ಭಾರತೀಯರಿಗೆ ಚಿನ್ನ ಎಂದರೆ ಅತಿಯಾದ ಮೋಹ..ಚಿನ್ನ ಕೇವಲ ಅಲಂಕಾರಕ್ಕೆ ಮಾತ್ರವಲ್ಲ ಹೂಡಿಕೆಯಾಗಿಯೂ, ಸಂಪ್ರದಾಯ ಪಾಲಿಸಲು ಕೊಂಡುಕೊಳ್ಳುತ್ತಾರೆ. ನಮ್ಮ ಸಂಸ್ಕೃತಿಯಲ್ಲಿ ಚಿನ್ನಕ್ಕೆ ಮಹತ್ವದ ಸ್ಥಾನವಿದೆ. ಮದುವೆಗಳು, ಹಬ್ಬಗಳು ಮತ್ತು ಇತರ ಶುಭ ಸಮಾರಂಭಗಳಲ್ಲಿ ಚಿನ್ನವನ್ನು ಕೊಡುವುದು ಮತ್ತು ಪಡೆಯುವುದು ಒಂದು ಸಂಪ್ರದಾಯವಾಗಿದೆ.

ಬಂಗಾರ ಒಂದು ರೀತಿ ಕಷ್ಟಕಾಲದಲ್ಲಿ ಅಪದ್ಬಾಂದವ ಇದ್ದಂತೆ. ಕಷ್ಟದ ಸಮಯದಲ್ಲಿ, ತುರ್ತು ಸಂದರ್ಭಗಳಲ್ಲಿ ಚಿನ್ನವು ಬಹಳಷ್ಟು ಜನರಿಗೆ ಆರ್ಥಿಕ ನೆರವು ನೀಡುತ್ತದೆ. ಸಾಲಕ್ಕಾಗಿ ಯಾರ ಕೈ ಚಾಚುವ ಬದಲು ಬ್ಯಾಂಕ್ ಗೆ ತೆರಳಿ ಅಡವಿಟ್ಟರೆ ಅಥವಾ ಚಿನ್ನದಂಗಡಿಗೆ ತೆರಳಿ ಮಾರಾಟ ಮಾಡಿದ್ರೆ ಹಣವನ್ನು ಪಡೆಯಬಹುದು. ಹೀಗಾಗಿ, ಬಂಗಾರ ನಿಜಕ್ಕೂ ಕಷ್ಟಕಾಲದ ಬಂಧುವಿನಂತೆ ನೆರವಿಗೆ ಬರುತ್ತದೆ. ಆದರೆ ಈ ಚಿನ್ನ ಮಾರಾಟ ಅಥವಾ ಅಡವಿಡುವುದು ಅಂದ್ರೆ ತತ್ ಕ್ಷಣ ಆಗುವ ಕೆಲಸವಲ್ಲ. ಬ್ಯಾಂಕ್ ಆದ್ರೂ ಸರಿ ಚಿನ್ನದ ಮಳಿಗೆಯಾದ್ರೂ ಸರಿ ಅದರ ಶುದ್ದತೆ ಪರೀಕ್ಷಿಸಿ, ಪೇಪರ್ ವರ್ಕ್ ಮುಗಿಸಿ ಹಣ ಪಡೆಯಲು ದಿನಪೂರ್ತಿ ಓಡಾಟ ಮಾಡಬೇಕಾಗುತ್ತದೆ. ಮಾರಾಟ ತಂತ್ರದ ಸಂಪ್ರದಾಯಿಕ ಮಾರ್ಗವನ್ನು ಬಿಟ್ಟು ತಂತ್ರಜ್ಞಾನದ ಅದ್ಭುತ ಸಮ್ಮಿಲನದಲ್ಲಿ, ಚೀನಾದ ಶಾಂಘೈನಲ್ಲಿ ಚಿನ್ನದ ಎಟಿಎಂ ಅನ್ನು ಪರಿಚಯಿಸಲಾಗಿದೆ. ಇದು ಬಳಕೆದಾರರಿಗೆ ತಮ್ಮ ಆಭರಣಗಳನ್ನು ಮಾರಾಟ ಮಾಡಲು ಮತ್ತು ತಕ್ಷಣವೇ ಹಣವನ್ನು ಪಡೆಯಲು ಅನುವು ಮಾಡಿಕೊಡುತ್ತದೆ.!
