ಬೆಂಗಳೂರಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆ ನಾಳೆಯೂ ಎಲ್ಲ ಶಾಲಾಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ. ಒಂದು ವಾರದಿಂದ ಬೆಂಗಳೂರಿನ ಜನಕ್ಕೆ ಮಳೆ ಕಾಟ ನೀಡುತ್ತಿದ್ದು, ಈ ವಾರವಿಡೀ ಹೆಚ್ಚು ಮಳೆಯಾಗುವ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆ ಮಾಹಿತಿ ಪಡೆದು ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ನಾಳೆ ಬೆಂಗಳೂರು ವ್ಯಾಪ್ತಿಯಲ್ಲಿ ಭಾರಿ ಮಳೆಯ ಮುನ್ಸೂಚನೆಯ ಹಿನ್ನೆಲೆ ಆರೆಂಜ್ ಅಲರ್ಟ್ ಕೂಡ ಘೋಷಣೆಯಾಗಿದೆ. ಹಾಗಾಗಿ ಯಾವುದೇ ಅನಾಹುತಗಳು ನಡೆಯದಿರಲಿ ಎಂಬ ಕಾರಣಕ್ಕೆ ಎಲ್ಲ ಶಾಲೆಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಜಗದೀಶ್ ಅವರ ಆದೇಶ ಹೊರಡಿಸಿದ್ದಾರೆ.

ಅದರಂತೆ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಎಲ್ಲ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಖಾಸಗಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ನೀಡಿ ಆದೇಶಲಾಗಿದೆ. ಇದಕ್ಕೆ ಪರ್ಯಾಯವಾಗಿ ವಾರಾಂತ್ಯದಲ್ಲಿ ತರಗತಿಗಳನ್ನು ನಡೆಸುವಂತೆಯೂ ಸೂಚಿಸಲಾಗಿದೆ.
ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಪೊಲೀಸರು ಸೈನಿಕರಂತೆ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ರಸ್ತೆಗಳು ಜಲಾವೃತವಾಗಿ, ಸಂಚಾರ ನಿರ್ವಹಣೆ ಜೊತೆಗೆ ವಾಟರ್ ಲಾಗಿಂಗ್ ಸಮಸ್ಯೆಯನ್ನು ಪೊಲೀಸರೇ ನಿವಾರಿಸುತ್ತಿದ್ದಾರೆ. ಬಿಬಿಎಂಪಿಯು ನಿರ್ಲಕ್ಷ್ಯ ವಹಿಸಿದ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ ಎಂದು ಸಿಟಿಜನ್ ಮೂವ್‌ಮೆಂಟ್ ಈಸ್ಟ್ ಬೆಂಗಳೂರು ಶ್ಲಾಘಿಸಿದೆ.
ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನರಿಗೆ ಸಮಸ್ಯೆ ಎದುರಾದರೆ ಬಿಬಿಎಂಪಿಯ ಉಚಿತ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದಾಗಿದೆ. ಇದಕ್ಕಾಗಿ ಬೆಂಗಳೂರಿನ ಎಂಟು ವಲಯಗಳ ಸಹಾಯವಾಣಿ ಆರಂಭಿಸಲಾಗಿದೆ.

ಬೆಂಗಳೂರಿನ ಯಲಹಂಕ ವಲಯದ ಕೋಗಿಲು ಕ್ರಾಸ್-ಸರ್ವಿಸ್ ರಸ್ತೆಯಿಂದ ಐಎಎಫ್ ಕಡೆಗಿನ ರಸ್ತೆಯಲ್ಲಿ ಭಾರಿ ಪ್ರಮಾಣದ ನೀರು ನಿಂತು ಸಂಚಾರಕ್ಕೆ ಸಮಸ್ಯೆಯಾಗಿದೆ. ಈ ಭಾಗದ ರಸ್ತೆಯನ್ನು ಮುಚ್ಚಲಾಗಿದೆ ಎಂದು ಬೆಂಗಳೂರು ನಗರ ಸಂಚಾರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಈ ಸ್ಥಳದಲ್ಲಿ ಇಂದು ಮಂಗಳವಾರ ಬೆಳಗ್ಗೆಯಿಂದಲೇ ಜನರ ರಕ್ಷಣಾ ಕಾರ್ಯ ನಡೆದಿದೆ. ಇಲ್ಲಿನ ಕೆರೆ ಕೋಡಿ ಹರಿದು ಈ ಅವಾಂತರ ಸೃಷ್ಟಿಯಾಗಿದೆ.
ತಿಂಡ್ಲು ರಸ್ತೆಯ ಬಸವ ಸಮಿತಿ ಹಾಗೂ ಕೇಂದ್ರಿಯ ವಿಹಾರ್ ಅಪಾರ್ಟ್ಮೆಂಟ್‌ನಲ್ಲಿ ಒಂದು ಅಗ್ನಿ ಶಾಮಕ ವಾಹನ ನಿಲ್ಲಿಸಲಾಗಿದೆ. ಮಳೆ ನೀರು ತೆಗೆಯಲು, 15 ಬೋಟ್, ಟಾಟಾ ನಗರದಲ್ಲಿ ಒಂದು ಬೋಟ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿನ ಜನರಿಗೆ ಕುಡಿಯುವ ನೀರು ಹಾಗೂ ಆಹಾರ ಪೊಟ್ಟಣಗಳನ್ನು ಹಂಚಲಾಗುತ್ತಿದೆ. ಯಲಹಂಕದಲ್ಲಿ 1500 ನೀರಿನ ಬಾಟಲ್ ಹಾಗೂ ಬ್ಯಾಟರಾಯನಪುರದಲ್ಲಿ 2,000 ನೀರಿನ ಬಾಟಲ್ ವಿತರಿಸಲಾಗಿದೆ. ಈ ಪ್ರದೇಶಗಳಲ್ಲಿ ಊಟ ಹಾಗೂ ಟಿಫನ್ ನೀಡಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


Click it and Unblock the Notifications