ಬೆಂಗಳೂರು, ಜುಲೈ 18: ಆದಾಯ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಐಟಿಆರ್ ಫೈಲಿಂಗ್ ಮಾಡುವುದಕ್ಕೆ ಇನ್ನು ಕೇವಲ ಎರಡು ವಾರವಷ್ಟೇ ಬಾಕಿಯಿದ್ದು, 2024ರ ಜು.31 ಐಟಿಆರ್ ಸಲ್ಲಿಸುವುದಕ್ಕೆ ಕೊನೆಯ ದಿನವಾಗಿದೆ.
ದೇಶದಲ್ಲಿ ಐಟಿಆರ್ ಫೈಲಿಂಗ್ ಮಾಡುವುದಕ್ಕೆ ಆದಾಯ ತೆರಿಗೆ ಇಲಾಖೆಯು ಇತ್ತೀಚಿನ ವರ್ಷಗಳಲ್ಲಿ ಕಟ್ಟು ನಿಟ್ಟಿನ ಕ್ರಮಗಳನ್ನು ಜರುಗಿಸುತ್ತಿದೆ. ಈ ಹಿನ್ನಲೆಯಲ್ಲಿ ಬಹುತೇಕ ತೆರಿಗೆದಾರರು ತಮ್ಮ ಆದಾಯದ ವಿವರಣೆಗಳನ್ನು ನಿಗದಿತ ಡೆಡ್‌ಲೈನ್‌ನೊಳಗೆ ಸಲ್ಲಿಸುವುದಕ್ಕೆ ಮುಂದಾಗುತ್ತಿದ್ದಾರೆ. ಇದೇ ಕಾರಣದಿಂದಲೇ ಪ್ರತಿ ದಿನವೂ ಸುಮಾರು 13 ಲಕ್ಷ ಮಂದಿಯು ಐಟಿಆರ್ ಅನ್ನು ಸಲ್ಲಿಕೆ ಮಾಡುತ್ತಿದ್ದಾರೆ.

ಈ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಜುಲೈ 14ರವರೆಗೆ ಸುಮಾರು 2.7 ಕೋಟಿಯಷ್ಟು ಐಟಿಆರ್‌ಗಳು ಫೈಲಿಂಗ್ ಆಗಿವೆ. ಅಂದರೆ, ಕಳೆದ ವರ್ಷಕ್ಕೆ ಹೋಲಿಸಿದರೆ, ಇದೇ ಅವಧಿಗೆ ಶೇ.13ರಷ್ಟು ಜಾಸ್ತಿ ಪ್ರಮಾಣದಲ್ಲಿ ಐಟಿಆರ್ ಫೈಲಿಂಗ್ ಆಗಿರುವುದನ್ನು ಇ-ಫೈಲಿಂಗ್ ವೆಬ್‌ಸೈಟ್ ನೀಡಿರುವ ಮಾಹಿತಿಯಲ್ಲಿ ಉಲ್ಲೇಖವಾಗಿದೆ.
ಆದಾಯ ತೆರಿಗೆ ಸಂಗ್ರಹದಲ್ಲಿ ಹೊಸ ದಾಖಲೆ
ವಿಶೇಷವೆಂದರೆ ಐಟಿ ಇಲಾಖೆಯು ಇದೇ ಮೊದಲ ಬಾರಿಗೆ ತೆರಿಗೆದಾರರಿಗೆ ಹೊಸ ಹಣಕಾಸು ವರ್ಷ ಆರಂಭವಾದ ಮೊದಲ ದಿನದಿಂದಲೇ 2023-24ರ ಐಟಿ ರಿಟರ್ನ್ಸ್ ಅನ್ನು ಫೈಲಿಂಗ್ ಮಾಡುವುದಕ್ಕೆ ಅವಕಾಶ ಕಲ್ಪಿಸಿದೆ. ಗಮನಾರ್ಹವೆಂದರೆ 2024-25ರಲ್ಲಿ ಒಂದು ಕೋಟಿ ಐಟಿಆರ್ ಸಲ್ಲಿಕೆಯು ಜೂ.26ರ ವೇಳೆಗೆ ಆಗಿದೆ.
ಅದೇರೀತಿ ಜುಲೈ 7ಕ್ಕೆ ಎರಡು ಕೋಟಿ ಗಡಿಯನ್ನು ಕೂಡ ದಾಟಿದೆ. ಇನ್ನು 2023-24 ಅಸೆಸ್‌ಮೆಂಟ್ ನೋಡಿದರೆ ಒಟ್ಟಾರೆ ಜುಲೈ 31 2023ರಲ್ಲಿ 6.91 ಕೋಟಿಯಷ್ಟು ಐಟಿಆರ್ ಟಿಟರ್ನ್ಸ್ ಫೈಲಿಂಗ್ ಆಗಿತ್ತು. ಇದು 2024ರ ಮಾರ್ಚ್ 31ಕ್ಕೆ 8.62 ಕೋಟಿಗೆ ಏರಿಕೆ ಕಂಡಿದೆ.