ಒಂಥರಾ ವಿಚಿತ್ರ ಅನ್ನಿಸಿದ್ರೂ, ಈ ವಿಚಾರ ನಿಜ. ಕಿಂಗ್‌ಹುಡ್ ಗ್ರೂಪ್ ಸಂಸ್ಥೆಯಿಂದ ಅಭಿವೃದ್ಧಿಪಡಿಸಲಾದ ಈ ಸ್ಮಾರ್ಟ್ ಗೋಲ್ಡ್ ಎಟಿಎಂ ಯಂತ್ರವನ್ನು ಶಾಂಘೈನ ಮಾಲ್ ನಲ್ಲಿ ಒಂದರಲ್ಲಿ ಸ್ಥಾಪಿಸಲಾಗಿದೆ. ಯಾವುದೇ ಕಾಗದಪತ್ರಗಳ ತೊಂದರೆ ಇಲ್ಲದೆ, ಕಿರಿಕಿರಿ ಮುಕ್ತವಾಗಿ ಚಿನ್ನ ಮಾರಾಟ ಮಾಡುವ ಕಾರಣ ಚಿನ್ನದ ಎಟಿಎಂ ಯಂತ್ರ ಬಹಳಷ್ಟು ಜನಪ್ರಿಯವಾಗಿದೆ.
ಕಾರ್ಯ ನಿರ್ವಹಣೆ ಹೇಗೆ?
ಸ್ಮಾರ್ಟ್ ಗೋಲ್ಡ್ ಎಟಿಎಂ ಯಂತ್ರವು ಆಧುನಿಕ ತಂತ್ರಜ್ಞಾನ ಬಳಸಿ ಚಿನ್ನದ ಆಭರಣದ ಶುದ್ಧತೆ ಎಷ್ಟಿದೆ ಮತ್ತು ಎಷ್ಟು ತೂಕ ಇದೆ ಎಂದು ತಕ್ಷಣವೇ ಪರೀಕ್ಷಿಸುತ್ತದೆ. ಪರೀಕ್ಷೆ ಮುಗಿದ ಮೇಲೆ, ಹೆಚ್ಚಿನ ಭದ್ರತೆಗಾಗಿ ಚಿನ್ನವನ್ನು ಎಟಿಎಂನಲ್ಲೇ ಕರಗಿಸುತ್ತಾರೆ. ನಿಮ್ಮ ಚಿನ್ನವು ಯಂತ್ರದ ನಿಯಮಗಳ ಪ್ರಕಾರ ಇದ್ದರೆ ಅಂದರೆ ಕನಿಷ್ಠ 50% ಶುದ್ಧತೆಯೊಂದಿಗೆ ಮೂರು ಗ್ರಾಂಗಳಿಗಿಂತ ಹೆಚ್ಚು ತೂಕದ ಚಿನ್ನದ ವಸ್ತು ಇದ್ದರೆ ಶುದ್ದತೆ ಪರಿಶೀಲಿಸಿ ನಿಮಗೆ ಬೆಲೆ ತಿಳಿಸುತ್ತದೆ. ಎಟಿಎಂ ಒಳಗೆ ಹಾಕಿದಂತಹ ಚಿನ್ನವನ್ನು ೧೨೦೦ ಡಿಗ್ರಿಯಲ್ಲಿ ಈ ಯಂತ್ರ ಕರಗಿಸುತ್ತದೆ. ನಿಮಗೆ ಒಪ್ಪಿಗೆ ಇದ್ದರೆ ಎಲ್ಲಾ ಪ್ರೋಸೀಜರ್ ಮುಗಿಸಿ, ಹಣವನ್ನು ನೇರವಾಗಿ ಬಳಕೆದಾರರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಒಟ್ಟಾರೆ 30 ನಿಮಿಷಗಳಲ್ಲಿ ಯಾವುದೇ ದಾಖಲೆಗಳ ಅಗತ್ಯವಿಲ್ಲದೆ ಚಿನ್ನವನ್ನು ಸ್ವೀಕರಿಸಿ ನಿಮಗೆ ನೇರ ಪಾವತಿ ಮಾಡುತ್ತದೆ.
