ಕೆಲವು ದಿನಗಳಿಂದ ಸೆನ್ಸೆಕ್ಸ್ ಮತ್ತು ಇತರೆ ಇಂಡೆಕ್ಸ್ ಗಳು ಏರಿಕೆ ಮತ್ತು ಇಳಿಕೆಗಳನ್ನು ಅಲ್ಪ ಪ್ರಮಾಣದಲ್ಲಿ ಪ್ರದರ್ಶಿಸುತ್ತಿವೆ. ಅಂದರೆ ಇದು ಪೇಟೆಯು ಗರಿಷ್ಟ ಮಟ್ಟದಲ್ಲಿದೆ ಎಂದು ತಿಳಿಸುತ್ತಿರುವುದು ಆಗಿರಬಹುದು.
ಕೆಲವು ದಿನಗಳಿಂದ ಸೆನ್ಸೆಕ್ಸ್ ಮತ್ತು ಇತರೆ ಇಂಡೆಕ್ಸ್ ಗಳು ಏರಿಕೆ ಮತ್ತು ಇಳಿಕೆಗಳನ್ನು ಅಲ್ಪ ಪ್ರಮಾಣದಲ್ಲಿ ಪ್ರದರ್ಶಿಸುತ್ತಿವೆ. ಅಂದರೆ ಇದು ಪೇಟೆಯು ಗರಿಷ್ಟ ಮಟ್ಟದಲ್ಲಿದೆ ಎಂದು ತಿಳಿಸುತ್ತಿರುವುದು ಆಗಿರಬಹುದು. ಸೆನ್ಸೆಕ್ಸ್ ಕಂಪನಿಗಳಾದ ಮಾರುತಿ ಸುಜುಕಿ, ಹೆಚ್ ಡಿ ಎಫ್ ಸಿ, ಲಾರ್ಸನ್ ಅಂಡ್ ಟೋಬ್ರೋ, ರಿಲಯನ್ಸ್ ಇಂಡಸ್ಟ್ರೀಸ್, ಐಟಿಸಿ ಮುಂತಾದ ಹೆವ್ವಿ ವೇಟೇಜ್ ಇರುವ ಕಂಪನಿಗಳು ತಮ್ಮ ಏರಿಳಿತಗಳಿಂದ ಸಮತೋಲನ ಮೂಡಿಸುತ್ತಿವೆ.
ಒಂದು ದಿನ ಮಾರುತಿ ಸುಜುಕಿ, ರಿಲಯನ್ಸ್ ಇಂಡಸ್ಟ್ರೀಸ್ ಗಳು ಏರಿಕೆ ಕಂಡರೆ ಹೆಚ್ ಡಿ ಎಫ್ ಸಿ, ಐಟಿಸಿ ಯಂತಹ ಕಂಪನಿಗಳು ಇಳಿಕೆ ಕಾಣುತ್ತವೆ. ಮತ್ತೊಂದು ದಿನ ಇದಕ್ಕೆ ವಿರುದ್ಧವಾದ ಚಲನೆಯನ್ನು ಪ್ರದರ್ಶಿಸುತ್ತವೆ. ಹಾಗಾಗಿ ಸೆನ್ಸೆಕ್ಸ್ ಸ್ಥಿರತೆ ಕಾಣಲಾಗಲಿ, ಒಂದೇ ದಿಕ್ಕಿನಲ್ಲಿ ಚಲಿಸುವುದಾಗಲಿ ಸಾಧ್ಯವಿಲ್ಲದಾಗಿದೆ.
