ಬೆಂಗಳೂರಿನ ಏಕೈಕ ಮತ್ತು ಭಾರೀ ಜನಪ್ರಿಯ ಪಡೆದ ಅಂತರಾಷ್ಟ್ರೀಯ ಕೆಂಪೇಗೌಡ ವಿಮಾನ ನಿಲ್ದಾಣ (Kempegowda International Airport, Bengaluru) ಸದಾ ಒಂದಲ್ಲೊಂದು ಸುದ್ದಿಯಲ್ಲಿರುತ್ತದೆ. ಬೆಂಗಳೂರಿನ ಪ್ರಮುಖ ವಿಮಾನ ನಿಲ್ದಾಣವಾಗಿರುವ, ಈ ಏರ್‌ಪೋರ್ಟ್ ಭಾರತದ ಅತಿ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಇದನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿಲ್ದಾಣ (BIAL) ನಿರ್ವಹಿಸುತ್ತದೆ. ಇದೀಗ ಪ್ರಯಾಣಿಕರ ಅನುಕೂಲಕ್ಕಾಗಿ ಬಿಐಎಎಲ್ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.

ಹೌದು, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಇದೀಗ 2029ರ ವೇಳೆಗೆ ಹೆಚ್ಚುವರಿ 30 ಮಿಲಿಯನ್ ಪ್ರಯಾಣಿಕರ ಸಾಮರ್ಥ್ಯವನ್ನು ಸುಧಾರಿಸಲು ಪ್ಲಾನ್ ಮಾಡಿದೆ ಎಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಳಿದ್ದಾರೆ.
ವಿಮಾನ ಪ್ರಯಾಣಿಕರಿಗೆ ಗುಡ್ ನ್ಯೂಸ್!
ಕರ್ನಾಟಕದ ಅತಿ ವೇಗವಾಗಿ ಬೆಳೆಯುತ್ತಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮುಂಬರುವ ವರ್ಷಗಳಲ್ಲಿ ಮಹತ್ವದ ಯೋಜನೆಯೊಂದಕ್ಕೆ ಮುಂದಾಗಿದೆ. ಈ ಮೂಲಕ ಬೆಂಗಳೂರು ಏರ್‌ಪೋರ್ಟ್ ದೊಡ್ಡ ಮಟ್ಟಿನಲ್ಲಿ ವಿಸ್ತರಣೆಯಾಗಲಿದೆ. ಈ ಕುರಿತು ಬಿಐಎಎಲ್‌ನ ಸಿಒಒ ಗಿರೀಶ್ ನಾಯರ್ ಅವರು, ಇತ್ತೀಚೆಗೆ ಮಾತನಾಡಿದ್ದು, 2029ರ ಅಂತ್ಯದ ವೇಳೆಗೆ ವಿಮಾನ ನಿಲ್ದಾಣದ ಸಾಮರ್ಥ್ಯವನ್ನು ಹೆಚ್ಚಿಸಿ ಹೆಚ್ಚುವರಿ 3 ಕೋಟಿ (30 ಮಿಲಿಯನ್) ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಸೇರಿಸಲಾಗುತ್ತದೆ ಎಂದು ಹೇಳಿದೆ.
ಪ್ರಸ್ತುತ ಹೇಗಿದೆ ಪರಿಸ್ಥಿತಿ?
