ನವದೆಹಲಿ, ಮೇ 18: ಹಾನಿಕಾರಕ ರಾಸಾಯನಿಕಗಳು ಪತ್ತೆಯಾದ ಹಿನ್ನಲೆ ಸಿಂಗಾಪುರ ಮತ್ತು ಹಾಂಗ್ ಕಾಂಗ್, ಭಾರತ ಮೂಲದ ಎವರೆಸ್ಟ್ ಹಾಗೂ ಎಂಡಿಎಚ್ ಮಸಾಲೆ ಪದಾರ್ಥಗಳ ಉತ್ಪನ್ನಗಳನ್ನು ನಿಷೇಧಿಸಿದ ಬೆನ್ನಲ್ಲೇ ನೆರೆಯ ದೇಶ ನೇಪಾಳವು ಈ ಉತ್ಪನ್ನಗಳ ಆಮದು, ಬಳಕೆ ಮತ್ತು ಮಾರಾಟವನ್ನು ನಿಷೇಧಿಸಿದೆ.
ನೇಪಾಳದ ಆಹಾರ ತಂತ್ರಜ್ಞಾನ ಮತ್ತು ಗುಣಮಟ್ಟ ನಿಯಂತ್ರಣ ಇಲಾಖೆಯು ಈ ಎರಡು ಭಾರತೀಯ ಬ್ರಾಂಡ್‌ಗಳ ಮಸಾಲೆಗಳನ್ನು ಕ್ಯಾನ್ಸರ್ ಕಾರಕ ಕ್ರಿಮಿನಾಶಕವಾದ ಎಥಿಲೀನ್ ಆಕ್ಸೈಡ್ ಪತ್ತೆ ಪರೀಕ್ಷೆ ಹಾಗೂ ಗುಣಮಟ್ಟ ಪರಿಶೀಲನೆಗಾಗಿ ರವಾನಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

"ಎವರೆಸ್ಟ್ ಮತ್ತು ಎಂಡಿಹೆಚ್ ಬ್ರಾಂಡ್ ಮಸಾಲೆಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಇವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಿದ್ದೇವೆ. ಮಸಾಲೆಗಳಲ್ಲಿ ಹಾನಿಕಾರಕ ರಾಸಾಯನಿಕಗಳ ಪತ್ತೆಯಾದ ವರದಿಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ" ಎಂದು ನೇಪಾಳದ ಆಹಾರ ತಂತ್ರಜ್ಞಾನದ ವಕ್ತಾರ ಮೋಹನ್ ಕೃಷ್ಣ ಮಹಾರ್ಜನ್ ಇಲಾಖೆ, ಎಎನ್‌ಐಗೆ ತಿಳಿಸಿದ್ದಾರೆ.
"ಈ ಎರಡು ನಿರ್ದಿಷ್ಟ ಬ್ರಾಂಡ್‌ಗಳ ಮಸಾಲೆಗಳಲ್ಲಿ ರಾಸಾಯನಿಕಗಳ ಪರೀಕ್ಷೆಗಳು ನಡೆಯುತ್ತಿವೆ. ಅಂತಿಮ ವರದಿ ಬರುವವರೆಗೆ ನಿಷೇಧವು ಜಾರಿಯಲ್ಲಿರುತ್ತದೆ" ಎಂದು ಮಹಾರ್ಜನ್ ಹೇಳಿದ್ದಾರೆ. ಎಂಡಿಹೆಚ್ ಮತ್ತು ಎವರೆಸ್ಟ್ ಬ್ರ್ಯಾಂಡ್ ಗಳು ದಶಕಗಳಿಂದ ಭಾರತದಲ್ಲಿ ಮನೆಮಾತಾಗಿದೆ. ಇವುಗಳ ಮಸಾಲೆ ಉತ್ಪನ್ನಗಳನ್ನು ಮಧ್ಯಪ್ರಾಚ್ಯ ಸೇರಿದಂತೆ ಹಲವಾರು ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಎಂಡಿಹೆಚ್ ಮತ್ತು ಎವರೆಸ್ಟ್‌ನ ಮಸಾಲೆಗಳು ನ್ಯೂಜಿಲೆಂಡ್, ಯುನೈಟೆಡ್ ಸ್ಟೇಟ್ಸ್ ಮತ್ತು ಆಸ್ಟ್ರೇಲಿಯಾದಲ್ಲಿ ಪರಿಶೀಲನೆಗೆ ಒಳಪಟ್ಟಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.