ವಹಿವಾಟುದಾರರ ತಂತ್ರಗಾರಿಕೆ
ಇತ್ತೀಚಿನ ದಿನಗಳಲ್ಲಿ ಯಾವುದಾದರೂ ಒಂದು ಪ್ರಮುಖ ಅಗ್ರಮಾನ್ಯ ಕಂಪನಿಯ ಷೇರಿನ ಬೆಲೆಯು ನಿರಂತರವಾಗಿ ಇಳಿಕೆಯಲ್ಲಿದ್ದಾಗ ದಿಢೀರನೆ ಸುದ್ದಿಯೊಂದನ್ನು ತೇಲಿಬಿಟ್ಟು ಆ ಷೇರಿನಲ್ಲಿ ಚುರುಕು ಮೂಡಿಸಿ ಗಮನಾರ್ಹವಾದ ಏರಿಕೆ ಕಾಣುವಂತೆ ಮಾಡಲಾಗುವುದು. ನಂತರ ಆ ಸುದ್ದಿಯು ಗಾಳಿ ಸುದ್ಧಿಯಾಗಿದ್ದು, ಸತ್ಯಕ್ಕೆ ದೂರವಾದುದಾದರೂ ಸಹ ಏರಿಕೆ ಕಂಡಿರುವ ಷೇರಿನ ಬೆಲೆ ಮಾತ್ರ ಇಳಿಯುವುದಿಲ್ಲ. ಇದು ವಹಿವಾಟುದಾರರ ತಂತ್ರಗಾರಿಕೆಯಾಗಿರಬಹುದು.
ಬಾಹ್ಯ ಬೆಳವಣಿಗೆ
ಆಕ್ಸಿಸ್ ಬ್ಯಾಂಕ್ ನಿರಂತರವಾಗಿ ಕಳೆದ ಅಕ್ಟೊಬರ್ ತಿಂಗಳಿನಿಂದ ರೂ. 350ರ ಸಮೀಪದಿಂದ ಕುಸಿದು ಜನವರಿಯಲ್ಲಿ ರೂ. 425ರ ಕನಿಷ್ಠ ದಾಖಲಿಸಿ ತದನಂತರದಲ್ಲಿ ಏಕಮುಖವಾಗಿ ವೈವಿಧ್ಯಮಯ ಕಾರಣಗಳಿಂದ ಏರಿಕೆ ಪಡೆದು ಈಗ ರೂ. 506ರ ಸಮೀಪಕ್ಕೆ ತಲುಪಿದೆ. ಈ ಏರಿಕೆಯ ಹಿಂದೆ ಬ್ಯಾಂಕ್ ನ ಆಂತರಿಕ ಸಾಧನೆಗಿಂತ ಹೊರಗಿನ ಬೆಳವಣಿಗೆಗಳು, ಗಾಳಿ ಸುದ್ಧಿಗಳು ಕಾರಣವಾಗಿವೆ. ಈ ಖಾಸಗಿ ವಲಯದ ಬ್ಯಾಂಕ್ ನ್ನು ಮತ್ತೊಂದು ಖಾಸಗಿ ವಲಯದ ಕೋಟಕ್ ಮಹಿಂದ್ರಾ ಬ್ಯಾಂಕ್ ಸ್ವಾಧೀನಕ್ಕೆ ಪ್ರಯತ್ನಿಸುತ್ತಿದೆ ಎಂಬ ಸುದ್ದಿಯು ಆಕ್ಸಿಸ್ ಬ್ಯಾಂಕ್ ನ ಚೇತರಿಕೆಗೆ ನೆಪವಾಗಿ, ನಂತರ ಯಾವುದೇ ದೃಢವಾದ ಬೆಳವಣಿಗೆ ಇಲ್ಲದಿದ್ದರೂ ಷೇರಿನ ಬೆಲೆಯು ಸ್ಥಿರತೆ ಕಂಡುಕೊಂಡಿದೆ.
ಕಂಪನಿಗಳ ಸ್ವಾಧೀನ
ಕೆಲವು ತಿಂಗಳುಗಳ ಹಿಂದೆ ರೂ. 920ರ ಸಮೀಪದಿಂದ ರೂ. 466ರ ಸಮೀಪಕ್ಕೆ ಕುಸಿದು ನಂತರ ಅದೇ ವೇಗದಲ್ಲಿ ರೂ. 875ರ ವರೆಗೂ ಏರಿಕೆ ಕಂಡ ಮೈಕ್ರೋ ಫೈನಾನ್ಸ್ ಕಂಪನಿ ಭಾರತ್ ಫೈನಾನ್ಷಿಯಲ್ ಇನ್ ಕ್ಲ್ಯೂಷನ್ ಸಹ ಸ್ವಾಧೀನ ಸುದ್ದಿಗೆ ಸ್ಪಂಧಿಸಿತು. ಇಂಡಸ್ ಇಂಡ್ ಬ್ಯಾಂಕ್ ಮತ್ತು ಆರ್ ಬಿ ಎಲ್ ಬ್ಯಾಂಕ್ ಗಳು ಈ ಕಂಪನಿಯನ್ನು ಸ್ವಾಧೀನ ಪಡಿಸಿಕೊಳ್ಳಲಿದೆ ಎಂಬ ಸುದ್ದಿ ಷೇರಿನ ಬೆಲೆಯನ್ನು ಚುರುಕುಗೊಳಿಸಿತು. ಷೇರಿನ ಬೆಲೆ ಮಾತ್ರ ಈಗಲೂ ರೂ. 765 ರ ಸಮೀಪವಿದೆ.
