ಎಫ್‌ಎಂಸಿಜಿ ಪ್ರಮುಖ ಸಂಸ್ಥೆಯಾದ ಅದಾನಿ ವಿಲ್ಮಾರ್ ತನ್ನ ಎರಡನೇ ತ್ರೈಮಾಸಿಕ ಗಳಿಕೆಯನ್ನು ಬುಧವಾರ ಪ್ರಕಟಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 48.76 ಕೋಟಿ ರೂಪಾಯಿ ಲಾಭವನ್ನು ಕಂಡಿದ್ದ ಅದಾನಿ ಸಂಸ್ಥೆಯು ಈ ವರ್ಷದಲ್ಲಿ ಈ ತ್ರೈಮಾಸಿಕದಲ್ಲಿ ಸುಮಾರು 130.73 ಕೋಟಿ ರೂಪಾಯಿ ನಷ್ಟವನ್ನು ದಾಖಲಿಸಿದೆ.
ಕಾರ್ಯಾಚರಣೆಯ ಆದಾಯವು ಹಣಕಾಸು ವರ್ಷ 2023ರ ಎರಡನೇ ತ್ರೈಮಾಸಿಕದಲ್ಲಿ 14,150.03 ಕೋಟಿ ರೂಪಾಯಿ ಆಗಿತ್ತು. ಆದರೆ ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಆದಾಯವು ಶೇಕಡ 13.3 ರಷ್ಟು ಇಳಿಕೆಯಾಗಿ, 12,267.15 ಕೋಟಿ ರೂಪಾಯಿಗಳಿಗೆ ತಲುಪಿದೆ. ಇಬಿಐಟಿಡಿಎಯು 144 ಕೋಟಿ ರೂಪಾಯಿಗಳಷ್ಟಿದ್ದು, ವರ್ಷದಿಂದ ವರ್ಷಕ್ಕೆ ಶೇಕಡ 43ರಷ್ಟು ಕಡಿಮೆಯಾಗಿದೆ.

ಎಫ್‌ಎಂಸಿಜಿ ಸಂಸ್ಥೆಯು ಸೆಪ್ಟೆಂಬರ್ 2023 ರ ತ್ರೈಮಾಸಿಕದಲ್ಲಿ 12,331.20 ಕೋಟಿ ರೂಪಾಯಿಗಳ ಒಟ್ಟು ಆದಾಯವನ್ನು ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ದಾಖಲಾಗಿದ್ದ 14,209.20 ಕೋಟಿ ರೂಪಾಯಿ ಒಟ್ಟು ಆದಾಯ ಅಥವಾ ನಿವ್ವಳ ಆದಾಯಕ್ಕೆ ಹೋಲಿಕೆ ಮಾಡಿದಾಗ ಈ ಆದಾಯವು ಶೇಕಡ 13.2 ರಷ್ಟು ಇಳಿಕೆಯಾಗಿದೆ.
ಈ ನಡುವೆ ಈ ಅವಧಿಯಲ್ಲಿ ಮಾಡಿದ ಒಟ್ಟು ವೆಚ್ಚವು 12,439.45 ಕೋಟಿ ರೂಪಾಯಿಗಳಾಗಿದೆ. ಹಣಕಾಸು ವರ್ಷ 2023ರ ಎರಡನೇ ತ್ರೈಮಾಸಿಕದಲ್ಲಿ ವೆಚ್ಚವು 14,209.20 ಕೋಟಿ ರೂಪಾಯಿ ಆಗಿದ್ದು, ಇದಕ್ಕೆ ಹೋಲಿಕೆ ಮಾಡಿದಾಗ ಈ ವರ್ಷದ ವೆಚ್ಚವು ಶೇಕಡ 12.1 ರಷ್ಟು ಇಳಿಕೆಯಾಗಿದೆ. ಇನ್ನು ಅದಾನಿ ವಿಲ್ಮಾರ್ ಸ್ಟಾಕ್ ಈ ಸಮಯಕ್ಕೆ ಶೇಕಡ 2.53 ರಷ್ಟು ಕುಸಿದು, 318.35 ರಂತೆ ವಹಿವಾಟು ನಡೆಸುತ್ತಿದೆ.
