For Quick Alerts
ALLOW NOTIFICATIONS  
For Daily Alerts

ಆರ್ಥಿಕ ಚೇತರಿಕೆ ಒಂದು ಅವಲೋಕನ

ಷೇರುಪೇಟೆಯ ಸೂಚ್ಯಂಕಗಳ ಚಲನೆಯು ಪೂರ್ವ ನಿರ್ಧಾರಿತ ರೀತಿ ಇರದೇ ಅವು ತಮ್ಮ ದಾರಿಯನ್ನು ತಾವೇ ಹುಡಿಕಿಕೊಳ್ಳುವಂತಾಗಿದೆ. ಇದಕ್ಕನುಗುಣವಾಗಿ ವಿವಿಧ ವಲಯಗಳಿಂದ ವೈವಿಧ್ಯಮಯ ರೀತಿಯ ವಿಶ್ಲೇಷಣೆಗಳು, ಅಭಿಪ್ರಾಯಗಳು, ಚಿಂತನೆಗಳು ಬದಲಾಗುತ್ತಿರುತ್ತವೆ.

|

ಷೇರುಪೇಟೆಯ ಸೂಚ್ಯಂಕಗಳ ಚಲನೆಯು ಪೂರ್ವ ನಿರ್ಧಾರಿತ ರೀತಿ ಇರದೇ ಅವು ತಮ್ಮ ದಾರಿಯನ್ನು ತಾವೇ ಹುಡಿಕಿಕೊಳ್ಳುವಂತಾಗಿದೆ. ಇದಕ್ಕನುಗುಣವಾಗಿ ವಿವಿಧ ವಲಯಗಳಿಂದ ವೈವಿಧ್ಯಮಯ ರೀತಿಯ ವಿಶ್ಲೇಷಣೆಗಳು, ಅಭಿಪ್ರಾಯಗಳು, ಚಿಂತನೆಗಳು ಬದಲಾಗುತ್ತಿರುತ್ತವೆ. ಅಷ್ಟೇ ಏಕೆ? ರೇಟಿಂಗ್ ಕಂಪನಿಗಳು ನೀಡುವ ರೇಟಿಂಗ್, ಬ್ರೋಕರೇಜಸ್ ನೀಡುವ ಕಾಲ್ ಗಳು ಸಹ ಅಂದಿಗೆ ಮಾತ್ರವೇನೋ ಎಂಬಂತಾಗಿದೆ. ಕೇಂದ್ರ ಸರ್ಕಾರ ಇತ್ತೀಚಿಗೆ ಕಾರ್ಪೊರೇಟ್ ತೆರಿಗೆ ಕಡಿತ ಮಾಡಿದಾಗ ಸಂವೇದಿ ಸೂಚ್ಯಂಕವು ಸುಮಾರು ಮೂರು ಸಾವಿರ ಪಾಯಿಂಟುಗಳ ಏರಿಕೆಯಿಂದ ಮಾರ್ಕೆಟ್ ಕ್ಯಾಪಿಟಲೈಸೇಶನ್ ನ್ನು ಸುಮಾರು ಹತ್ತು ಸಾವಿರ ಕೋಟಿ ರೂಪಾಯಿಗಳಷ್ಟು ಹೆಚ್ಚಿಸಿತು. ಆದರೆ ತೆರಿಗೆ ಕಡಿತದ ಪ್ರಭಾವ ಕಡಿಮೆಯಾಗಿದ್ದು, ಕೆಲವು ದಿನಗಳಿಂದ ಮಾರ್ಕೆಟ್ ಕ್ಯಾಪಿಟಲೈಸೇಶನ್ ಸುಮಾರು ರೂ. ಐದು ಲಕ್ಷ ಕೋಟಿಯಷ್ಟು ಕರಗಿದೆ. ಅಂದರೆ ಈಗ ಪೇಟೆಯನ್ನು ಚುರುಕುಗೊಳಿಸಲು ಮತ್ತೊಂದು ' ಡೋಸ್' ಸುಧಾರಣೆ ಪ್ರಕಟಿಸಬೇಕೇ? ಸರ್ಕಾರ ಯಾವುದೇ ಸುಧಾರಣಾ ಕ್ರಮ ಕೈಗೊಂಡರು ಅದು ದೀರ್ಘಕಾಲೀನ ಪ್ರಭಾವ ಬೀರುವಂತಿರಬೇಕು. ಇದುವರೆಗೂ ಭಾರತೀಯ ರಿಸರ್ವ್ ಬ್ಯಾಂಕ್ ನಿರಂತರವಾಗಿ ಐದನೇ ಬಾರಿ ರೆಪೋ ದರವನ್ನು ಕಡಿತಗೊಳಿಸಿದೆ. ಅಕ್ಟೊಬರ್ 4 ರಂದು 25 ಮೂಲಾಂಶಗಳ ಕಡಿತಗೊಳಿಸಿದ ನಂತರ ಷೇರುಪೇಟೆ 433 ಪಾಯಿಂಟುಗಳ ಕುಸಿತ ಕಂಡಿದ್ದು ವಿಸ್ಮಯಕಾರಿಯಾಗಿದೆ.

