ಜನವರಿಯಲ್ಲಿ ಅದಾನಿ ಗ್ರೂಪ್ ವಿರುದ್ಧ ಹಿಂಡನ್‌ಬರ್ಗ್ ಸಂಶೋಧನಾ ವರದಿಯು ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆ ಆರೋಪಗಳನ್ನು ಮಾಡಿದೆ. ಈ ಬಗ್ಗೆ ಸೆಬಿ ತನಿಖೆ ನಡೆಯುತ್ತಿರುವಾಗಲೇ ಅದಾನಿ ಗ್ರೂಪ್ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ. ಗೌತಮ್ ಅದಾನಿ ಕುಟುಂಬವು "ಅಪಾರದರ್ಶಕ" (opaque) ಮಾರಿಷಸ್ ಫಂಡ್‌ಗಳ ಮೂಲಕ ತನ್ನದೇ ಆದ ಕಂಪನಿಗಳಲ್ಲಿ ಹೂಡಿಕೆ ಮಾಡಿದ ಆರೋಪವನ್ನು ಹೊತ್ತಿದೆ.
ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ (ಒಸಿಸಿಆರ್) ತನ್ನ ಇತ್ತೀಚಿನ ಲೇಖನದಲ್ಲಿ ಈ ಬಗ್ಗೆ ವರದಿ ಮಾಡಿದೆ. ಅದಾನಿ ಕುಟುಂಬವೇ ವಿದೇಶಿ ಫಂಡ್‌ಗಳ ಹೆಸರಲ್ಲಿ ತನ್ನ ಗ್ರೂಪ್‌ನ ಕಂಪನಿಗಳಲ್ಲಿಯೇ ಪಾರದರ್ಶಕವಲ್ಲದ ಅಂದರೆ ಅಪಾರದರ್ಶಕವಾಗಿ ಮಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ಹೂಡಿಕೆ ಮಾಡಿದೆ ಒಸಿಸಿಆರ್ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಈ ಫಂಡ್‌ಗಳಲ್ಲಿ ಅದಾನಿ ಕುಟುಂಬದವರು ವ್ಯಾಪಾರ ಪಾಲುದಾರರು ಆಗಿದ್ದಾರೆ ಎಂಬುವುದನ್ನು ಸ್ಪಷ್ಟವಾಗಿ ಬಹಿರಂಗಪಡಿಸಿಲ್ಲ. ಎಲ್ಲವೂ ಅಸ್ಪಷ್ಟವಾಗಿದೆ. ಕಡಲಾಚೆಯ ಹಣಕಾಸು ದಾಖಲೆಗಳನ್ನು ಉಲ್ಲೇಖ ಮಾಡಿ, ಭಾರತದ ಸ್ಟಾಕ್ ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ ಸ್ಟಾಕ್ ಭಾರೀ ಪ್ರಮಾಣದಲ್ಲಿ ಏರಿಕೆಯನ್ನು ಕಂಡಿದ್ದಾಗ, ಅದಾನಿ ಕುಟುಂಬದ ಮಿತ್ರರು ಸ್ಟಾಕ್‌ನಲ್ಲಿ ಹೂಡಿಕೆ ಮಾಡಲು ವರ್ಷಗಳಷ್ಟು ಕಾಲವನ್ನು ತೆಗೆದುಕೊಂಡಿರಬಹುದು ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.
Adani-Hindenburg: ಅದಾನಿ ಪ್ರಕರಣದ ವಿಚಾರಣೆ ಮುಂದೂಡಿದ ಸುಪ್ರೀಂ, ಷೇರು ಹೇಗಿದೆ?
ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ (ಒಸಿಸಿಆರ್) ಆಧಾರಿತ ದಿ ಗಾರ್ಡಿಯನ್ ವರದಿಯ ಪ್ರಕಾರ, ಅದಾನಿ ಅಸೋಸಿಯೇಟ್ಸ್ 2013 ರಿಂದ 2018 ರವರೆಗಿನ ತನ್ನ ಕಂಪನಿಗಳ ಗುಂಪಿನ ಷೇರುಗಳ ಬೆಲೆಗಳನ್ನು ಬೆಂಬಲಿಸಲು ಮಾರಿಷಸ್‌ನಲ್ಲಿ ಬಹಿರಂಗಪಡಿಸದ ಮತ್ತು ಸಂಕೀರ್ಣವಾದ ಕಡಲಾಚೆಯ ಕಾರ್ಯಾಚರಣೆಯನ್ನು ನಿಯಂತ್ರಿಸಿದೆ ಎಂದು ಆರೋಪಿಸಲಾಗಿದೆ.
'ಅಪಾರದರ್ಶಕ' ಮಾರಿಷಸ್ ಫಂಡ್‌ಗಳ ಮೂಲಕ ಎರಡು ಬಾರಿ ವಹಿವಾಟು
ಬಹು ತೆರಿಗೆ ವಿವರ ಮತ್ತು ಆಂತರಿಕ ಅದಾನಿ ಗ್ರೂಪ್ ಇಮೇಲ್‌ಗಳ ಫೈಲ್‌ಗಳ ಒಸಿಸಿಆರ್ ವಿಮರ್ಶೆಯು ಅದಾನಿ ಷೇರುಗಳನ್ನು ಹೂಡಿಕೆದಾರರು ಅಂತಹ ಕಡಲಾಚೆಯ ಫಂಡ್‌ಗಳ ಮೂಲಕ ಎರಡು ಬಾರಿ ಖರೀದಿಸಿದ್ದಾರೆ ಮತ್ತು ಮಾರಾಟ ಮಾಡಿದ್ದಾರೆ ಎಂದು ಬಹಿರಂಗಪಡಿಸುತ್ತದೆ.
ಇನ್ನು ಈ ವರದಿಗೆ ಪ್ರತಿಕ್ರಿಯೆ ನೀಡಿದ ಅದಾನಿ ಗ್ರೂಪ್ ವರದಿಯಿಂದ ತನಿಖೆ ನಡೆಸಲಾದ ಮಾರಿಷಸ್ ಫಂಡ್‌ಗಳನ್ನು ಈಗಾಗಲೇ ಹಿಂಡನ್‌ಬರ್ಗ್ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದೆ. "ಆರೋಪಗಳು ಆಧಾರರಹಿತವಾಗಿದೆ. ಆದರೆ ಹಿಂಡೆನ್‌ಬರ್ಗ್ ಮಾಡಿದ ಆರೋಪಗಳನ್ನೇ ಮತ್ತೆ ಮಾಡಲಾಗಿದೆ," ಎಂದು ಅದಾನಿ ಗ್ರೂಪ್ ಹೇಳಿಕೊಂಡಿದೆ.
ರಹಸ್ಯ ವ್ಯಾಪಾರದಲ್ಲಿ ಸಹೋದರ ವಿನೋದ್ ಅದಾನಿ ಸಂಪರ್ಕ
ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿ ಮಾರಿಷಸ್ ನಿಧಿಗಳ ಮೂಲಕ ರಹಸ್ಯವಾಗಿ ವ್ಯಾಪಾರ ಮಾಡುವಲ್ಲಿ ತೊಡಗಿರುವ ಬಗ್ಗೆ ವರದಿಯು ಸೂಚಿಸಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. ಆದರೆ ಅದಾನಿ ಗ್ರೂಪ್ ಈ ಆರೋಪವನ್ನು ಮಾತ್ರ ತಿರಸ್ಕಾರ ಮಾಡಿದೆ. ಕಂಪನಿಯ "ದಿನನಿತ್ಯದ ವ್ಯವಹಾರಗಳಲ್ಲಿ ವಿನೋದ್ ಅದಾನಿ ಯಾವುದೇ ಪಾತ್ರವನ್ನು ಹೊಂದಿಲ್ಲ," ಎಂದು ಸ್ಪಷ್ಟಪಡಿಸಿದೆ.


Click it and Unblock the Notifications