ಬಾಲಿವುಡ್‌ನಲ್ಲಿ ಈ ವರ್ಷ ಅಕ್ಷರಶಃ ಬರಗಾಲದ ವಾತಾವರಣ ಇತ್ತು. ಮಾಡಿದ ಎಲ್ಲ ಚಿತ್ರಗಳು ಒಂದಾದ ಮೇಲೊಂದರಂತೆ ದೊಪ್ಪನೆ ನೆಲಕ್ಕುರಳುತ್ತಿದ್ದ ಹಿನ್ನೆಲೆ ಆತಂಕ ಹಲವರಲ್ಲಿ ಮನೆ ಮಾಡಿತ್ತು. ಸಾಲದಕ್ಕೆ ದಕ್ಷಿಣ ಚಿತ್ರರಂಗದವರ ಅಬ್ಬರ. ಹಿಂದಿ ಮಾರುಕಟ್ಟೆಯಲ್ಲಿ ಸೌತ್ ಸ್ಟಾರ್‌ಗಳ ಅಬ್ಬರ ಬಾಲಿವುಡ್‌ನ ಬೆಚ್ಚಿ ಬೀಳಿಸಿತ್ತು. ಆದರೆ.. ವರ್ಷಾಂತ್ಯ ಇದೇ ಬಾಲಿವುಡ್‌ಗೆ ಹೊಸ ಚೈತನ್ಯ ತುಂಬಿದೆ. ಮರಭೂಮಿಯಲ್ಲಿ ಬಾಲಿವುಡ್‌ಗೆ ಓಯಾಸಿಸ್ ಸಿಕ್ಕಿದೆ. ಆ ಓಯಾಸಿಸ್‌ನ ಹೆಸರೇ ''ಧುರಂಧರ್''.

ಹೌದು.. ''ಧುರಂಧರ್''.. ಬಾಕ್ಸಾಫೀಸ್‌ಗೆ ಸದ್ಯ ಅಪ್ಪಳಿಸಿರುವ ಜ್ವಾಲಾಮುಖಿ. ಮೊದಲ ವಾರ ತಣ್ಣನೆಯ ಗಾಳಿಯಂತೆ ಭಾಸವಾದ ಈ ಚಿತ್ರ ಎರಡನೇ ವಾರದಲ್ಲಿ ಕೆಂಡದಂತೆ ಉರಿಯುತ್ತಿದೆ. ದಾಖಲೆಯ ಗಳಿಕೆಯನ್ನು ಮಾಡುತ್ತಿದೆ. ಹತ್ತು ಹಲವು ದಾಖಲೆಗಳನ್ನು ಪುಡಿ ಪುಡಿ ಮಾಡುತ್ತಿದೆ.
ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಈ ಹನ್ನೊಂದು ದಿನದಲ್ಲಿ ''ಧುರಂಧರ್'' ಕೇವಲ ಭಾರತದಲ್ಲಿ ₹ 379.75 ಕೋಟಿಯನ್ನು ಗಳಿಸಿದೆ. ಇಂದು (ಡಿಸೆಂಬರ್ 16) ಆಮಿರ್ ಖಾನ್ ಅಭಿನಯದ 2016ರ ಮೆಗಾ ಬ್ಲಾಕ್ ಬಸ್ಟರ್ ಚಿತ್ರ ''ದಂಗಲ್'' ದಾಖಲೆಯನ್ನು ಮುರಿಯಲಿದೆ. ಇನ್ನು ₹387.38 ಕೋಟಿಯನ್ನು ಗಳಿಸಲು ''ದಂಗಲ್'' ಚಿತ್ರಕ್ಕೆ ಹನ್ನೊಂದು ವಾರ ಬೇಕಾಗಿದ್ದವು. ಈ ದಾಖಲೆಯನ್ನು ''ಧುರಂಧರ್'' ಕೇವಲ ಹನ್ನೆರಡೇ ದಿನದಲ್ಲಿ ಮುರಿಯುತ್ತಿರುವುದು ವಿಶೇಷ.