ಸಾಮಾನ್ಯ ಚಿಂತನೆ

ಸಾಮಾನ್ಯ ಚಿಂತನೆ

ಷೇರುಪೇಟೆ ಚೇತರಿಕೆ ಕಂಡಾಗ ದೇಶದ ಕೇವಲ 3% ರಷ್ಟು ಹೂಡಿಕೆ ಮಾಡಿರುವಾಗ ಅದರ ಬಗ್ಗೆ ಹೆಚ್ಚು ಪ್ರಾಶಸ್ತ್ಯ ನೀಡುವುದು ಸರಿಯಲ್ಲ ಎಂದು ಹೆಚ್ಚಿನವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವುದನ್ನು ಕಂಡಿದ್ದೇವೆ. ಇದು ಸರಿಯಲ್ಲ. ದೇಶದ ಪ್ರತಿಯೊಂದು ಚಟುವಟಿಕೆಯು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಷೇರುಪೇಟೆಯೊಂದಿಗೆ ತಳಕು ಹಾಕಿಕೊಂಡಿದೆ. ಕಾರಣ ರೆಪೋ ದರ ಕಡಿತದಿಂದ ಬ್ಯಾಂಕ್ ಠೇವಣಿ ಬಡ್ಡಿ ದರಗಳು ಸಹ ಕಡಿತಗೊಂಡಿವೆ. ಸಾಮಾನ್ಯರು, ಗೃಹಿಣಿಯರು, ಹಿರಿಯ ನಾಗರಿಕರು ತಮ್ಮ ಅಗತ್ಯಕ್ಕನುಗುಣವಾದ ರೀತಿಯ ಹೂಡಿಕೆ ಮಾಡುವರು. ಬ್ಯಾಂಕ್ ಠೇವಣಿ ಬಡ್ಡಿ ದರ ಕಡಿತಗೊಂಡ ಹಿನ್ನೆಲೆಯಲ್ಲಿ , ಹೆಚ್ಚು ಹೆಚ್ಚು ಪ್ರಚಾರಕ್ಕೊಳಗಾದ 'ಮ್ಯುಚ್ಯುಯಲ್ ಫಂಡ್ ಸರಿ ಇದೆ' ಎಂಬ ಚಿಂತನೆಯ ಕಾರಣ ಹೆಚ್ಚಿನವರು ಸ್ವಲ್ಪ ಅಧಿಕ ಆದಾಯದ ಆಸೆಯಿಂದ ಮ್ಯುಚ್ಯುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿರುವವರ ಸಂಖ್ಯೆ ಹೆಚ್ಚಿದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಜಾರಿಯಾಗಿರುವ ವಿಮಾ ಯೋಜನೆಗಳ ಸಾಧನೆಯು ಸಹ ಮಾರುಕಟ್ಟೆ ಚಲನೆಯನ್ನವಲಂಭಿಸಿರುತ್ತದೆ ಎಂಬುದು ಗಮನದಲ್ಲಿರಿಸಬೇಕಾದ ಅಂಶ. ಆದ್ದರಿಂದ ಷೇರುಪೇಟೆ ಉತ್ತುಂಗದಲ್ಲಿದ್ದಲ್ಲಿ ಮಾತ್ರ ಜನಸಾಮಾನ್ಯರ ಹೂಡಿಕೆಗಳು ಸಹ ಅವರ ಮೊಗದಲ್ಲಿ ನಗು ಮೂಡಿಸಬಹುದು.ಹಿಂದಿನ ವಾರ ಆರಂಭಿಕ ಷೇರು ವಿತರಣೆ ಮಾಡಿದ ಐ ಆರ್ ಸಿ ಟಿ ಸಿ ಕಂಪನಿಯ ಸಂಗ್ರಹಣಾ ಗುರಿ ಇದ್ದುದು ರೂ.645 ಕೋಟಿಯಾದರು, ಸಂಗ್ರಹಣೆಯಾಗಿದ್ದು ರೂ.72,000 ಕೋಟಿಯಷ್ಟು ಅಂದರೆ ಸುಮಾರು 112 ಪಟ್ಟು ಹೆಚ್ಚು ಸಂಗ್ರಹವಾಗಿದೆ ಎಂಬುದು ಎಲ್ಲರು ಮೆಚ್ಚುವಂತಹ ಬೆಳವಣಿಗೆಯಾಗಿದ್ದರೂ, ಇದು ತಾತ್ಕಾಲಿಕ ಸಮಾಧಾನದ ಸಂಗತಿಯಾಗಬಹುದು. ಕಾರಣ ಈ ಕಂಪನಿ ಷೇರು ಲಿಸ್ಟಿಂಗ್ ದಿನದಂದು ಯಾವ ರೀತಿಯ ವಹಿವಾಟು ಪ್ರದರ್ಶಿಸುವುದು ಎಂಬುದಾಗಿದೆ. ಈ ಹಿಂದೆ ಅಂದರೆ ಮಾರ್ಚ್ 2018 ರಲ್ಲಿ ಸಾರ್ವಜನಿಕ ವಲಯದ ಕಂಪನಿ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಪ್ರತಿ ಷೇರಿಗೆ ರೂ.1,215 ರಂತೆ ವಿತರಣೆ ಮಾಡಿತಾದರೂ ಕೇವಲ ಒಂದೇ ವರ್ಷದಲ್ಲಿ ರೂ.650 ರ ಸಮೀಪಕ್ಕೆ ಕುಸಿದು ಈಗ ರೂ.700 ರ ಸಮೀಪವಿದೆ.

