ಟೆಕ್ನಾಲಜಿ ದಿನ ಹೋದಂತೆ ಅಭಿವೃದ್ಧಿ ಕಾಣುತ್ತಲೇ ಇದೆ. ಮೊಬೈಲ್, ಲ್ಯಾಪ್‌ಟಾಪ್ (Mobile, Laptop) ಮೂಲಕ ಕೂತಲ್ಲೇ ಯಾವುದೇ ಕೆಲಸಗಳನ್ನು ಕ್ಷಣಮಾತ್ರದಲ್ಲಿ ಮಾಡಿಮುಗಿಸಬಹುದು. ಇನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಬಂದ ನಂತರವಂತೂ ಕೇಳೋದೆ ಬೇಡ. ಇದೇ ಕಾರಣದಿಂದ ಇತ್ತೀಚೆಗೆ ಸೈಬರ್ ವಂಚಕರ ಸಂಖ್ಯೆಯೂ ಹೆಚ್ಚಾಗಿದೆ. ದಿನ ಹೋದಂತೆ ಅಮಾಯಕ ಬಳಕೆದಾರರನ್ನು ಗುರಿಯಾಗಿಸಿಕೊಂಡು ಸೈಬರ್ ಖದೀಮರು ಲಕ್ಷಗಟ್ಟಲೆ ದೋಚುತ್ತಿದ್ದಾರೆ. ಇದೀಗ ಬೆಂಗಳೂರಿನ (Bengaluru Scam) ವ್ಯಕ್ತಿಯೊಬ್ಬರು ಆನ್‌ಲೈನ್ ಟ್ರೇಡಿಂಗ್ ವಂಚನೆಯಿಂದಾಗಿ (Online Trading Scam) 80 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾರೆ.

ಹೌದು, ಇತ್ತೀಚೆಗೆ ಸೈಬರ್ ವಂಚಕರಿಂದಾಗಿ ಅಮಾಯಕರು, ಬಡವರು ಲಕ್ಷ ಲಕ್ಷ ಹಣ ಕಳೆದುಕೊಳ್ಳುತ್ತಿದ್ದಾರೆ. ಯಾವುದೋ ಕೆಲಸಕ್ಕಾಗಿ ಹೂಡಿಕೆ ಮಾಡಿಟ್ಟಿದ್ದ ಹಣ, ಇಂದು ಖತರ್ನಾಕ್ ಸೈಬರ್ ಖದೀಮರ ಪಾಲಾಗುತ್ತಿದೆ. ಅದೇ ರೀತಿಯ ಘಟನೆ ಇದೀಗ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರಿನ ವ್ಯಕ್ತಿಯೊಬ್ಬರು ಆನ್‌ಲೈನ್ ಟ್ರೇಡಿಂಗ್ ವ್ಯಾಮೋಹದಿಂದ ಒಂದಲ್ಲ ಎರಡಲ್ಲ ಬರೋಬ್ಬರಿ 80 ಲಕ್ಷ ರೂ. ಕಳೆದುಕೊಂಡಿದ್ದಾರೆ. ಸದ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಏನಿದು ಪ್ರಕರಣ?
ಪೊಲೀಸರಿಗೆ ಸಂತ್ರಸ್ತ ವ್ಯಕ್ತಿ ನೀಡಿದ ದೂರಿನ ಪ್ರಕಾರ, ಐಸಿಐಸಿಐ ಬ್ಯಾಂಕ್‌ನಲ್ಲಿ ದೂರುದಾರರು ಖಾತೆ ಹೊಂದಿದ್ದರಂತೆ. ಅದೇ ರೀತಿ ದೂರುದಾರರು ಆನ್‌ಲೈನ್ ಮೂಲಕ ಆಸ್ಥಾ ಕ್ರೆಡಿಟ್ ಮತ್ಯು ಸೆಕ್ಯುರಿಟೀಸ್ ಪ್ರೈವೇಟ್ ಲಿಮಿಟೆಡ್ ಜೊತೆ ಸಂಪರ್ಕಕ್ಕೆ ಬಂದಿದ್ದಾರೆ. ಆ ಸಂದರ್ಭದಲ್ಲಿ ಆರವ್ ಗುಪ್ತಾ ಮತ್ತು ಮೀನಾ ಜೋಶಿ ಎಂಬವರನ್ನು ದೂರುದಾರರಿಗೆ ಪರಿಚಯಿಸಲಾಗಿದೆ.
