ನವದೆಹಲಿ, ಜುಲೈ 19: ಸಾಮಾನ್ಯವಾಗಿ ಮಕ್ಕಳು ಕಲಿಕೆಗಿಂತ ಹೆಚ್ಚಾಗಿ ತಿನ್ನುವುದು, ಆಟವಾಡುವುದರತ್ತ ಆಸಕ್ತಿಯನ್ನು ಹೊಂದಿರುತ್ತಾರೆ. ಆದರೆ, ಇಲ್ಲೊಬ್ಬ ಯುವಕ ತನ್ನ ಬಾಲ್ಯ ಜೀವನದಲ್ಲಿ ಅದ್ಭುತ ಸಾಧನೆಯನ್ನು ಮಾಡುವ ಮೂಲಕ ಗಮನಸೆಳೆದಿದ್ದಾರೆ. ಅವರು ಬೇರೆ ಯಾರು ಅಲ್ಲ ಆದಿತ್ಯನ್ ರಾಜೇಶ್. ಅವರು ಒಂದು ಆಪ್ ಅನ್ನು ನಿರ್ಮಿಸುವ ಮೂಲಕ ಹೊಸ ದಾಖಲೆಯನ್ನು ಮಾಡಿದ್ದಾರೆ. ಅವರು ಈಗ ಅತಿ ಕಿರಿಯ ಸಿಇಒ ಆಗಿ ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
ಆದಿತ್ಯನ್ ರಾಜೇಶ್ ಅವರು ಮೂಲತಃ ಕೇರಳದವರು. ವಿಶೇಷವೆಂದರೆ ರಾಜೇಶ್ ಅವರು ಕೇವಲ 9 ವರ್ಷ ವಯಸ್ಸು ಇರುವಾಗಲೇ ಮೊಬೈಲ್ ಅಪ್ಲಿಕೇಷನ್‌ನನ್ನು ಸಿದ್ಧಪಡಿಸಿದ್ದಾರೆ. ಪ್ರಸ್ತುತ ಅವರು ದುಬೈನಲ್ಲಿ ಉದ್ಯಮ ನಡೆಸುತ್ತಿದ್ದಾರೆ.

ರಾಜೇಶ್ ಅವರು ಮೊಬೈಲ್ ಅಪ್ಲಿಕೇಷನ್‌ನನ್ನು ಆಪ್ ಸ್ಟೋರ್‌ಗೆ ಪರ್ಯಾಯವಾದ ಅಪ್ಟೊಡೈನಲ್ಲಿ ಪಬ್ಲಿಷ್ ಮಾಡಿದ್ದಾರೆ. ಅವರು ಗ್ರಾಹಕರಿಗಾಗಿ ವೆಬ್‌ಸೈಟ್ ಹಾಗೂ ಲೋಗೋಗಳನ್ನು ನಿರ್ಮಿಸಿದ ಬಳಿಕ ನಿಧಾನವಾಗಿ 2017ರ ಡಿಸೆಂಬರ್ 17ರಂದು ಟ್ರಿನೆಟ್ ಸೊಲೂಷನ್ಸ್ ಅವನ್ನು ಸ್ಥಾಪಿಸಿದ್ದಾರೆ. ಆಗ ಅವರಿಗೆ ಕೇವಲ 13 ವರ್ಷ ವಯಸ್ಸು.
ಖಲೀಜ್ ಟೈಮ್ಸ್‌ಗೆ ನೀಡಿರುವ ಸಂದರ್ಶನದ ಪ್ರಕಾರ, ಆದಿತ್ಯನ್ ಅವರು ತಮ್ಮ 5ನೇ ವಯಸ್ಸಿನಲ್ಲಿಯೇ ಕಂಪ್ಯೂಟರ್ ಕೆಲಸವನ್ನು ಪ್ರಾರಂಭಿಸಿದ್ದರು. "ನಾನು ಕೇರಳದ ತಿರುವೆಲ್ಲಾದಲ್ಲಿ ಹುಟ್ಟಿದ್ದು ನನಗೆ ಕೇವಲ ಐದು ವರ್ಷಗಳಿರುವಾಗ ನಮ್ಮ ಕುಟುಂಬವು ದುಬೈಗೆ ಶಿಫ್ಟ್ ಆಗಿತ್ತು. ನನ್ನ ತಂದೆಯು ನನಗೆ ತೋರಿಸಿದ ಮೊದಲ ವೆಬ್‌ಸೈಟ್ ಬಿಬಿಸಿ ಟೈಪಿಂಗ್ ಆಗಿದ್ದು, ಅದರಲ್ಲಿ ವಿದ್ಯಾರ್ಥಿಗಳು ಟೈಪಿಂಗ್ ಕಲಿಯಬಹುದಿತ್ತು" ಎನ್ನುತ್ತಾರೆ.