"ಎಥಿಲೀನ್ ಆಕ್ಸೈಡ್ ಮಾನವರಲ್ಲಿ ಕ್ಯಾನ್ಸರ್ ಉಂಟುಮಾಡುವ ರಾಸಾಯನಿಕವಾಗಿದ್ದು, ನ್ಯೂಜಿಲೆಂಡ್ ಮತ್ತು ಇತರ ದೇಶಗಳಲ್ಲಿ ಆಹಾರದಲ್ಲಿ ಇದರ ಬಳಕೆಯನ್ನು ನಿಷೇಧಿಸಲಾಗಿದೆ. MDH ಮತ್ತು ಎವರೆಸ್ಟ್ ಮಸಾಲೆಗಳು ನ್ಯೂಜಿಲೆಂಡ್‌ನಲ್ಲಿಯೂ ಲಭ್ಯವಿರುವುದರಿಂದ, ನಾವು ಈ ಸಮಸ್ಯೆಯನ್ನು ಪರಿಶೀಲಿಸುತ್ತಿದ್ದೇವೆ" ನ್ಯೂಜಿಲೆಂಡ್‌ನ ಆಹಾರ ಸುರಕ್ಷತಾ ನಿಯಂತ್ರಕದ ಹಾಲಿ ಉಪ ಮಹಾನಿರ್ದೇಶಕ ಜೆನ್ನಿ ಬಿಷಪ್ ರಾಯಿಟರ್ಸ್‌ಗೆ ತಿಳಿಸಿದ್ದಾರೆ.
ಏಪ್ರಿಲ್‌ನಲ್ಲಿ, ಹಾಂಗ್ ಕಾಂಗ್ ನ ಆಹಾರ ಸುರಕ್ಷತಾ ಸಂಸ್ಥೆಯು ಎರಡು ಬ್ರಾಂಡ್‌ಗಳ ನಾಲ್ಕು ಮಸಾಲೆ ಉತ್ಪನ್ನಗಳನ್ನು ನಿಷೇಧಿಸಿತ್ತು. ಇದಾದ ಕೆಲ ದಿನಗಳ ನಂತರ, ಸಿಂಗಾಪುರದ ಫುಡ್ ಏಜೆನ್ಸಿ (SFA)ಯೂ ಕೂಡಾ ಎವರೆಸ್ಟ್‌ನ ಫಿಶ್ ಕರಿ ಮಸಾಲಾದಲ್ಲಿ ಎಥಿಲೀನ್ ಆಕ್ಸೈಡ್ ಕಂಡುಬಂದಿದೆ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿತ್ತು.
ಇನ್ನು ಭಾರತದಲ್ಲಿ ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಈಗಾಗಲೇ ಎಂಡಿಎಚ್ ಮತ್ತು ಎವರೆಸ್ಟ್‌ನ ಉತ್ಪನ್ನಗಳ ಗುಣಮಟ್ಟ ಪರಿಶೀಲನೆಗೆ ಆದೇಶಿಸಿದೆ ಹಾಗೂ ಹಾಂಗ್ ಕಾಂಗ್ ಮತ್ತು ಸಿಂಗಾಪುರದ ಆಹಾರ ಸುರಕ್ಷತೆ ನಿಯಂತ್ರಕರಿಂದ ನಿಷೇಧದ ಕುರಿತ ವಿವರಗಳನ್ನು ನೀಡುವಂತೆ ಕೇಳಿಕೊಂಡಿದೆ.


Click it and Unblock the Notifications