ನವದೆಹಲಿ, ಫೆಬ್ರವರಿ 01: ಲೋಕಸಭಾ ಚುನಾವಣೆಗೂ ಮುನ್ನ ಮೋದಿ ಸರ್ಕಾರದ ಬಳಿ ಇದ್ದ ಮಧ್ಯಂತರ ಬಜೆಟ್ ಎಂಬ ಪ್ರಬಲ ಅಸ್ತ್ರವನ್ನು ಅಷ್ಟೇ ಪ್ರಭಾವಶಾಲಿಯಾಗಿ ಸರ್ಕಾರ ಹೂಡಿದೆ.
ಬಜೆಟ್ ನಲ್ಲಿ ಆದಾಯ ತೆರಿಗೆ ಮಿತಿಯನ್ನು 2.5 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗೆ ಏರಿಸಿದ್ದು, ಚುನಾವಣೆಯ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.
ಏಪ್ರಿಲ್- ಮೇ ತಿಂಗಳಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದರೆ ಹಂಗಾಮಿ ಹಣಕಾಸು ಸಚಿವ ಪಿಯೂಶ್ ಗೋಯಲ್ ಅವರು ಇಂದು ಮಂಡಿಸಿದ ಬಜೆಟ್ 'ಗೇಮ್ ಚೇಂಜರ್' ಆದರೆ ಅಚ್ಚರಿಯಿಲ್ಲ.
ಮುಖ್ಯವಾಗಿ ಮಧ್ಯಮ ವರ್ಗ, ಕಾರ್ಮಿಕ ವರ್ಗ ಮತ್ತು ರೈತರನ್ನೇ ಗಮನದಲ್ಲಿಟ್ಟುಕೊಂಡು ಮಂಡಿಸಿದ ಈ ಬಜೆಟ್ 'ಮೋದಿ ಮತ್ತೊಮ್ಮೆ' ಎಂಬ ಘೋಷಣೆಯನ್ನು ಸತ್ಯವಾಗಿಸುತ್ತದಾ ಎಂಬುದನ್ನು ಕಾದು ನೋಡಬೇಕು.
ಬಜೆಟ್ ನಲ್ಲಿ ಸರ್ಕಾರ ಘೋಷಿಸಿದ 5 ಮಹತ್ವದ ಯೋಜನೆಗಳು ಇಲ್ಲಿವೆ.
5 ಲಕ್ಷ ರೂ.ವರೆಗೆ ಆದಾಯ ತೆರಿಗೆ ವಿನಾಯತಿ
ಆದಾಯ ತೆರಿಗೆ ಮಿತಿಯನ್ನು 2.5 ಲಕ್ಷದಿಂದ 5 ಲಕ್ಷ ರೂ. ವರೆಗೆ ಏರಿಸಿದ್ದು ಮೋದಿ ಸರ್ಕಾರದ ಅತ್ಯಂತ ಮಹತ್ವದ ಘೋಷಣೆಗಳಲ್ಲೊಂದು. ತೆರಿಗೆ ಹೊರೆಯಿಂದ ಬೇಸತ್ತಿದ್ದ ಮಧ್ಯಮ ವರ್ಗದ ಜನರು ಇದರಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಹೊಸ ತೆರಿಗೆ ನಿಯಮದ ಪ್ರಕಾರ ಆದಾಯ ತೆರಿಗೆ ಕಾಯ್ದೆಯ 80 ಸಿ ಅಡಿಯಲ್ಲಿ 1.5 ಲಕ್ಷದವರೆಗಿನ ಉಳಿತಾಯವೂ ಸೇರಿ ಒಟ್ಟು 6.5 ಲಕ್ಷದವರೆಗೆ ವೇತನ ಪಡೆವ ವ್ಯಕ್ತಿ ತೆರಿಗೆ ಕಟ್ಟುವ ಅಗತ್ಯವಿಲ್ಲ. ತೆರಿಗೆ ಮಿತಿಯನ್ನು 2.5 ರಿಂದ ದುಪ್ಪಟ್ಟು ಏರಿಸಿದ್ದು ಶ್ರೀಸಾಮಾನ್ಯನ ನಿಟ್ಟುಸಿರು ಬಿಡುವಂತೆ ಮಾಡಿದೆ.
ಆದಾಯ ತೆರಿಗೆ ಮಿತಿ ಏರಿಕೆ: ಮಧ್ಯಮ ವರ್ಗ ಫುಲ್ ಜೋಶ್!
