ನವದೆಹಲಿ, ಮೇ 30: ರೈಲು ನಿಲ್ದಾಣದಲ್ಲಿ ಬೆಂಚುಗಳ ಮೇಲೆ ಮಲಗುತ್ತಾ ದಿನಕಳೆಯುವುದರಿಂದ ಹಿಡಿದು, ಸ್ವಯಂ ನಿರ್ಮಿತ ಕೋಟ್ಯಾಧಿಪತಿಯಾಗುವವರೆಗೆ ಪ್ರಯಾಣವು ಸತ್ಯನಾರಾಯಣ್ ನಂದಲಾಲ್ ದೃಢತೆ ಮತ್ತು ಅಚಲವಾದ ಶೃದ್ದೆಗೆ ಸಾಕ್ಷಿಯಾಗಿದೆ.
"ಸೋಲಾರ್ ಇಂಡಸ್ಟ್ರೀಸ್ ಇಂಡಿಯಾ"ದ ಸ್ಥಾಪಕರು ಮತ್ತು ಸಂಸ್ಥಾಪಕರಾಗಿರುವ ಸತ್ಯನಾರಾಯಣ್ ಅವರ ಪೂರ್ಣ ಹೆಸರು ಸತ್ಯನಾರಾಯಣ್ ನಂದಲಾಲ್ ನುವಾಲ್. ತಮ್ಮ ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದರೂ ಸತ್ಯನಾರಾಯಣ್ ಅವರು ಕಠಿಣ ಪರಿಶ್ರಮ ಮತ್ತು ಅಚಲ ಪರಿಶ್ರಮದ ಮೂಲಕ ತಮ್ಮ ಜೀವನವನ್ನು ಸಂಪೂರ್ಣವಾಗಿ ಪರಿವರ್ತಿಸಿದರು.

ಆರಂಭಿಕ ಜೀವನ ಮತ್ತು ಶಿಕ್ಷಣ:
ಸತ್ಯನಾರಾಯಣ್ ರಾಜಸ್ಥಾನದ ಭಿಲ್ವಾರಾದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದು, ಅವರ ತಂದೆ ಸರ್ಕಾರಿ ನೌಕರರಾಗಿದ್ದರು. ಆದರೆ, ಆರ್ಥಿಕ ಸಂಕಷ್ಟದಿಂದ 10ನೇ ತರಗತಿ ನಂತರ ಶಾಲೆ ಬಿಡಬೇಕಾಯಿತು. ಆದರೆ ಬಾಲ್ಯದಲ್ಲೇ ಅವರಲ್ಲಿದ್ದ ಅವರ ಉದ್ಯಮಶೀಲತೆಯ ಮನೋಭಾವವು ಕೇವಲ 18 ವರ್ಷ ವಯಸ್ಸಿನಲ್ಲಿ ಶಾಯಿ ಉತ್ಪಾದನಾ ಘಟಕವನ್ನು ತೆರೆಯಲು ಕಾರಣವಾಯಿತು. ಆದರೆ ಅವರ ಮೊದಲ ಪ್ರಯತ್ನ ವಿಫಲವಾಯಿತು. ಹಾಗೆಂದು ಸತ್ಯನಾರಾಯಣ್ ಕೈ ಚೆಲ್ಲಿ ಕುಳಿತಿಲ್ಲ. ಹೊಸ ಅವಕಾಶಗಳನ್ನು ಹುಡುಕುತ್ತಲೇ ಇದ್ದರು.
