ನವದೆಹಲಿ, ಜನವರಿ 24: ಗ್ರಾಹಕರಿಗೆ ಕಡಿಮೆ ದರದಲ್ಲಿ ಹೈಸ್ಪೀಡ್ 4ಜಿ ಇಂಟರ್ನೆಟ್ ಒದಗಿಸುವ ಮೂಲಕ ಇತರೆ ಖಾಸಗಿ ದೂರಸಂಪರ್ಕ ಸಂಸ್ಥೆಗಳಿಗೆ ಆಘಾತ ನೀಡಿರುವ ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ಸಂಸ್ಥೆಗೆ ಸೆಡ್ಡು ಹೊಡೆಯಲು ವೊಡಾಫೋನ್ ಐಡಿಯಾ ಲಿಮಿಟೆಡ್ ಭರ್ಜರಿ ಹೂಡಿಕೆಗೆ ಮುಂದಾಗಿದೆ.
ಜಿಯೋದ ಅಬ್ಬರಕ್ಕೆ ಕಡಿವಾಣ ಹಾಕಲು ವೊಡಾಫೋನ್, ರೈಟ್ಸ್ ಆಫರಿಂಗ್ ಹೆಲ್ಪ್ ಮೂಲಕ ಸುಮಾರು 25 ಸಾವಿರ ಕೋಟಿ ರೂಪಾಯಿ ಹೂಡಿಕೆ ಹೆಚ್ಚಳಕ್ಕೆ ಉದ್ದೇಶಿಸಿದೆ.
ಹೊಸ ವರ್ಷಕ್ಕೆ ಫುಲ್ ಕ್ಯಾಶ್ ಬ್ಯಾಕ್ ಆಫರ್ ನೀಡಿದ ಜಿಯೋ
ವೊಡಾಫೋನ್ ಸಮೂಹ ಸಂಸ್ಥೆ ಸದ್ಯ ಅಂದಾಜು 11 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದ್ದರೆ, ಆದಿತ್ಯ ಬಿರ್ಲಾ ಗ್ರೂಪ್ 7,250 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ಹೇಳಿಕೆಯೊಂದು ತಿಳಿಸಿದೆ.

ತಿಂಗಳಿಗೆ ಕೇವಲ 130 ರೂ. ದರದಲ್ಲಿ 46 ಗಂಟೆ ಯುಟೂಬ್ ವಿಡಿಯೋಗಳನ್ನು ನೋಡುವಷ್ಟು ಡಾಟಾ ಒದಗಿಸುವಂತಹ ಪ್ಯಾಕೇಜ್ ನೀಡುತ್ತಿರುವ ಮುಕೇಶ್ ಅಂಬಾನಿ ಅವರ ಜಿಯೋ ಇನ್ಫೊಕಾಮ್ ಸಂಸ್ಥೆಯ ಎದುರು ಸ್ಪರ್ಧಿಸಲು ಹೇಗೆ ತಯಾರಿ ನಡೆಸಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಲಾಗಿದೆ. ಜಿಯೋದ ಕಡಿಮೆ ಬೆಲೆಯ ಸಮರಕ್ಕೆ ಎದೆಯೊಡ್ಡಲು ಕಂಪೆನಿಗಳ ವಿಲೀನ ಪ್ರಕ್ರಿಯೆ ನಡೆಸಿ ಬೃಹತ್ ಆಪರೇಟರ್ ಸಮೂಹ ಸೃಷ್ಟಿಸುವ ಬಗ್ಗೆ ವೊಡಾಫೋನ್ ಕಳೆದ ವರ್ಷ ಹೇಳಿಕೆ ನೀಡಿತ್ತು.
ವೊಡಾಫೋನ್ ಐಡಿಯಾ ಸಂಸ್ಥೆಯು ಜಿಯೋದ ಸ್ಪರ್ಧೆಯನ್ನು ತಗ್ಗಿಸಲು ಈ ನಿಧಿಯನ್ನು ಬಳಸಿ 4ಜಿ ಸುಧಾರಣೆಗೆ ನೆಟ್‌ವರ್ಕ್ ಕ್ಷೇತ್ರದಲ್ಲಿ ಹೂಡಿಕೆ ಮಾಡಲಿದೆ.
ಇದಲ್ಲದೆ ಪ್ರತ್ಯೇಕವಾಗಿ ಭಾರ್ತಿ ಇನ್ಫ್ರಾಟೆಲ್ ಲಿಮಿಟೆಡ್ ಮತ್ತು ಆದಿತ್ಯ ಬಿರ್ಲಾ ಟೆಲಿಕಾಂ ಜೊತೆ ಜಂಟಿ ಪಾಲುದಾರಿಕೆ ಹೊಂದಿರುವ ಸೆಲ್ ಫೋನ್ ಟವರ್ ಇಂಡಸ್ ಟವರ್ಸ್ ಲಿಮಿಟೆಡ್‌ನಲ್ಲಿ ಶೇ 11.5ರಷ್ಟು ಷೇರು ಖರೀದಿಗೆ ಕೂಡ ವೊಡಾಫೋನ್ ಐಡಿಯಾ ಚಿಂತನೆ ನಡೆಸಿದೆ.


Click it and Unblock the Notifications