ಗ್ರಾಚ್ಯುಟಿ ಮಿತಿ ಏರಿಕೆ
ಪ್ರಸ್ತುತ ಒಂದು ಕಂಪನಿಯಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸುವ ಉದ್ಯೋಗಿಗಳು ಉದ್ಯೋಗ ತೊರೆದಾಗ ಅಥವಾ ನಿವೃತ್ತಿ ಹೊಂದಿದಾಗ 10 ಲಕ್ಷ ರೂ. ವರೆಗೂ ತೆರಿಗೆ ಮುಕ್ತವಾಗಿ ಗ್ರಾಚ್ಯುಟಿ ಗಳಿಸಬಹುದಾಗಿತ್ತು. 7ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸಿದ ಬಳಿಕ, ಸಂಘಟಿತ ವಲಯದ ಕೇಂದ್ರ ಸರ್ಕಾರಿ ನೌಕರರಿಗೆ ಗ್ರಾಚ್ಯುಟಿ ಮೊತ್ತದ ಮಿತಿಯನ್ನು 30 ಲಕ್ಷ ರೂ.ಗೆ ಏರಿಸಲಾಗಿದೆ.
ಮೋದಿ ಸರಕಾರದಿಂದ ಮಧ್ಯಮ ವರ್ಗೀಯ ಆದಾಯ ತೆರಿಗೆದಾರರಿಗೆ ಸೂಪರ್ ಗಿಫ್ಟ್
ಕಿಸಾನ್ ಸಮ್ಮಾನ್ ನಿಧಿ
ಅನ್ನದಾತನನ್ನು ಪ್ರಮುಖ ಆದ್ಯತೆಯನ್ನಾಗಿ ಪರಿಗಣಿಸಿದ್ದ ಮೋದಿ ಸರ್ಕಾರ 'ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ' ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿಯಲ್ಲಿ ಸಣ್ಣ ರೈತರ ಖಾತೆಗೆ ನೇರವಾಗಿ 6 ಸಾವಿರ ರೂಪಾಯಿ ವರ್ಗಾವಣೆ ಮಾಡಲು ಉದ್ದೇಶಿಸಲಾಗಿದೆ. ಇದರಿಂದ 12 ಕೋಟಿ ರೈತರಿಗೆ ಅನುಕೂಲವಾಗಲಿದೆ. ಇದಕ್ಕಾಗಿ 753 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ.
ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕರಿಗೆ
ಅಸಂಘಟಿತ ವರ್ಗದ ಕಾರ್ಮಿಕರಿಗೆಂದೇ ಮೋದಿ ಸರ್ಕಾರ 'ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧಾನ್' ಪಿಂಚಣಿ ಯೋಜನೆ ಜಾರಿಗೆ ತಂದಿದೆ. ತಿಂಗಳಿಗೆ 100 ರೂ. ಕಟ್ಟುವ ಮೂಲಕ ಈ ಪಿಂಚಣಿ ಯೋಜನೆಗೆ ಅಸಂಘಟಿತ ವಲಯದ ಕಾರ್ಮಿಕರು ಹೆಸರು ನೋಂದಾಯಿಸಿಕೊಂಡು ಅವರಿಗೆ 60 ವರ್ಷ ವಯಸ್ಸಾದ ನಂತರ ತಿಂಗಳಿಗೆ 3000 ರೂ.ವರಗೆ ಪಿಂಚಣಿ ದೊರೆಯಲಿದೆ. ಇದು ಆಟೋ ರಿಕ್ಷಾ ಚಾಲಕರಿಂದ ಹಿಡಿದು, ಬೀದಿಬದಿ ವ್ಯಾಪಾರಿಗಳಿಗೂ ಅನ್ವಯವಾಗಲಿದೆ. ಅಸಂಘಟಿತ ವಲಯದವರ ಆರ್ಥಿಕ ಭದ್ರತೆಗಾಗಿ ಈ ಯೋಜನೆ ಘೋಷಿಸಲಾಗಿದೆ.
2 ಲಕ್ಷ ರೂ.ವರೆಗಿನ ಗೃಹಸಾಲ ಬಡ್ಡಿಗೆ ತೆರಿಗೆ ವಿನಾಯತಿ
2 ಲಕ್ಷ ರೂ ವರೆಗಿನ ಗೃಹಸಾಲದ ಮೇಲಿನ ಬಡ್ಡಿದರ, ಶಿಕ್ಷಣ ಸಾಲದ ಮೇಲಿನ ಬಡ್ಡಿದರ ಮತ್ತು ನ್ಯಾಶ್ನಲ್ ಪೆನ್ಷನ್ ಸ್ಕ್ಮೀಮ್ ಗಳ ಮೇಲಿನ ಬಡ್ಡಿಯ ಏಲೆ ಯಾವುದೇ ರೀತಿಯ ಆದಾಯ ತೆರಿಗೆ ಕಟ್ಟುವ ಅಗತ್ಯವಿಲ್ಲ


Click it and Unblock the Notifications