ಅದಾನಿ ಗ್ರೂಪ್ ಮತ್ತು ಹಿಂಡನ್‌ಬರ್ಗ್ ವಿವಾದದ ಬಗ್ಗೆ ಮಾರುಕಟ್ಟೆ ನಿಯಂತ್ರಕ ಸೆಬಿ ತನಿಖೆ ನಡೆಸುತ್ತಿದ್ದು ಸುಪ್ರೀಂ ಕೋರ್ಟ್‌ಗೆ ವರದಿಯನ್ನು ಸಲ್ಲಿಸಿದೆ. ಜಾಗತಿಕವಾಗಿ ಭಾರೀ ಚರ್ಚೆಗೆ ಕಾರಣವಾದ ಪ್ರಕರಣ ಇದಾಗಿದೆ. ಸೆಬಿಯು ಸುಪ್ರೀಂ ಕೋರ್ಟ್‌ಗೆ ವರದಿಯನ್ನು ಸಲ್ಲಿಸುವ ಗಡುವನ್ನು ಈ ಹಿಂದೆ ವಿಸ್ತರಣೆ ಮಾಡಲಾಗಿದೆ. ವಿಸ್ತರಣೆ ಬಳಿಕ ಗಡುವಿಗೂ ಮುನ್ನ ಸಲ್ಲಿಸಲಾಗಿದೆ.
ಸೆಬಿಯು ಅದಾನಿ ಗ್ರೂಪ್ ವಿರುದ್ದದ 24 ತನಿಖೆಗಳಲ್ಲಿ 22 ಸಂಶೋಧನೆಗಳನ್ನು ಸಲ್ಲಿಸಿದೆ. ಉಳಿದ ಎರಡು ತನಿಖೆಗಳಿಗಾಗಿ ಬಾಹ್ಯ ಏಜೆನ್ಸಿಗಳಿಂದ ಡೇಟಾವನ್ನು ನಿರೀಕ್ಷಿಸುತ್ತಿದೆ. ಅದಾನಿ ಹಿಂಡನ್‌ಬರ್ಗ್ ಪ್ರಕರಣದಲ್ಲಿ ತನಿಖೆಯು ಬಹುತೇಕ ಅಂತಿಮ ಹಂತವನ್ನು ತಲುಪಿದೆ ಎಂದು ಸೆಬಿ ಹೇಳಿದೆ. 24 ತನಿಖೆಗಳಲ್ಲಿ, 22 ಅಂತಿಮವಾಗಿದ್ದು, 2 ಮಧ್ಯಂತರ ವರದಿ ಎಂದು ಸೆಬಿ ಹೇಳಿದೆ.

ರಾಯಿಟರ್ಸ್ ವರದಿಯ ಪ್ರಕಾರ, ವಹಿವಾಟು ನಿಯಮಗಳ ಉಲ್ಲಂಘನೆಯ ಆರೋಪದಲ್ಲಿ ಸೆಬಿ 13 ಅದಾನಿ ಗುಂಪಿನ ವ್ಯವಹಾರಗಳನ್ನು ಪರಿಶೀಲನೆ ಮಾಡಿದೆ. ಅಲ್ಲದೆ, ಕೆಲವು ಕಡಲಾಚೆಯ ವ್ಯವಹಾರಗಳ ತನಿಖೆಯು ಕೂಡಾ ನಡೆಸಲಾಗಿದ್ದು, ಅದಾನಿ ಸಮೂಹ ಕಂಪನಿಗಳ ಸಾರ್ವಜನಿಕ ಷೇರುದಾರರಾಗಿದ್ದ 12 ವಿದೇಶಿ ಬಂಡವಾಳ ಹೂಡಿಕೆದಾರರ ತನಿಖೆ ಇರದಲ್ಲಿ ಸೇರಿದೆ.
ಆದರೆ ಈ ವಿದೇಶಿ ಘಟಕಗಳು ತೆರಿಗೆ ಕಾನೂನಿಗೆ ಒಳಪಡುವುದರಿಂದಾಗಿ 12 ಎಫ್‌ಪಿಐ ಷೇರುದಾರರ ಆರ್ಥಿಕ ಹಿತಾಸಕ್ತಿ ಕಾಪಾಡುವುದು ಸವಾಲಾಗಿದೆ ಎಂದು ಸೆಬಿ ವಿವರಿಸಿದೆ. ಹೀಗಾಗಿ ಸೆಬಿ ಈ ವಿಷಯದ ಬಗ್ಗೆ ಐದು ವಿದೇಶಗಳಿಂದ ಮಾಹಿತಿ ಕೇಳಿದೆ. ತನಿಖೆಯ ಫಲಿತಾಂಶದ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸೆಬಿ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದೆ.
