ಈ ಹಿಂದೆ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಲು ಆದಾಯ ತೆರಿಗೆ ಇಲಾಖೆಯು ಜನರಿಗೆ ತಿಳಿಸಿದೆ. ಹಾಗೆಯೇ ಹಲವಾರು ಬಾರಿ ಗಡುವನ್ನು ಕೂಡಾ ವಿಸ್ತರಣೆ ಮಾಡುತ್ತಾ ಬಂದಿದ್ದು, ಈಗಾಗಲೇ ಗಡುವು ಕೊನೆಯಾಗಿದೆ. ಈ ನಡುವೆ 11.5 ಕೋಟಿ ಪ್ಯಾನ್ ಕಾರ್ಡ್‌ಗಳು ನಿಷ್ಕ್ರೀಯವಾಗಿದೆ!
ಹೌದು ಮಾಹಿತಿ ಹಕ್ಕು (ಆರ್‌ಟಿಐ) ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಗಡುವಿನೊಳಗೆ ಆಧಾರ್ ಕಾರ್ಡ್‌ಗಳಿಗೆ ಲಿಂಕ್ ಮಾಡಲು ವಿಫಲವಾದ ಕಾರಣ ಒಟ್ಟು 11.5 ಕೋಟಿ ಪ್ಯಾನ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಮಾಹಿತಿ ನೀಡಿದೆ. ಪ್ಯಾನ್ ಅನ್ನು ಆಧಾರ್‌ಗೆ ಲಿಂಕ್ ಮಾಡುವ ಗಡುವು ಜೂನ್ 30 ರಂದು ಕೊನೆಗೊಂಡಿದೆ.

ಭಾರತದಲ್ಲಿ 70.24 ಕೋಟಿ ಪ್ಯಾನ್ ಕಾರ್ಡ್ ಹೊಂದಿರುವವರಿದ್ದು, 57.25 ಕೋಟಿ ಜನರು ತಮ್ಮ ಪ್ಯಾನ್ ಕಾರ್ಡ್‌ಗಳನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿದ್ದಾರೆ. ಆರ್‌ಟಿಐ ಪ್ರತಿಕ್ರಿಯೆಯ ಪ್ರಕಾರ, 12 ಕೋಟಿಗೂ ಹೆಚ್ಚು ಪ್ಯಾನ್ ಕಾರ್ಡ್‌ಗಳು ಆಧಾರ್‌ನೊಂದಿಗೆ ಲಿಂಕ್ ಆಗಿಲ್ಲ. 11.5 ಕೋಟಿ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.
ಚಂದ್ರಶೇಖರ್ ಗೌರ್ ಎಂಬ ಮಧ್ಯಪ್ರದೇಶ ಮೂಲದ ಸಾಮಾಜಿಕ ಕಾರ್ಯಕರ್ತ ಆರ್‌ಟಿಐ ಸಲ್ಲಿಸಿದ್ದಾರೆ. ಹೊಸ ಪ್ಯಾನ್ ಕಾರ್ಡ್ ಅರ್ಜಿದಾರರಿಗೆ ಅರ್ಜಿ ಸಲ್ಲಿಸ ಬಳಿಕವೇ ಆಧಾರ್- ಪ್ಯಾನ್ ಲಿಂಕ್ ಅನ್ನು ಸ್ವಯಂಚಾಲಿತವಾಗಿ ಮಾಡಲಾಗುತ್ತದೆ. ಜುಲೈ 1, 2017 ರಂದು ಅಥವಾ ಅದಕ್ಕೂ ಮೊದಲು ಪ್ಯಾನ್ ಅನ್ನು ಹೊಂದಿರುವವರು ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ.
ಆರ್‌ಟಿಐ ಪ್ರತಿಕ್ರಿಯೆಯ ಪ್ರಕಾರ, ಜುಲೈ 1, 2017 ರಂತೆ ಪ್ಯಾನ್ ಅನ್ನು ಪಡೆದ ಪ್ರತಿಯೊಬ್ಬರೂ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 139AA ನ ಉಪ-ವಿಭಾಗ (2) ಅಡಿಯಲ್ಲಿ "ತಮ್ಮ ಆಧಾರ್ ಸಂಖ್ಯೆಯನ್ನು ತಿಳಿಸುವುದು" ಕಡ್ಡಾಯವಾಗಿದೆ. ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ನ ಈ ಲಿಂಕ್ ಅನ್ನು ಸೂಚಿಸಿದ ದಿನಾಂಕದಂದು ಅಥವಾ ಮೊದಲು ಮಾಡಬೇಕಾಗಿತ್ತು. ವಿಫಲವಾದರೆ ಪ್ಯಾನ್ ಕಾರ್ಡ್ ಅನ್ನು ನಿಷ್ಕ್ರೀಯಗೊಳಿಸಲಾಗುತ್ತದೆ ಎಂದು ಆರ್‌ಟಿಐನಲ್ಲಿ ಪ್ರತಿಕ್ರಿಯೆಯಲ್ಲಿ ತಿಳಿಸಲಾಗಿದೆ.
ತನ್ನ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ತೊಂದರೆಯನ್ನು ಹೊಂದಿರುವ ವ್ಯಕ್ತಿಯು ಘೋಷಿತ ದಿನಾಂಕದಂದು ಅಥವಾ ಮೊದಲು ಅದನ್ನು ಮಾಡಲಯ ವಿಫಲವಾದರೆ, ಅವರು ಶುಲ್ಕವನ್ನು ಪಾವತಿಸಬೇಕು ಎಂದು ಸೆಕ್ಷನ್ 234H ಹೇಳುತ್ತದೆ. ಪ್ಯಾನ್ ಕಾರ್ಡ್ ಅನ್ನು ಪುನಃ ಸಕ್ರಿಯಗೊಳಿಸಲು ಸಿಬಿಡಿಟಿ 1,000 ರೂಪಾಯಿ ದಂಡವನ್ನು ವಿಧಿಸುತ್ತದೆ.
"ಸರಕು ಮತ್ತು ಸೇವಾ ತೆರಿಗೆಯನ್ನು ಹೊರತುಪಡಿಸಿ ಹೊಸ ಪ್ಯಾನ್ ಕಾರ್ಡ್ ಪಡೆಯುವ ವೆಚ್ಚ 91 ಆಗಿದೆ. ಹಾಗಾದರೆ, ಪ್ಯಾನ್ ಕಾರ್ಡ್ ಅನ್ನು ಪುನಃ ಸಕ್ರಿಯಗೊಳಿಸಲು ಸರ್ಕಾರವು ಹತ್ತು ಪಟ್ಟು ಶುಲ್ಕವನ್ನು ಹೇಗೆ ವಿಧಿಸಬಹುದು?. ಅಲ್ಲದೆ, ಪ್ಯಾನ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಿದರೆ ಜನರು ಆದಾಯ ತೆರಿಗೆಯನ್ನು ಹೇಗೆ ಸಲ್ಲಿಸುತ್ತಾರೆ?," ಎಂದು ಚಂದ್ರಶೇಖರ್ ಗೌರ್ ಪ್ರಶ್ನಿಸಿದ್ದಾರೆ.
"ಸರ್ಕಾರವು ಮರುಚಿಂತನೆ ಮಾಡಬೇಕು ಮತ್ತು ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಕನಿಷ್ಠ ಒಂದು ವರ್ಷ ಕಾಲ ಮಿತಿಯನ್ನು ವಿಸ್ತರಿಸಬೇಕು," ಎಂದು ಗೌರ್ ವಿನಂತಿಸಿದ್ದಾರೆ.


Click it and Unblock the Notifications