ನವದೆಹಲಿ, ಏಪ್ರಿಲ್ 21: ಜಾಗತಿಕ ಮಟ್ಟದಲ್ಲಿ ಈಗ ಭಾರತದ ಹೆಸರನ್ನು ರಾರಾಜಿಸುವಂತೆ ಮಾಡಿರುವ ಸಂಸ್ಥೆಗಳಲ್ಲಿ ಇನ್ಫೋಸಿಸ್ ಕೂಡ ಒಂದಾಗಿದೆ. ಹತ್ತಾರು ಸಾವಿರ ಜನರಿಗೆ ಕೆಲಸ ನೀಡಿರುವ ಇನ್ಫೋಸಿಸ್ ಸಂಸ್ಥೆ, ಭಾರತದ ಐಟಿ ಕ್ಷೇತ್ರದ ಅಭಿವೃದ್ಧಿಗೆ ಕೂಡ ನೆರವಾಗುತ್ತಿದೆ. ಇಂತಿಪ್ಪ ಸಂಸ್ಥೆ ಈಗ ಭರ್ಜರಿ ಲಾಭ ಗಳಿಸಿ, ಷೇರು ಹೂಡಿಕೆದಾರರಿಗೆ ಕೂಡ ಗುಡ್‌ನ್ಯೂಸ್ ಕೊಟ್ಟಿದೆ.
ಭಾರತದ ಪ್ರಮುಖ ಐಟಿ ಕಂಪನಿಗಳ ಪೈಕಿ ಒಂದಾಗಿರುವ ಇನ್ಫೊಸಿಸ್ 2023 & 24ರ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಬರೋಬ್ಬರಿ 7,969 ರೂ. ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ಅವಧಿಯಲ್ಲಿ ಎಂದರೆ 2022 & 23ನೇ ಹಣಕಾಸು ವರ್ಷದ ಈ ಅವಧಿಯಲ್ಲಿ ಕಂಪನಿಯು 6,128 ಕೋಟಿ ರೂಪಾಯಿ ಲಾಭ ಗಳಿಸಿತ್ತು. ಕಳೆದ ಸಾಲಿನ ಲಾಭಕ್ಕೆ ಹೋಲಿಕೆ ಮಾಡಿದರೆ ಈಗ ಲಾಭದಲ್ಲಿ ಶೇಕಡಾ 30 ರಷ್ಟು ಏರಿಕೆ ಆಗಿದೆ ಎಂದು ಕಂಪನಿ ಮಾಹಿತಿ ನೀಡಿದೆ. ಅಲ್ಲದೆ ಈ ಮೂಲಕ ಇನ್ಫೋಸಿಸ್ ಷೇರುಗಳ ಮೇಲೆ ಹೂಡಿಕೆ ಮಾಡಿದ್ದವರಿಗೆ ಭರ್ಜರಿ ಲಾಭ ಸಿಗಲಿದೆ.

ಲಾಭದ ಜೊತೆ ವರಮಾನವೂ ಹೆಚ್ಚಳ
ಇನ್ಫೋಸಿಸ್ ಸಂಸ್ಥೆಯ ಲಾಭ ಮಾತ್ರವಲ್ಲದೆ ಆದಾಯ ಕೂಡ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಇದೀಗ ಇನ್ಫೋಸಿಸ್ ಸಂಸ್ಥೆಯ ವರಮಾನವು ₹37,441 ಕೋಟಿಯಿಂದ ₹37,923 ಕೋಟಿಗೆ ಹೆಚ್ಚಳ ಆಗಿದೆ ಎನ್ನಲಾಗಿದೆ. ಮತ್ತೊಂದು ಕಡೆ 2024-25ನೇ ಹಣಕಾಸು ವರ್ಷದಲ್ಲಿ ವರಮಾನ ಶೇಕಡಾ 1ರಿಂದ ಶೇಕಡಾ 3ರಷ್ಟು ಬೆಳವಣಿಗೆ ಆಗಲಿದೆ ಎಂದು ಅಂದಾಜಿಸಲಾಗಿದ್ದು ಸಂಸ್ಥೆಯು ಹೆಚ್ಚಿನ ಬೆಳವಣಿಗೆ ಕಾಣುತ್ತಿದೆ. ಇದೇ ಸಮಯದಲ್ಲಿ ಮಾರ್ಚ್‌ಗೆ ಅಂತ್ಯಗೊಂಡ ಪೂರ್ಣ ಹಣಕಾಸು ವರ್ಷದಲ್ಲಿ ನಿವ್ವಳ ಲಾಭವು ₹24,095 ಕೋಟಿಯಿಂದ ₹26,233 ಕೋಟಿಗೆ ಹೆಚ್ಚಳ ಆಗಿದೆ. ವಾರ್ಷಿಕ ವರಮಾನ ₹1.46 ಲಕ್ಷ ಕೋಟಿಯಿಂದ ₹1.53 ಲಕ್ಷ ಕೋಟಿಗೆ ಏರಿಕೆ ಕಂಡಿದೆ ಎಂದು ತಿಳಿಸಲಾಗಿದೆ.
ಷೇರು ಹೂಡಿಕೆದಾರರಿಗೆ ಭರ್ಜರಿ ಲಾಭ!
ಇನ್ಫೋಸಿಸ್ ಭರ್ಜರಿ ಲಾಭ ಗಳಿಸಿದ ಹಿನ್ನೆಲೆಯಲ್ಲಿ ತನ್ನ ಹೂಡಿಕೆದಾರರಿಗೆ, ಲಾಭದಲ್ಲಿನ ಅಂಶ ಹಂಚಲು ನಿರ್ಧಾರ ಮಾಡಿದೆ. ಈ ಮೂಲಕ ಭರ್ಜರಿ ಡಿವಿಡೆಂಟ್ ಘೋಷಣೆಯನ್ನ ಮಾಡಲಾಗಿದೆ. ಪ್ರತಿ ಈಕ್ವಿಟಿ ಷೇರಿಗೆ ₹20 ಅಂತಿಮ ಲಾಭಾಂಶ ಮತ್ತು ಹೆಚ್ಚುವರಿಯಾಗಿ ಪ್ರತಿ ಈಕ್ವಿಟಿ ಷೇರಿಗೆ 8 ರೂಪಾಯಿಯ ವಿಶೇಷ ಲಾಭಾಂಶ ನೀಡಲು ಶಿಫಾರಸು ಮಾಡಲಾಗಿದೆ. ಈ ಮೂಲಕ ಹೂಡಿಕೆದಾರರಿಗೆ ಭರ್ಜರಿ ಲಾಭ ಆಗಿದ್ದು, ಜೊತೆಗೆ ಇನ್ಫೋಸಿಸ್ ಸಂಸ್ಥೆ ಕೂಡ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಹೊಂದುತ್ತಿದೆ.


Click it and Unblock the Notifications