ಮುಂಬೈ, ಏಪ್ರಿಲ್ 24: ವಿದೇಶಗಳಿಂದ ಚಿನ್ನ ಹಾಗೂ ಇತರ ವಸ್ತುಗಳನ್ನು ಕಳ್ಳಸಾಗಣೆ ಮಾಡುವ ವೇಳೆ ವಿಮಾನ ನಿಲ್ದಾನದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಸುದ್ದಿ ನೀವು ಹಲವು ಬಾರಿ ಓದಿರುತ್ತೀರಾ. ಇದೇ ರೀತಿ ನೂಡಲ್ಸ್ ಪ್ಯಾಕೆಟ್ ಒಳಗೆ ವಜ್ರ ಕಳ್ಳ ಸಾಗಣೆ ಯತ್ನಿಸಿದ ಸ್ಮಗ್ಲರ್ಸ್ ಕಸ್ಟಮ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಈ ವಾರಾಂತ್ಯದಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ 4.44 ಕೋಟಿ ರೂ. ಮೌಲ್ಯದ 6.8 ಕೆ.ಜಿಗೂ ಹೆಚ್ಚು ಚಿನ್ನ ಮತ್ತು 2.02 ಕೋಟಿ ರೂ. ವಜ್ರಗಳನ್ನು ವಶಪಡಿಸಿಕೊಂಡ ನಂತರ ನಾಲ್ವರು ಪ್ರಯಾಣಿಕರನ್ನು ಬಂಧಿಸಲಾಗಿದೆ ಎಂದು ಕಸ್ಟಮ್ಸ್ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಯಾಣಿಕರ ದೇಹದ ಭಾಗದೊಳಗೆ ಹಾಗೂ ನ್ಯೂಡಲ್ಸ್ ಪ್ಯಾಕೇಟ್ ನಲ್ಲಿ ವಜ್ರ ಮತ್ತು ಚಿನ್ನದ ಕಳ್ಳಸಾಗಣೆ ಮಾಡುತ್ತಿದ್ದು, ಇದರ ಅಂದಾಜು ಮೌಲ್ಯ 6.46 ಕೋಟಿ ರೂ. ಆಗಿದ್ದು ಮುಂಬೈ ವಿಮಾನ ನಿಲ್ದಾಣದಲ್ಲಿ ಮುಂಬೈ ಕಸ್ಟಮ್ಸ್‌ನ ಏರ್ ಇಂಟೆಲಿಜೆನ್ಸ್ ಯೂನಿಟ್ ಈ ಪ್ರಕರಣವನ್ನು ಪತ್ತೆ ಹಚ್ಚಿದೆ.

ಈ ಪೈಕಿ ಸುಮಾರು 2.02 ಕೋಟಿ ರೂ. ಮೌಲ್ಯದ ವಜ್ರ ಹಾಗೂ ದೇಹದಲ್ಲಿ ಹಾಗೂ ಲಗೇಜ್‌ಗಳಲ್ಲಿ ಅಡಗಿಸಿಕೊಂಡು ಸಾಗಿಸುತ್ತಿದ್ದ ಸುಮಾರು 4.44 ಕೋಟಿ ರೂ. ಮೌಲ್ಯದ 6.8 ಕೆಜಿಗೂ ಅಧಿಕ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ಮುಂಬೈನಿಂದ ಬ್ಯಾಂಕಾಕ್ ಗೆ ಪ್ರಯಾಣಿಸುತ್ತಿದ್ದ ಭಾರತೀಯ ಪ್ರಜೆಯೊಬ್ಬರನ್ನು ಖಚಿತ ಮಾಹಿತಿ ಆಧಾರದ ಮೇರೆಗೆ ತಪಾಸಣೆ ನಡೆಸಿದಾಗ, ತನ್ನ ಟ್ರಾಲಿ ಬ್ಯಾಗ್‌ನಲ್ಲಿ ನೂಡಲ್ಸ್ ಪ್ಯಾಕೆಟ್‌ಗಳಲ್ಲಿ ವಜ್ರಗಳನ್ನು ಬಚ್ಚಿಟ್ಟು ವಜ್ರಗಳನ್ನು ಕಳ್ಳಸಾಗಣೆ ಮಾಡುತ್ತಿರುವುದು