ಅದೇ ರೀತಿ ಸೆ.17 ರಂದು, ದೂರುದಾರರನ್ನು ಅನ್‌ನೌನ್ ವ್ಯಕ್ತಿಯೊಬ್ಬರು "9015 ವಿಐಪಿ ಮೋಕ್ಷ ಸರ್ಕಲ್" ಎಂಬ ವಾಟ್ಸಾಪ್ ಗ್ರೂಪಿಗೆ ಸೇರಿಸುವ ಮೂಲಕ ವಂಚನೆಗೆ ಮುನ್ನೆಲೆ ಹಾಕಿದ್ದರು. ಇನ್ನು ಈ ಗ್ರೂಪಿನಲ್ಲಿದ್ದ ಸದಸ್ಯರು "ಎಸಿಎಸ್ ಟ್ರೇಡ್" ಎಂಬ ಅಪ್ಲಿಕೇಶನ್ ಅನ್ನು ಪ್ರಚಾರ ಮಾಡಿದ್ದು, ಸ್ಟಾಕ್ ಟ್ರೇಡಿಂಗ್ ಮೂಲಕ ಹೆಚ್ಚು ಹಣ ಗಳಿಸಬಹುದು ಎಂದು ಭರವಸೆ ಹುಟ್ಟಿಸಿದ್ದರು ಎನ್ನಲಾಗಿದೆ.
ಅದೇ ವ್ಯಾಮೋಹದಿಂದ, ವಂಚಕರು ಹೇಳಿದ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ, ಹಂತ ಹಂತವಾದ ಹಣ ವರ್ಗಾಯಿಸಲು ಪ್ರಾರಂಭಿಸಿದರು ಎಂದು ವರದಿಯಾಗಿದೆ. ಪೊಲೀಸ್ ವರದಿಯ ಪ್ರಕಾರ, ವಂಚನೆಗೊಳಗಾದ ವ್ಯಕ್ತಿ ₹34,55,492 ರೂ. ಮತ್ತು ನಂತರ ₹21,80,000 ರೂ. ಅನ್ನು ಆನ್‌ಲೈನ್ ಮೂಲಕ ಕಳುಹಿಸಿಕೊಂಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ, ತನ್ನ ಲಾಭದ ಹಣವನ್ನು ಮರಳಿ ಪಡೆಯಲು ಕೇಳಿದಾಗ ಮತ್ತೆ ಅದಕ್ಕಾಗಿ ಒಂದಿಷ್ಟು ಪೇಮೆಂಟ್ ಮಾಡುವಂತೆ ಕೇಳಲಾಗಿದೆ ಎನ್ನಲಾಗಿದೆ. ಈ ಪರಿಣಾಮ ಮತ್ತೆ 23,72,594 ರೂ. ಕಳುಹಿಸಿದ್ದಾರೆ ಎಂದು ವರದಿಯಾಗಿದೆ.
ಈ ಮೂಲಕ ಒಟ್ಟಾಗಿ ದೂರುದಾರರು ಹಣದಾಸೆಯಿಂದಾಗಿ 80 ಲಕ್ಷಕ್ಕೂ ಅಧಿಕ ಹಣವನ್ನು, ಪರಿಚಯವೇ ಇಲ್ಲದ ವ್ಯಕ್ತಿಗೆ ವರ್ಗಾಯಿಸಿದ್ದಾರೆ. ಆದರೆ ಹೂಡಿಕೆ ಮಾಡಿದ ಹಣವಾಗಲೀ, ಬಂದ ಲಾಭವಾಗಲೀ ಇನ್ನೂ ದೂರುದಾರರ ಖಾತೆಗೆ ವರ್ಗಾವಣೆಯಾಗಿಲ್ಲ. ಇದೊಂದು ಮಹಾವಂಚನೆ ಎಂದು ತಿಳಿಯುತ್ತಿದ್ದಂತೆ ವಂಚನೆಗೊಳಗಾದ ವ್ಯಕ್ತಿ ತಕ್ಷಣ ಪೊಲೀಸ್ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.


Click it and Unblock the Notifications