ಬೆಂಗಳೂರು, ಆಗಸ್ಟ್ 12: ಅದಾನಿ ಸಮೂಹಕ್ಕೆ ಮತ್ತೆ ಮತ್ತೆ ಹಿಂಡೆನ್ ಬರ್ಗ್ ಆಘಾತ ನೀಡುತ್ತಲೇ ಇದೆ. ಅಮೆರಿಕ ಹಿಂಡೆನ್‌ಬರ್ಗ್ ರಿಸರ್ಚ್‌ನ ಹೊಸ ವರದಿಯ ಬಳಿಕ ಅದಾನಿ ಸಮೂಹಕ್ಕೆ ಸೇರಿದ ಬಹುತೇಕ ಷೇರುಗಳು ಸೋಮವಾರ ನಷ್ಟ ಕಂಡವು. ಈ ಹಿಂದೆ 2023ರ ಜನವರಿಯಲ್ಲೂ ಹಿಂಡೆನ್‌ಬರ್ಗ್ ವರದಿ ಹೊರಬಿದ್ದ ಬಳಿಕ ಅದಾನಿ ಷೇರುಗಳು ಭಾರೀ ಕುಸಿತ ಕಂಡಿದ್ದವು. ಸುಮಾರು ಆರು ತಿಂಗಳ ನಂತರದಲ್ಲಿ ಚೇತರಿಕೆ ಹಾದಿಗೆ ಮರಳಿದ್ದವು.
ಈ ಸಂಕಟ ಒಂದು ಕಡೆಯಾಗಿದ್ದರೆ ಅದಾನಿಗೆ ಇನ್ನೊಂದು ಶಾಕ್ ಸಹ ಇದೆ. ಹರಾಜಿನಲ್ಲಿ 5ಜಿ ಸ್ಪೆಕ್ಟ್ರಂ ತರಂಗಾಂತರ ಖರೀದಿ ಮಾಡಿ ಇನ್ನೂ ಅದನ್ನು ಅಳವಡಿಸದೆ ಇರುವ ಅದಾನಿ ಗ್ರೂಪ್ ಕಂಪನಿಗೆ ಕೇಂದ್ರ ದೂರಸಂಪರ್ಕ ಇಲಾಖೆ ಮತ್ತೊಮ್ಮೆ ನೋಟೀಸ್ ಕೊಟ್ಟಿದೆ.

ಭಾರತದಲ್ಲಿ ಕಮರ್ಷಿಯಲ್ ಆಗಿ 5ಜಿ ಸರ್ವಿಸ್ ಅನ್ನು ಇನ್ನೂ ಯಾಕೆ ಜಾರಿಗೆ ತಂದಿಲ್ಲ, ಯಾಕೆ ವಿಳಂಬವಾಗಿದೆ? ಎಂದು ಕೇಳಿ ನೋಟೀಸ್ ಜಾರಿ ಮಾಡಿದೆ. ಸ್ಪೆಕ್ಟ್ರಂ ಹರಾಜಿನಲ್ಲಿ ರೂಪಿಸಲಾದ ನಿಯಮಗಳ ಪ್ರಕಾರ 2024ರ ಅಕ್ಟೋಬರ್ 10ರಷ್ಟರಲ್ಲಿ ಕಮರ್ಷಿಯಲ್ 5ಜಿ ನೆಟ್ವರ್ಕ್ ಅನ್ನು ಕಡ್ಡಾಯವಾಗಿ ಅಳವಡಿಸಬೇಕು. ಇಲ್ಲದಿದ್ದರೆ ಸ್ಪೆಕ್ಟ್ರಂ ನೀಡಲಾಗಿದ್ದನ್ನು ಸರ್ಕಾರ ಹಿಂಪಡೆಯುವ ಸಂಭವ ಇರುತ್ತದೆ.
ಜಿಯೋ ಮತ್ತು ಏರ್ ಟೆಲ್ ಮುಂದೆ
5ಜಿ ಸ್ಪೆಕ್ಟ್ರಂ ಅನ್ನು ಹರಾಜಿನಲ್ಲಿ ಪಡೆದಿದ್ದ ರಿಲಾಯನ್ಸ್ ಜಿಯೋ ಮತ್ತು ಭಾರ್ತಿ ಏರ್ಟೆಲ್ ಸಂಸ್ಥೆಗಳು ಈಗಾಗಲೇ ವಾಣಿಜ್ಯಾತ್ಮಕವಾಗಿ 5ಜಿ ಸರ್ವಿಸ್ಗಳನ್ನು ಎಲ್ಲೆಡೆ ಅಳವಡಿಸುತ್ತಿವೆ. ಮಹಾನಗರಗಳಲ್ಲಿ 5ಜಿ ಸೇವೆ ಸುಲಭವಾಗಿ ಸಿಗುತ್ತಿದೆ. ವೊಡಾಫೋನ್ ಐಡಿಯಾ ಕೂಡ ವಿಳಂಬವಾದರೂ 5ಜಿ ನೆಟ್ವರ್ಕ್ ಚಾಲನೆಗೊಳಿಸಿದೆ. ಹರಾಜಿನಲ್ಲಿ ಪಾಲ್ಗೊಂಡು ಸ್ಪೆಕ್ಟ್ರಂ ಹಂಚಿಕೆ ಪಡೆದಿದ್ದ ಅದಾನಿ ಸಂಸ್ಥೆ ಮಾತ್ರ ಈ ಬಗ್ಗೆ ಇನ್ನು ಗಮನ ಹರಿಸಿಲ್ಲ.