ಮಾರುಕಟ್ಟೆಯಲ್ಲಿನ ಚಿನ್ನದ ಬೆಲೆಗಿಂತ ಕೊಂಚ ಕಡಿಮೆ ದರದಲ್ಲಿ ಚಿನ್ನ ಖರೀದಿಸಿದ್ರೂ ಸುಲಭವಾಗಿ ಚಿನ್ನ ಮಾರಾಟ ಮಾಡಬಹುದಾದ ಕಾರಣ ಗ್ರಾಹಕರು ಇದರತ್ತ ಮುಗಿಬೀಳುತ್ತಿದ್ದಾರೆ. ಚೈನಾ ಟೈಮ್ಸ್.ಕಾಮ್ ಪ್ರಕಾರ, ಮೇ ತಿಂಗಳವರೆಗೆ ಯಂತ್ರವನ್ನು ಬಳಸಲು ಅಪಾಯಿಂಟ್‌ಮೆಂಟ್‌ಗಳು ತುಂಬಿಹೋಗಿದ್ದುಇದರಿಂದ ಈ ಯಂತ್ರಕ್ಕೆ ಎಷ್ಟೊಂದು ಬೇಡಿಕೆ ಇದೆ ಎಂದು ತಿಳಿಯುತ್ತದೆ.
ಶಾಂಘೈ ಗೋಲ್ಡ್ ಅಸೋಸಿಯೇಷನ್‌ನ ಕ್ಸು ವೀಕ್ಸಿನ್ ಪ್ರಕಾರ, ಈ ಸ್ಮಾರ್ಟ್ ಚಿನ್ನದ ಎಟಿಎಂಗಳನ್ನು ಜಾರಿಗೆ ತಂದಿರುವುದು ಮುಖ್ಯವಾಗಿ ಹಳೆಯ ಚಿನ್ನವನ್ನು ಮರುಬಳಕೆ ಮಾಡುವುದಕ್ಕಾಗಿ ಎಂದಿದ್ದಾರೆ. ಚಿನ್ನದ ಬೆಲೆ ಜಾಸ್ತಿಯಾಗಿರುವುದರಿಂದ, ಸಾರ್ವಜನಿಕರಲ್ಲಿ ತಮ್ಮ ಬಳಿ ಇದ್ದ ಆಭರಣಗಳನ್ನು ಮಾರಿ ಹಣ ಪಡೆದುಕೊಳ್ಳಲು ಬಯಸುತ್ತಿದ್ದಾರೆ. ಚಿನ್ನದ ಬೆಲೆ ಏರುತ್ತಿರುವುದಕ್ಕೆ ಕಾರಣ ಕೇಂದ್ರ ಬ್ಯಾಂಕುಗಳು ಮತ್ತು ದೊಡ್ಡ ಹೂಡಿಕೆದಾರರು ಹೆಚ್ಚು ಚಿನ್ನವನ್ನು ಕೊಳ್ಳುತ್ತಿರುವುದು. ಜಗತ್ತಿನಾದ್ಯಂತ ಚಿನ್ನದ ಬೆಲೆ ಏರುತ್ತಿರುವಾಗ, ಕೇವಲ ಚೀನಾದಲ್ಲಿ ಮಾತ್ರವಲ್ಲದೆ ಭಾರತದಂತಹ ದೊಡ್ಡ ಮಾರುಕಟ್ಟೆಗಳಲ್ಲೂ ಹೂಡಿಕೆ ಮತ್ತು ಮರುಮಾರಾಟ ಮಾಡುವ ಆಸಕ್ತಿ ಹೆಚ್ಚಾಗಿದೆ. ಇದು ಚಿನ್ನದ ವ್ಯಾಪಾರದಲ್ಲಿ ಹೊಸ ತಂತ್ರಜ್ಞಾನ ಮತ್ತು ತಕ್ಷಣದ ಹಣ ಪಡೆಯುವ ವಿಧಾನಗಳ ಕಡೆಗೆ ಬದಲಾವಣೆಯನ್ನು ತೋರಿಸುತ್ತದೆ.


Click it and Unblock the Notifications