ಜೀವನವನ್ನು ಬದಲಾಯಿಸಿದ ಸಾಹಸೋದ್ಯಮ:
ಕೈಗಾರಿಕಾ ಸ್ಫೋಟಕ ಉದ್ಯಮವನ್ನು ಪ್ರವೇಶಿಸುವುದರೊಂದಿಗೆ ಸತ್ಯನಾರಾಯಣ್ ಅವರ ಜೀವನದಲ್ಲಿ ಒಂದು ಮಹತ್ವದ ತಿರುವು ಪಡೆಯಿತು. ಆ ವೇಳೆ ಅವರ ಜೀವನ ಸಂಕಷ್ಟದಲ್ಲಿ ಸಾಗುತ್ತಿದ್ದು, ರೈಲು ನಿಲ್ದಾಣದಲ್ಲಿ ಮಲಗುತ್ತಾ ಕಾಲ ಕಳೆಯಬೇಕಾಯಿತು. ಸ್ಫೋಟಕಗಳ ಡೀಲರ್ ಅಬ್ದುಲ್ ಸತ್ತಾರ್ ಅಲ್ಲಾಭಾಯ್ ಅವರೊಂದಿಗಿನ ಭೇಟಿಯು ಸತ್ಯನಾರಾಯಣ್ ಅವರ ಜೀವನವನ್ನು ಬದಲಾಯಿಸಿತು. 1995 ರಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಿಂದ ಸಣ್ಣ ಮೊತ್ತದ ಸಾಲ ಪಡೆದು ಅವರು ಸೋಲಾರ್ ಇಂಡಸ್ಟ್ರೀಸ್ ಇಂಡಿಯಾ ಎಂಬ ಸಂಸ್ಥೆ ಸ್ಥಾಪಿಸಿದರು. ಇಂದು ಈ ಕಂಪನಿಯ ಮಾರುಕಟ್ಟೆ ಬಂಡವಾಳ 92,000 ಕೋಟಿ ರೂ. ಆಗಿ ಬೆಳೆದು ನಿಂತಿದೆ.
ಸ್ಫೋಟಕಗಳ ಉದ್ಯಮದಲ್ಲಿ ಗಮನಾರ್ಹ ಏರಿಕೆ
ಇಂದು "ಸೋಲಾರ್ ಇಂಡಸ್ಟ್ರೀಸ್" ಸಂಸ್ಥೆಯೂ ಸ್ಫೋಟಕಗಳು, ಪ್ರೊಪೆಲ್ಲೆಂಟ್‌ಗಳು, ಗ್ರೆನೇಡ್‌ಗಳು, ಡ್ರೋನ್‌ಗಳು ಮತ್ತು (ವಾರ್ ಹೆಡ್ಸ್ )ಸಿಡಿತಲೆಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದು ಇದು ಮೇಕ್ ಇನ್ ಇಂಡಿಯಾ ಮಿಷನ್ ಅನ್ನು ಬೆಂಬಲಿಸುತ್ತದೆ. ಕಂಪನಿಯ ಮಾರುಕಟ್ಟೆ ಮೌಲ್ಯವು ಕೇವಲ ಹತ್ತು ವರ್ಷಗಳಲ್ಲಿ 1,700% ರಷ್ಟು ಜಿಗಿತ ಕಂಡಿದ್ದು2022 ರ ನವೆಂಬರ್ ವೇಳೆಗೆ 35,000 ಕೋಟಿ ರೂ.ಗಳನ್ನು ತಲುಪಿತು. ಸತ್ಯನಾರಾಯಣ್ ಅವರ ನಿವ್ವಳ ಮೌಲ್ಯವು ಈಗ 4.9 ಶತಕೋಟಿ ಡಾಲರ್ ಆಗಿದೆ ಎಂದು ಫೋರ್ಬ್ಸ್ ವರದಿ ಮಾಡಿದೆ. ಅವರ ಗಮನಾರ್ಹ ಸಾಧನೆಯೂ ಇಂದು ಅವರನ್ನು ವಿಶ್ವದ ಬಿಲಿಯನೇರ್ ವ್ಯಾಪಾರ ನಾಯಕರ ಪಟ್ತಿಯಲ್ಲಿ ಗುರುತಿಸುವಂತೆ ಮಾಡಿದೆ.


Click it and Unblock the Notifications