ಆ ಸಮಯದಲ್ಲಿ ಆದಿತ್ಯನ್‌ಗೆ ಹೆಚ್ಚಿನ ಸ್ನೇಹಿತರು ಇರಲಿಲ್ಲ. ಈ ಕಾರಣದಿಂದ ಸ್ನೇಹಿತರ ಬದಲಿಗೆ ಕಂಪ್ಯೂಟರ್ ಹಾಗೂ ತಂತ್ರಜ್ಞಾನದ ಕಡೆಗೆ ಹೆಚ್ಚು ಆಕರ್ಷಿತರಾಗಿ ಹೊಸ ಹೊಸ ವಿಚಾರಗಳನ್ನು ಕಲಿಯಲಾರಂಭಿಸಿದ್ದರು. "ನನಗೆ ಆರು ವರ್ಷ ವಯಸ್ಸು ಇರುವಾಗ ನಾನು ಹೆಚ್ಚಿನ ಸಮಯವನ್ನು ಯೂಟ್ಯೂಬ್‌ನಲ್ಲಿ ಕಳೆಯುತ್ತಿದ್ದೆ. ಕಾರ್ಟೂನ್ ಜತೆಗೆ ಸ್ಪೆಲ್ಲಿಂಗ್ ಬೀ ಗೇಮ್ಸ್ ಆಡುತ್ತಾ ಇರುತ್ತಿದ್ದೆ. ಆ ಮೂಲಕ ಕಂಪ್ಯೂಟರ್ ಹಾಗೂ ಟೆಕ್ನಾಲಜಿ ಕಡೆಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದೆ" ಎನ್ನುತ್ತಾರೆ ಆದಿತ್ಯನ್.
ಆನಂತರದಲ್ಲಿ ಸ್ವಂತ ಅಪ್ಲಿಕೇಷನ್ ಮಾಡುವ ಬಗ್ಗೆ ಗಮನಹರಿಸಲಾರಂಭಿಸಲಾಗಿದೆ. ಮುಂದೆ ಟ್ರಿನೆಟ್ ಸೊಲ್ಯೂಷನ್ಸ್ ಕಂಪೆನಿಯನ್ನು ತಮ್ಮ ಬಾಲ್ಯದ ಮೂರು ಸ್ನೇಹಿತರ ಜತೆ ಸೇರಿಕೊಂಡು ಸ್ಥಾಪಿಸಿದರು. ಮುಂದೆ, ಆದಿತ್ಯನ್ ಅವರು ಐಒಎಸ್ ಆಪ್‌ಗಳನ್ನು ಗ್ಲೋಬಲ್ ಮಾರುಕಟ್ಟೆ ಆಧರಿಸಿ ನಿರ್ಮಿಸಲಾರಂಭಿಸಿದರು. A Craze ಎನ್ನುವುದು ಅವರ ಯೂಟ್ಯೂಪ್ ಚಾನೆಲ್‌ನ ಹೆಸರಾಗಿದ್ದು ಅದರಲ್ಲಿ ವ್ಲಾಗ್‌ಗಳನ್ನು ಪೋಸ್ಟ್ ಮಾಡುತ್ತಾರೆ. ಇನ್ನೊಂದೆಡೆ ಅವರು ಟ್ಯಾಂಗ್‌ಲೆಡ್ ಎಂಬ ಬಿಸಿನೆಸ್‌ನ ಸಹ ಸ್ಥಾಪಕರಾಗಿದ್ದಾರೆ.
ಈ ವರ್ಷ ಅವರು ಪದವಿಯನ್ನು ಪಡೆದುಕೊಂಡ ಬಳಿಕ ಪ್ರಸ್ತುತ ಅವರು ಸೆಕ್ಯೂರ್ ಮೈ ಸ್ಕಾಲರ್‌ಶಿಪ್‌ನಲ್ಲಿ ಇಂಟರ್ನಿಯಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿ ಅವರು ಅದರ ಸ್ಥಾಪಕರನ್ನು ಒಂದು ಸೇವಾಧಾರಿತ ಕಂಪೆನಿಯಿಂದ ಪ್ರಾಡೆಕ್ಟ್ ಆಧಾರಿತ ಉದ್ಯಮಶೀಲರನ್ನಾಗಿ ಮಾಡುವುದಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ.


Click it and Unblock the Notifications