ಏರ್ಪೋರ್ಟ್ ಮತ್ತು ಪೋರ್ಟ್ಗಳನ್ನು ಅದಾನಿ ನಿರ್ವಹಣೆ ಮಾಡಿಕೊಂಡು ಬಂದಿದೆ. ಇದರ ಜತೆಗೆ ರಿನೋವೇಬಲ್ ಎನರ್ಜಿಗೆ ಸಂಬಂಧಿಸಿದ ವ್ಯವಹಾರಗಳು ಇವೆ. ತನ್ನ ಈ ವ್ಯವಹಾರಳಿಗೆ ಅಂದರೆ ತನ್ನ ಸ್ವಂತಕ್ಕೆ ಎಂದು ಅದಾನಿ 5ಜಿ ಸ್ಪೆಕ್ಟ್ರಂ ಅನ್ನು ಅದು ಬಿಡ್ ಮೂಲಕ ಖರೀದಿ ಮಾಡಿತ್ತು. ಆದರೆ, ಸ್ವಂತ ಉದ್ಯಮಕ್ಕೆ ಮಾತ್ರವಲ್ಲ, ಕಮರ್ಷಿಯಲ್ ಆಗಿಯೂ 5ಜಿ ಸರ್ವಿಸ್ ಒದಗಿಸುವುದು ಕಡ್ಡಾಯವಾಗಿದೆ. ಈ ವರ್ಷದ ಆರಂಭದಲ್ಲಿಯೂ ನೋಟಿಸ್ ನೀಡಲಾಗಿದ್ದು ಕಾರ್ಯಕ್ರಮ ಅನುಷ್ಠಾನವಾಗದ ಕಾರಣ ಮತ್ತೆ ನೋಟಿಸ್ ನೀಡಲಾಗಿದೆ.
ಅದಾನಿ ಗ್ರೂಪ್ಗೆ ಸೇರಿದ ಅದಾನಿ ಡಾಟಾ ನೆಟ್ವರ್ಕ್ಸ್ ಸಂಸ್ಥೆ 2022ರ ಜುಲೈನಲ್ಲಿ ನಡೆದ ಸ್ಪೆಕ್ಟ್ರಂ ಹರಾಜಿನಲ್ಲಿ 26 ಗೀಗಾಹರ್ಟ್ಜ್ ಬ್ಯಾಂಡ್ವಿಡ್ತ್ನಲ್ಲಿ ಒಟ್ಟು 400 ಮೆಗಾಹರ್ಟ್ಜ್ ಸ್ಪೆಕ್ಟ್ರಂ ಅನ್ನು 212 ಕೋಟಿ ರೂ ಮೊತ್ತಕ್ಕೆ ಖರೀದಿ ಮಾಡಿತ್ತು. ಕರ್ನಾಟಕ, ಆಂಧ್ರ, ಗುಜರಾತ್, ಮುಂಬೈ, ತಮಿಳುನಾಡು ಮತ್ತು ರಾಜಸ್ಥಾನ ಈ ಅರು ಸರ್ಕಲ್ ವ್ಯಾಪ್ತಿಗೆ ಅದಾನಿ ಹಕ್ಕು ಪಡೆದುಕೊಂಡಿದೆ.
ದೊಡ್ಡ ಮೊತ್ತದ ದಂಡ ಕಟ್ಟಬೇಕಾಗುತ್ತದೆ!
ನಿಗದಿತ ಡೆಡ್ ಲೈನ್ ಒಳಗೆ 5ಜಿ ಸ್ಪೆಕ್ಟ್ರಂ ಅಳವಡಿಸದಿದ್ದರೆ ಅಕ್ಟೋಬರ್ 10ರಿಂದ ಅಚೆ 13 ವಾರ ಕಾಲ ವಾರಕ್ಕೆ 1 ಲಕ್ಷ ರೂನಂತೆ ದಂಡ ತೆರಬೇಕಾಗುತ್ತದೆ. ನಂತರವೂ ಅಳವಡಿಕೆ ಆಗದೇ ಹೋದರೆ ಮುಂದಿನ 13 ವಾರ ಕಾಲ ವಾರಕ್ಕೆ 2 ಲಕ್ಷ ರೂನಂತೆ ಶುಲ್ಕ ಕಟ್ಟಬೇಕಾಗುತ್ತದೆ. ಮುಂದಿನ 26 ವಾರ ಕಾಲ ವಾರಕ್ಕೆ 4 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. 5ಜಿ ನೆಟ್ವರ್ಕ್ ಅಳವಡಿಕೆಗೆ ಆಗುವ ವಿಳಂಬ 52 ವಾರ ಅಂದರೆ ಒಂದು ವರ್ಷ ಮೀರಿದರೆ ಆಗ ಹಂಚಿಕೆಯುನ್ನೆ ರದ್ದು ಮಾಡಲಾಗುತ್ತದೆ.
ಮರುಕಟ್ಟೆಯಲ್ಲಿ ನಿಧಾನಕ್ಕೆ ಚೇತರಿಕೆ ಕಂಡಿದ್ದ ಅದಾನಿ ಗ್ರೂಪ್ ಈಗ ಮತ್ತೆ ಸಂಕಷ್ಟ ಅನುಭವಿಸುವಂತಾಗಿದ್ದು ರಾಜಕೀಯ ಕೆಸರೆರೆಚಾಟಗಳು ಆರಂಭವಾಗಿದೆ.


Click it and Unblock the Notifications