ಕಂಡುಬಂದಿದೆ. ನಂತರ ಪ್ರಯಾಣಿಕನನ್ನು ಬಂಧಿಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ಕಸ್ಟಮ್ಸ್ ಅಧಿಕಾರಿ ಸೋಮವಾರ ತಡರಾತ್ರಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಈ ವಿಚಾರ ತಿಳಿಸಿದ್ದು, ಇದಲ್ಲದೇ ಕೊಲಂಬೊದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ವಿದೇಶಿ ಮಹಿಳಾ ಪ್ರಜೆಯೊಬ್ಬರನ್ನು ತಪಾಸಣೆ ನಡೆಸಿದಾಗ, ಬಚ್ಚಿಟ್ಟು ಸಾಗಿಸುತ್ತಿದ್ದ 321 ಗ್ರಾಂ ತೂಕದ ಚಿನ್ನದ ತುಂಡುಗಳು ಮತ್ತು ಕಟ್ ಪೀಸ್ ಸಾಗಿಸುತ್ತಿರುವುದು ಕಂಡುಬಂದಿದೆ. ಆಕೆ ತನ್ನ ಒಳ ಉಡುಪುಗಳ ಒಳಗೆ ಚಿನ್ನದ ಗಟ್ಟಿಗಳನ್ನು ಇಟ್ಟುಕೊಂಡು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಳು ಎಂದು ತಿಳಿದುಬಂದಿದೆ.
ಇದಲ್ಲದೆ ಒಟ್ಟು 10 ಭಾರತೀಯರೂ ಕೂಡಾ ಕಳೆದ ಕೆಲವು ದಿನಗಳಲ್ಲಿ ಚಿನ್ನದ ಸಮೇತ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ದುಬೈ ಮತ್ತು ಅಬುಧಾಬಿಯಿಂದ ಪ್ರಯಾಣಿಸುತ್ತಿದ್ದ ತಲಾ ಇಬ್ಬರು ಮತ್ತು ಬಹ್ರೇನ್, ದೋಹಾ, ರಿಯಾದ್, ಮಸ್ಕತ್, ಬ್ಯಾಂಕಾಕ್ ಮತ್ತು ಸಿಂಗಾಪುರದಿಂದ ತಲಾ ಒಬ್ಬರು ಪ್ರಯಾಣಿಸುತ್ತಿದ್ದ 10 ಭಾರತೀಯನ್ನು ತಪಾಶಣೆಗೆ ಒಳಪಡಿಸಿದಾಗ,4.04 ಕೋಟಿ ರೂ. ಮೌಲ್ಯದ 6.199 ಕೆಜಿ ಚಿನ್ನವನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ಗುದನಾಳ, ದೇಹದ ಮೇಲೆ ಮತ್ತು ವಿವಿಧ ಸಾಮಾನು ಸರಂಜಾಮು ಒಳಗೆ ಚಿನ್ನ ಬಚ್ಚಿಟ್ಟು ಸಾಗಿಸುತ್ತಿದ್ದರು"ಎಂದು ಪ್ರಕಟನೆಯಲ್ಲಿ ತಿಳಿಸಿದ್ದು, ಈ ಬಗ್ಗೆ ಹೆಚ್ಚಿನ ಯಾವುದೇ ಮಾಹಿತಿ ಅಧಿಕಾರಿಗಳು ನೀಡಿಲ್ಲ. ಈ ಪೈಕಿ ಮೂವರನ್ನು ನಂತರ ಬಂಧಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.


Click it and Unblock the Notifications