ಉಡುಪಿ, ಆಗಸ್ಟ್ 14: ದಿನದಿಂದ ದಿನಕ್ಕೆ ಮೊಬೈಲ್, ಇಂಟರ್ನೆಟ್ ಬಳಕೆ ಹೆಚ್ಚಾಗುತ್ತಲೇ ಇದೆ. ಅದೇ ರೀತಿಯಲ್ಲಿ ಸೈಬರ್ ವಂಚನೆ ಪ್ರಕರಣಗಳು ಕೂಡಾ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ, ಆನ್ ಲೈನ್ ನಲ್ಲಿ ಖದೀಮರು ಹೊಸ ಮಾರ್ಗದ ಮೂಲಕ ವಂಚಿಸುವ ಪ್ಲ್ಯಾನ್ ಮಾಡುತ್ತಿದ್ದಾರೆ. ಬೆರಳ ತುದಿಯಲ್ಲೇ ಸಿಗುವ ಟೆಕ್ನಾಲಜಿಯನ್ನು ದುರ್ಬಳಕೆ ಮಾಡಿಕೊಂಡು, ವಂಚನೆಗೆ ಹೊಸ ಹೊಸ ವಿಧಾನಗಳನ್ನು ಸೃಷ್ಟಿ ಮಾಡಿಕೊಳ್ಳುತ್ತಿದ್ದಾರೆ. ವಿಪರ್ಯಾಸವೆಂದರೆ ಇಂತಹ ಮೋಸದ ಕೂಪಕ್ಕೆ ವಿದ್ಯಾವಂತರೇ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ.
ವರ್ಚುವಲ್ ಅರೆಸ್ಟ್:
ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದ್ದು, ವಂಚಕರ ಕುತಂತ್ರದ ಬಲೆಗೆ ಬಿದ್ದ ವೈದ್ಯರು ಈ ಕುರಿತು ದೂರು ನೀಡಿದ್ದಾರೆ. ಹಣ ಕಳೆದುಕೊಂಡಿರುವುದು ಮಾತ್ರವಲ್ಲದೇ ವರ್ಚುವಲ್ ಅರೆಸ್ಟ್ ನಿಂದ ಗೃಹಬಂಧನದ ಶಿಕ್ಷೆಯನ್ನು ಅನುಭವಿಸಿದ್ದಾರೆ.!

ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ ಉಡುಪಿ ಆತ್ರಾಡಿ ನಿವಾಸಿ ಡಾ. ಅರುಣ್ ಕುಮಾರ್ (53) ಅವರಿಗೆ ಜು.29ರಂದು ಅಪರಿಚಿತರು ಕಸ್ಟಮ್ಸ್‌ನಿಂದ ಎಂದು ಹೇಳಿ +919232037584 ಸಂಖ್ಯೆಯಿಂದ ಕಾಲ್ ಮಾಡಿದ್ದಾರೆ, ನಿಮ್ಮ ಆಧಾರ್ ಸಂಖ್ಯೆ ಬಳಸಿ ಬುಕ್ ಆಗಿರುವ ಕೊರಿಯರ್‌ನಲ್ಲಿ 5 ಪಾಸ್‌ಪೋರ್ಟ್, 5 ಎಟಿಎಂ ಕಾರ್ಡ್, 200ಗ್ರಾಂ ಎಂಡಿಎಂಎ ಹಾಗೂ 5000 ಯುಎಸ್ ಡಾಲರ್ ಇದ್ದು, ಕೋರಿಯರ್ ಮುಂಬೈ ಕಸ್ಟಮ್ಸ್‌ರವರ ವಶದಲ್ಲಿ ಇರುವುದಾಗಿ ತಿಳಿಸಿದ್ದಾರೆ.
ಈ ವೇಳೆ ಅರುಣ್ ತಾವು ಯಾವುದೇ ಕೋರಿಯರ್ ಮಾಡಿಲ್ಲ ಎಂದು ತಿಳಿಸಿದ್ದು, ಈ ಸಂದರ್ಭ ಅಪರಿಚಿತ ವ್ಯಕ್ತಿ ತನ್ನ ಮೇಲಾಧಿಕಾರಿಯವರಲ್ಲಿ ಮಾತನಾಡುವಂತೆ ಹಾಟ್‌ಲೈನ್ ಮೂಲಕ ಕನೆಕ್ಟ್ ಮಾಡಿದ್ದಾನೆ. ಅತ್ತ ಕಡೆಯಿಂದ ತಾನು ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯೂ ಅರುಣ್ ಅವರ ಆಧಾರ್ ನ ದುರ್ಬಳಕೆಯ ಬಗ್ಗೆ ದೂರು ಸ್ವೀಕರಿಸಲಾಗಿದೆ ಎಂದು ತಿಳಿಸಿದ್ದಾರೆ. ಇದಾದ ಬಳಿಕ ಆತ ನಮ್ಮ ಕೇಂದ್ರ ಕಚೇರಿಗೆ ಕಾಲ್ ಫಾರ್ವಡ್ ಮಾಡುವುದಾಗಿ ಹೇಳಿದ್ದ. ಇದಾದ ಬಳಿಕ ಕರೆ ಸ್ವೀಕರಿಸಿದ ವ್ಯಕ್ತಿ ನಿಮ್ಮ ಆಧಾರ್ ವಿವಿಧ ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿದೆ. ಭಯೋತ್ಪಾದಕರು ನಿಮ್ಮ ಆಧಾರ್ ಸಿಮ್ ಖರೀದಿಸಲು ಬಳಸಿದ್ದಾರೆ ಎಂದು ಬೆದರಿಕೆ ಹುಟ್ಟಿಸಿದ್ದ. ಇದಲ್ಲದೇ ನಿಮ್ಮನ್ನು ವರ್ಚುವಲ್ ಆರೆಸ್ಟ್ ಮಾಡುವುದಾಗಿ ತಿಳಿಸಿದ್ದು ಸ್ಕೈಪ್ ಆ್ಯಪ್ ಮೂಲಕ ವೀಡಿಯೋ ಮಾನಿಟರಿಂಗ್ ಮಾಡುವುದಾಗಿ ಹೇಳಿದ್ದಾನೆ.
