ತಿಂಗಳು ಮುಗಿಯೋ ಕಾಲ ಹತ್ತಿರ ಬಂದ್ರೆ ಸಾಕು ಕೈಯಲ್ಲಿ ಹಣ ಖಾಲಿ ಖಾಲಿ...ಕಣ್ಣಿಗೆ ಕಂಡಿದ್ದೆಲ್ಲಾ ದುಬಾರಿ! ಈ ಕಮಿಟ್‌ಮೆಂಟ್ ಅನ್ನೋ ಭೂತ ಎಂಥವರನ್ನೂ ಬಿಡದೆ ತಿನ್ನುತ್ತೆ. 15 ಸಾವಿರವೇ ಆಗಲಿ 50 ಸಾವಿರವೇ ಆಗಲಿ ಯಾರಿಗೆ ಸಾಲುತ್ತೆ ಸಂಬಳ. ಇದು ಕೇವಲ ಮಿಡಲ್ ಕ್ಲಾಸ್ ಮಂದಿಯ ಗೋಳಲ್ಲ. ಹಣ ಉಳಿತಾಯ ಮಾಡೋಕಾಗ್ತಿಲ್ಲ ಅನ್ನೋದು ಕೋಟಿ ಸಂಬಳ ತೆಗೆದುಕೊಳ್ಳುವವರಿಗೂ ತಪ್ಪುತ್ತಿಲ್ಲ..

ಹೌದು, ಮೆಟಾದಲ್ಲಿ ಕೆಲಸ ಮಾಡುವ 24 ವರ್ಷದ ಯುವ ಉದ್ಯೋಗಿಯೊಬ್ಬರು ತಮ್ಮ ಕೆಲಸದ ಬಗ್ಗೆ ಆಸಕ್ತಿ ಕಳೆದುಕೊಂಡಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇವರ ವಾರ್ಷಿಕ ಆದಾಯ ಸುಮಾರು ₹3.2 ಕೋಟಿ ಇದ್ದರೂ, ಕೆಲಸ ಮಾಡುವ ಪ್ರೇರಣೆ ಇಲ್ಲ ಎಂದು ಹೇಳಿದ್ದಾರೆ. ಈ ವಿಷಯ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಈ ಯುವಕ "ಬ್ಲೈಂಡ್" ಎಂಬ ಅನಾಮಧೇಯ ವೃತ್ತಿಪರ ನೆಟ್‌ವರ್ಕಿಂಗ್ ಆಪ್‌ನಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಅವರು ಈಗಾಗಲೇ ಸುಮಾರು $700,000 (ಸುಮಾರು ₹5.8 ಕೋಟಿ) ನಿವ್ವಳ ಸಂಪತ್ತು ಹೊಂದಿದ್ದು, ನಿವೃತ್ತಿಯಾಗುವ ಮುನ್ನ ಅದನ್ನು $3 ಮಿಲಿಯನ್ (ಸುಮಾರು ₹25 ಕೋಟಿ) ಮಾಡಲು ಗುರಿ ಇಟ್ಟುಕೊಂಡಿದ್ದಾರೆ. ಆದರೆ, ಅಷ್ಟರವರೆಗೆ ಕೆಲಸ ಮುಂದುವರಿಸಲು ತಮಗೆ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.
"ನನಗೆ ಕೇವಲ 24 ವರ್ಷ, ಆದರೆ ಈಗಾಗಲೇ ಈ ಮಟ್ಟದ ಸಂಪತ್ತು ಹೊಂದಿರುವುದು ನನಗೆ ಅದೃಷ್ಟ," ಎಂದು ಅವರು ಹೇಳಿದ್ದಾರೆ. ಆದರೂ, ಕೆಲಸದಿಂದ ಬೇಸರಗೊಂಡಿರುವುದಾಗಿ ಅವರು ಬರೆದಿದ್ದಾರೆ. "ಪ್ರತಿ ದಿನ ಕೆಲಸಕ್ಕೆ ಹೋಗುವುದು ಕಷ್ಟವಾಗುತ್ತಿದೆ, ಯಾವ ಪ್ರೇರಣೆಯೂ ಇಲ್ಲ. ಆದರೆ ಕುಟುಂಬದ ಹೊಣೆಗಾರಿಕೆಯ ಕಾರಣದಿಂದ ಕೆಲಸ ಬಿಟ್ಟುಕೊಳ್ಳಲಾಗುತ್ತಿಲ್ಲ," ಎಂದು ಹೇಳಿದ್ದಾರೆ.
ಮೆಟಾದ ಈ ಉದ್ಯೋಗಿ ತಮ್ಮ ಒಟ್ಟು ವೇತನ $370,000 ಇದ್ದರೂ, "ಪ್ರತಿ ಡಾಲರ್ ಉಳಿಸಲು ಹೋರಾಡುತ್ತಿದ್ದೇನೆ" ಎಂದು ತಿಳಿಸಿದ್ದಾರೆ. "ನಿವ್ವಳ ಸಂಪತ್ತು ನಿಧಾನವಾಗಿ ಹೆಚ್ಚುತ್ತಿದೆ, ಆದರೆ ಜೀವನದ ಉತ್ಸಾಹ ಕಡಿಮೆಯಾಗುತ್ತಿದೆ. $1 ಮಿಲಿಯನ್ ತಲುಪಿದ ಬಳಿಕ ಜೀವನ ಸುಲಭವಾಗುತ್ತದೆಯೇ?" ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ.
ಅವರ ಈ ಪೋಸ್ಟ್ ಅನೇಕ ಯುವ ಉದ್ಯೋಗಿಗಳ ಮನಸ್ಸಿನ ಸ್ಥಿತಿಯನ್ನು ಪ್ರತಿಬಿಂಬಿಸಿದೆ. ಹಣವಿದ್ದರೂ ಕೆಲಸದ ಒತ್ತಡ, ಮಾನಸಿಕ ಬಾಧೆ, ಮತ್ತು ಜೀವನದ ಅರ್ಥದ ಹುಡುಕಾಟ - ಇವುಗಳು ಇಂದಿನ ಕಾರ್ಪೊರೇಟ್ ಲೋಕದಲ್ಲಿ ಸಾಮಾನ್ಯ ಸಮಸ್ಯೆಗಳಾಗಿವೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.
ಈ ಕತೆ ಕೇವಲ ಒಬ್ಬ ಮೆಟಾ ಉದ್ಯೋಗಿಯದ್ದಲ್ಲ, ಇಂದು ಅನೇಕ ಯುವಕರು ಎದುರಿಸುತ್ತಿರುವ ವಾಸ್ತವದ ಚಿತ್ರವೂ ಹೌದು. ಹಣದ ಪಯಣದಲ್ಲಿಯೇ ನಿಜವಾದ ಸಂತೋಷ ಎಲ್ಲಿದೆ ಎಂಬ ಪ್ರಶ್ನೆ ಎಲ್ಲರಿಗೂ ಯೋಚನೆಗೆ ಕಾರಣವಾಗಿದೆ.


Click it and Unblock the Notifications