ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೂ ಮುನ್ನ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ ಕಟ್ಟಕಡೆಯ ಬಜೆಟ್ ಮಂಡಿಸಲಿದ್ದು, ಜನಪರ ಬಜೆಟ್ ಮಂಡಿಸಲಿದೆಯೇ, ಚುನಾವಣಾ ಬಜೆಟ್ ಮಂಡಿಸಲಿದೆಯೋ ಎಂದು ಇಡೀ ದೇಶವೇ ಚಕಿತದಿಂದ ನೋಡುತ್ತಿದೆ.
ಕ್ಯಾನ್ಸರ್ ನಿಂದ ಬಳಲುತ್ತಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಅಮೆರಿಕಕ್ಕೆ ತೆರಳಿರುವುದರಿಂದ, ಅವರ ಅನುಪಸ್ಥಿತಿಯಲ್ಲಿ ಅವರ ಖಾತೆಯನ್ನು ನಿಭಾಯಿಸುತ್ತಿರು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರು ಮಧ್ಯಂತರ ಬಜೆಟ್ ಅನ್ನು ಫೆಬ್ರವರಿ 1ರಂದು ಬೆಳಿಗ್ಗೆ 11 ಗಂಟೆಗೆ ಮಂಡಿಸಲಿದ್ದಾರೆ.
ಭಾರತದ ಆರ್ಥಿಕ ಸ್ಥಿತಿ ಅಷ್ಟು ಬಲಿಷ್ಠವಾಗಿ ಇಲ್ಲದಿರುವುದರಿಂದ, ರೈತರು ಸಂಕಷ್ಟದಲ್ಲಿ ಸಿಲುಕಿರುವುದರಿಂದ, ಕಳೆದ ನಲವತ್ತೈದು ವರ್ಷಗಳಲ್ಲಿಯೇ ಉದ್ಯೋಗದ ಕೊರತೆ ಗರಿಷ್ಠವಾಗಿರುವುದರಿಂದ ಮತ್ತು ಅಪನಗದೀಕರಣ ಮತ್ತು ಜಿಎಸ್ಟಿ ಹೊಡೆತಕ್ಕೆ ಸಣ್ಣ ಉದ್ದಿಮೆದಾರರು ಒಳಗಾಗಿರುವುದರಿಂದ ಕೇಂದ್ರ ಸರಕಾರ ಯಾವ ರೀತಿಯ ಬಜೆಟ್ ಮಂಡಿಸಲಿದೆ ಎಂಬುದನ್ನು ಕುತೂಹಲದಿಂದ ಕಾಯುತ್ತಿದ್ದಾರೆ.

ಲೋಕಸಭೆ ಚುನಾವಣೆ ಕೇವಲ ನಾಲ್ಕು ತಿಂಗಳು ಇರುವಾಗ ಈ ಬಜೆಟ್ ಕೇಂದ್ರ ಸರಕಾರಕ್ಕೆ ಮತದಾರರನ್ನು ಓಲೈಸಲು ಅದ್ಭುತ ಅವಕಾಶ ಮಾಡಿಕೊಟ್ಟಿದ್ದರೆ, ಮೋದಿ ಸರಕಾರ ಜನಪರ ಬಜೆಟ್ ಮಂಡಿಸುವ ಬದಲು ಚುನಾವಣಾ ಬಜೆಟ್ ಮಂಡಿಸುತ್ತದೇನೋ ಎಂದು ವಿರೋಧ ಪಕ್ಷದ ಧುರೀಣರು ಎದುರು ನೋಡುತ್ತಿದ್ದಾರೆ.
ಅಲ್ಲದೆ, 2018 ಡಿಸೆಂಬರ್ ನಲ್ಲಿ ಪ್ರಕಟವಾದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿರುವುದರಿಂದ, ಮತದಾರರನ್ನು ಮತ್ತೆ ಗಳಿಸಬೇಕಾದ ಸಾಕಷ್ಟು ಒತ್ತಡದಲ್ಲಿದೆ. ಆ ಚುನಾವಣೆಗಳಲ್ಲಿ ಗ್ರಾಮೀಣ ಜನರು ಮತ್ತು ರೈತಗಣ ಬಿಜೆಪಿಗೆ ಭಾರೀ ರೀತಿಯಲ್ಲಿ ಕೈಕೊಟ್ಟಿತ್ತು. ಅಲ್ಲದೆ, ಅಧಿಕಾರ ವಿರೋಧಿ ಅಲೆ ಕೂಡ ಆಡಿತಾರೂಢ ಬಿಜೆಪಿಗೆ ಮುಳುವಾಗಿತ್ತು.
ನರೇಂದ್ರ ಮೋದಿ ಸರಕಾರ ಈ ಬಜೆಟ್ಟಿನಲ್ಲಿ ಆರ್ಥಿಕ ಅಭಿವೃದ್ಧಿಯನ್ನು ಶೇ.7.5ರಷ್ಟು ಹೆಚ್ಚಿಸುವ ಗುರಿ ಹೊಂದಿದ್ದು, ರೈಲ್ವೆ ಇಲಾಖೆ, ರಸ್ತೆ ಮತ್ತು ಬಂದರು ವಿಭಾಗದಲ್ಲಿಯೂ ಶೇ.7ರಿಂದ 8ರಷ್ಟು ಹೆಚ್ಚಿನ ಹಣವನ್ನು ವಿನಿಯೋಗಿಸುವ ಸಾಧ್ಯತೆಯಿದೆ. ಜಿಎಸ್ಟಿಯಿಂದಾಗಿ ಖರ್ಚುವೆಚ್ಚದಲ್ಲಿ ಸಾಕಷ್ಟು ಏರುಪೇರಾಗಿರುವುದರಿಂದ ಶ್ರೀಸಾಮಾನ್ಯರು, ಅದರಲ್ಲಿಯೂ ರೈತರು, ಗ್ರಾಮೀಣ ಜನತೆ, ಸಣ್ಣ ಉದ್ದಿಮೆದಾರರು ಮತ್ತು ಪ್ರಮುಖವಾಗಿ ತೆರಿಗೆದಾರರು ತಮಗೇನು ಸಿಗುತ್ತದೆ ಎಂದು ಕಾದು ಕುಳಿತಿದ್ದಾರೆ.
ಮಧ್ಯಂತರ ಕೇಂದ್ರ ಬಜೆಟ್ಟಿನ ಎಲ್ಲ ವಿವರಗಳನ್ನು ಲೈವ್ ಅಪ್ಡೇಟ್ಸ್ ಮೂಲಕ ಒನ್ಇಂಡಿಯಾ ಕನ್ನಡ ಮತ್ತು ಗುಡ್ ರಿಟರ್ನ್ಸ್ ಕನ್ನಡ ಓದುಗರಿಗೆ ಶುಕ್ರವಾರ ನೀಡಲಿದೆ. ಕ್ಷಣಕ್ಷಣದ ಮಾಹಿತಿ, ವಿಶ್ಲೇಷಣೆಗಳು, ಏರಿಕೆ ಇಳಿಕೆಗಳು, ಪ್ರತಿಕ್ರಿಯೆಗಳು, ರುಪಾಯಿ ಯಾವ್ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ವಿನಿಯೋಗವಾಗಲಿದೆ ಇತ್ಯಾದಿ ಮಾಹಿತಿಗಾಗಿ ಈ ತಾಣ ನೋಡುತ್ತಿರೆ.


Click it and Unblock the Notifications