ಜನವರಿ 2018 ರಲ್ಲಿ ಕೇಂದ್ರ ಸರ್ಕಾರದ ಬಂಡವಾಳ ಹಿಂತೆಗೆತ ಕಾರ್ಯಕ್ರಮದಡಿ ಆಫರ್ ಫಾರ್ ಸೆಲ್ ಮೂಲಕ ಮಾರಾಟ ಮಾಡಲಾದ ಎನ್ ಎಂ ಡಿ ಸಿ ಷೇರಿನ ಬೆಲೆ ರೂ.153.50 ರ ಬೇಸ್ ಪ್ರೈಸ್ ಆಗಿತ್ತು. ಆದರೆ ನಂತರದ ದಿನಗಳಲ್ಲಿ ಷೇರಿನ ಬೆಲೆ ರೂ.75 ರವರೆಗೂ ಕುಸಿದು ಈಗ ರೂ.96 ರ ಸಮೀಪವಿದೆ.

ಆರ್ಥಿಕ ಚೇತರಿಕೆ ಮೂಡಿಸುವುದು ಹೇಗೆ?

ಆರ್ಥಿಕ ಚೇತರಿಕೆ ಮೂಡಿಸುವುದು ಹೇಗೆ?

ಕೇಂದ್ರ ಸರ್ಕಾರ ತನ್ನ ಬಂಡವಾಳ ಹಿಂತೆಗೆತ ಯೋಜನೆಯಡಿ ವಿವಿಧ ಕಂಪನಿಗಳನ್ನು ಸಾರ್ವಜನಿಕ ವಿತರಣೆ ಮಾಡುವುದರ ಶೈಲಿಯನ್ನು ಬದಲಿಸಬೇಕು. ಈ ಹಿಂದೆ ಕೆನರಾ ಬ್ಯಾಂಕ್, ಮಾರುತಿ ಸುಜುಕಿ ಯಂತಹ ಕಂಪನಿಗಳು ತಮ್ಮ ಸಾರ್ವಜನಿಕ ವಿತರಣೆ ಮಿತವಾದ ಬೆಲೆಯಲ್ಲಿ ಮಾಡಿದ ರೀತಿಯಲ್ಲಿ ಮಾಡಿದಲ್ಲಿ, ಲಕ್ಷೋಪ ಲಕ್ಷದಲ್ಲಿ ಹೆಚ್ಚಿನ ಸಾರ್ವಜನಿಕರು ಭಾಗವಹಿಸುವರು. ಯಾವಾಗ ಹೆಚ್ಚಿನ ಸಾರ್ವಜನಿಕರು ಭಾಗವಹಿಸುವರೋ ಆಗ ಯಶಸ್ಸು ಶತಸಿದ್ಧ. ಹೆಚ್ಚಿನ ಸಾರ್ವಜನಿಕರು ಈ ವಿತರಣೆಗಳಲ್ಲಿ ಭಾಗವಹಿಸುವುದು ಎಂದರೆ ಹೆಚ್ಚಿನ ಡಿಮ್ಯಾಟ್ ಖಾತೆಗಳು ಹೆಚ್ಚುತ್ತವೆ, ಬ್ಯಾಂಕಿಂಗ್ ವಹಿವಾಟು ಹೆಚ್ಚುತ್ತದೆ. ಷೇರುಗಳು ಅಲ್ಲಾಟ್ ಆದ ಮೇಲೆ ಮಾರಾಟ ಮಾಡುವುದಾಗಲಿ ಅಥವಾ ಅಲ್ಲಾಟ್ ಆಗದವರು ಖರೀದಿಸಲು ಮುಂದಾದಾಗ ಹಣದ ಚಲಾವಣೆ ಹೆಚ್ಚಾಗಿ ಸಾರ್ವಜನಿಕರಲ್ಲಿ ಆರ್ಥಿಕ ಚಟುಟಿಕೆ ಹೆಚ್ಚಿಸುತ್ತದೆ. ಇದು ಆರ್ಥಿಕ ಚೇತರಿಕೆಗೆ ದಾರಿಮಾಡಿಕೊಟ್ಟಂತಾಗುತ್ತದೆ.

