ಗೌತಮ್ ಅದಾನಿ ಬೆಂಬಲಿತ ಗ್ರೂಪ್ ಕಂಪನಿಯ ಷೇರುಗಳನ್ನು ಮಾರಾಟ ಮಾಡಲು ಯೋಜಿಸುತ್ತಿದೆ ಎಂದು ವರದಿಯಾದ ನಂತರ ಪ್ರಮುಖ ಎಫ್‌ಎಂಸಿಜಿ ಸಂಸ್ಥೆ ಅದಾನಿ ವಿಲ್ಮರ್ ಷೇರು ಬೆಲೆ ಬುಧವಾರ ಕುಸಿತ ಕಂಡಿದೆ. ವರದಿಗಳ ಪ್ರಕಾರ, ಮುಂಬೈ ಲೀಸ್ಟೆಡ್ ಕನ್ಸ್ಯೂಮರ್ ಸ್ಟೇಪಲ್ ಜಂಟಿ ಉದ್ಯಮದಲ್ಲಿ ತನ್ನ 6 ಬಿಲಿಯನ್ ಡಾಲರ್‌ನ ಶೇಕಡ 44ರಷ್ಟು ಪಾಲನ್ನು ಮಾರಾಟ ಮಾಡಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಇದಾದ ಬೆನ್ನಲ್ಲೇ ಬಿಎಸ್‌ಇಯಲ್ಲಿ ಷೇರುಗಳು ಸುಮಾರು ಶೇ.5ರಷ್ಟು ಕುಸಿದಿದೆ.
ಈ ಸಂದರ್ಭದಲ್ಲಿ ಅದಾನಿ ಷೇರುಗಳು ಸುಮಾರು ಶೇಕಡ 3.93ರಷ್ಟು ಅಥವಾ 15.45 ಅಂಕ ಕುಸಿತ ಕಂಡು 377.50 ರೂಪಾಯಿಗೆ ವಹಿವಾಟು ನಡೆಸುತ್ತಿದೆ. ಇನ್ನು ಇದಕ್ಕೂ ಮುನ್ನ ವಹಿವಾಟಿನ ಮಧ್ಯದಲ್ಲಿ ಸ್ಟಾಕ್ ಸುಮಾರು ಶೇಕಡ 4.85ರಷ್ಟು ಕುಸಿತ ಕಂಡು 374 ರೂಪಾಯಿಗೆ ತಲುಪಿದೆ. ಸಂಸ್ಥೆಯ ಪ್ರಸ್ತುತ ಮಾರುಕಟ್ಟೆ ಮೌಲ್ಯವು ಸರಾಸರಿ 49,628.23 ಕೋಟಿ ರೂಪಾಯಿ (6.02 ಬಿಲಿಯನ್ ಡಾಲರ್) ಆಗಿದೆ.

ಅದಾನಿ ಎಂಟರ್‌ಪ್ರೈಸಸ್ ವಿಲ್ಮಾರ್ ಇಂಟರ್‌ನ್ಯಾಶನಲ್‌ನೊಂದಿಗೆ ಜಂಟಿ ಉದ್ಯಮವಾಗಿರುವ ಅದಾನಿ ವಿಲ್ಮಾರ್‌ನಲ್ಲಿ ತನ್ನ ಪಾಲನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಜನರು ಬ್ಲೂಮ್‌ಬರ್ಗ್‌ಗೆ ತಿಳಿಸಿದ್ದಾರೆ. ಈ ಸುದ್ದಿ ಪ್ರಕಟವಾದ ಬೆನ್ನಲ್ಲೇ ಅದಾನಿ ವಿಲ್ಮಾರ್ ಸ್ಟಾಕ್ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ.
ಇನ್ನು ಕೆಲವು ತಿಂಗಳುಗಲ್ಲಿ ಅದಾನಿ ವಿಲ್ಮಾರ್‌ನಲ್ಲಿನ ಶೇಕಡ 44ರಷ್ಟು ಪಾಲು ಮಾರಾಟ ಮಾಡಲು ಮುಂದಾಗಿದೆ ಎಂಬ ಮಾಹಿತಿಯಿದೆ. ಬ್ಲೂಮ್‌ಬರ್ಗ್‌ನ ಲೆಕ್ಕಾಚಾರದ ಪ್ರಕಾರ, ಅದಾನಿ ಷೇರುಗಳ ಮಂಗಳವಾರದ ಮಾರುಕಟ್ಟೆ ಬೆಲೆ ಪ್ರತಿ ಷೇರಿಗೆ 393.05 ರೂಪಾಯಿ ಆಗಿದೆ. ಒಟ್ಟಾಗಿ ಸುಮಾರು 2.7 ಶತಕೋಟಿ ಡಾಲರ್ ಆಗಿದೆ.