ಅದಾನಿ ವಿಲ್ಮಾರ್‌ನ ಖಾದ್ಯ ತೈಲ ವ್ಯವಹಾರದ ಎರಡನೇ ತ್ರೈಮಾಸಿಕದ ಆದಾಯವು 9,037.53 ಕೋಟಿ ರೂಪಾಯಿ ಆಗಿದ್ದು, ಆಹಾರ ಮತ್ತು ಎಫ್‌ಎಂಸಿಜಿ ವರ್ಟಿಕಲ್ ಪೋಸ್ಟ್ ಆದಾಯವು ಈ ತ್ರೈಮಾಸಿಕದಲ್ಲಿ 1,282.61 ಕೋಟಿ ರೂಪಾಯಿಯಾಗಿದೆ. ಉದ್ಯಮದ ಅಗತ್ಯ ವಸ್ತುಗಳ ವಿಭಾಗದ ಆದಾಯವು 1,947.01 ಕೋಟಿ ರೂಪಾಯಿ ಆಗಿದೆ.
ಅದಾನಿ ಗ್ರೂಪ್ ತ್ರೈಮಾಸಿಕ ವರದಿ
ಅದಾನಿ ಗ್ರೂಪ್‌ನ ನವೀಕರಿಸಬಹುದಾದ ಇಂಧನ ಸಂಸ್ಥೆಯಾದ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್, ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ತನ್ನ ಏಕೀಕೃತ ನಿವ್ವಳ ಲಾಭದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡ 149 ಜಿಗಿತ ಕಂಡಿದೆ, ಲಾಭವು 372 ಕೋಟಿ ರೂಪಾಯಿ ಆಗಿದೆ ಎಂದು ಹೇಳಿದೆ. ಕಂಪನಿಯ ಏಕೀಕೃತ ಒಟ್ಟು ಆದಾಯವು ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 1,684 ಕೋಟಿ ರೂಪಾಯಿಯಿಂದ 2,589 ಕೋಟಿ ವರ್ಷದಿಂದ ವರ್ಷಕ್ಕೆ ಶೇಕಡ 53.7ರಷ್ಟು ಏರಿಕೆಯಾಗಿದೆ.
ಅದಾನಿ ಟೋಟಲ್ ಗ್ಯಾಸ್ ಸೆಪ್ಟೆಂಬರ್ 2023 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ನಿವ್ವಳ ಲಾಭವನ್ನು 173 ಕೋಟಿ ರೂಪಾಯಿ ಎಂದು ಘೋಷಿಸಿದೆ. ವರ್ಷದಿಂದ ವರ್ಷಕ್ಕೆ ನಿವ್ವಳ ಲಾಭ ಶೇಕಡ 8 ರಷ್ಟು ಏರಿಕೆಯಾಗಿದೆ ಎಂದು ಕೂಡಾ ತಿಳಿಸಿದೆ. ಕಾರ್ಯಾಚರಣೆ ಆದಾಯವು ಶೇಕಡ 1 ರಷ್ಟು ಕುಸಿದು 1,179 ಕೋಟಿ ರೂಪಾಯಿಗೆ ತಲುಪಿದೆ. ತ್ರೈಮಾಸಿಕದಲ್ಲಿ ಒಟ್ಟು ವೆಚ್ಚಗಳು 964 ಕೋಟಿ ರೂಪಾಯಿ ಆಗಿದೆ. ವರ್ಷದ ಹಿಂದೆ ವೆಚ್ಚವು 1,013 ಕೋಟಿ ರೂಪಾಯಿ ಆಗಿತ್ತು.


Click it and Unblock the Notifications