ಈಗಾಗಲೇ ಇರುವ ಟರ್ಮಿನಲ್ 1 ರಲ್ಲಿ 30 ಮಿಲಿಯನ್ ಪ್ರಯಾಣಿಕರ ಸಂಚಾರಕ್ಕಾಗಿ ವಿನ್ಯಾಸಗೊಳಿಸಲಾಗಿದ್ದರೂ, ಪ್ರಸ್ತುತ 25-26.5 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸುತ್ತಿದೆ ಮತ್ತು ಇದನ್ನು 35 ಮಿಲಿಯನ್‌ಗೆ ಹೆಚ್ಚಿಸುವ ಯೋಜನೆಯನ್ನೂ ಹೊಂದಿದೆ. ಇನ್ನು ಟರ್ಮಿನಲ್ 2ರ ಫೇಸ್ 1, 2023 ರಲ್ಲಿ ಆರಂಭವಾಗಿದ್ದು, 25 ಮಿಲಿಯನ್ ಪ್ರಯಾಣಿಕರನ್ನು ಹೊಂದುವ ಸಾಮರ್ಥ್ಯ ಹೊಂದಿದೆ. ಆದರೆ ಪ್ರಸ್ತುತ 16 ಮಿಲಿಯನ್‌ಗಿಂತ ಹೆಚ್ಚು ಪ್ರಯಾಣಿಕರು ಇಲ್ಲಿ ಸಂಚಾರ ಮಾಡುತ್ತಿದ್ದಾರೆ.
ಮುಂದಿನ ಯೋಜನೆಗಳೇನು?
- ಇದೀಗ ಟರ್ಮಿನಲ್ 2ರ ಎರಡನೇ ಹಂತದ ಯೋಜನೆಗೆ ಮುಂದಾಗಿದ್ದು, ಇದು ಹೆಚ್ಚುವರಿಯಾಗಿ 20 ಮಿಲಿಯನ್ ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಲಿದೆ. ಈಗಾಗಲೇ ಟೆಂಡರ್‌ಗಳನ್ನು ಘೋಷಿಸಲಾಗಿದ್ದು, ಅದೇ ರೀತಿ EPC (Engineering, Procurement, Construction) ಬಗ್ಗೆ ಅಂತಿಮ ಚರ್ಚೆಯಲ್ಲಿದೆ. ಈ ಹಂತವನ್ನು 2029ರ ಅಂತ್ಯದೊಳಗೆ ಅಂತಿಮಗೊಳಿಸಲಾಗುತ್ತದೆ ಎನ್ನಲಾಗಿದೆ.
- ಇನ್ನು T1 ಮತ್ತು T2 ವಿಸ್ತರಣೆ ಯೋಜನೆ, ಏರ್‌ಸೈಡ್, ಲ್ಯಾಂಡ್ ಸೈಡ್ ಸುಧಾರಣೆಗಳು ಸೇರಿದಂತೆ ಒಟ್ಟು ಹೆಚ್ಚುವರಿ 20 ಮಿಲಿಯನ್ ಪ್ರಯಾಣಿಕರ ಸಾಮರ್ಥ್ಯಗೊಳಿಸುವುದು ಕೂಡಾ ಸೇರಿದೆ.
- ಈ ಎಲ್ಲಾ ವಿಸ್ತರಣೆಗಳ ನಂತರ ಬೆಂಗಳೂರು ಏರ್‌ಪೋರ್ಟ್‌ನ T1 ಮತ್ತು T2 ನಲ್ಲಿ ಸುಮಾರು 80 ಮಿಲಿಯನ್ (8 ಕೋಟಿ) ಪ್ರಯಾಣಿಕರು ವಾರ್ಷಿಕವಾಗಿ ಸಂಚಾರ ಮಾಡುವ ಸಾಮರ್ಥ್ಯವನ್ನು ಹೊಂದಲಿದೆ.
ಈ ಎಲ್ಲಾ ಯೋಜನೆಗಳ ನಂತರ ಬೆಂಗಳೂರು ಕೆಂಪೇಗೌಡ ಏರ್‌ಪೋರ್ಟ್ ಮತ್ತೊಂದು ಮೈಲಿಗಲ್ಲು ಸಾಧಿಸಲಿದೆ. ಅಲ್ಲದೇ ಪ್ರಯಾಣಿಕರ ಸುಗಮ ಸಂಚಾರಕ್ಕೂ ಇದು ದಾರಿಮಾಡಿಕೊಡಲಿದೆ.


Click it and Unblock the Notifications