ಕೇವಲ ''ದಂಗಲ್'' ಮಾತ್ರ ಅಲ್ಲ ಆಮಿರ್ ಖಾನ್ ಅಭಿನಯದ ''ಪಿಕೆ''.. ರಣ್ಭೀರ್ ಕಪೂರ್ ಅಭಿನಯದ ''ಸಂಜು''.. ಚಿತ್ರದ ಗಳಿಕೆಯನ್ನು ಕೂಡ ಹಿಂದಿಕ್ಕಿರುವ ''ಧುರಂಧರ್'' ಈ ವರ್ಷ ಬಾಲಿವುಡ್‌ನಲ್ಲಿ ಅತೀ ಹೆಚ್ಚು ಹಣ ಗಳಿಸಿದ ಎರಡನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದ ಹೊಸ ಹುಡುಗನ ''ಸೈಯಾರ'' ದಾಖಲೆಯನ್ನು ಕೂಡ ಮುರಿದಿದೆ. ಸದ್ಯ ''ಧುರಂಧರ್'' ಕಣ್ಣೇದುರು ''ಛಾವಾ'' (₹601.54 ಕೋಟಿ)ಇದೆ. ಈ ಚಿತ್ರವನ್ನು ಕೂಡ ಹಿಂದಿಕ್ಕಿದರೆ ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಬಾಲಿವುಡ್‌ನ ಸಿನಿಮಾ ಎನ್ನುವ ಕೀರ್ತಿಗೆ ''ಧುರಂಧರ್'' ಪಾತ್ರವಾಗಲಿದೆ.
ಇನ್ನು ಸಾಮಾನ್ಯವಾಗಿ ಚಿತ್ರ ಯಾವುದೇ ಇರಲಿ, ಸ್ಟಾರ್ ಯಾರೇ ಇರಲಿ. ಸೋಮವಾರದಿಂದ ಶುಕ್ರವಾರ ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡು ಬರುತ್ತೆ. ಗಳಿಕೆ ಮಂದಗತಿಯಲ್ಲಿ ಇರುತ್ತೆ. ಆದರೆ.. ''ಧುರಂಧರ್'' ಕ್ರೇಜ್ ಸದ್ಯ ಹೇಗಿದೆ ಅಂದರೆ ಎರಡನೇ ಸೋಮವಾರ ಈ ಚಿತ್ರ ₹ 29 ಕೋಟಿಯನ್ನು ಕೊಳ್ಳೆ ಹೊಡೆದಿದೆ. ಇಂದು (ಡಿಸೆಂಬರ್ 16) ಕೂಡ ಚಿತ್ರದ ಗಳಿಕೆ ಎರಡಂಕಿಯನ್ನು ಪಾರು ಮಾಡುವ ಸಾಧ್ಯತೆ ಇದೆ. ಇಂದು (ಡಿಸೆಂಬರ್ 16) 400 ಕೋಟಿಯ ಗಡಿಯನ್ನು ''ಧುರಂಧರ್'' ದಾಟುವ ವಿಶ್ವಾಸ ಬಾಲಿವುಡ್‌ಗೆ ಇದೆ.
