ನವದೆಹಲಿ, ಮಾರ್ಚ್ 19: ಆಧಾರ್ ಕಾರ್ಡ್ ವಿವರಗಳನ್ನು ಉಚಿತವಾಗಿ ಅಪ್ ಡೇಟ್ ಮಾಡುವ ಕಾಲಮಿತಿಯನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ಜೂನ್ 14, 2024 ರವರೆಗೆ ಯಾವುದೇ ಶುಲ್ಕವಿಲ್ಲದೆ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಬಹುದು. ಮೊದಲು ಈ ಗಡುವು ಮಾರ್ಚ್ 14ರವರೆಗೆ ನಿಗದಿಯಾಗಿತ್ತು. ಈಗ ಸರ್ಕಾರ ಮತ್ತೆ ಈ ಅವಧಿಯನ್ನು ಮೂರು ತಿಂಗಳವರೆಗೆ ವಿಸ್ತರಿಸಿದೆ.
ಹೀಗಾಗಿ ಈ ಸೇವೆಯು ಜೂನ್ 14 ರವರೆಗೆ myadhaar ಪೋರ್ಟಲ್‌ನಲ್ಲಿ ಲಭ್ಯವಿದೆ ಎಂದು UIDAI ತಿಳಿಸಿದೆ. ಯಾರಿಗಾದರೂ ತಮ್ಮ ವಿವರಗಳನ್ನು ನವೀಕರಿಸಲು, ನೀವು ವೆಬ್‌ಸೈಟ್‌ಗೆ ಭೇಟಿ ನೀಡಬೇಕಾಗುತ್ತದೆ.

ಹತ್ತು ವರ್ಷ ಹಿಂದೆ ತಮ್ಮ ಆಧಾರ್ ಕಾರ್ಡ್‌ಗಳನ್ನು ಪಡೆದವರಿಗೆ ಆಧಾರ್ ಕಾರ್ಡ್ ಅನ್ನು ಪರಿಷ್ಕರಣೆ ಮಾಡಲು ಮರೆಯದಿರಿ ಎಂದು ಸರ್ಕಾರ ಜನತೆಗೆ ಮನವಿ ಮಾಡಿದೆ. ಸಾಮಾನ್ಯವಾಗಿ ಆಧಾರ್ ಅಪ್ ಡೇಟ್ ಮಾಡಲು 50 ರೂ ಶುಲ್ಕ ತಗಲುತ್ತದೆ. ಆದರೆ ಆಧಾರ್‌ನ ಅಧಿಕೃತ https://myaadhaar.uidai.gov.in/ ವೆಬ್‌ಸೈಟ್ ಮೂಲಕ ಅಪ್ ಡೇಟ್ ಮಾಡಿದರೆ ಉಚಿತವಾಗುತ್ತದೆ.
ಆಧಾರ್ ಕಾರ್ಡ್ ಅನ್ನು ಹೇಗೆ ನವೀಕರಿಸುವುದು ?:
-ಮೊದಲನೆಯದಾಗಿ UIDAI ನ ಅಧಿಕೃತ ವೆಬ್‌ಸೈಟ್ https://myaadhaar.uidai.gov.in/ ಗೆ ಹೋಗಿ .
- ಈಗ ನಿಮ್ಮ ಆಧಾರ್ ಸಂಖ್ಯೆ ಮತ್ತು ನೀಡಿರುವ ಕ್ಯಾಪ್ಚಾವನ್ನು ಇಲ್ಲಿ ನಮೂದಿಸಿ.
- ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದಿರುವ ಆಧಾರ್ ಸಂಖ್ಯೆ ಮತ್ತು OTP (ಒಂದು ಬಾರಿಯ ಪಾಸ್‌ವರ್ಡ್) ಬಳಸಿ ಲಾಗ್ ಇನ್ ಮಾಡಿ.