ಐಟಿ ಇಲಾಖೆಯು ನಮ್ಮ ದೇಶದ ಒಟ್ಟು ನೇರ ತೆರಿಗೆ ಸಂಗ್ರಹವು ಶೇ.19.54ರಷ್ಟು ಏರಿಕೆಯಾಗಿರುವುದಾಗಿ ಕಳೆದ ವಾರವಷ್ಟೇ ಹೇಳಿದ್ದು, ಅದು ಜು.11ಕ್ಕೆ ಸುಮಾರು 5.74 ಲಕ್ಷ ಕೋಟಿ ರೂ. ಆಗಿದೆ ಎಂದು ತಿಳಿಸಿದೆ. ಅದೇ 2024ರಲ್ಲಿ ಇದೇ ಅವಧಿಗೆ ನಿವ್ವಳ ನೇರ ತೆರಿಗೆ ಸಂಗ್ರಹವು 4.80 ಲಕ್ಷ ಕೋಟಿ ರೂ. ಆಗಿತ್ತು.
2024-25ರ ಅವಧಿಯಲ್ಲಿ ಒಟ್ಟು 70,902 ಕೋಟಿ ರೂ. ತೆರಿಗೆ ಮರುಪಾವತಿ ಮಾಡುವ ಮೂಲಕ ಶೇ.64.49ರಷ್ಟು ಪ್ರಗತಿ ಸಾಧಿಸಿತ್ತು. ಏಕೆಂದರೆ 2024ರ ಹಣಕಾಸು ವರ್ಷದಲ್ಲಿ ಅದು 43,105 ಕೋಟಿ ರೂ. ತೆರಿಗೆ ಹಣವನ್ನು ಫಲಾನುಭವಿಗಳಿಗೆ ಮರುಪಾವತಿಸಲಾಗಿತ್ತು.
ಇದು ಸರ್ಕಾರವು ತೆರಿಗೆದಾರರಿಗೆ ತೆರಿಗೆ ಹಣವನ್ನು ಮರುಪಾವತಿಸುವಲ್ಲಿ ಎಷ್ಟರ ಮಟ್ಟಿಗೆ ಕಾರ್ಯ ದಕ್ಷತೆ ಹಾಗೂ ಮುತುವರ್ಜಿ ವಹಿಸಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಹಾಗೆಯೇ 25ರ ಹಣಕಾಸು ವರ್ಷದಲ್ಲಿ ಒಟ್ಟು ನೇರ ತೆರಿಗೆ ಸಂಗ್ರಹವು 6,45,259 ಕೋಟಿ ರೂ.ಗೆ ಏರಿಕೆಯಾಗುವ ಮೂಲಕ ಶೇ.23.25ರಷ್ಟು ಪ್ರಗತಿ ಸಾಧಿಸಿದೆ. ಅದೇ ಈ ಮೊತ್ತವು ಈ ಹಿಂದಿನ ಹಣಕಾಸು ವರ್ಷದಲ್ಲಿ 5,23,563 ಕೋಟಿ ರೂ. ಆಗಿದೆ.
ನೇರ ತೆರಿಗೆ ವಿಭಾಗವು ಕಾರ್ಪೊರೇಟ್ ತೆರಿಗೆ, ಆದಾಯ ತೆರಿಗೆ ಹಾಗೂ ಸೆಕ್ಯುರಿಟಿ ತೆರಿಗೆಯನ್ನು ಹೊಂದಿದ್ದು, 2025ರ ಹಣಕಾಸು ವರ್ಷದಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ತೋರಿಸುತ್ತಿದೆ. ಇತ್ತೀಚಿನ ದಾಖಲೆಗಳ ಪ್ರಕಾರ, ಕಾರ್ಪೊರೇಟ್ ತೆರಿಗೆ ಸಂಗ್ರಹದಲ್ಲಿಯೂ 2024-25ರಲ್ಲಿ ಗಮನಾರ್ಹ ಬೆಳವಣಿಗೆ ಕಾಣಿಸಿದೆ. ಈ ಹಿಂದಿನ ವರ್ಷದಲ್ಲಿ 2,20,297 ಕೋಟಿ ರೂ. ಸಂಗ್ರಹವಾಗಿದ್ದರೆ ಈ ಬಾರಿ 2,65,336 ಕೋಟಿ ರೂ. ಸಂಗ್ರಹವಾಗಿದೆ.
ಅದೇರೀತಿ ವೈಯಕ್ತಿಕ ಆದಾಯ ತೆರಿಗೆ ಸಂಗ್ರಹವು ಕೂಡ 3,61,862 ಕೋಟಿ ರೂ. ಆಗುವ ಮೂಲಕ ಜು.11ಕ್ಕೆ ಶೇ.22.76ರಷ್ಟು ದಾಖಲಿಸಿದೆ. ಇದು 2023-24ರಲ್ಲಿ 2,94,764 ಕೋಟಿ ರೂ. ಆಗಿತ್ತು. ಈ ವೈಯಕ್ತಿಕ ಆದಾಯ ತೆರಿಗೆ ಸಂಗ್ರಹದಲ್ಲಿನ ಏರಿಕೆಯು ಜನರ ಆದಾಯ ಸಂಗ್ರಹದಲ್ಲಿನ ಏರಿಕೆ ಹಾಗೂ ತೆರಿಗೆ ಸಂಗ್ರಹದಲ್ಲಿ ಸರ್ಕಾರದ ಕಡೆಯಿಂದ ಪರಿಣಾಮಕಾರಿ ವ್ಯವಸ್ಥೆ ಅಳವಡಿಸಿರುವುದಕ್ಕೆ ನಿದರ್ಶನವಾಗಿದೆ.


Click it and Unblock the Notifications