ಬೆಂಗಳೂರು, ಮಾರ್ಚ್ 27: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಸಾಲಗಾರರ ಕಿರುಕುಳದಿಂದ ಸರ್ಕಾರಿ ಇಂಜಿನಿಯರ್ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಇಂಜಿನಿಯರ್ 12 ಮಂದಿಯಿಂದ 84 ಲಕ್ಷ ಸಾಲ ಪಡೆದು ಹಣ ಕಳೆದುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಲ ಕೊಟ್ಟವರು ಹಣವನ್ನು ಹಿಂದಿರುಗಿಸುವಂತೆ ಕುಟುಂಬವನ್ನು ಪೀಡಿಸುತ್ತಿದ್ದರು. ಈ ಕಿರುಕುಳದಿಂದ ಬೇಸತ್ತು ಇಂಜಿನಿಯರ್ ಪತ್ನಿ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತರನ್ನು ರಂಜಿತಾ (24) ಎಂದು ಗುರುತಿಸಲಾಗಿದೆ. ಮೂರು ವರ್ಷಗಳ ಹಿಂದೆ ಸರ್ಕಾರಿ ಇಂಜಿನಿಯರ್ ಆಗಿದ್ದ ದರ್ಶನ್ ಅವರನ್ನು ಮದುವೆಯಾಗಿದ್ದರು. ದಾಂಪತ್ಯದಿಂದ ದಂಪತಿಗೆ ಎರಡು ವರ್ಷದ ಮಗುವಿತ್ತು.

ರಂಜಿತಾ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಾಲ ಕೊಡುವವರ ಕಿರುಕುಳದಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರಂಜಿತಾ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಮಾರ್ಚ್ 18 ರಂದು ಈ ಘಟನೆ ನಡೆದಿದೆ. ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಹಣಕ್ಕೆ ಒತ್ತಾಯಿಸಿ ದಂಪತಿಯ ಮನೆಯಲ್ಲಿ ಜಗಳವಾಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
"ರಂಜಿತಾ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ರಂಜಿತಾ ತಂದೆ ವೆಂಕಟೇಶ್ ದೂರು ನೀಡಿದ್ದಾರೆ. ಸರ್ಕಾರಿ ಉದ್ಯೋಗಿಯಾಗಿರುವ ರಂಜಿತಾ ಅವರ ಪತಿ ದರ್ಶನ್ ಅವರು ಶ್ಯೂರಿಟಿಯಾಗಿ ಖಾಲಿ ಚೆಕ್ ನೀಡಿ 12 ಮಂದಿಯಿಂದ 84 ಲಕ್ಷ ರೂಪಾಯಿ ಹಣ ಪಡೆದಿದ್ದರು ಎಂದು ದೂರುದಾರರು ಹೇಳಿದ್ದಾರೆ. ದರ್ಶನ್ 2021-2023ರ ನಡುವೆ ಸಾಲ ಮಾಡಿ ಐಪಿಎಲ್ ಬೆಟ್ಟಿಂಗ್‌ನಲ್ಲಿ ಸೋತಿದ್ದರು. ಸಾಲ ತೀರಿಸುವಂತೆ ಲೇವಾದೇವಿಗಾರರು ದಂಪತಿಗೆ ಕಿರುಕುಳ ನೀಡುತ್ತಿದ್ದರು. ಕಿರುಕುಳದಿಂದ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಚಿತ್ರದುರ್ಗ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಹೇಳಿದ್ದಾರೆ.
ಆರೋಪಿಗಳು ಅಧಿಕ ಬಡ್ಡಿಗೆ ಸಾಲ ನೀಡಿರುವುದು ಪೊಲೀಸರ ತನಿಖೆಯಿಂದ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಇತರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


Click it and Unblock the Notifications