ಜೂನ್ 30, 2023 ರ ಮಾಹಿತಿ ಪ್ರಕಾರ ಅದಾನಿ ವಿಲ್ಮಾರ್‌ನಲ್ಲಿ ಗ್ರೂಪ್‌ನ ಅದಾನಿ ಕಮೊಡಿಟೀಸ್ ಎಲ್‌ಎಲ್‌ಪಿ ಷೇರುಗಳು 57,14,74,430 ಇಕ್ವಿಟಿ ಷೇರುಗಳು ಅಥವಾ ಶೇಕಡ 43.97ರಷ್ಟಿದೆ. ಗ್ರೂಪ್‌ನ ಪ್ರಮುಖ ಸಂಸ್ಥೆಯಾದ ಅದಾನಿ ಎಂಟರ್‌ಪ್ರೈಸಸ್ ಅದಾನಿ ಕಮೋಡಿಟೀಸ್ ಎಲ್‌ಎಲ್‌ಪಿಯಲ್ಲಿ ಶೇಕಡ 99.99ರಷ್ಟು ಷೇರನ್ನು ಹೊಂದಿದೆ. ಇನ್ನು ಗೌತಮ್ ಅದಾನಿ, ರಾಜೇಶ್ ಮತ್ತು ವಿನೋದ್ ಅದಾನಿ ಈ ಸಂಸ್ಥೆಯಲ್ಲಿ ಶೇಕಡ 43.97ರಷ್ಟು ಪಾಲನ್ನು ಹೊಂದಿದ್ದಾರೆ.
ತ್ರೈಮಾಸಿಕ ವರದಿ
ಜೂನ್ 2023 ರಲ್ಲಿ ಕೊನೆಯಾದ ತ್ರೈಮಾಸಿಕದಲ್ಲಿ ಅದಾನಿ ವಿಲ್ಮಾರ್ 78.92 ಕೋಟಿ ರೂಪಾಯಿಗಳ ನಿವ್ವಳ ನಷ್ಟವನ್ನು ಕಂಡಿದೆ. ಆದರೆ ಇದೇ ತ್ರೈಮಾಸಿಕದಲ್ಲಿ ಕಳೆದ ವರ್ಷ ಅದಾನಿ ವಿಲ್ಮಾರ್ 193.59 ಕೋಟಿ ರೂಪಾಯಿಗಳ ನಿವ್ವಳ ಲಾಭವನ್ನು ದಾಖಲಿಸಿತ್ತು. ಕಾರ್ಯಾಚರಣೆಗಳ ಆದಾಯವು ಹಣಕಾಸು ವರ್ಷ 2024ರಲ್ಲಿ ಶೇಕಡ 12.2ರಷ್ಟು ಕುಸಿದು 12,928.08 ಕೋಟಿ ರೂಪಾಯಿ ಆಗಿದೆ. ಆದರೆ ಇದೇ ತ್ರೈಮಾಸಿಕದಲ್ಲಿ ಆದಾಯವು 14,724.09 ಕೋಟಿ ರೂಪಾಯಿ ಆಗಿತ್ತು.
ಅದಾನಿ ವಿಲ್ಮಾರ್ ಪ್ರಮುಖವಾಗಿ ಖಾದ್ಯ ತೈಲದ ಮೇಲೆ ಆಧರಿಸಿದೆ. ಈ ನಡುವೆ ಖಾದ್ಯತೈಲ ಬೆಲೆಯಲ್ಲಿನ ತೀವ್ರ ಕುಸಿತವು ಸಂಸ್ಥೆಯ ಆದಾಯದ ಮೇಲೆ ಪ್ರಭಾವ ಉಂಟು ಮಾಡಿದೆ. ವರ್ಷದಿಂದ ಇಲ್ಲಿಯವರೆಗೆ, ಅದಾನಿ ವಿಲ್ಮರ್ ಷೇರುಗಳು ಬಿಎಸ್‌ಇಯಲ್ಲಿ ಶೇಕಡ 37 ರಷ್ಟು ಕುಸಿದಿವೆ.


Click it and Unblock the Notifications