ಇದು ಡಿಜಿಟಲ್ ಯುಗ. ಏನು ಬೇಕಿದ್ದರೂ ಮನೆಯಲ್ಲೇ ಕೂತು ಮೊಬೈಲ್‌ನಲ್ಲಿ (Mobile) ಆರ್ಡರ್ ಮಾಡಬಹುದು. ಆದರೆ ಇದನ್ನೇ ಲಾಭವಾಗಿಟ್ಟುಕೊಂಡಿರುವ ಕೆಲವು ಸೈಬರ್ ವಂಚಕರು, ಅಮಾಯಕರನ್ನ ತನ್ನ ಬಲೆಗೆ ಬೀಳಿಸಿಕೊಂಡು ಲಕ್ಷ ಲಕ್ಷ ಹಣ ಬ್ಯಾಂಕ್‌ನಿಂದ ದೋಚುತ್ತಿದ್ದಾರೆ. ಇದೀಗ ಕಳೆದ ನಾಲ್ಕು ವರ್ಷಗಳಲ್ಲಿ ಕರ್ನಾಟಕದಲ್ಲಿ ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ (1930) ಕರೆಗಳ ದಾಖಲೆ ಪ್ರಮಾಣದಲ್ಲಿ ಬಂದಿದೆ. ಕರ್ನಾಟಕ ಪೊಲೀಸರ ದತ್ತಾಂಶದ ಪ್ರಕಾರ, 2022ರಲ್ಲಿ 1.3 ಲಕ್ಷವಿದ್ದ ಕರೆಗಳ ಸಂಖ್ಯೆ 2025ಕ್ಕೆ 24 ಲಕ್ಷಕ್ಕೆ ಏರಿದೆ.

ಹೌದು, ರಾಜ್ಯದಲ್ಲಿ ಸೈಬರ್ ಅಪರಾಧಗಳ (Cyber Crime) ಕುರಿತು ರಾಷ್ಟ್ರೀಯ ಸಹಾಯವಾಣಿ (1930)ಕ್ಕೆ ಬರುವ ಕರೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಭಾರೀ ಏರಿಕೆ ಕಂಡಿದೆ. ಈ ಮೂಲಕ ರಾಜ್ಯದ ಜನರು ಸೈಬರ್ ಕ್ರೈಮ್ ಬಗ್ಗೆ ಎಚ್ಚೆತ್ತುಕೊಂಡಿದ್ದಾರೆ ಎಂಬುದು ಅರ್ಥವಾಗುತ್ತದೆ.
ಅಧಿಕೃತ ದಾಖಲೆಗಳ ಪ್ರಕಾರ, ರಾಜ್ಯದಲ್ಲಿ 2022ರಲ್ಲಿ 1,30,330 ಜನರು ಸೈಬರ್ ದಾಳಿಗೆ ಒಳಗಾಗಿ ಸಹಾಯವಾಣಿಗೆ ಕರೆ ಮಾಡಿದ್ದರು. ಈ ಸಂಖ್ಯೆ 2023ರಲ್ಲಿ 4,67,258ಕ್ಕೆ, 2024ರಲ್ಲಿ 10,79,458ಕ್ಕೆ ಏರಿಕೆ ಕಂಡಿತ್ತು. ಆದರೆ ಇದೀಗ 2025ರಲ್ಲಿ ಇದು ದಾಖಲೆ ಬರೆದಿದ್ದು, 24,08,475 ಕರೆಗಳು ಬಂದಿದೆ ಎಂದು ವರದಿಯಾಗಿದೆ.
ಡಿಜಿ-ಐಜಿಪಿ ಈ ಬಗ್ಗೆ ಹೇಳಿದ್ದೇನು?
