ಬೆಂಗಳೂರು, ಮಾರ್ಚ್ 06 : ಭಾರತದ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಇಲ್ಲೊಂದು ಸಂತಸದ ಸುದ್ದಿಯಿದೆ. ಅವರ ಸಂಬಳ ಶೇ.9.7ರಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಭಾರತದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂಬುದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಇನ್ನೇನಿದೆ?
ಇಷ್ಟು ಮಾತ್ರವಲ್ಲ, ಅತ್ಯುತ್ತಮ ಸಾಧನೆ ತೋರಿದ ನೌಕರರು ಶೇ.15.6ರವರೆಗೆ ಸಂಬಳ ಏರಿಕೆಯನ್ನು ನಿರೀಕ್ಷಿಸಬಹುದು. ಸಾಧನೆಯ ಅಳತೆಗೋಲು ಒಂದೊಂದು ಕಂಪನಿಯಲ್ಲಿ ಒಂದೊಂದು ರೀತಿಯಿರುತ್ತದೆ. ಕಳೆದ ವರ್ಷಕ್ಕಿಂತ ಈ ವರ್ಷ ಸಂಬಳ ಏರಿಕೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ.
Aon ಎಂಬ ಮಾನವ ಸಂಪನ್ಮೂಲ ಕನ್ಸಲ್ಟನ್ಸಿ ಕಂಪನಿ, ವಾರ್ಷಿಕ ಸಂಬಳ ಏರಿಕೆ ಕುರಿತಂತೆ ಸಮೀಕ್ಷೆ ನಡೆಸಿದ್ದು, ಶೇ.9.7ರಷ್ಟು ಪಗಾರ ಏರುವ ನಿರೀಕ್ಷೆಯಿದೆ ಎಂದು ತಿಳಿಸಿದೆ. ಕಳೆದ ವರ್ಷ ವಿವಿಧ ಉದ್ಯಮಗಳಲ್ಲಿ ಶೇ.9.5ರಷ್ಟು ಸಂಬಳ ಏರಲಿದೆ ಎಂದು ಅಂದಾಜಿಸಲಾಗಿತ್ತು.

ದೇಶದಲ್ಲಿ ಆರ್ಥಿಕ ಸ್ಥಿತಿ ಸದೃಢವಾಗಿರುವುದರಿಂದ, ಹಣದುಬ್ಬರ ಇಳಿದಿರುವುದರಿಂದ ಹಲವಾರು ಕಂಪನಿಗಳಲ್ಲಿ ಉತ್ತಮ ವಹಿವಾಟು ನಡೆದು, ವ್ಯಾಪಾರದಲ್ಲಿ ಪ್ರಗತಿ ಕಂಡುಬಂದಿದೆ ಎಂದು ಸಮೀಕ್ಷೆ ತಿಳಿಸಿದೆ. ಈ ಕಾರಣದಿಂದಾಗಿ ವೈಯಕ್ತಿಕ ಸಾಧನೆಯ ಆಧಾರದ ಮೇಲೆ ಸಂಬಳ ಏರಿಕೆಯನ್ನು ನೌಕರರು ನಿರೀಕ್ಷಿಸಬಹುದು.
ಅಲ್ಲದೆ, ಸಾಧಾರಣ ಸಾಧನೆ ಮಾಡಿದ ನೌಕರ ಮತ್ತು ಅತ್ಯುತ್ತಮ ಸಾಧನೆ ತೋರಿದ ನೌಕರರ ನಡುವಿನ ಸಂಬಳ ಏರಿಕೆಯ ಪ್ರಮಾಣವೂ 1.9ರಷ್ಟು ಹೆಚ್ಚಿದೆ. ಅತ್ಯುತ್ತಮ ಸಾಧನೆ ತೋರಿದ ವ್ಯಕ್ತಿ ಅತೀಹೆಚ್ಚು ಅಂದರೆ, ಅಂದಾಜು ಶೇ.15.6ರಷ್ಟು ಸಂಬಳದಲ್ಲಿ ಏರಿಕೆ ಕಾಣಬಹುದು.
2017ರಲ್ಲಿ ಅಪನಗದೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆಯ ಅಳವಡಿಕೆಯಿಂದಾಗಿ ವ್ಯಾಪಾರ ತುಸು ಕುಸಿದು ಸಂಬಳ ಏರಿಕೆಯ ಮೇಲೂ ಪರಿಣಾಮ ಬೀರಿತ್ತು. ಆಗ ಶೇ.9.3ರಷ್ಟು ಮಾತ್ರ ಸಂಬಳ ಏರಿಕೆ ಆಗಿತ್ತು. ಇದೀಗ ಜಿಎಸ್ಟಿ ದರಗಳಲ್ಲಿ ಕೂಡ ಇಳಿಕೆ ಮಾಡಲಾಗಿರುವುದರಿಂದ ವ್ಯಾಪಾರದಲ್ಲಿಯೂ ಏರಿಕೆ ಕಂಡಿದೆ.
Aon ಪ್ರಕಾರ, ಒಂದಂಕಿ ಸಂಬಳ ಏರಿಕೆಗಿಂತ ಎರಡಂಕಿ ಸಂಬಳ ಏರಿಸಬಹುದಾದವು ಗ್ರಾಹಕ ಸೇವಾಧಾರಿತ ಇಂಟರ್ನೆಟ್ ಕಂಪನಿಗಳು, ವೃತ್ತಿಪರ ಸೇವಾ ಕಂಪನಿಗಳು, ಜೀವ ವಿಜ್ಞಾನ ಕಂಪನಿ, ಗ್ರಾಹಕ ಉತ್ಪನ್ನ, ಆಟೋಮೊಟೀವ್/ವಾಹನ ನಿರ್ಮಾಣ ಕಂಪನಿಗಳಲ್ಲಿ ನೌಕರರ ಸಂಬಳದಲ್ಲಿ ಹೆಚ್ಚಿನ ಏರಿಕೆ ಕಂಡುಬರಲಿದೆ.


Click it and Unblock the Notifications