ಸಾರ್ವಜನಿಕ ವಿತರಣೆಯನ್ನೇ ಅತಿ ಹೆಚ್ಚಿನ ಬೆಲೆಯಲ್ಲಿ ಮಾಡಿದರೆ, ಆ ಷೇರುಗಳು ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಲಿಸ್ಟಿಂಗ್ ಆದಾಗ ವಿತರಣೆ ಬೆಲೆ ಅಥವಾ ಕಡಿಮೆಗೆ ವಹಿವಾಟಾದಲ್ಲಿ ಆ ಷೇರುಗಳು ನಿಷ್ಕ್ರಿಯಗೊಂಡು ಮೂಲೆಗುಂಪಾಗುತ್ತವೆ. ಇದು ಚಲಾವಣೆಯಿಂದ ಹಿಂದೆ ಸರಿದಂತಾಗಿ ಹರಿದಾಡುವ ಹಣವನ್ನು ನಿರ್ಬಂಧಿಸುವುದು. ಇದು ಹಿಂಜರಿತಕ್ಕೆ ಕಾರಣವಾಗುತ್ತದೆ. ಹಾಗಾಗಿ ಕೆನರಾ ಬ್ಯಾಂಕ್, ಮಾರುತಿ ಸುಜುಕಿ ಗಳು ಇಂದಿಂಗೂ ಹೆಚ್ಚು ಚಲಾವಣೆಯಲ್ಲಿವೆ ಆದರೆ ಅತಿ ಹೆಚ್ಚು ಪ್ರೀಮಿಯಂ ನಲ್ಲಿ ವಿತರಣೆಗೊಂಡ ಹೆಚ್ ಎ ಎಲ್, ನ್ಯೂ ಇಂಡಿಯಾ ಅಶುರನ್ಸ್, ಜನರಲ್ ಇಂಶುರನ್ಸ್ ಕಾರ್ಪೊರೇಷನ್, ಎನ್ ಹೆಚ್ ಪಿ ಸಿ ಗಳು ವಿತರಣೆ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ವಹಿವಾಟಾಗುತ್ತಿರುವ ಕಾರಣ ನಿರ್ಲಕ್ಷಿಸಲ್ಪಟ್ಟು ತಮ್ಮ ತೂಕಕ್ಕೆ ತಾವೇ ಬಲಿಯಾಗಿ ಚಲಾವಣೆಯಲ್ಲಿಲ್ಲದಂತಿವೆ.

ಇಂದಿನ ಸ್ಥಿತಿಗೆ ಕಾರಣವೇನು?

ಇಂದಿನ ಸ್ಥಿತಿಗೆ ಕಾರಣವೇನು?