- ಈಗ 'Update Demographics Data' ಆಯ್ಕೆಯನ್ನು ಆರಿಸಿ.
- ಸಂಬಂಧಿತ ಆಯ್ಕೆಯನ್ನು ಆರಿಸಿದ ನಂತರ, ' Proceed' ಕ್ಲಿಕ್ ಮಾಡಿ.
- ನೀವು ಅಪ್ ಡೇಟ್ ಮಾಡಲು ಇಚ್ಚಿಸುವ ಯಾವುದೇ ಮಾಹಿತಿಗೆ ಸಂಬಂಧಿಸಿದ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ.
- Submit ಬಟನ್ ಕ್ಲಿಕ್ ಮಾಡುವ ಮೊದಲು ನೀಡಿರುವ ಮಾಹಿತಿಯನ್ನು ಪರಿಶೀಲಿಸಿ.
ಈ ವೇಳೆ ನೀಡಲಾಗುವ ಸರ್ವೀಸ್ ರಿಕ್ವೆಸ್ಟ್ ನಂಬರ್ ನೋಟ್ ಮಾಡಿಟ್ಟುಕೊಳ್ಳಿ. ಇದರಿಂದ ಅಪ್‌ಡೇಟ್ ಪ್ರೊಸೆಸಿಂಗ್ ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ.
ನಿಮ್ಮ ಆನ್‌ಲೈನ್ ಆಧಾರ್ ಅಪ್‌ಡೇಟ್ ಪ್ರಕ್ರಿಯೆ ಪೂರ್ಣವಾಗುತ್ತದೆ.
ಸಲ್ಲಿಸಬಹುದಾದ ದಾಖಲೆಗಳು:
-ಆಧಾರ್ ಪೋರ್ಟಲ್ ನವೀಕರಿಸಲು ಅಗತ್ಯವಿರುವ ದಾಖಲೆಗಳ ವಿವರವಾದ ಪಟ್ಟಿಯನ್ನು ನೀಡುತ್ತದೆ.
-ಗುರುತಿನ ಮತ್ತು ವಿಳಾಸ ಇವೆರಡ ಪುರಾವೆಯಾಗಿ,, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಸರ್ಕಾರ ನೀಡಿದ ಗುರುತಿನ ಚೀಟಿ/ ವಿಳಾಸವನ್ನು ಹೊಂದಿರುವ ಪ್ರಮಾಣಪತ್ರ ಮತ್ತು ಭಾರತೀಯ ಪಾಸ್‌ಪೋರ್ಟ್ ಅನ್ನು ಸಲ್ಲಿಸಬಹುದು.
-ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಹೈಸ್ಕೂಲ್ ಮಾರ್ಕ್ ಶೀಟ್/ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ ಜೊತೆಗೆ ಫೋಟೋ ಮತ್ತು ಸರ್ಕಾರ ನೀಡಿದ ಗುರುತಿನ ಚೀಟಿ/ ಪ್ರಮಾಣಪತ್ರ ಕೂಡ ಗುರುತಿನ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ.
-ವಿಳಾಸದ ಮಾನ್ಯ ಪುರಾವೆಯನ್ನು ತೋರಿಸಲು ವಿದ್ಯುತ್/ ನೀರು/ ಗ್ಯಾಸ್ ಬಿಲ್‌ಗಳನ್ನು (ಕಳೆದ 3 ತಿಂಗಳುಗಳು), ಬ್ಯಾಂಕ್ / ಪೋಸ್ಟ್ ಆಫೀಸ್ ಪಾಸ್‌ಬುಕ್, ಬಾಡಿಗೆ / ಗುತ್ತಿಗೆ / ರಜೆ ಮತ್ತು ಪರವಾನಗಿ ಒಪ್ಪಂದವನ್ನು ವಿಳಾಸದ ಪುರಾವೆಯಾಗಿ ಮಾತ್ರ ಸಲ್ಲಿಸಬಹುದು.


Click it and Unblock the Notifications