ನವದೆಹಲಿ, ಸೆಪ್ಟೆಂಬರ್ 17: ಹಸಿರು ಇಂಧನ, ಸೌರ ಮತ್ತು ಪವನ ವಲಯದ ಯೋಜನೆಗಳಲ್ಲಿ 4 ಲಕ್ಷ ಕೋಟಿ. ರೂ ಹೂಡಿಕೆ ಮಾಡುವುದಾಗಿ ಅದಾನಿ ಸಮೂಹವು 4ನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಭೆ ಮತ್ತು ಎಕ್ಸ್‌ಪೋ (ರೀ-ಇನ್ವೆಸ್ಟ್) 2024 ಕಾರ್ಯಕ್ರಮದಲ್ಲಿ ಘೋಷಿಸಿದೆ.
ಗುಜರಾತ್‌ನ ಗಾಂಧಿನಗರ ಜಿಲ್ಲೆಯಲ್ಲಿ ಇಂಧನ ಹೂಡಿಕೆದಾರರ ಸಭೆ (ರೀ-ಇನ್ವೆಸ್ಟ್) 2024 ಸಭೆ ನಡೆಯುತ್ತಿದ್ದು, ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು.

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂಎನ್‌ಆರ್‌ಇ) ಆಯೋಜಿಸಿರುವ ಮೂರು ದಿನಗಳ ಸಮ್ಮೇಳನವು ಸರ್ಕಾರ, ಕೈಗಾರಿಕೆ ಮತ್ತು ಹಣಕಾಸು ಕ್ಷೇತ್ರಗಳ ಪ್ರಭಾವಿ ವ್ಯಕ್ತಿಗಳು ಸೇರಿದಂತೆ 10,000 ಕ್ಕೂ ಹೆಚ್ಚು ಪ್ರತಿನಿಧಿಗಳನ್ನು ಸೆಳೆಯುವ ನಿರೀಕ್ಷೆಯಿದೆ. ಸೌರ, ಪವನ ಮತ್ತು ಹಸಿರು ಹೈಡ್ರೋಜನ್‌ನಂತಹ ನವೀಕರಿಸಬಹುದಾದ ಇಂಧನ ಯೋಜನೆಗಳಲ್ಲಿ ರೂ 4,05,800 ಕೋಟಿ ಹೂಡಿಕೆಯನ್ನು ಅದಾನಿ ಗ್ರೂಪ್ ರೀ-ಇನ್ವೆಸ್ಟ್ ಕಾರ್ಯಕ್ರಮದಲ್ಲಿ ವಾಗ್ದಾನ ಮಾಡಿದೆ.
ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (AGEL) ಮತ್ತು ಅದಾನಿ ನ್ಯೂ ಇಂಡಸ್ಟ್ರೀಸ್ ಲಿಮಿಟೆಡ್ (ANIL) ಸಮೂಹ ಸಂಸ್ಥೆಗಳು, 2030 ರ ವೇಳೆಗೆ ನವೀಕರಿಸಬಹುದಾದ ಯೋಜನೆಗಳಲ್ಲಿ ಹೂಡಿಕೆ ಮಾಡುವುದಾಗಿ ಈ ಹಿಂದೆ ತಿಳಿಸಿತ್ತು.
ಭಾರತದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಕಂಪನಿಯಾದ ಅದಾನಿ ಗ್ರೀನ್ ಎನರ್ಜಿ ಪ್ರಸ್ತುತ 11.2 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಕಾರ್ಯಾಚರಣೆಯ ಸಾಮರ್ಥ್ಯ ಹೊಂದಿದ್ದು 2030 ರ ವೇಳೆಗೆ 50 ಗಿಗಾ ವ್ಯಾಟ್ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಅದಾನಿ ನ್ಯೂ ಇಂಡಸ್ಟ್ರೀಸ್ 10 ಗಿಗಾ ವ್ಯಾಟ್ ಸೌರ ಉತ್ಪಾದನಾ ಘಟಕ, 5 ಗಿಗಾ ವ್ಯಾಟ್ ಪವನ ಉತ್ಪಾದನೆ, 10 ಗಿಗಾ ವ್ಯಾಟ್ ಹಸಿರು ಹೈಡ್ರೋಜನ್ ಉತ್ಪಾದನೆ (ಗ್ರೀನ್ ಹೈಡ್ರೋಜನ್: 0.5 MMTPA, ಗ್ರೀನ್ ಅಮೋನಿಯಾ 2.8 MMTPA) ಮತ್ತು 5 ಗಿಗಾ ವ್ಯಾಟ್ ಎಲೆಕ್ಟ್ರೋಲೈಸರ್ ಉತ್ಪಾದನೆಯನ್ನು ಸ್ಥಾಪಿಸುತ್ತದೆ. 4,05,800 ಕೋಟಿ ರೂ. ಹೂಡಿಕೆಯಿಂದ ಸುಮಾರು 71,100 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಕಂಪನಿ ತಿಳಿಸಿದೆ.
ಇನ್ನು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ್ದ ಪ್ರಧಾನಿ ಮೋದಿ" , 140 ಕೋಟಿ ಭಾರತೀಯರು ದೇಶವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಲು ಪಣ ತೊಟ್ಟಿದ್ದಾರೆ. 21 ನೇ ಶತಮಾನದ ಇತಿಹಾಸವನ್ನು ಬರೆಯುವಾಗ, ಭಾರತದ ಸೌರ ಕ್ರಾಂತಿಯ ಅಧ್ಯಾಯವು ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುತ್ತದೆ. ನಮ್ಮ ಸರ್ಕಾರದ ಮೂರನೇ ಅವಧಿಯ ಮೊದಲ 100 ದಿನಗಳಲ್ಲಿ, ನಾವು ದೇಶದ ಕ್ಷಿಪ್ರ ಪ್ರಗತಿಗಾಗಿ ಪ್ರತಿಯೊಂದು ವಲಯ ಮತ್ತು ಅಂಶವನ್ನು ಪರಿಹರಿಸಲು ಪ್ರಯತ್ನಿಸಿದ್ದೇವೆ. ಭಾರತವು ಮುಂದಿನ 1000 ವರ್ಷಗಳ ಅಭಿವೃದ್ಧಿಗೆ ಮೂಲವನ್ನು ಸಿದ್ಧಪಡಿಸುತ್ತಿದೆ. ನಮಗೆ ಹಸಿರು ಭವಿಷ್ಯ ಕೇವಲ ಅಲಂಕಾರಿಕ ಪದಗಳಲ್ಲ. ಇವು ದೇಶದ ಅವಶ್ಯಕತೆಗಳು ಮತ್ತು ಅದನ್ನು ಸಾಧಿಸಲು ನಾವು ಬದ್ಧರಾಗಿದ್ದೇವೆ. ಅಯೋಧ್ಯೆ ಮತ್ತು ಇತರ 16 ನಗರಗಳನ್ನು ಮಾದರಿ ಸೌರ ನಗರಗಳಾಗಿ ಅಭಿವೃದ್ಧಿಪಡಿಸಲು ಸರ್ಕಾರವು ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.


Click it and Unblock the Notifications