''ಸ್ಯಾಕ್ನಿಲ್'' ಪ್ರಕಾರ ''ಧುರಂಧರ್'' ಚಿತ್ರದ ಹನ್ನೊಂದು ದಿನದ ಗಳಿಕೆ ಈ ಕೆಳಗಿನಂತೆ ಇದೆ
ಮೊದಲ ದಿನ [ಶುಕ್ರವಾರ] ₹ 28 ಕೋಟಿ
ಎರಡನೇ ದಿನ [ಶನಿವಾರ] ₹ 32 ಕೋಟಿ
ಮೂರನೇ ದಿನ [ಭಾನುವಾರ]₹ 43 ಕೋಟಿ
ನಾಲ್ಕನೇ ದಿನ [ಸೋಮವಾರ]₹ 23.25 ಕೋಟಿ
ಐದನೇ ದಿನ [ಮಂಗಳವಾರ]₹ 27 ಕೋಟಿ
ಆರನೇ ದಿನ [ಬುಧವಾರ]₹ 27 ಕೋಟಿ
ಏಳನೇ ದಿನ [ಗುರುವಾರ]₹ 27 ಕೋಟಿ
ಮೊದಲ ವಾರದ ಒಟ್ಟು ಗಳಿಕೆ- ₹ 207.25ಕೋಟಿ
ಎಂಟನೇ ದಿನ [ಶುಕ್ರವಾರ] - ₹ 32.5 ಕೋಟಿ
ಒಂಬತ್ತನೇ ದಿನ [ಶನಿವಾರ] - ₹ 53 ಕೋಟಿ
ಹತ್ತನೇ ದಿನ [ಭಾನುವಾರ]- ₹ 58 ಕೋಟಿ
ಹನ್ನೊಂದನೇ ದಿನ [ಸೋಮವಾರ]₹ 29 ಕೋಟಿ
ಒಟ್ಟು ಗಳಿಕೆ - ₹ 379. 75 ಕೋಟಿ
ಹೀಗೆ ಕೇವಲ ಹನ್ನೊಂದು ದಿನದಲ್ಲಿ ₹ 379. 75 ಕೋಟಿಯನ್ನು ''ಧುರಂಧರ್'' ಕೊಳ್ಳೆ ಹೊಡೆದಿದೆ. ಈ ಅಬ್ಬರ ಹೀಗೆ ಮುಂದುವರೆದರೆ ಈ ವಾರಾಂತ್ಯಕ್ಕೆ 500 ಕೋಟಿಯ ಗಡಿಯನ್ನು ಚಿತ್ರ ತಲುಪುವುದು ಖಚಿತ ಎನ್ನುವ ಅಭಿಪ್ರಾಯವನ್ನು ಸದ್ಯ ಬಾಲಿವುಡ್ ಪಂಡಿತರು ವ್ಯಕ್ತಪಡಿಸುತ್ತಿದ್ದಾರೆ.
ಹಕ್ಕುತ್ಯಾಗ: ವ್ಯಕ್ತಿಗತ ವಿಶ್ಲೇಷಕರ ಅಥವಾ ಘಟಕಗಳ ಅಭಿಪ್ರಾಯಗಳು ಮತ್ತು ಶಿಫಾರಸುಗಳು ಮಾತ್ರ ಇಲ್ಲಿ ಸೂಚಿಸಲಾಗಿದೆ ಮತ್ತು ಅವು Goodreturns.in ಅಥವಾ Greynium Information Technologies Private Limited (ಒಟ್ಟಿಗೆ "ನಾವು" ಎಂದು ಉಲ್ಲೇಖಿಸಲಾಗಿದೆ) ಅವರ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಯಾವುದೇ ವಿಷಯದ ನಿಖರತೆ, ಪೂರ್ಣತೆ ಅಥವಾ ನಂಬಿಕಾರ್ಹತೆಯನ್ನು ನಾವು ಖಚಿತಪಡಿಸುವುದಿಲ್ಲ, ಸಮರ್ಥಿಸುತ್ತಿಲ್ಲ ಅಥವಾ ಹೊಣೆಗಾರರಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾSECURITIES ಖರೀದಿ ಅಥವಾ ಮಾರಾಟವನ್ನು ಪ್ರೇರೇಪಿಸುವುದಿಲ್ಲ. ಎಲ್ಲಾ ಮಾಹಿತಿಯು ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ನೀಡಲಾಗಿದ್ದು, ಯಾವುದೇ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಲೈಸೆನ್ಸ್ ಪಡೆದ ಹಣಕಾಸು ಸಲಹೆಗಾರರಿಂದ ಸ್ವತಃ ಪರಿಶೀಲಿಸುವುದು ಅಗತ್ಯ.


Click it and Unblock the Notifications