ಇದಕ್ಕೂ ಮೊದಲು, ಆಗಸ್ಟ್ 14 ರಂದು, ಸೆಬಿ ಅದಾನಿ-ಹಿಂಡನ್‌ಬರ್ಗ್ ವಿವಾದದ ವರದಿಗಾಗಿ 15 ದಿನಗಳಿಗಿಂತ ಹೆಚ್ಚು ಕಾಲಾವಕಾಶ ಕೇಳಿತ್ತು. ಸೆಬಿ ತನ್ನ ತನಿಖಾ ವರದಿಯನ್ನು 12 ದಿನಗಳೊಳಗೆ ನೀಡಿದೆ. ಈ ಹಿಂದೆ ಜನವರಿಯಲ್ಲಿ ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆ ಮಾಡಿದೆ ಎಂಬ ಆರೋಪದಲ್ಲಿ ವರದಿಯನ್ನು ಮಾಡಿದೆ. ಅದಾದ ಬಳಿಕ ಅದಾನಿ ಗ್ರೂಪ್ ಸ್ಟಾಕ್‌ಗಳು ನಿರಂತರವಾಗಿ ಇಳಿಕೆ ಕಾಣುತ್ತಾ ಬಂದಿದೆ.
ಅದಾನಿ ಗ್ರೂಪ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನಾಲ್ಕು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಹಾಗೆಯೇ ಬಿಲಿಯನ್ ಡಾಲರ್ ಮೌಲ್ಯದ ಸಂಘಟಿತ ಸಂಸ್ಥೆಗಳ ವಿರುದ್ಧ ಹಿಂಡನ್‌ಬರ್ಗ್ ಮಾಡಿದ ಆರೋಪಗಳಿಗೆ ಸಂಬಂಧಿಸಿದ ನಿರ್ದೇಶನಗಳನ್ನು ಕೋರಲಾಗಿದೆ. ಈ ಬೆನ್ನಲ್ಲೇ ತನಿಖೆ ನಡೆಸಿ ವರದಿ ಸಲ್ಲಿಸಲು ಸೆಬಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಅದಾನಿ ಸ್ಟಾಕ್ ಹೇಗಿದೆ?
ಆಗಸ್ಟ್ 25 ರಂದು ಕೊನೆಗೊಂಡ ವಾರದಲ್ಲಿ ಅದಾನಿ ಗ್ರೂಪ್‌ನ ಅದಾನಿ ಎಂಟರ್‌ಪ್ರೈಸಸ್ 5% ರಷ್ಟು ಕುಸಿದಿದ್ದರೆ, ಅದಾನಿ ಪೋರ್ಟ್ಸ್ 5.40% ನಷ್ಟು ಕುಸಿದಿದೆ. ಅಲ್ಲದೆ, ಅದಾನಿ ಗ್ರೀನ್ 5% ರಷ್ಟು ಕುಸಿದಿದೆ. ಇದಲ್ಲದೆ, ಅದಾನಿ ಟೋಟಲ್ ಗ್ಯಾಸ್ ಮತ್ತು ಅದಾನಿ ಎನರ್ಜಿ ಸೊಲ್ಯೂಷನ್ಸ್ ವಾರದಲ್ಲಿ 2.5% ಮತ್ತು 3.6% ರಷ್ಟು ಜಿಗಿತ ಕಂಡಿದೆ.
ಅದಾನಿ ವಿಲ್ಮಾರ್ ಷೇರುಗಳು 4.1% ನಷ್ಟು ಕುಸಿದಿದೆ. ಸಿಮೆಂಟ್ ಸ್ಟಾಕ್ ಅಂಬುಜಾ ಸಿಮೆಂಟ್ಸ್ ಸಹ 5% ನಷ್ಟು ಕುಸಿದಿದೆ. ಆದರೆ ಮಾಧ್ಯಮ ಸ್ಟಾಕ್ ಎನ್‌ಡಿಟಿವಿ ಶೇಕಡ 3.2ರಷ್ಟು ಕುಸಿದಿದೆ. ಅದಾನಿ ಪವರ್ ಹಾಗೂ ಎಸಿಸಿ ಶೇಕಡ 2% ಮತ್ತು 1% ರಷ್ಟು ಲಾಭವನ್ನು ಗಳಿಸಿದೆ.