ಇನ್ನು ಈ ಕುರಿತು ಮಾತನಾಡಿರುವ ಡಿಜಿ-ಐಜಿಪಿ ಎಂ.ಎ. ಸಲೀಂ, ಸೈಬರ್ ಅಪರಾಧದ ಬಗ್ಗೆ ವರದಿ ಮಾಡುವುದಕ್ಕೆ'ಗೋಲ್ಡನ್ ಅವರ್' ಬಹಳ ಮುಖ್ಯ ಎಂದು ಹೇಳಿದ್ದಾರೆ. ಅಂದರೆ ಅಪರಾಧ ನಡೆದ 60 ರಿಂದ 90 ನಿಮಿಷಗಳ ಒಳಗೆ ಕರೆ ಮಾಡಿದರೆ, ಆರೋಪಿಗಳನ್ನು ಪತ್ತೆ ಹಚ್ಚಿ, ಬ್ಯಾಂಕ್ ಖಾತೆಗಳಲ್ಲಿನ ಹಣವನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಡಿಜಿ-ಐಜಿಪಿ ಎಂ.ಎ. ಸಲೀಂ ಅವರ ಪ್ರಕಾರ, "ಸೈಬರ್ ಅಪರಾಧ ಸಹಾಯವಾಣಿ 1930 ಡಿಸೆಂಬರ್ 2021ರಿಂದ ಜಾರಿಗೆ ಬಂದಿದೆ. ಇನ್ನು ಸೈಬರ್ ಅಪರಾಧಕ್ಕೆ ಒಳಗಾದವರು ಆದಷ್ಟು ಬೇಗ 1930ಕ್ಕೆ ಕರೆ ಮಾಡಿ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಹಂಚಿಕೊಳ್ಳಬೇಕು. ಒಂದು ವೇಳೆ ದೂರು ನೀಡಲು ತಡವಾದರೆ, ವಂಚಕರು 'ಮ್ಯೂಲ್ ಬ್ಯಾಂಕ್' ಖಾತೆ ಬಳಸಿ ಹಣ ದೋಚಲು ಶುರು ಮಾಡುತ್ತಾರೆ.
ಸಹಾಯವಾಣಿಗೆ ಕರೆಗಳ ಸಂಖ್ಯೆ ಹೆಚ್ಚಿದ್ದರೂ, ಸಂತ್ರಸ್ತರು ವೇಗದ ಪ್ರತಿಕ್ರಿಯೆ ನೀಡುವುದನ್ನು ಕಡಿಮೆ ಮಾಡಿದ್ದಾರೆ. 2022ರಲ್ಲಿ, ಕರ್ನಾಟಕದಲ್ಲಿ ಸೈಬರ್ ಅಪರಾಧಗಳಿಂದ ₹113 ಕೋಟಿ ನಷ್ಟವಾಗಿತ್ತು, ಆದರೆ ಪೊಲೀಸರು ಕೇವಲ ₹8 ಕೋಟಿ ಮಾತ್ರ ವಶಪಡಿಸಿಕೊಂಡಿದ್ದಾರೆ. 2025ರಲ್ಲಿ, ₹2,640 ಕೋಟಿ ಸೈಬರ್ ಅಪರಾಧಿಗಳಿಗೆ ನಷ್ಟವಾಯಿತು, ಅದರಲ್ಲಿ ₹436 ಕೋಟಿ ಹಣವನ್ನು ಮಾತ್ರ ಫ್ರೀಜ್ ಮಾಡಲಾಗಿದೆ.
ಸೈಬರ್ ವಂಚಕರು ಕೂಡಾ, ಮೊಬೈಲ್, ಲ್ಯಾಪ್‌ಟಾಪ್ ಬಳಕೆದಾರರನ್ನ ವಂಚನೆ ಮಾಡೋದು ಹೇಗೆ ಎಂದು ಹೊಸ ಹೊಸ ಮಾರ್ಗಗಳ ಮೂಲಕ ಪ್ಲಾನ್ ಮಾಡುತ್ತಲೇ ಇದ್ದಾರೆ. ಆದ್ದರಿಂದ ಈ ಎಲ್ಲಾ ವಂಚನೆಗಳಿಗೆ ಬ್ರೇಕ್ ಹಾಕುವ ದೃಷ್ಟಿಯಿಂದ ಕರ್ನಾಟಕ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.


Click it and Unblock the Notifications