ಷೇರು ಬೆಲೆ ಏರಿಕೆಗೆ ಕಾರಣ
ಈ ವಾತಾವರಣವು ಮತ್ತಷ್ಟು ಖಾಸಗಿ ವಲಯದ ಕಂಪನಿಗಳಾದ ಕರ್ನಾಟಕ ಬ್ಯಾಂಕ್, ಲಕ್ಷ್ಮಿ ವಿಲಾಸ್ ಬ್ಯಾಂಕ್, ಕರೂರ್ ವೈಶ್ಯ ಬ್ಯಾಂಕ್ , ಫೆಡರಲ್ ಬ್ಯಾಂಕ್ ಗಳು ಸಹ ಸ್ವಾಧೀನ ಪ್ರಕ್ರಿಯೆಗೊಳಗಾಗುವ ಸಾಧ್ಯತೆಯ ನಿರೀಕ್ಷೆಯು ಷೇರಿನ ಬೆಲೆಯಲ್ಲಿ ಏರಿಕೆ ಕಾಣುವಂತೆ ಮಾಡಿದೆ.
ಎಸ್ಬಿಐ ವಿಲೀನ ಪ್ರಭಾವ
ದೇಶದ ಅತಿ ದೊಡ್ಡ ಬ್ಯಾಂಕ್ ಎಂಬ ಲೇಬಲ್ ನ್ನು ಹಾಕಿಕೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಬ್ಬರದ ಪ್ರಚಾರ ನೀಡುತ್ತಿದೆ. ಈ ದೊಡ್ಡ ಬ್ಯಾಂಕ್ ತನ್ನ ಅಂಗ ಸಂಸ್ಥೆಗಳಾದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಬಿಕನೂರು ಅಂಡ್ ಜಯಪುರ್, ಸ್ಟೇಟ್ ಬ್ಯಾಂಕ್ ಆಫ್ ಪಾಟಿಯಾಲ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಗಳನ್ನೂ ತನ್ನಲ್ಲಿ ವಿಲೀನಗೊಳಿಸಿಕೊಂಡ ನಂತರ ಯಾವ ರೀತಿ ಅನುಕೂಲಗಳನ್ನು ತನ್ನ ಷೇರುದಾರರಿಗೆ, ಗ್ರಾಹಕರಿಗೆ ಅಥವಾ ಮಾಲೀಕ ಕೇಂದ್ರ ಸರ್ಕಾರಕ್ಕೆ ಮಾಡಿಕೊಡುತ್ತದೆ ಎಂಬುದು ಕಾದು ನೋಡಬೇಕಾಗಿದೆ. ಸದ್ಯಕ್ಕಂತೂ ಕೆಲವು ಬ್ರಾಂಚ್ ಗಳನ್ನೂ ಆಡಳಿತಾತ್ಮಕ ದೃಷ್ಟಿಯಿಂದ ಮುಚ್ಚಲುಬಹುದು, ಕೆಲವರಿಗೆ ನೌಕರಿ ಖೋತಾ ಆಗಬಹುದು. ಆದರೆ ಅದರ ಸಾಧನೆ ಹೇಗಿರುತ್ತದೆ ಎಂಬುದು ಮಾತ್ರ ತಕ್ಷಣಕ್ಕೆ ಕಲ್ಪಿಸಿಕೊಳ್ಳುವುದು ಸಾಧ್ಯವಿಲ್ಲ.
