ಹೊಸ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಅಡಿಯಲ್ಲಿ ತೆರಿಗೆ ದರ ನಿರ್ಧರಿಸುವ ಜಿಎಸ್ಟಿ ಮಂಡಳಿ ರಚನೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಜಿಎಸ್ಟಿಯನ್ನು ಏಪ್ರಿಲ್ 1, 2017ರಿಂದ ಜಾರಿಗೆ ತರಲು ಕೇಂದ್ರ ಸರ್ಕಾರ ಯೋಜಿಸಿದ್ದು, 29 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳು ಒಳಗೊಂಡಿರುತ್ತವೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದರು.
ಜಿಎಸ್ಟಿ ವ್ಯಾಪ್ತಿಗೆ ಬರುವ ಸರಕು ಮತ್ತು ಸೇವೆಗಳು, ತೆರಿಗೆ ದರ ನಿಗದಿ ಮತ್ತು ಇತರ ಪ್ರಮುಖ ವಿಚಾರಗಳ ಬಗ್ಗೆ ಮಂಡಳಿಯು ಶಿಫಾರಸ್ಸು ಮಾಡಲಿದೆ. ಜಿಎಸ್ಟಿ ಕಾರ್ಯಾಲಯ ಸ್ಥಾಪನೆಯಾಗಲಿದ್ದು, ಕೇಂದ್ರ ಸರ್ಕಾರ ಅದರ ವೆಚ್ಚವನ್ನು ಭರಿಸಲಿದೆ.

ಜಿಎಸ್ಟಿ ಮಂಡಳಿಯಲ್ಲಿ ಕೇಂದ್ರ ಹಣಕಾಸು ಸಚಿವ, ರಾಜ್ಯಗಳ ಹಣಕಾಸು ಸಚಿವರು, ಕಂದಾಯ ಇಲಾಖೆಯ ಹೊಣೆ ಇರುವ ರಾಜ್ಯಗಳ ಖಾತೆ ಸಚಿವರು ಸದಸ್ಯರಾಗಿರುತ್ತಾರೆ ಎಂದು ಕೇಂದ್ರ ಸರ್ಕಾರದ ವಕ್ತಾರರು ಹೇಳಿದ್ದಾರೆ.
19 ರಾಜ್ಯಗಳು ಜಿಎಸ್ಟಿಗೆ ಅಂಗೀಕಾರ ನೀಡಿದ ನಂತರ ಮಸೂದೆಯನ್ನು ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಲಾಗಿತ್ತು. ಇದೇ ೮ರಂದು ಮಸೂದೆಗೆ ರಾಷ್ರ್ಟಪತಿ ಅಂಕಿತಕ್ಕೆ ದೊರೆತಿದೆ.
ಕೇಂದ್ರ ಜಿಎಸ್ಟಿ, ರಾಜ್ಯ ಜಿಎಸ್ಟಿ ಮತ್ತು ಅಂತರ್ ರಾಜ್ಯಗಳ(ಸಮಗ್ರ) ಜಿಎಸ್ಟಿ ಕಾನೂನುಗಳನ್ನು ರೂಪಿಸುವ ಕೆಲಸವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರಂಭಿಸಿವೆ.


Click it and Unblock the Notifications