ಹಿಂಡನ್‌ಬರ್ಗ್ ಆರೋಪ, ಇತರೆ ತಿರುವುಗಳು
ಹಿಂಡನ್‌ಬರ್ಗ್ ತನಿಖಾ ವರದಿಯು ಅದಾನಿ ಗ್ರೂಪ್ ವಂಚನೆಯನ್ನು ಭಾಗಿಯಾಗಿದೆ. ದಶಕಗಳಿಂದ ವಂಚನೆ ನಡೆಸುತ್ತಿದೆ. ಅದಾನಿ ಗ್ರೂಪ್ ಬಗ್ಗೆ ಸುಮಾರು ಎರಡು ವರ್ಷಗಳ ಕಾಲ ತನಿಖೆಯನ್ನು ನಡೆಸಿ ವರದಿ ನೀಡಲಾಗಿದೆ. ಅದಾನಿ ಗ್ರೂಪ್‌ನ ಹಲವಾರು ವ್ಯಕ್ತಿಗಳ ಸಂದರ್ಶನ ಮಾಡಲಾಗಿದೆ. ಮಾಜಿ ಹಿರಿಯ ಅಧಿಕಾರಿಗಳ ಸಂದರ್ಶನವನ್ನು ಕೂಡಾ ಮಾಡಲಾಗಿದೆ. ದಾಖಲೆಗಳು ನಮ್ಮಲ್ಲಿದೆ ಎಂದು ಹಿಂಡನ್‌ಬರ್ಗ್ ಮಾಹಿತಿ ನೀಡಿದೆ.
ಜನವರಿ 24ರಂದು ವರದಿ ಬಿಡುಗಡೆ ಮಾಡಿರುವ ಹಿಂಡನ್‌ಬರ್ಗ್, ಅದಾನಿ ಕುಟುಂಬದ ಸದಸ್ಯರು ಹಾಗೂ ಕಂಪನಿಗೆ ಸಂಬಂಧಿಸಿದ ಅಧಿಕಾರಿಗಳು ಮಾರಿಷಸ್, ಯುಎಇ ಮತ್ತು ಕೆರಿಬಿಯನ್ ದ್ವೀಪಗಳಲ್ಲಿ ಕಡಲಾಚೆಯ ಶೆಲ್ ಘಟಕಗಳನ್ನು ರಚಿಸಲು ಸಹಕರಿಸಿದ್ದಾರೆ. ನಕಲಿ ಅಥವಾ ಕಾನೂನುಬಾಹಿರ ವಹಿವಾಟು ಮತ್ತು ಲಿಸ್ಟೆಡ್ ಕಂಪನಿಗಳಿಂದ ಹಣವನ್ನು ಪಡೆಯುವ ಪ್ರಯತ್ನ ಮಾಡಿದ್ದಾರೆ. ನಕಲಿ ಆಮದು/ರಫ್ತು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಹಿಂಡೆನ್‌ಬರ್ಗ್ ತನ್ನ ತನಿಖಾ ವರದಿಯಲ್ಲಿ ತಿಳಿಸಿದೆ.
ಆದರೆ ಅದಾನಿ ಗ್ರೂಪ್ ಮಾತ್ರ ಇದು ಭಾರತದ ಮೇಲೆ ನಡೆಸುತ್ತಿರುವ ದಾಳಿ ಎಂದು ತನ್ನ 413 ಪುಟಗಳ ಪ್ರತಿಕ್ರಿಯೆಯಲ್ಲಿ ಉಲ್ಲೇಖಿಸಿದೆ. ಹಾಗೆಯೇ ಎಲ್ಲ ಆರೋಪಗಳನ್ನು ಅದಾನಿ ಗ್ರೂಪ್ ಅಲ್ಲಗಳೆದಿದೆ. ಅದಾದ ಬಳಿಕ ಸ್ಟಾಕ್ ಮಾರುಕಟ್ಟೆಯಲ್ಲಿ ಉಂಟಾದ ಕುಸಿತವನ್ನು ಸರಿದೂಗಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದರಿಂದಾಗಿ ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ಕೊಂಚ ಸುಧಾರಿಸುತ್ತಿದೆ. ಆದರೂ ಹಲವಾರು ಡೀಲ್ ಅದಾನಿ ಗ್ರೂಪ್ ಕೈಜಾರಿದೆ.


Click it and Unblock the Notifications