ಬ್ಯಾಂಕ್ ಬಡ್ಡಿ ದರ
ಈಗಿನ ವಾತಾವರಣದಲ್ಲಿ ಬ್ಯಾಂಕ್ ಬಡ್ಡಿ ದರ ಕಡಿತಗೊಳ್ಳುತ್ತಿರುವುದು, ಗುಣಮಟ್ಟದ ಸಾಲಗಾರರ ಕೊರತೆ, ಎನ್ಪಿ ಎ ಗಳ ಒತ್ತಡವಿರುವಾಗ ಬ್ಯಾಂಕ್ ಗಳು ಲಾಭ ಗಳಿಕೆ ಸುಲಭವಲ್ಲ. ಹೀಗಿರುವಾಗ ಬ್ಯಾಂಕ್ ಗಳ ಷೇರಿನ ಬೆಲೆಗಳು ಸ್ವಾಧೀನದಂತಹ ಸುದ್ದಿಗಳಿಂದ ಗಮನಾರ್ಹ ಏರಿಕೆ ಕಂಡಾಗ ಅಂತಹ ಷೇರುಗಳನ್ನು ಮಾರಾಟ ಮಾಡಿ ಅದೇ ಬ್ಯಾಂಕ್ ನಲ್ಲಿ ಸೇವಿಂಗ್ಸ್ ಬ್ಯಾಂಕ್ ಖಾತೆಯಲ್ಲಿರಿಸಿದರೆ ಹೆಚ್ಚಿನ ಲಾಭ ಗಳಿಸಬಹುದು. ಇನ್ನು ಷೇರುದಾರರಿಗೆ ಈ ಬ್ಯಾಂಕ್ ಗಳು ವಿತರಿಸಬಹುದಾದ ಡಿವಿಡೆಂಡ್ ಗೆ ಹೋಲಿಸಿದಾಗ ಸೇವಿಂಗ್ಸ್ ಬ್ಯಾಂಕ್ ಬಡ್ಡಿ ಹೆಚ್ಚಾಗಿರುತ್ತದೆ.
ಅವಕಾಶದ ಅದ್ಬಳಕೆ ಮತ್ತು ಸುರಕ್ಷತೆಗೆ ಆಧ್ಯತೆ
ಒಟ್ಟಿನಲ್ಲಿ ಷೇರಿನ ಬೆಲೆಗಳು ಗಗನಕ್ಕೇರಿದಾಗ ಅವಕಾಶದ ಲಾಭ ಪಡೆದುಕೊಳ್ಳುವುದು ಉತ್ತಮ. 2014ರಲ್ಲಿ ರೂ. 150ರ ಸಮೀಪವಿದ್ದ ಫೆಡರಲ್ ಬ್ಯಾಂಕ್ 1.1 ರ ಅನುಪಾತದ ನಂತರ ರೂ. 75 ತಲುಪಲು ಹೆಚ್ಚಿನ ಸಮಯ ತೆಗೆದುಕೊಂಡಿತು. ಅಂತೆಯೇ 2015ರ ಆರಂಭದಲ್ಲಿ ರೂ. 360ರ ಸಮೀಪವಿದ್ದ ಷೇರಿನ ಬೆಲೆಯು ಇಂದಿಗೂ ಆ ಬೆಲೆ ತಲುಪದಾಗಿದೆ. ಅದೇ ರೀತಿ ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಜಮ್ಮು ಅಂಡ್ ಕಾಶ್ಮೀರ್ ಬ್ಯಾಂಕ್ ಮುಂತಾದವುಗಳು ಅಂದಿನ ಬೆಲೆಗಳಿಗಿಂತ ಅತಿ ಹಿಂದಿವೆ. ಅದರಿಂದ ಬಂಡವಾಳ ಸುರಕ್ಷತೆಗೆ ಆಧ್ಯತೆ ನೀಡಿದಲ್ಲಿ ಲಾಭ ಕಡಿಮೆಯಾದರೂ, ಅಸಲು ಸುರಕ್ಷಿತವಾಗಲು ಸಾಧ್ಯ.


Click it and Unblock the Notifications