ಅಮೆರಿಕದ ಸೆಂಟ್ರಲ್ ಬ್ಯಾಂಕ್ ಎಂದು ಗುರುತಿಸಿಕೊಂಡಿರುವ ಫೆಡರಲ್ ರಿಸರ್ವ್ (Fed) ಬುಧವಾರ ತನ್ನ ಬಡ್ಡಿದರವನ್ನು ಕಡಿತಗೊಳಿಸಿದೆ. ಅಂದರೆ 25 ಮೂಲಾಂಕಗಳಷ್ಟು ಫೆಡ್ ದರ ಕಡಿತ ಮಾಡಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಬಡ್ಡಿದರಗಳು 3.75% ರಿಂದ 4.00% ಗೆ ತಲುಪಲಿದೆ. ಹಲವು ದಿನಗಳ ಬೇಡಿಕೆ ಇದೀಗ ಕೊನೆಗೂ ಫೆಡ್ ರಿಸರ್ವ್ ಈಡೇರಿಸಿದೆ. ಈ ವರ್ಷ ಫೆಡ್‌ನಿಂದ ಇದು ಸತತ ಎರಡನೇ ಬಡ್ಡಿದರ ಕಡಿತವಾಗಿದ್ದು, ಕೇಂದ್ರೀಯ ಬ್ಯಾಂಕ್ ಹೇಳುವ ಪ್ರಕಾರ, ಭವಿಷ್ಯದ ಬಡ್ಡಿದರಗಳ ಬಗ್ಗೆ ನಿರ್ಧರಿಸುವಾಗ ಯುಎಸ್ (US) ಆರ್ಥಿಕತೆ ಬಗ್ಗೆ ಸಮಲೋಚನೆ ನಡೆಸಿ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ.

ಇನ್ನು ಈ ಬಗ್ಗೆ ಫೆಡ್ ಅಧ್ಯಕ್ಷ ಜೆರೋಮ್ ಪಾವೆಲ್ ಮಾತನಾಡಿ, ಡಿಸೆಂಬರ್‌ನಲ್ಲಿ ಮತ್ತೊಂದು ದರ ಕಡಿತದ ಸಾಧ್ಯತೆ ಬಹುತೇಕ ಅನುಮಾನ ಎಂದಿದ್ದಾರೆ. "ಡಿಸೆಂಬರ್ ದರ ಕಡಿತವಾಗುವುದು ಖಚಿತವಲ್ಲ, ಅದು ದೂರದ ಮಾತು" ಎಂದು ಅವರು ಹೇಳಿದ್ದಾರೆ.
ಅಮೆರಿಕದ ಷೇರು ಮಾರುಕಟ್ಟೆ ಮೇಳೆ ಪರಿಣಾಮ
ಫೆಡ್ ಹೊಸ ನೀತಿಯ ನಂತರ ಬುಧವಾರ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿಸಿತು. ಡೌ ಜೋನ್ಸ್ ಮತ್ತು ಎಸ್&ಪಿ 500 ಸೂಚ್ಯಂಕಗಳು ಇಳಿಕೆ ಕಂಡರೆ, ತಂತ್ರಜ್ಞಾನದ ಷೇರುಗಳ ಏರಿಕೆಯು ನಾಸ್ಡಾಕ್ ಸೂಚ್ಯಂಕವನ್ನು ಮೇಲಕ್ಕೆತ್ತಿತು. ಆದರೆ ಗುರುವಾರ ಏಷ್ಯಾದ ಮಾರುಕಟ್ಟೆಗಳು ಸಹ ಹೆಚ್ಚಾಗಿ ಇಳಿಕೆ ಕಂಡಿದೆ ಎನ್ನಲಾಗಿದೆ.
ಭಾರತೀಯ ಷೇರು ಮಾರುಕಟ್ಟೆ ಮೇಲಿನ ಪರಿಣಾಮ:
ಯುಎಸ್ ಫೆಡರಲ್ ರಿಸರ್ವ್ ನೀತಿಯಿಂದಾಗಿ, ಇಂದಿನ ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಬಹುದು ಎಂದು ನಿರೀಕ್ಷಿಸಲಾಗಿದೆ. ಅಲ್ಲದೇ ಹೂಡಿಕೆದಾರರು 25 ಬೇಸಿಸ್ ಪಾಯಿಂಟ್‌ಗಳ ಕಡಿತವನ್ನು ಮೊದಲೇ ನಿರೀಕ್ಷಿಸಿದ್ದರು ಎನ್ನಲಾಗಿದೆ. ಆದರೆ, ಯುಎಸ್‌ನಲ್ಲಿ ಹಣಕಾಸು ನೀತಿ ಸಡಿಲಗೊಳ್ಳುವ ಕಾರಣ, ಭಾರತ ಸೇರಿದಂತೆ ಹಲವು ಮಾರುಕಟ್ಟೆಗಳಿಗೆ ವಿದೇಶಿ ಹೂಡಿಕೆ ಹೆಚ್ಚಾಗಬಹುದು ಎಂದು ವಿಶ್ಲೇಷಕರು ನಂಬಿದ್ದಾರೆ.