ಗೃಹಬಂಧನಕ್ಕೆ ಒಳಗಾದ ವೈದ್ಯರು:
ವಂಚನೆ ಅರಿಯದ ವೈದ್ಯರು ಅವರ ಮಾತನ್ನು ನಂಬಿದ್ದಾರೆ. ವಂಚಕರು ನಯ ಮಾತಿನಿಂದಲೇ ಪ್ರಕರಣ ತನಿಖೆಯ ನಡೆಯುತ್ತಿದ್ದು ಜು. 29ರಿಂದ ಆ. 9ರ ವರೆಗೆ ಅವರದೇ ಸ್ವಂತ ಮನೆಯಲ್ಲಿ ರೂಮ್ ಒಂದರಲ್ಲಿ ಗೃಹಬಂಧನಕ್ಕೆ ಒಳಪಡಿಸಿದ್ದಾರೆ ಇದಲ್ಲದೇ ಬರೋಬ್ಬರಿ ಹನ್ನೆರಡು ದಿನ ಮನೆ ಕೊಠಡಿಯಲ್ಲಿರುವಂತೆ, ಹಾಗೂ ಬೇರೆಯವರೊಂದಿಗೆ ಸಂಪರ್ಕಿಸದಂತೆ ಸೂಚಿಸಿ ಐಸೋಲೇಟ್ ಮಾಡಿದ್ದು ವಾಶ್‌ರೂಂಗೆ ಹೋಗುವಾಗಲೂ ಮೊಬೈಲ್ ಆನ್ ಇಟ್ಟು ಕ್ಷಣಾರ್ಧದಲ್ಲಿ ಬರುವಂತೆ ಸೂಚಿಸಿದ್ದಾರೆ. ಜತೆಗೆ ಮೊಬೈಲ್ ಅನ್ನು ಯಾವುದೇ ಕಾರಣಕ್ಕೂ ಆಫ್ ಮಾಡದಂತೆ ವಾರ್ನಿಂಗ್ ನೀಡಿದ್ದಾರೆ.
ವೈದ್ಯರು ಕೆಲಸದ ನಿಮಿತ್ತ ಬ್ಯುಸಿ ಇರಬಹುದು ಎಂದುಕೊಂಡಿದ್ದ ಮನೆಯವರು ಊಟ - ತಿಂಡಿಯನ್ನು ಕೊಠಡಿಯೊಳಗೆ ನೀಡಿ ಹೋಗುತ್ತಿದ್ದರು. ಬಳಿಕ ಅಪರಿಚಿತರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಸುವಂತೆ ತಿಳಿಸಿದ್ದು ವೈದ್ಯರು ತನ್ನ ಎಚ್.ಡಿ.ಎಫ್.ಸಿ. ಬ್ಯಾಂಕ್ ಖಾತೆಯಿಂದ ಆ. 6ರಿಂದ ಆ. 9ರ ವರೆಗೆ ಹಂತ-ಹಂತವಾಗಿ ಒಟ್ಟು 1,33,81,000 ರೂ.ಗಳನ್ನು ಆರೋಪಿಗಳ ಖಾತೆಗೆ ವರ್ಗಾಯಿಸಿದ್ದಾರೆ. ಈ ವೇಳೆ ಆರೋಪಿಗಳು ಈ ಹಣವನ್ನು ಆ. 12ಕ್ಕೆ ನಿಮ್ಮ ಅಕೌಂಟ್‌ಗೆ ಜಮೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಆದರೆ ಬಳಿಕ ಯಾವುದೇ ಹಣ ಅವರ ಖಾತೆಗೆ ಜಮೆಯಾಗದೇ ಇದ್ದಾಗ ವಂಚನೆ ಎಸಗಿರುವುದು ಅರಿವಿಗೆ ಬಂದ ವೈದರು ಸೆನ್ ಠಾಣೆಗೆ ದೂರು ನೀಡಿದ್ದಾರೆ.


Click it and Unblock the Notifications