ ಕಂಪನಿಗಳು, ಬಣ್ಣ ತಯಾರಿಕಾ ಕಂಪನಿಗಳು, ಟೈರ್ ಉದ್ಯಮ, ವಿಮಾನಯಾನ ಮತ್ತು ರಾಸಾಯನಿಕ ವಲಯಗಳ ಮೇಲೆ ಒತ್ತಡ ಹೆಚ್ಚುವ ಸಾಧ್ಯತೆ ಇದೆ. ಇವುಗಳಿಗೆ ಇನ್ಪುಟ್ ವೆಚ್ಚಗಳು ಹೆಚ್ಚುವ ಮೂಲಕ ಲಾಭದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೆ ಅಪ್ಸ್ಟ್ರೀಮ್ ತೈಲ ಉತ್ಪಾದಕ ಕಂಪನಿಗಳಿಗೆ ಇದರಿಂದ ಲಾಭವಾಗುವ ಸಾಧ್ಯತೆ ಇದೆ, ಏಕೆಂದರೆ ಹೆಚ್ಚಿದ ಬೆಲೆಗಳು ಅವರ ಆದಾಯವನ್ನು ಹೆಚ್ಚಿಸಬಹುದು. ಜೊತೆಗೆ ರಕ್ಷಣಾ ವಲಯದ ಷೇರುಗಳಲ್ಲೂ ಸಕಾರಾತ್ಮಕ ಚಲನವಲನ ಕಾಣುವ ಸಾಧ್ಯತೆ ಇದೆ.
ಜಾಗತಿಕ ಮಟ್ಟದಲ್ಲೂ ಮಾರುಕಟ್ಟೆಗಳು ಒತ್ತಡಕ್ಕೆ ಒಳಗಾಗಿವೆ. ಏಷ್ಯಾದ ಪ್ರಮುಖ ಸೂಚ್ಯಂಕಗಳು ಕುಸಿತ ಕಂಡಿದ್ದು, ಅಮೆರಿಕಾ ಮತ್ತು ಯುರೋಪಿನ ಭವಿಷ್ಯ ವಹಿವಾಟುಗಳಲ್ಲೂ ಅಸ್ಥಿರತೆ ಕಾಣಿಸಿಕೊಂಡಿದೆ. ಭೌಗೋಳಿಕ ರಾಜಕೀಯ ಪರಿಸ್ಥಿತಿ ತೀವ್ರಗೊಂಡ ಹಿನ್ನೆಲೆಯಲ್ಲಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಗಳ ಕಡೆ ಮುಖ ಮಾಡುತ್ತಿದ್ದಾರೆ. ಚಿನ್ನದ ಬೆಲೆಗಳಲ್ಲೂ ಏರಿಕೆ ಕಂಡುಬಂದಿದೆ.ತಜ್ಞರ ಅಭಿಪ್ರಾಯದಂತೆ, ಇಂತಹ ಸಂದರ್ಭಗಳಲ್ಲಿ ಆತುರದ ಮಾರಾಟ ಮಾಡುವುದು ಸರಿಯಾದ ಕ್ರಮವಲ್ಲ. ಹಿಂದಿನ ಹಲವು ಜಾಗತಿಕ ಬಿಕ್ಕಟ್ಟುಗಳ ನಂತರ ಮಾರುಕಟ್ಟೆಗಳು ಮತ್ತೆ ಚೇತರಿಸಿಕೊಂಡ ಉದಾಹರಣೆಗಳಿವೆ. ಆದ್ದರಿಂದ ಹೂಡಿಕೆದಾರರು ಶಾಂತವಾಗಿ ಪರಿಸ್ಥಿತಿಯನ್ನು ಗಮನಿಸಿ, ದೀರ್ಘಕಾಲಿಕ ದೃಷ್ಟಿಯಿಂದ ನಿರ್ಧಾರ ಕೈಗೊಳ್ಳುವುದು ಉತ್ತಮ ಎಂದು ಸಲಹೆ ನೀಡಲಾಗಿದೆ. ಮಾರುಕಟ್ಟೆಯ ದೌರ್ಬಲ್ಯವನ್ನು ಉತ್ತಮ ಗುಣಮಟ್ಟದ ಷೇರುಗಳನ್ನು ಹಂತ ಹಂತವಾಗಿ ಸಂಗ್ರಹಿಸಲು ಬಳಸಿಕೊಳ್ಳಬಹುದು ಎಂಬುದೂ ತಜ್ಞರ ಅಭಿಪ್ರಾಯವಾಗಿದೆ.
ಒಟ್ಟಾರೆ, ಮಧ್ಯಪ್ರಾಚ್ಯದ ಉದ್ವಿಗ್ನತೆ ಮತ್ತು ತೈಲ ಬೆಲೆ ಏರಿಕೆಯ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ತಾತ್ಕಾಲಿಕ ಅಸ್ಥಿರತೆ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಜಾಗತಿಕ ಬೆಳವಣಿಗೆಗಳು ಯಾವ ದಿಕ್ಕಿನಲ್ಲಿ ಸಾಗುತ್ತವೆ ಎಂಬುದರ ಮೇಲೆ ಮಾರುಕಟ್ಟೆಯ ದಿಕ್ಕು ಅವಲಂಬಿತವಾಗಿರಲಿದೆ.
(ಹಕ್ಕುತ್ಯಾಗ: ವ್ಯಕ್ತಿಗತ ವಿಶ್ಲೇಷಕರ ಅಥವಾ ಘಟಕಗಳ ಅಭಿಪ್ರಾಯಗಳು ಮತ್ತು ಶಿಫಾರಸುಗಳು ಮಾತ್ರ ಇಲ್ಲಿ ಸೂಚಿಸಲಾಗಿದೆ ಮತ್ತು ಅವು Goodreturns.in ಅಥವಾ Greynium Information Technologies Private Limited (ಒಟ್ಟಿಗೆ "ನಾವು" ಎಂದು ಉಲ್ಲೇಖಿಸಲಾಗಿದೆ) ಅವರ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಯಾವುದೇ ವಿಷಯದ ನಿಖರತೆ, ಪೂರ್ಣತೆ ಅಥವಾ ನಂಬಿಕಾರ್ಹತೆಯನ್ನು ನಾವು ಖಚಿತಪಡಿಸುವುದಿಲ್ಲ, ಸಮರ್ಥಿಸುತ್ತಿಲ್ಲ ಅಥವಾ ಹೊಣೆಗಾರರಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ_SECURITIES_ ಖರೀದಿ ಅಥವಾ ಮಾರಾಟವನ್ನು ಪ್ರೇರೇಪಿಸುವುದಿಲ್ಲ. ಎಲ್ಲಾ ಮಾಹಿತಿಯು ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ನೀಡಲಾಗಿದ್ದು, ಯಾವುದೇ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಲೈಸೆನ್ಸ್ ಪಡೆದ ಹಣಕಾಸು ಸಲಹೆಗಾರರಿಂದ ಸ್ವತಃ ಪರಿಶೀಲಿಸುವುದು ಅಗತ್ಯ.)


Click it and Unblock the Notifications