ಮೊಟ್ಟಮೊದಲ ಬಾರಿಗೆ, ಮಂಗಳವಾರ 10 ಗ್ರಾಂ ಶುದ್ಧ ಚಿನ್ನದ ಬೆಲೆ ₹1 ಲಕ್ಷವನ್ನು ದಾಟಿ ಹೊಸ ಮೈಲುಗಲ್ಲನ್ನು ಸ್ಥಾಪಿಸಿದೆ. ಇದು ಕೇವಲ ಬೆಲೆಯ ಏರಿಕೆಯಲ್ಲ, ಬದಲಿಗೆ ಆರ್ಥಿಕ ಇತಿಹಾಸದಲ್ಲಿ ಒಂದು ಹೊಸ ದಾಖಲೆಯೂ ಹೌದು. ಇಂದು ಕೊಂಚ ದರ ಇಳಿಕೆ ಕಂಡರೂ ಮತ್ತೆ ಚಿನ್ನದ ಬೆಲೆ ಏರುವುದಿಲ್ಲ ಎಂದು ಹೇಳುವಂತಿಲ್ಲ. ಸದ್ಯ ದೇಶದಲ್ಲಿ ಮದುವೆ ಸೀಸನ್ ನಡೆಯುತ್ತಿದ್ದು, ಈ ಸಮಯದಲ್ಲಿ ಚಿನ್ನದ ಬೆಲೆ ಗಗನಕ್ಕೇರಿರುವುದು ಆಭರಣಗಳನ್ನು ಕೊಳ್ಳುವವರಿಗೆ ದೊಡ್ಡ ಹೊಡೆತ ನೀಡಿದೆ. ಸಾಮಾನ್ಯ ಜನರಿಗೆ ಚಿನ್ನ ಕೊಳ್ಳುವುದು ಈಗ ಗಗನಕುಸುಮದಂತಾಗಿದೆ.
ಇದರೊಂದಿಗೆ ಕೆಲವೇ ದಿನಗಳಲ್ಲಿ ಅಕ್ಷಯ ತೃತೀಯ ಹಬ್ಬ ಬರುತ್ತಿದೆ. ಈ ಸಂದರ್ಭದಲ್ಲಿ ಚಿನ್ನ ಕೊಳ್ಳುವುದು ಮಂಗಳಕರವೆಂದು ಭಾವಿಸಲಾಗುತ್ತದೆ. ಆದರೆ, ಈಗಿನ ಬೆಲೆಯೇರಿಕೆಯನ್ನು ಗಮನಿಸಿದರೆ, ಹಬ್ಬದ ಹೊತ್ತಿಗೆ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಚಿನ್ನದ ಬೆಲೆ ಏರುತ್ತಲೇ ಇದ್ದರೆ, ಅದು ಕೇವಲ ಶ್ರೀಮಂತರ ಆಸ್ತಿಯಾಗುವ ದಿನಗಳು ದೂರವಿಲ್ಲ.

ಚಿನ್ನದ ಬೆಲೆ ಏರಿಕೆ ನಡುವೆ, ನಟ ಶಕ್ತಿ ಕಪೂರ್ ಅಭಿನಯದ ದಶಕಗಳ ಹಿಂದಿನ ಬಾಲಿವುಡ್ ಚಲನಚಿತ್ರದ ತುಣುಕೊಂದು ಆನ್‌ಲೈನ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ದೃಶ್ಯದಲ್ಲಿ ಶಕ್ತಿ ಕಪೂರ್ ತಮ್ಮ ಪಾತ್ರದಲ್ಲಿ ಚಿನ್ನದ ಬೆಲೆಯ ಭಾರಿ ಏರಿಕೆಯನ್ನು " ವಿಲಕ್ಶಣ ಭವಿಷ್ಯ" ನುಡಿಯುತ್ತಾರೆ. ಅತ್ತಕಡೆ ಚಿನ್ನದ ಬೆಲೆ ನಾಗಾಲೋಟದಲ್ಲಿ ಸಾಗಿದಂತೆ ಇತ್ತ ಭವಿಷ್ಯಗಾರ, ಆರ್ಥಿಕ ದಿವ್ಯಜ್ಞಾನಿ ಎಂದು ಹಾಸ್ಯಾತ್ಮಕವಾಗಿ ಹಾಡಿ ಹೊಗಳುತ್ತಿದ್ದಾರೆ. ಈ ತುಣುಕು ವ್ಯಾಪಕವಾಗಿ ಶೇರ್ ಆಗಿದ್ದು ಚಿನ್ನದ ಬೆಲೆಯ ದಾಖಲೆಯ ಏರಿಕೆಯ ಕುರಿತ ಚರ್ಚೆಗೆ ಲಘು ಹಾಸ್ಯದ ಸ್ಪರ್ಶವನ್ನು ನೀಡಿದೆ.