ಮಾರುಕಟ್ಟೆ ತಜ್ಞ ಅವಿನಾಶ್ ಗೋರಕ್ಷಕರ್ ಮಾತನಾಡಿ, "ಯುಎಸ್ ಫೆಡ್ ದರ ಕಡಿತವು ದೀರ್ಘಾವಧಿಯಲ್ಲಿ ಆದಾಯದಲ್ಲಿ ಲಾಭವಾಗುತ್ತದೆ, ಅಲ್ಲದೇ ದರಕಡಿತವನ್ನು ಈಗಾಗಲೇ ಅಂದಾಜಿಸಲಾಗಿತ್ತು. ಯುಎಸ್ ನಲ್ಲಿ ಆದಾಯ ಷೇರುಗಳ ಅಮೆರಿಕನ್ ಬಾಂಡ್‌ಗಳ ಆಕರ್ಷಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೆಲವು ವಿದೇಶಿ ಸಾಂಸ್ಥಿಕ ಹೂಡಿಕೆದಾರರ (FII) ಹಣವು ಭಾರತದ ಮಾರುಕಟ್ಟೆಯಲ್ಲಿ ಹೆಚ್ಚಾಗಬಹುದು. ಆದರೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಏರಿಕೆ ನಿರೀಕ್ಷಿಸಬೇಡಿ" ಎಂದು ಹೇಳಿದದಾರೆ.
ಮೆಹ್ತಾ ಇಕ್ವಿಟೀಸ್‌ನ ಸಂಶೋಧನಾ ವಿಶ್ಲೇಷಕ ಮತ್ತು ಹಿರಿಯ ಉಪಾಧ್ಯಕ್ಷ ಪ್ರಶಾಂತ್ ತಪ್ಸೆ ಸಹ, ಯುಎಸ್ ಟ್ರೆಷರಿ ಆದಾಯ ಒಂದು ವೇಳೆ ಕುಸಿತ ಕಂಡರೆ, ಜಾಗತಿಕ ಹೂಡಿಕೆದಾರರಿಗೆ ಸಾಲದ ವೆಚ್ಚಗಳು ಕಡಿಮೆಯಾಗುತ್ತವೆ ಎಂದು ಹೇಳಿದರು.
ಐಟಿಐ ಗ್ರೋತ್ ಆಪರ್ಚುನಿಟೀಸ್ ಫಂಡ್‌ನ ಸಿಐಒ ಮೋಹಿತ್ ಗುಲಾಟಿ ಪ್ರಕಾರ, ಯುಎಸ್ ಫೆಡ್ ದರ ಕಡಿತವು ಜಾಗತಿಕ ಹಣಕಾಸು ನೀತಿಯಲ್ಲಿ ದೊಡ್ಡ ತಿರುವು. ಮಾರುಕಟ್ಟೆಗಳು ಹಲವು ತಿಂಗಳುಗಳಿಂದ ಇದನ್ನು ನಿರೀಕ್ಷಿಸುತ್ತಿದ್ದವು. "ಇದರಿಂದ ಭಾರತದಲ್ಲಿ ವಿದೇಶಿ ಹೂಡಿಕೆ ಪ್ರಮಾಣ ಹೆಚ್ಚಾಗಬಹುದು" ಎಂದು ಗುಲಾಟಿ ಹೇಳಿದರು.
(ಈ ವಿಶ್ಲೇಷಣೆ ಮತ್ತು ಶಿಫಾರಸುಗಳು ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಪ್ರತಿಬಿಂಬಿಸುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆಗೆ ಖಾತರಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟವನ್ನು ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸ್ವತಂತ್ರವಾಗಿ ಪರಿಶೀಲಿಸಬೇಕು.)


Click it and Unblock the Notifications