ನಮ್ಮ ದೇಶದ ಪ್ರಮುಖ ಸಂಪತ್ತು ಎಂದರೆ ನಮ್ಮ ಪೇಟೆಯ ಗಾತ್ರ. ಅಂದರೆ ನಮ್ಮ ಜನಸಂಖ್ಯೆ ಹೆಚ್ಚಿರುವುದರಿಂದ ವಿದೇಶಿ ವ್ಯಾಪಾರಿ ಸಂಸ್ಥೆಗಳು ತಮ್ಮ ಉತ್ಪನ್ನಗಳ, ಯೋಜನೆಗಳ, ಮಾರಾಟದ ದೃಷ್ಟಿಯಿಂದ ಹೆಚ್ಚಿನ ಆಸಕ್ತಿ ತೋರುತ್ತಿರುತ್ತವೆ. ಸಧ್ಯ ಜಾಗತಿಕ ಮಟ್ಟದಲ್ಲಿ ಆರ್ಥಿಕ ಒತ್ತಡ ಹೆಚ್ಚಿರುವುದರಿಂದ, ಕಾರ್ಪೊರೇಟ್ ಗಳ ಸಾಧನೆಯ ಬಗ್ಗೆ ಇರುವ ಅನಿಶ್ಚತೆಯ ಕಾರಣ ವಿದೇಶಿ ವಿತ್ತೀಯ ಸಂಸ್ಥೆಗಳು ನಿರಂತರವಾಗಿ ಭಾರತೀಯ ಷೇರುಪೇಟೆಯಲ್ಲಿ ಮಾರಾಟದ ಹಾದಿ ಹಿಡಿದು ಬಂಡವಾಳವನ್ನು ಹಿಂತೆಗದುಕೊಳ್ಳುತ್ತಿದ್ದಾರೆ. ಈ ಕ್ರಮವು ಷೇರುಗಳ ಬೆಲೆಗಳಲ್ಲಿ ಭಾರಿ ಕುಸಿತ ಮತ್ತು ಅಸ್ಥಿರತೆಯನ್ನುಂಟುಮಾಡಿ ನೀರಸ ವಾತಾವರಣವನ್ನುಂಟುಮಾಡಿವೆ. ಈ ಸಂದರ್ಭದಲ್ಲಿ ಸ್ಥಳೀಯ ವಿತ್ತೀಯ ಸಂಸ್ಥೆಗಳು ನೀಡುತ್ತಿರುವ ಬೆಂಬಲ ಸಾಲದಾಗಿದೆ. ಇನ್ನು ಡೊಮೆಸ್ಟಿಕ್ ಸೇವಿಂಗ್ಸ್ (ಸಾಸಿವೆ ಡಬ್ಬಿ ಸಂಗ್ರಹವು ಸೇರಿ) ಎಲ್ಲವು ಹೂಡಿಕೆಯಾಗಿದೆ, ವಿನಿಯೋಗಿಸಲಾಗಿದೆ. ಎಸ ಐ ಪಿ ಗಳ ಮೂಲಕ ಮ್ಯುಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡಿರುವುದು ಸಹ ನಿರೀಕ್ಷಿತ ಮಟ್ಟದಲ್ಲಿಲ್ಲ. ಹಾಗಾಗಿ ಚಲಾವಣೆಯಲ್ಲಿರುವ ಹಣವು ಮೂಲೆಗುಂಪಾಗಿದೆ. ನಮ್ಮ ಸ್ಟಾಕ್ ಎಕ್ಸ್ ಚೇಂಜ್ ಗಳಲ್ಲಿ ವಿದೇಶಿ ವಿತ್ತೀಯ ಸಂಸ್ಥೆಗಳ ಷೇರು ಮಾರಾಟವು ನಿಲ್ಲಬೇಕು ಮತ್ತು ಅವು ಷೇರು ಖರೀದಿಗೆ ಮುಂದಾಗಬೇಕು ಆಗಲೇ ಒಂದು ರೀತಿಯ ಉತ್ತಮ ವಾತಾವರಣ ನಿರ್ಮಿತವಾಗಿ ಸಹಜ ಸ್ಥಿತಿಗೆ ಮರಳುವುದು ಸಾಧ್ಯ. ಈ ಮಧ್ಯೆ ಸರ್ಕಾರ ತನ್ನ ಬಂಡವಾಳ ಹಿಂತೆಗೆತ ಕಾರ್ಯಕ್ರಮವನ್ನು ಕೇವಲ ತನ್ನ ಖಜಾನೆ ತುಂಬಿಸಿಕೊಳ್ಳುವ ಚಿಂತನೆಯಿಂದ ಹೊರಬಂದು ಸಾರ್ವಜನಿಕರ ಹಿತದ ದೃಷ್ಟಿಯಿಂದ ನಿರ್ವಹಿಸಿದಲ್ಲಿ ಆರ್ಥಿಕ ಚೇತರಿಕೆಗೆ ಮೂಲಕಾರಣವಾಗುವುದು ಎಂಬುದರಲ್ಲಿ ಸಂಶಯವೇ ಇಲ್ಲ.

 

Read more about: economy money stock market bse
English summary

An Overview of Economic Recovery

Disinvestment is a fantastic tool in the hands of Central Government to achieve turnaround in the Economy.
Story first published: Thursday, October 10, 2019, 13:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X