ಚಿನ್ನದ ಬೆಲೆಯಲ್ಲಿ ಇತ್ತೀಚಿನ ಏರಿಕೆಗೆ ಕಾರಣಗಳು ಹಲವಾರು. ಜಾಗತಿಕ ಆರ್ಥಿಕ ಅನಿಶ್ಚಿತತೆಗಳು, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ದುರ್ಬಲಗೊಳ್ಳುತ್ತಿರುವ ಯುಎಸ್ ಡಾಲರ್ ಸಾಮಾನ್ಯವಾಗಿ ಹೂಡಿಕೆದಾರರನ್ನು ಸುರಕ್ಷಿತ ಆಸ್ತಿಯಾಗಿ ಚಿನ್ನದ ಕಡೆಗೆ ಸೆಳೆಯುತ್ತವೆ. ಇತ್ತೀಚೆಗೆ ಯುಎಸ್ ಮತ್ತು ಚೀನಾ ನಡುವಿನ ವ್ಯಾಪಾರ ಉದ್ವಿಗ್ನತೆ ಮತ್ತು ಯುಎಸ್ ಅಧ್ಯಕ್ಷ ಟ್ರಂಪ್ ಅವರ ಬಡ್ಡಿದರಗಳ ಕುರಿತಾದ ಹೇಳಿಕೆಗಳು ಈ ಪರಿಸ್ಥಿತಿಗೆ ಮತ್ತಷ್ಟು ಕೊಡುಗೆ ನೀಡಿವೆ, ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಗಳನ್ನು ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿಸಿವೆ. ಮಂಗಳವಾರ, ಜೂನ್ 2025 ರ MCX ಚಿನ್ನದ ಫ್ಯೂಚರ್ಸ್ ಒಪ್ಪಂದವು 10 ಗ್ರಾಂಗೆ ₹99,358 ರ ಗರಿಷ್ಠ ಮಟ್ಟವನ್ನು ತಲುಪಿತು, ಆದರೆ GST ಸೇರಿದಂತೆ ಕೆಲವು ಭೌತಿಕ ಮಾರುಕಟ್ಟೆ ಬೆಲೆಗಳು ಈಗಾಗಲೇ ₹1 ಲಕ್ಷದ ಗಡಿಯನ್ನು ದಾಟಿದ್ದವು.
ಚಿನ್ನದ ಬೆಲೆ ಏರಿಕೆಯು ಬಂಗಾರದ ಭವಿಷ್ಯದ ಬಗ್ಗೆ ಚರ್ಚೆಯನ್ನು ತೀವ್ರಗೊಳಿಸಿದೆ. ಆದರೆ, 1989 ರ "ಗುರು" ಚಿತ್ರದ ಒಂದು ದೃಶ್ಯವು ಆನ್‌ಲೈನ್‌ನಲ್ಲಿ ಹಳೆಯ ನೆನಪುಗಳನ್ನು ಮರುಕಳಿಸುವ ಹಾಸ್ಯವನ್ನು ಸೃಷ್ಟಿಸಿದ್ದು ಈ ಚಿತ್ರದಲ್ಲಿ ಶಕ್ತಿ ಕಪೂರ್ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಆ ದೃಶ್ಯದಲ್ಲಿ, ಅವರ ಪಾತ್ರದ ಮೂಲಕ ಚಿನ್ನದ ಬೆಲೆ ₹5,000, ₹10,000, ₹60,000 ಮತ್ತು ಅಂತಿಮವಾಗಿ ಪ್ರತಿ ತೊಲಕ್ಕೆ (11.66 ಗ್ರಾಂ) ₹1 ಲಕ್ಷವನ್ನು ಮುಟ್ಟುತ್ತದೆ ಎಂದು ನಾಟಕೀಯವಾಗಿ ಭವಿಷ್ಯ ನುಡಿಯುತ್ತಾರೆ. ನೆಟ್ಟಿಗರೊಬ್ಬರು ಈ ಬಗ್ಗೆ , ಚಿನ್ನದ ಬೆಲೆ ಊಹಿಸುವ ವಿಶ್ಲೇಷಕರಿಗಿಂತಲೂ ಹಿಂದೆ ಚಿನ್ನದ ಭವಿಷ್ಯದ ಕುರಿತು "ಭವಿಷ್ಯ" ನುಡಿದಿದ್ದಕ್ಕಾಗಿ ಕಪೂರ್ ಅವರನ್ನು "ಭಾರತದ ಮೊದಲ ಅರ್ಥಶಾಸ್ತ್ರಜ್ಞ" ಎಂದು ಕರೆದಿದ್ದಾರೆ.
ಭಾರತದಲ್ಲಿ, ಮಂಗಳವಾರ MCX ನಲ್ಲಿ ಚಿನ್ನದ ಬೆಲೆ ₹1,899 ಅಥವಾ ಸುಮಾರು 2% ರಷ್ಟು ಏರಿಕೆಯಾಗಿ 10 ಗ್ರಾಂಗೆ ₹99,178 ತಲುಪಿದೆ. ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ, 24 ಕ್ಯಾರೆಟ್ ಚಿನ್ನವು ಕಳೆದ ಶುಕ್ರವಾರ 10 ಗ್ರಾಂಗೆ ₹73,350 ತಲುಪಿತು, ಒಂದೇ ದಿನದಲ್ಲಿ ₹1,050 ರಷ್ಟು ತೀವ್ರ ಏರಿಕೆ ಕಂಡಿತು. ಆದರೆ ಬುಧವಾರದ ಚಿನ್ನದ ದರದಲ್ಲಿ ಇಳಿಕೆಯಾಗಿದೆ.


Click it and Unblock the Notifications